ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಲಮೂಲ ಪುನರುಜ್ಜೀವನಗೊಳ್ಳಲಿ: ಆಶಯ

ಬೂದಿಗೆರೆ ಗ್ರಾಮ ಪಂಚಾಯಿತಿ: ಹಿತ್ತರಹಳ್ಳಿಯಲ್ಲಿ ಕಲ್ಯಾಣಿ ಉದ್ಘಾಟನೆ
Last Updated 30 ಜೂನ್ 2020, 9:31 IST
ಅಕ್ಷರ ಗಾತ್ರ

ವಿಜಯಪುರ: ‘ಹಿರಿಯರು ದೂರದೃಷ್ಟಿಯಿಟ್ಟುಕೊಂಡು ನಿರ್ಮಾಣ ಮಾಡಿರುವ ಬಹುತೇಕ ಕಲ್ಯಾಣಿಗಳು ಕಸಕಡ್ಡಿಗಳು ತುಂಬುವಂತಹ ತೊಟ್ಟಿಗಳಾಗಿ ಮಾರ್ಪಟ್ಟಿದ್ದು, ಅವುಗಳನ್ನು ಪುನರುಜ್ಜೀವನಗೊಳಿಸುವಂತಹ ಕಾರ್ಯ ಮಾಡಲು ಸಮುದಾಯ ಮುಂದಾಗಬೇಕು’ ಎಂದು ಜಿಲ್ಲಾ ಪಂಚಾಯಿತಿ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಜಿ.ಲಕ್ಷ್ಮೀನಾರಾಯಣಪ್ಪ ತಿಳಿಸಿದರು.

ಚನ್ನರಾಯಪಟ್ಟಣ ಹೋಬಳಿ ಬೂದಿಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಿತ್ತರಹಳ್ಳಿ ಗ್ರಾಮದಲ್ಲಿ ಅಭಿವೃದ್ಧಿ ಪಡಿಸಿರುವ ಕಲ್ಯಾಣಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಕಲ್ಯಾಣಿಗಳು ಹಳ್ಳಿಗಳ ಜೀವನಾಡಿಗಳು, ಕೆರೆ, ಕುಂಟೆಗಳ ಜೊತೆಯಲ್ಲಿ ಬಹುತೇಕ ಕಡೆಗಳಲ್ಲಿ ಕಲ್ಯಾಣಿಗಳನ್ನು ಮೂಲೆಗುಂಪು ಮಾಡಿ ಕೆಲಸಕ್ಕೆ ಬಾರದಂತೆ ಮಾಡಲಾಗಿರುವುದರಿಂದ ಇಂದು ಕುಡಿಯುವ ನೀರಿಗಾಗಿ ಪರಿತಪಿಸುವಂತಹ ಸ್ಥಿತಿಗೆ ನಾವು ತಲುಪಿದ್ದೇವೆ. ಗ್ರಾಮ ಪಂಚಾಯಿತಿಗಳಿಗೆ ಬರುವ ಅನುದಾನಗಳಲ್ಲಿ ಜನರು ಸಾಮೂಹಿಕವಾಗಿ ಕೂಡಿಕೊಂಡು, ಕಲ್ಯಾಣಿಗಳು, ಕುಂಟೆಗಳನ್ನು ಅಭಿವೃದ್ಧಿ ಪಡಿಸಿಕೊಳ್ಳುವುದರಿಂದ ಮುಂದಿನ ಪೀಳಿಗೆಗೆ ಉತ್ತಮ ವಾತಾವರಣವನ್ನು ನಾವು ಬಳುವಳಿಯಾಗಿ ನೀಡಲು ಅವಕಾಶವಾಗುತ್ತದೆ. ಇಂತಹ ಉತ್ತಮ ಕಾರ್ಯಗಳಲ್ಲಿ ಪ್ರತಿಯೊಬ್ಬರೂ ತೊಡಗಿಸಿಕೊಳ್ಳಬೇಕು’ ಎಂದರು.

ಕೆಪಿಸಿಸಿ ಸದಸ್ಯ ಎ.ಸಿ.ಶ್ರೀನಿವಾಸ್ ಮಾತನಾಡಿ, ‘ಹಳ್ಳಿಗಳು ಸರ್ವತೋಮುಖವಾಗಿ ಅಭಿವೃದ್ಧಿ ಹೊಂದಿದಾಗ ಮಾತ್ರವೇ ದೇಶದ ಪ್ರಗತಿಯಾಗುತ್ತದೆ. ಈ ನಿಟ್ಟಿನಲ್ಲಿ ಕೇಂದ್ರದಲ್ಲಿ ಯುಪಿಎ ಸರ್ಕಾರವಿದ್ದ ಸಮಯದಲ್ಲಿ ಜಾರಿಗೆ ತಂದ ನರೇಗಾ ಯೋಜನೆಯಿಂದಾಗಿ ಇಂದು ಹಳ್ಳಿ ಹಳ್ಳಿಯಲ್ಲೂ ಅನೇಕ ಅಭಿವೃದ್ಧಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗಿದೆ. ಪ್ರತಿಯೊಬ್ಬ ರೈತನಿಗೂ ಈ ಯೋಜನೆ ಉಪಯುಕ್ತವಾಗಿದೆ. ಇದನ್ನು ಜನರು ಅರ್ಥ ಮಾಡಿಕೊಳ್ಳಬೇಕು’ ಎಂದರು.

‘ನರೇಗಾ ಯೋಜನೆಯಲ್ಲಿ ಬಂದಷ್ಟು ಅನುದಾನ ಯಾವುದೇ ಅನುದಾನದಲ್ಲಿ ಬರಲಿಕ್ಕೆ ಸಾಧ್ಯವಿಲ್ಲ. ಉದ್ಯೋಗವಿಲ್ಲದ ಸಮಯದಲ್ಲಿ ಪಂಚಾಯಿತಿಯಲ್ಲಿ ಅರ್ಜಿ ಹಾಕಿಕೊಂಡು ಉದ್ಯೋಗಾವಕಾಶವನ್ನು ಪಡೆಯಲು ಸಾಧ್ಯವಿದೆ. ಸರ್ಕಾರದಿಂದ ಗ್ರಾಮ ಪಂಚಾಯಿತಿಗಳಿಗೆ ಬಿಡುಗಡೆಯಾಗುವಂತಹ ಅನುದಾನಗಳನ್ನು ಸದ್ಬಳಕೆ ಮಾಡಿಕೊಳ್ಳಲು ಸಮುದಾಯ ಮುಂದೆ ಬಂದಾಗ ಮಾತ್ರ ಇಂತಹ ಉತ್ತಮ ಅಭಿವೃದ್ಧಿ ಕಾರ್ಯಕ್ರಮ ಮಾಡಿಕೊಳ್ಳಲು ಸಾಧ್ಯ. ಜನರೂ ಕೂಡಾ ಪಂಚಾಯಿತಿಗಳ ಅಭಿವೃದ್ಧಿಗಾಗಿ ತೆರಿಗೆ ಕಟ್ಟುವ ಮೂಲಕ ಸಹಕಾರ ನೀಡಬೇಕು’ ಎಂದರು.

ಜಿಲ್ಲಾ ಪಂಚಾಯಿತಿ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಕೆ.ಸಿ.ಮಂಜುನಾಥ್ ಮಾತನಾಡಿ, ಸರ್ಕಾರ, ಅಂತರ್ಜಲದ ವೃದ್ಧಿಗಾಗಿ ಜಲಾಮೃತ ಕಾರ್ಯಕ್ರಮದ ಮೂಲಕದ ಜನರಿಗೆ ನೀರಿನ ಬಗ್ಗೆ ಅರಿವು ಮೂಡಿಸುತ್ತಿದೆ. ಜಲಸಾಕ್ಷರತೆ, ಜಲಸಂರಕ್ಷಣೆ, ಜಲಪ್ರಜ್ಞೆ ಹಾಗೂ ಹಸಿರೀಕರಣ ಎಂಬ ನಾಲ್ಕು ಅಂಶ ಪರಿಚಯಿಸಿದೆ. ನೀರನ್ನು ಮಿತವಾಗಿ ಬಳಸಿ ನಾಳೆಗೂ ಉಳಿಸಿ, ನೀರು ಅಮೃತ, ನೀರಿನ ಜವಾಬ್ದಾರಿ ನನ್ನದು, ಸರ್ವರಿಗೂ ಜಲ ಸದಾಕಾಲ ಎಂಬ ಘೋಷವಾಕ್ಯಗಳ ಮೂಲಕ ಜನರಿಗೆ ನೀರಿನ ಬಳಕೆ ಮತ್ತು ಮಹತ್ವ ಹಾಗೂ ಮುಂದಿನ ಪೀಳಿಗೆಗೆ ನೀರು ಉಳಿಸಬೇಕು ಎನ್ನುವುದರ ಮಾಹಿತಿಯನ್ನು ಪ್ರತಿಯೊಬ್ಬರೊಂದಿಗೆ ಹಂಚಿಕೊಳ್ಳಬೇಕು ಎಂದರು.

ಬೂದಿಗೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಶ್ರೀನಿವಾಸಗೌಡ, ಮುಖಂಡರಾದ ಲಕ್ಷ್ಮಣಗೌಡ, ಹಿತ್ತರಹಳ್ಳಿ ರಮೇಶ್, ಜಿಲ್ಲಾ ಕಾಂಗ್ರೆಸ್ ಎಸ್.ಸಿ.ಘಟಕದ ಅಧ್ಯಕ್ಷ ಚೌಡಪ್ಪನಹಳ್ಳಿ ಲೋಕೇಶ್, ತಾಲ್ಲೂಕು ಪಂಚಾಯಿತಿ ಸದಸ್ಯ ದಿನ್ನೂರು ವೆಂಕಟೇಶ್, ಮುಖಂಡರಾದ ಭಟ್ಟರಮಾರೇನಹಳ್ಳಿ ವಿಶ್ವನಾಥ್, ಚನ್ನಹಳ್ಳಿ ಮಂಜುನಾಥ್, ಗ್ರಾಮ ಪಂಚಾಯಿತಿ ಸದಸ್ಯರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT