ಗುರುವಾರ, 10 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಯರಝರಿ | ಹಣಕ್ಕೆ ಬೇಡಿಕೆ ಇಟ್ಟ ಪಿಡಿಒ: ಆರೋಪ 

ತಾಲ್ಲೂಕು ಪಂಚಾಯಿತಿ ಇಒಗೆ ಹಂಡರಗಲ್ ಗ್ರಾಮಸ್ಥರ ದೂರು
Published : 9 ಸೆಪ್ಟೆಂಬರ್ 2024, 16:12 IST
Last Updated : 9 ಸೆಪ್ಟೆಂಬರ್ 2024, 16:12 IST
ಫಾಲೋ ಮಾಡಿ
Comments

ಮುದ್ದೇಬಿಹಾಳ: ತಾಲ್ಲೂಕಿನ ಯರಝರಿ ಗ್ರಾಮ ಪಂಚಾಯಿತಿ ಪಿಡಿಒ ವಿಜಯಾ ಮುದಗಲ್ ಹಾಗೂ ಕಾರ್ಯದರ್ಶಿ ವಿಲಾಸ ಚವ್ಹಾಣ ಬಡವರ ಮೇಲೆ ದೌರ್ಜನ್ಯ ನಡೆಸುತ್ತಿದ್ದು ಮನೆಗಳ ಜಿಪಿಎಸ್ ಮಾಡಲು ಹಣಕ್ಕೆ ಬೇಡಿಕೆ ಇಡುತ್ತಿದ್ದಾರೆ ಎಂದು ಆರೋಪಿಸಿ ಯರಝರಿ ಪಂಚಾಯಿತಿ ವ್ಯಾಪ್ತಿಯ ಹಂಡರಗಲ್ ಗ್ರಾಮಸ್ಥರು ತಾಲ್ಲೂಕು ಪಂಚಾಯಿತಿ ಇಒಗೆ ಸೋಮವಾರ ದೂರು ಸಲ್ಲಿಸಿದರು.

ಇಲ್ಲಿನ ತಾಲ್ಲೂಕು ಪಂಚಾಯಿತಿ ಕಚೇರಿಗೆ ಆಗಮಿಸಿದ್ದ ಹಂಡರಗಲ್ಲ ಗ್ರಾಮದ ಹುಲ್ಲಪ್ಪ ಕೇಸಾಪೂರ ಮಾತನಾಡಿ, ‘ಯರಝರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಂಡರಗಲ್ಲ ಗ್ರಾಮದಲ್ಲಿ ಸೆ.6ರಂದು ಪೊಲೀಸರೊಂದಿಗೆ ಪಿಡಿಒ, ಕಾರ್ಯದರ್ಶಿ ಬಂದು ನಮ್ಮ ಮನೆಯ ಪಕ್ಕದಲ್ಲಿ ಬುದ್ಧಿಮಾಂದ್ಯ, ಅಂಗವಿಕಲರಾಗಿರುವ ಮರಗಮ್ಮ ಕೇಸಾಪುರ ಶೇಡ್‌ ಹಾಕಿಕೊಂಡು ಜೀವನ ನಡೆಸುತ್ತಿದ್ದರು. ಆ ಶೆಡ್‌ನ್ನು ಗಾಂವಠಾಣ ಜಾಗ ಎಂದು ತೆರವುಗೊಳಿಸಿದ್ದಾರೆ. ಗ್ರಾಮದಲ್ಲಿ ಇನ್ನೂ ಹಲವಾರು ಕಡೆ ಗಾಂವಠಾಣಾ ಜಾಗ ಇದ್ದರೂ ನಮ್ಮ ಮಗಳಿದ್ದ ಶೆಡ್ ತೆರವುಗೊಳಿಸಿ ಅನ್ಯಾಯ ಮಾಡಿದ್ದಾರೆ’ ಎಂದು ತಾಲ್ಲೂಕು ಪಂಚಾಯಿತಿ ಇಒಗೆ ದೂರಿದರು.

ಇದಕ್ಕೆ ಉತ್ತರಿಸಿದ ಯರಝರಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ವಿಲಾಸ ಚವ್ಹಾಣ, ಸದರಿ ಜಾಗ ಗ್ರಾಮ ಪಂಚಾಯಿತಿಗೆ ಸೇರಿದ ಗಾಂವಠಾಣೆ ಜಾಗ ಆಗಿದ್ದು ಅಲ್ಲಿ ಅಂಗನವಾಡಿ ಕಟ್ಟಡ ಕಟ್ಟಲು ಜಾಗ ಗುರುತಿಸಲಾಗಿದೆ. ಹೀಗಾಗಿ ಅಲ್ಲಿನ ಅತಿಕ್ರಮಣ ತೆರವುಗೊಳಿಸಲಾಗಿದೆ. ಸರ್ಕಾರದ ಜಾಗವನ್ನು ಯಾರೊಬ್ಬರೂ ಅತಿಕ್ರಮಣ ಮಾಡಲು ಬರುವುದಿಲ್ಲ ಎಂದು ತಿಳಿಸಿದರು.

ತಾಲ್ಲೂಕು ಪಂಚಾಯಿತಿ ಇಒ ನಿಂಗಪ್ಪ ಮಸಳಿ ಮಾತನಾಡಿ, ಗ್ರಾಮ ಪಂಚಾಯಿತಿ ಜಾಗ ಅತಿಕ್ರಮಿಸಲು ಅವಕಾಶ ಇಲ್ಲ. ಆದರೂ ಹಂಡರಗಲ್ಲ ಗ್ರಾಮದಲ್ಲಿನ ಗಾಂವಠಾಣೆ ಜಾಗ ಎಷ್ಟಿದೆ ಎಂಬುದನ್ನು ಪರಿಶೀಲನೆ ನಡೆಸಿ ಸದರಿ ವಿವಾದದ ಕುರಿತು ವರದಿ ನೀಡಲು ತಾಲ್ಲೂಕು ಪಂಚಾಯಿತಿ ವ್ಯವಸ್ಥಾಪಕರನ್ನು ನಿಯೋಜಿಸಲಾಗುತ್ತದೆ ಎಂದು ತಿಳಿಸಿದರು.

ಕಾಂಗ್ರೆಸ್ ಮುಖಂಡ ಇಬ್ರಾಹಿಂ ಮಾಗಿ ಮಾತನಾಡಿ, ಯರಝರಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ವಿಲಾಸ ಚವ್ಹಾಣ ಗ್ರಾಮೀಣ ಭಾಗದ ಸಮಸ್ಯೆಗಳ‌ ಕುರಿತು ಮಾತನಾಡಲು ಹೋದರೆ ಜನರೊಂದಿಗೆ ಉಡಾಫೆಯೊಂದಿಗೆ ಮಾತನಾಡುತ್ತಾರೆ. ಅಲ್ಲದೇ ತಮ್ಮದೇ ಒಂದು ಗುಂಪು ಕಟ್ಟಿಕೊಂಡಿದ್ದು ಧ್ವನಿ ಎತ್ತುವವರ ಮೇಲೆ ಬೆದರಿಕೆ ಹಾಕುತ್ತಾರೆ. ಸೌಜನ್ಯದಿಂದ ವರ್ತಿಸುವುದೇ ಇಲ್ಲ ಎಂದು ಆರೋಪಿಸಿದರು.

ಜಿಪಿಎಸ್‌ಗೆ ಪಿಡಿಒ ಹಣ ಪಡೆದುಕೊಳ್ಳುತ್ತಾರೆ ಎನ್ನುವ ಆರೋಪ ಬಂದಾಗ ತಾಲ್ಲೂಕು ಪಂಚಾಯಿತಿ ಇಒ ಎದುರಿನಲ್ಲೇ ದೂರುದಾರರನ್ನು ಬೆದರಿಸುವ ಧಾಟಿಯಲ್ಲಿ ಕಾರ್ಯದರ್ಶಿ ವಿಲಾಸ ಚವ್ಹಾಣ ಅವರು ನಡೆದುಕೊಂಡಿದ್ದು ಕಂಡು ಬಂದಿತು.

ಹಣಕ್ಕೆ ಬೇಡಿಕೆಯ ಆರೋಪ

ಗ್ರಾಮ ಪಂಚಾಯಿತಿ ಪಿಡಿಒ ವಿಜಯಾ ಮುದಗಲ್ ಜಿಪಿಎಸ್ ಮಾಡಲು ಹಣಕ್ಕೆ ಬೇಡಿಕೆ ಇಡುತ್ತಿದ್ದಾರೆ. ಈಗಾಗಲೇ ಮನೆಗಳ ಜಿಪಿಎಸ್ ಮಾಡಲು ₹ 8 ಸಾವಿರ ಕೊಟ್ಟಿದ್ದೇನೆ ಎಂದು ಗ್ರಾಮದ ದಾವಲಸಾಬ ಗುಡೂರ ಆರೋಪಿಸಿದರು. 2021ನೇ ಸಾಲಿನಲ್ಲಿ ಬಸವ ವಸತಿ ಯೋಜನೆಯಡಿ ನನ್ನ ಪತ್ನಿಯ ಹೆಸರಿನಲ್ಲಿ ಮನೆ ಮಂಜೂರಾಗಿದ್ದು ಮೂರನೇ ಹಂತಕ್ಕೆ ಮನೆ ಬಂದು ನಿಂತಿದೆ. ಜಿಪಿಎಸ್ ಮಾಡಿಸಲು ಹಣ ಕೊಟ್ಟಿದ್ದೇನೆ.ಆ ದರೆ ಜಿಪಿಎಸ್ ಮಾಡಲು ಹಿಂದೇಟು ಹಾಕುತ್ತಿದ್ದಾರೆ ಎಂದು ಆರೋಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT