ವಿಜಯಪುರ: ಅಲೆಮಾರಿ ಕುರಿಗಾಹಿಗಳೊಂದಿಗೆ ಸಂವಾದ, ವಾಸ್ತವ್ಯ ಇಂದು

ವಿಜಯಪುರ: ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಸುಜಾತಾ ಕಳ್ಳಿಮನಿ ಅವರು ವಿನೂತನ ಕಾರ್ಯಕ್ರಮ ನಡೆಸಲು ಸಜ್ಜಾಗಿದ್ದಾರೆ.
ಸೆಪ್ಟೆಂಬರ್ 4ರಂದು ಸಂಜೆ 6ಕ್ಕೆ ತಿಕೋಟಾ ತಾಲ್ಲೂಕಿನ ಲೋಗಾಂವ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಇಟ್ಟಂಗಿಹಾಳ ಗ್ರಾಮದ ಅಡವಿಯಲ್ಲಿ ಅಲೆಮಾರಿ ಕುರಿಗಾಯಿಗೊಂದಿಗೆ ಸಂವಾದ ಮತ್ತು ವಾಸ್ತವ್ಯ ಮಾಡಲಿದ್ದಾರೆ.
ಅಧ್ಯಕ್ಷರೊಂದಿಗೆ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋವಿಂದ ರೆಡ್ಡಿ, ಜಿಲ್ಲಾ ಮತ್ತು ತಾಲ್ಲೂಕಿನ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಪೊಲೀಸ್ ಸಿಬ್ಬಂದಿ, ಸ್ಥಳೀಯ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ.
ಕುರಿಗಾಹಿಗಳ ಸಮಸ್ಯೆಗಳನ್ನು ಆಲಿಸಲಿರುವ ಅಧ್ಯಕ್ಷರು, ಸ್ಥಳದಲ್ಲೇ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಿದ್ದಾರೆ.
ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಅವರು, ಅಸಂಘಟಿತ ವಲಯಕ್ಕೆ ಸೇರಿರುವ ಅಲೆಮಾರಿ ಕುರಿಗಾಹಿಗಳು ತೀವ್ರ ನಿರ್ಲಕ್ಷ್ಯಕ್ಕೆ ಒಳಗಾಗಿದ್ದಾರೆ. ಶಿಕ್ಷಣ, ನಗರದಿಂದ ವಂಚಿತರಾಗಿದ್ದಾರೆ. ಹೀಗಾಗಿ ಅವರ ದೂರು, ದುಮ್ಮಾನಗಳನ್ನು ಆಲಿಸುವ ಉದ್ದೇಶದಿಂದ ಸಂವಾದ, ವಾಸ್ತವ್ಯ ಮಾಡಲಿದ್ದೇನೆ’ ಎಂದು ತಿಳಿಸಿದರು.
‘ಕುರಿಗಾಹಿಗಳೊಂದಿಗೆ ಟೆಂಟ್ನಲ್ಲೇ ವಾಸ್ತವ್ಯ ಮಾಡಿದ ಬಳಿಕ ಮರುದಿನ ಬೆಳಿಗ್ಗೆ ಇಟ್ಟಂಗಿಹಾಳ ಗ್ರಾಮದಲ್ಲಿ ಬಯಲು ಶೌಚಾಲಯದ ಕುರಿತು ಜನರಿಗೆ ಜಾಗೃತಿ ಮೂಡಿಸಲಾಗುವುದು’ ಎಂದು ಹೇಳಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.