ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನಪ್ರತಿನಿಧಿಗಳ ಪರವಾಗಿ ಪತಿ, ಮಕ್ಕಳ ದರ್ಬಾರ

ಗೊಂದಲದ ಗೂಡಾದ ಬಸವ ವಸತಿ ಯೋಜನೆ ಜಾಗೃತಿ ಸಮಿತಿ ಸಭೆ
Last Updated 3 ಡಿಸೆಂಬರ್ 2013, 8:25 IST
ಅಕ್ಷರ ಗಾತ್ರ

ಸಿಂದಗಿ: ನಗರದ ತಾಲ್ಲೂಕು ಪಂಚಾಯ್ತಿ ಸಭಾಭವನದಲ್ಲಿ ಶನಿವಾರ ನಡೆದ ಸರ್ಕಾರದ ಬಸವ ವಸತಿ ನಿವೇಶನ ಯೋಜನೆ ಜಾಗೃತಿ ಸಮಿತಿ ಸಭೆ ಅಕ್ಷರಶ: ಗೊಂದಲದ ಗೂಡಾಗಿತ್ತು. ಅವ್ಯವಸ್ಥೆ ಆಗರವಾಗಿತ್ತು.

ಬಹುತೇಕ ಗ್ರಾಮ ಪಂಚಾಯಿತಿಗಳು ಮತ್ತು ತಾಲ್ಲೂಕು ಪಂಚಾಯಿತಿಗಳ ಮಹಿಳಾ ಅಧ್ಯಕ್ಷರ ಪುತ್ರ, ಪತಿ ಸಭೆಗೆ ಹಾಜರಾಗಿ ದರ್ಬಾರ ನಡೆಸಿದ ಅಪರೂಪದ ಘಟನೆ ನಡೆಯಿತು.

ಸಭೆಯಲ್ಲಿ ಅಧ್ಯಕ್ಷರ ಪರವಾಗಿ ಬೇರೆಯವರೇ ಹಾಜರಿದ್ದಾರೆ ಎಂಬುದು ಶಾಸಕರು ಮತ್ತು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗೆ ತಿಳಿದಿದ್ದರೂ ಅವರು ಜಾಣ ಕುರುಡುತನ ಪ್ರದರ್ಶಿಸಿದರು. ಸಭೆ ಮುಗಿಯುವ ಸಂದರ್ಭದಲ್ಲಿ ಶಾಸಕರು ಸಭೆಯಲ್ಲಿ ಅತ್ಯಧಿಕ ಸಂಖ್ಯೆಯಲ್ಲಿರುವವರು ಜನಪ್ರತಿನಿಧಿಗಳಲ್ಲದವರು. ಮಹಿಳಾ ಅಧ್ಯಕ್ಷರ ಪರವಾಗಿ ಬೇರೆ ಯಾರೂ ಬರುವಂತಿಲ್ಲ. ಅವರಿಗೂ ಆಡಳಿತ ಮಾಡಲು ಅವಕಾಶ ಮಾಡಿಕೊಡಿ, ಮುಂದಿನ ಸಭೆಯಲ್ಲಿ ಪರವಾಗಿ ಬಂದರೆ ಅವಕಾಶ ನೀಡುವುದಿಲ್ಲ ಎಂದು ತರಾಟೆಗೆ ತೆಗೆದುಕೊಂಡರು.

ಹೊನ್ನಳ್ಳಿ ಗ್ರಾಮ ಪಂಚಾಯಿತಿಗೆ ಮಹಾದೇವಿ ಭೀಮರಾಯ ಅಮರಗೋಳ ಅಧ್ಯಕ್ಷರಿದ್ದಾರೆ. ಆದರೆ ಅವರ ಪುತ್ರ ರಾಜಶೇಖರ ಭೀಮರಾಯ ಅಮರಗೋಳ ಸಭೆಯಲ್ಲಿ ಹಾಜರಿದ್ದು ಹೊನ್ನಳ್ಳಿ ತಾಲ್ಲೂಕು ಪಂಚಾಯ್ತಿ ಸದಸ್ಯ ಹಳ್ಳೆಪ್ಪಗೌಡ ಚೌಧರಿ ಇವರ ಜೊತೆ ತೀವ್ರ ಜಟಾಪಟಿ ನಡೆಸಿದ ಪ್ರಸಂಗವೂ ನಡೆಯಿತು.

ತಾಲ್ಲೂಕು ಪಂಚಾಯಿತಿ ಸದಸ್ಯ ಚೌಧರಿ ಹೊನ್ನಳ್ಳಿ ಗ್ರಾಮ ಪಂಚಾಯ್ತಿಯಲ್ಲಿ ಬಸವ ವಸತಿ ನಿವೇಶನ ಹಂಚಿಕೆಯಲ್ಲಿ ಭಾರಿ ಗೋಲಮಾಲ್ ನಡೆದಿದೆ ಎಂದು ಸಾಕ್ಷಾಧಾರಗಳೊಂದಿಗೆ ಸಾಬೀತು ಪಡಿಸಿದರು. ಆವಾಗ್ಗೆ ಅಧ್ಯಕ್ಷೆ ಪುತ್ರ ನಿವೇಶನ ಹಂಚಿಕೆಗೆ ತನ್ನದೇ ಆದ ಸಮಿತಿ ಇದೆ. ನನಗೂ ಕಾಯ್ದೆ ಗೊತ್ತಿದೆ. ಹೌದು ಮನೆಗಳನ್ನು ನಾವೇ ಹಾಕಿಕೊಳ್ಳುತ್ತೇವೆ ನೋಡು ಎಂದು ಉಡಾಪೆ ಮಾತುಗಳನ್ನು ಆಡಿದರೂ ಶಾಸಕರು, ತಾಪಂ ಇಒ ತುಟಿ ಬಿಚ್ಚಲಿಲ್ಲ.

ಸಭೆಯ ಎದುರು ತಾಲ್ಲೂಕು ಪಂಚಾಯಿತಿ ಸದಸ್ಯ ಚೌಧರಿ ದಾಖಲೆಗಳನ್ನು ತೋರಿಸಿ ಹೊನ್ನಳ್ಳಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಅಬ್ಬಾಸಲಿ ಕೂಡಲಗಿ ಸ್ವತ: ತನ್ನ ಪತ್ನಿ ಬೇಗನಬಿ ಅಬ್ಬಾಸಲಿ ಕೂಡಗಿ ಹೆಸರಿನಲ್ಲಿ ಮನೆ ಹಾಕಿಕೊಂಡಿ ದ್ದಾರೆ. ಸದಸ್ಯೆ ಲಾಲಬಿ ಅಮಿನಸಾಬ ನಾಯ್ಕೋಡಿ ಸ್ವತ: ತನ್ನ ಹೆಸರಿನಲ್ಲಿಯೇ ಮನೆ ಹಾಕಿಕೊಂಡಿ ದ್ದಾರೆ. ಸದಸ್ಯ ಬುರಾನಪಟೇಲ ದೌಲಪಟೇಲ ಅವಟಿ ಇವರು ತನ್ನ ಪತ್ನಿ ಮಾಲನಬಿ ಹೆಸರಿನಲ್ಲಿ ಮನೆ ಹಾಕಿಕೊಂಡಿದ್ದಾರೆ. ಚಟ್ನಳ್ಳಿ ಗ್ರಾಮದ ಸದಸ್ಯೆ ಮಡಿವಾಳಮ್ಮ ಬಿರಾದಾರ ತಮ್ಮ ಸೊಸೆ ದೇವಕ್ಕಮ್ಮ ಬಿರಾದಾರ ಹೆಸರಿಗೆ ಮನೆ ಮಂಜೂರು ಮಾಡಿದ್ದಾರೆ. ಹೀಗೆ ಹೊನ್ನಳ್ಳಿ ಗ್ರಾಮ ಪಂಚಾಯಿತಿ 12 ಸದಸ್ಯರಲ್ಲಿ ಮಹಾಂತ ಗೌಡ ಚೌಧರಿ ಮತ್ತು ಗುರಲಿಂಗಪ್ಪ ಸಜ್ಜನ ಇವರಿಬ್ಬರನ್ನು ಹೊರತುಪಡಿಸಿ ಎಲ್ಲ ಸದಸ್ಯರೂ ವೈಯಕ್ತಿಕವಾಗಿ ಸರ್ಕಾರದ ಬಸವ ವಸತಿ ನಿವೇಶನ ಯೋಜನೆಯನ್ನು ದುರ್ಬಳಕೆ ಮಾಡಿ ಕೊಂಡಿದ್ದಾರೆ ಎಂದು ತಾಪಂ ಸದಸ್ಯ ಹಳ್ಳೆಪ್ಪಗೌಡ ಚೌಧರಿ ಗಂಭೀರ ಆರೋಪ ಮಾಡಿದರು.

ಸಭೆಯಲ್ಲಿ ತಮ್ಮೊಂದಿಗೆ ಜಟಾಪಟಿ ನಡೆಸಿದ ಹೊನ್ನಳ್ಳಿ ಗ್ರಾ.ಪಂ. ಅಧ್ಯಕ್ಷೆ ಪುತ್ರನಿಗೆ ಸಭೆಯಲ್ಲಿ ಪ್ರವೇಶಿಸಿ ಮಾತನಾಡಲು ಅಧಿಕಾರವಿಲ್ಲ ಎಂದು ಸದಸ್ಯ ಚೌಧರಿ ಆಕ್ಷೇಪಿಸಿದರು. ಅವರ ಆಕ್ಷೇಪಕ್ಕೆ ಕ್ಯಾರೆ ಅನ್ನಲಿಲ್ಲ.

ಅದರಂತೆ ಇದೇ ಪಂಚಾಯ್ತಿಯಲ್ಲಿ 2012–13 ನೇ ಸಾಲಿನಲ್ಲಿ ಇಂದಿರಾ ಆವಾಸ್ ಯೋಜನೆಗಳ ಮನೆಗಳ ಹಂಚಿಕೆಯಲ್ಲೂ ಭಾರಿ ಅವ್ಯವಹಾರವಾಗಿದೆ. ರೂ.8–10 ಸಾವಿರ ಪಡೆದುಕೊಂಡು ಮನೆಗಳನ್ನುಉಳ್ಳವರಿಗೆ ನೀಡಲಾಗಿದೆ. ಹೀಗಾಗಿ ಬಡವರು ಈ ಯೋಜನೆಯಿಂದ ವಂಚಿತರಾಗಿದ್ದಾರೆ ಎಂದು ಅವರು ಆಪಾದಿಸಿದರು.

ಇದೇ ಸಂದರ್ಭದಲ್ಲಿ ಶಾಸಕರು ಮತಕ್ಷೇತ್ರದ ಎಲ್ಲ ಗ್ರಾಮ ಪಂಚಾಯಿತಿಗಳಿಗೂ ಗ್ರಾಮೀಣಾಭಿ ವೃದ್ಧಿ ಮತ್ತು ಪಂಚಾಯತ್ ರಾಜ್ ಖಾತೆ ಮಾಜಿ ಸಚಿವ, ದಿವಂಗತ ನಜೀರಸಾಬ ಅವರ ಭಾವಚಿತ್ರ ವಿತರಿಸಿದರು.

ವೇದಿಕೆಯಲ್ಲಿ ತಾಲ್ಲೂಕು  ಪಂಚಾಯಿತಿ ಅಧ್ಯಕ್ಷೆ ಸರಸ್ವತಿ ಬದರಿ, ಉಪಾಧ್ಯಕ್ಷ ಸುರೇಶ ಬೇನಾಳ, ತಾಪಂ ಇಓ ಸುರೇಶ ಬಿರಾದಾರ, ಎಸ್.ಎಸ್.ಖೇಡಗಿ ಉಪಸ್ಥಿತರಿದ್ದರು.

ಸಭೆಗೆ ಪರವಾಗಿ ಬಂದವರು

ಆಲಮೇಲ ತಾ.ಪಂ. ಸದಸ್ಯೆ ಪರವಾಗಿ ಪತಿ ಶಿವಾನಂದ ಮಾರ್ಸನಳ್ಳಿ, ಅದೇ ಗ್ರಾಮದ ತಾ.ಪಂ. ಸದಸ್ಯೆ ಮೇಲಿನಮನಿ ಅವರ ಪರವಾಗಿ ಪತಿ ಗುಂಡು ಮೇಲಿನಮನಿ, ಕೆರೂಟಗಿ ತಾ.ಪಂ. ಸದಸ್ಯೆ ಬುಳ್ಳಾ ಅವರ ಪರವಾಗಿ ಪುತ್ರ ಸಿದ್ದು ಬುಳ್ಳಾ ಸಭಾಭವನದಲ್ಲಿ ಆಸೀನರಾಗಿದ್ದರು.

₨14.86 ಕೋಟಿ ಬಿಡುಗಡೆ: ಬಸವ ವಸತಿ ಯೋಜನೆ ಅಡಿ ಸಿಂದಗಿ ಮತಕ್ಷೇತ್ರಕ್ಕೆ ₨14.86 ಕೋಟಿ ಬಿಡುಗಡೆಗೊಂಡು ಫಲಾನುಭವಿಗಳ ಖಾತೆಗೆ ಜಮೆ ಆಗಿದೆ ಎಂದು ಶಾಸಕ ಭೂಸನೂರ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT