ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜೀವನಶೈಲಿ ಅಳವಡಿಸಿಕೊಳ್ಳಿ; ಕಿಡ್ನಿ ವೈಫಲ್ಯದಿಂದ ದೂರವಿರಿ’

ವರ್ಷಕ್ಕೊಮ್ಮೆ ತಪಾಸಣೆ ನಿಯಮಿತವಾಗಿರಲಿ
Last Updated 13 ಮಾರ್ಚ್ 2019, 19:55 IST
ಅಕ್ಷರ ಗಾತ್ರ

ವಿಜಯಪುರ: ಇಪ್ಪತ್ತೊಂದನೇ ಶತಮಾನದ ಆರಂಭದಿಂದಲೂ ಜಾಗತಿಕವಾಗಿ ಕಿಡ್ನಿ ಸಮಸ್ಯೆ ಕಾಡಲಾರಂಭಿಸಿದೆ. ಕಿಡ್ನಿ ವೈಫಲ್ಯ, ಸಾವು ತಡೆಗಟ್ಟಲು ಅಂತರರಾಷ್ಟ್ರೀಯ ಕಿಡ್ನಿ ಫೆಡರೇಷನ್‌ ಸಂಕಲ್ಪ ತೊಟ್ಟಿದೆ.

ಇದಕ್ಕಾಗಿಯೇ 2005ರಿಂದ ವಿಶ್ವ ಕಿಡ್ನಿ ದಿನ ಆಚರಣೆ ಜಾರಿಗೊಳಿಸಿದೆ. ಜನರಲ್ಲಿ ಜಾಗೃತಿ ಮೂಡಿಸುವ ಜತೆ, ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವವರ ಚಿಕಿತ್ಸೆಗೆ ಸರ್ಕಾರವೂ ಕ್ರಮ ವಹಿಸುವ ನಿಟ್ಟಿನಲ್ಲಿ ಪರಿಣಾಮಕಾರಿ ಪಾತ್ರ ನಿರ್ವಹಿಸುತ್ತಿದೆ. ಇದರ ಪರಿಣಾಮ ಇದೀಗ ತಾಲ್ಲೂಕು ಕೇಂದ್ರಗಳಲ್ಲೂ ಸರ್ಕಾರಿ ಡಯಾಲಿಸಿಸ್‌ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ.

ಪ್ರತಿ ವರ್ಷದ ಮಾರ್ಚ್‌ ಎರಡನೇ ಗುರುವಾರವನ್ನು ವಿಶ್ವ ಕಿಡ್ನಿ ದಿನವನ್ನಾಗಿ ಆಚರಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಕಿಡ್ನಿಯ ಪಾತ್ರ, ಆರೋಗ್ಯ ಕಾಪಾಡಿಕೊಳ್ಳುವಿಕೆ ಸೇರಿದಂತೆ ಇನ್ನಿತರೆ ವಿಷಯಗಳ ಕುರಿತಂತೆ ತಜ್ಞ ವೈದ್ಯ ರವೀಂದ್ರ ಮ.ಮದ್ದರಕಿ ‘ಪ್ರಜಾವಾಣಿ’ ಜತೆ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.

* ಕಿಡ್ನಿಯ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ ?

ಸದಾ ಶುದ್ಧ ಕುಡಿಯುವ ನೀರು ಸೇವನೆ. ನಿಯಮಿತ ವ್ಯಾಯಾಮ. ದೇಹದ ತೂಕ ಸಮ ಪ್ರಮಾಣದಲ್ಲಿರುವಂತೆ ನೋಡಿಕೊಳ್ಳುವುದು. ಧೂಮಪಾನ–ಮದ್ಯಪಾನದಿಂದ ದೂರವಿರಬೇಕು. ಇವಿಷ್ಟನ್ನು ಕಟ್ಟುನಿಟ್ಟಾಗಿ ತಮ್ಮ ಜೀವನಶೈಲಿಯಲ್ಲೇ ಅಳವಡಿಸಿಕೊಂಡರೇ ಮಾತ್ರ ಶೇ.50ರಷ್ಟು ಪ್ರಮಾಣದಲ್ಲಿ ಕಿಡ್ನಿಯ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

ಮಧುಮೇಹ–ರಕ್ತದೊತ್ತಡ (ಶುಗರ್‌–ಬಿಪಿ) ಸಮಸ್ಯೆಯಿಂದ ಬಳಲುವವರು ನಿಯಮಿತವಾಗಿ ತಪಾಸಣೆಗೊಳಪಟ್ಟು ಆಗಾಗ್ಗೆ ಕಿಡ್ನಿಗಳ ಕಾರ್ಯ ನಿರ್ವಹಣೆ ಪರೀಕ್ಷೆ ಮಾಡಿಸಿಕೊಳ್ಳಬೇಕು. ಇವೆರೆಡು ಸಮಸ್ಯೆಗಳಿಗೆ ನಿರಂತರವಾಗಿ ಔಷಧಿ ಸೇವಿಸುವ ಜತೆ, ಚಿಕಿತ್ಸೆ ಪಡೆದುಕೊಳ್ಳಬೇಕು. ಇದನ್ನು ನಿಖರವಾಗಿ ಮಾಡಿದರೆ ಶೇ.90ರಷ್ಟು ಕಿಡ್ನಿಯ ಅನಾರೋಗ್ಯದ ಸಮಸ್ಯೆ ಕಾಡಲ್ಲ. ಒಂಚೂರು ಆಚೀಚೆಯಾದರೂ ಎಲ್ಲವೂ ಕಾಡಲಿವೆ.

ನೋವು ನಿವಾರಕ ಮಾತ್ರೆಗಳನ್ನು ಅತಿಯಾಗಿ ನುಂಗುವುದು. ಹರ್ಬಲ್‌ ಮೆಡಿಸನ್‌ ತೆಗೆದುಕೊಳ್ಳುವುದು ಸಹ ಕಿಡ್ನಿಯ ಮೇಲೆ ದುಷ್ಪರಿಣಾಮ ಬೀರಲಿವೆ.

* ಕಿಡ್ನಿ ಸಮಸ್ಯೆಯ ಲಕ್ಷಣಗಳೇನು ?

ಶೇ.50ರಷ್ಟು ಪ್ರಮಾಣದಲ್ಲಿ ಕಿಡ್ನಿ ವೈಫಲ್ಯಗೊಂಡ ಬಳಿಕವೇ ಸಮಸ್ಯೆಯ ಲಕ್ಷಣಗಳು ಗೋಚರಿಸುತ್ತವೆ. ಚಿಕಿತ್ಸೆ ಆರಂಭವಾಗುವುದು ಆಗಲೇ.

ಮಧುಮೇಹ–ರಕ್ತದೊತ್ತಡ ನಿಯಂತ್ರಣಕ್ಕೆ ಬರದಿದ್ದರೆ ಕಿಡ್ನಿ ಅನಾರೋಗ್ಯ ಆರಂಭಗೊಂಡಿದೆ ಎಂದರ್ಥ. ಆಗಾಗ್ಗೆ ಇವುಗಳ ತಪಾಸಣೆ ನಿಯಮಿತವಾಗಿರಲಿ. ವರ್ಷಕ್ಕೊಮ್ಮೆ ಇವೆರೆಡು ಸಮಸ್ಯೆ ಎದುರಿಸುವವರು ಕಿಡ್ನಿಯ ಆರೋಗ್ಯದ ತಪಾಸಣೆಗೊಳಪಡುವುದು ಉತ್ತಮ.

ಕಣ್ಣಿನ ರೆಟಿನಾ, ಹೃದಯದ ಇಸಿಜಿ, ಯೂರಿನ್ ಪರೀಕ್ಷೆ, ರಕ್ತದ ಕ್ರಿಯಾಟಿನಿನ್‌ ಪರೀಕ್ಷೆಗೊಳಪಟ್ಟು ಕಿಡ್ನಿಯ ಆರೋಗ್ಯದ ಬಗ್ಗೆ ತಿಳಿದುಕೊಳ್ಳಬೇಕು. ವರ್ಷಕ್ಕೊಮ್ಮೆ ಇವುಗಳ ಪರೀಕ್ಷೆ ಮಾಡಿಸಿಕೊಂಡರೆ, 10 ವರ್ಷ ಮುಂಚೆಯೇ ಕಿಡ್ನಿಯ ಅನಾರೋಗ್ಯದ ಬಗ್ಗೆ ತಿಳಿದುಕೊಳ್ಳಬಹುದು. ಸೂಕ್ತ ಚಿಕಿತ್ಸೆ ಪಡೆದುಕೊಂಡು, ಗುಣಮುಖರಾಗಬಹುದು. ಸಂಪೂರ್ಣವಾಗಿ ಕಿಡ್ನಿ ವೈಫಲ್ಯವಾಗುವುದನ್ನು ಬಹುತೇಕ ತಡೆಗಟ್ಟಬಹುದು.

ಅನುವಂಶಿಕವಾಗಿಯೂ ಕಿಡ್ನಿ ಅನಾರೋಗ್ಯದ ಸಮಸ್ಯೆಗಳು ಕಾಡಬಹುದು.

* ಕಿಡ್ನಿ ವೈಫಲ್ಯದ ಅಪಾಯ ?

ಕಿಡ್ನಿ ವೈಫಲ್ಯಗೊಂಡವರು ಹೃದಯಾಘಾತಕ್ಕೀಡಾಗುವುದು, ಪಾರ್ಶ್ವವಾಯುವಿಗೆ ತುತ್ತಾಗುವುದು, ಅಕಾಲಿಕ ಮರಣಕ್ಕೆ ಬಲಿಯಾಗುವುದು, ನಿಶ್ಯಕ್ತಿ, ತಮ್ಮ ಕೆಲಸಗಳನ್ನು ತಾವೇ ಮಾಡಿಕೊಳ್ಳಲಾಗದಷ್ಟು ಅಸಮರ್ಥರಾಗುತ್ತಾರೆ.

ಕಿಡ್ನಿ ವೈಫಲ್ಯಗೊಂಡವರು ಆತಂಕಕ್ಕೆ ಒಳಗಾಗಬೇಕಿಲ್ಲ. ಇದೀಗ ಸರ್ಕಾರ ಸಹ ಕಿಡ್ನಿ ರೋಗಿಗಳ ನೆರವಿಗೆ ಬಂದಿದೆ. ತಾಲ್ಲೂಕು ಕೇಂದ್ರಗಳಲ್ಲೂ ಡಯಾಲಿಸಿಸ್‌ ಸೇವೆ ಆರಂಭಿಸಿದೆ.

* ಆರೋಗ್ಯವಂತ ಮನುಷ್ಯನಲ್ಲಿ ಕಿಡ್ನಿ ಪಾತ್ರವೇನು ?

ಹೃದಯದಷ್ಟೇ ಮಹತ್ವವಾದ ಅಂಗ ಕಿಡ್ನಿ. ದೇಹದೊಳಗಿನ ಮಲೀನವನ್ನು ಶುದ್ಧೀಕರಿಸಿ ಯೂರಿನ್ ಮೂಲಕ ಹೊರ ಹಾಕುವಲ್ಲಿ ಮಹತ್ವದ ಪಾತ್ರ ನಿಭಾಯಿಸಲಿದೆ. ರಕ್ತದೊತ್ತಡ ನಿಯಂತ್ರಿಸುವಲ್ಲೂ ಪ್ರಮುಖ ಪಾತ್ರ ನಿರ್ವಹಿಸಲಿದೆ. ಎಲುಬಿಗೆ ಶಕ್ತಿ ತುಂಬಲಿದೆ. ರಕ್ತದಲ್ಲಿನ ಹಿಮೊಗ್ಲೋಬಿನ್ ನಿಗದಿತ ಪ್ರಮಾಣದಲ್ಲಿರುವಂತೆ ನೋಡಿಕೊಳ್ಳುವಲ್ಲೂ ಕಿಡ್ನಿ ಮಹತ್ತರ ಕಾರ್ಯ ನಿಭಾಯಿಸಲಿದೆ.

* ಕಿಡ್ನಿಯೊಳಗೆ ಕಲ್ಲಿನ ಸೃಷ್ಟಿ ?

ಬಿಸಿಲ ನಾಡಿನ ಜನರನ್ನು ಸಾಮಾನ್ಯವಾಗಿ ಕಾಡುವ ಸಮಸ್ಯೆಯಿದು. ಗಡುಸು ನೀರು ಕುಡಿಯದೆ, ಹೆಚ್ಚಿನ ಪ್ರಮಾಣದಲ್ಲಿ ಶುದ್ಧ ನೀರು ಕುಡಿಯುವ ಮೂಲಕ ಈ ಸಮಸ್ಯೆ ಕಾಡದಂತೆ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT