ಮೈಸೂರು: ಬದುಕಿನ ಅನಿರೀಕ್ಷಿತ ತಿರುವುಗಳು ಸೂಪರ್ ಹಿಟ್ ಸಿನೆಮಾಗಿಂತಲೂ ರೋಚಕವಾಗಿರುತ್ತದೆ. ಆದರೆ ಇದು ಕಥೆಯಲ್ಲ ಜೀವನ.. ಈಚೆಗೆ ಅರಮನೆ ಮುಂಭಾಗ ನಡೆದ ಸಿಲಿಂಡರ್ ಸ್ಪೋಟದಲ್ಲಿ ಮೃತಪಟ್ಟ ಲಕ್ಷ್ಮಿ ಕನಸುಗಳು ಆಕೆಯೊಂದಿಗೆ ಕೊನೆಯಾಗಿದೆ.

ಜೀವನದಲ್ಲಿ ನೂರಾರು ಸಮಸ್ಯೆಗಳು, ಬದುಕು ಕಟ್ಟಿಕೊಳ್ಳಬೇಕೆಂದು ಮಂಡ್ಯದಿಂದ ಬೆಂಗಳೂರಿನ ಬ್ಯಾಡರಹಳ್ಳಿಗೆ ಬಂದಿದ್ದ ಲಕ್ಷ್ಮಿ, ಮಗಳ ಬಗ್ಗೆ ದೊಡ್ಡ ಕನಸು ಕಂಡಿದ್ದರು. ಕಷ್ಟಗಳನ್ನು ತನ್ನಲ್ಲೇ ಇಟ್ಟುಕೊಂಡು ಮಗಳ ಭವಿಷ್ಯಕ್ಕಾಗಿ ಹಗಲಿರುಳು ದುಡಿಯುತ್ತಿದ್ದರು. ಟೈಲರಿಂಗ್ ಮಾಡುತ್ತಾ, ಸೀರೆಗೆ ಗುಚ್ಛಿ ಹಾಕಿ ಸಂಪಾದನೆ ಮಾಡಿ ಮಗಳನ್ನು ಸಾಕುತ್ತಿದ್ದರು.

ಡಿ.25ರ ಕ್ರಿಸ್ಮಸ್ ರಜಾ ದಿನದಂದು ಮಗಳನ್ನು ಕರೆದುಕೊಂಡು ಮೈಸೂರಿನ ಬೆಳವಾಡಿಯಲ್ಲಿರುವ ನಾದಿನಿಯ ಮನೆಗೆ ಬಂದಿದ್ದರು. ನಿತ್ಯ ಬದುಕಿನ ಚಿಂತೆಯಲ್ಲಿರುತ್ತಿದ್ದ ಅವರು, ಅಂದು ಸಂತಸದಿಂದ ದಿನ ಕಳೆದಿದ್ದರು. ನಗರದ ವೈಭವವನ್ನು ಸವಿದು, ರಾತ್ರಿ ಮನೆಗೆ ತೆರಳಲು ಗ್ರಾಮೀಣ ಬಸ್ ನಿಲ್ದಾಣದ ಕಡೆ ತೆರಳುತ್ತಿದ್ದರು. ಅವರಿಗೆ ಸುಂದರ ಅರಮನೆಯ ಮುಂದೆ ತನ್ನನ್ನು ಕಾಯುತ್ತಿರುವ ಜವರಾಯ ಕಾಣಿಸಲೇ ಇಲ್ಲ.

ಅಂಬಾವಿಲಾಸ ಅರಮನೆಯ ಮುಂಭಾಗ ಸಿಡಿದ ಸಿಲಿಂಡರ್ನ ಲೋಹದ ಚೂರು ಲಕ್ಷ್ಮಿ ಅವರಿಗೆ ಬಲವಾಗಿ ತಾಗಿತ್ತು. ಕರುಳು ಹೊರ ಬಂದಿತ್ತು, ದೇಹ ರಕ್ತದ ಮಡುವಿನಲ್ಲಿ ಬಿದ್ದಿತ್ತು. ಇವೆಲ್ಲವೂ ಕ್ಷಣಾರ್ಧದಲ್ಲಿ ನಡೆದು ಹೋಗಿತ್ತು. ಮಗಳಿಗೆ ಸದಾ ಆಸರೆಯಾಗಿದ್ದ ಲಕ್ಷ್ಮಿ ಅಂದೂ ಆಕೆಗೆ ಅಡ್ಡಲಾಗಿ ಇದ್ದಿದ್ದರಿಂದ ಮಗು ಯಾವುದೇ ತೊಂದರೆಯಿಲ್ಲದೆ ಅಪಾಯದಿಂದ ಪಾರಾಗಿತ್ತು. ಅವರ 11 ವರ್ಷದ ಮಗಳು ಇಂದಿಗೂ ಅದೇ ಗುಂಗಿನಲ್ಲಿದ್ದಾಳೆ.

ಡಿ.26ರಂದು ಲಕ್ಷ್ಮಿ ಮೃತಪಟ್ಟರು. ಮಗಳು ಡಿಂಪಲ್ ತಾಯಿ ಪ್ರೀತಿಯಿಂದ ವಂಚಿತಳಾಗಿದ್ದಾಳೆ. ಆಕೆ ಮಂಡ್ಯದಲ್ಲಿರುವ ಲಕ್ಷ್ಮಿ ಅವರ ಸಹೋದರಿ ಆಸರೆಯಲ್ಲಿದ್ದಾಳೆ. ಆಕೆಯ ಶಿಕ್ಷಣಕ್ಕೆ ಸಹಾಯ ಬೇಕಾಗಿದೆ.

ವಾರ ಕಳೆದರೂ ಸ್ಪೋಟ ಪ್ರಕರಣದಲ್ಲಿ ಮೃತಪಟ್ಟವರಿಗೆ ಪರಿಹಾರ ದೊರೆಯದಿರುವ ಬಗ್ಗೆ ‘ಪ್ರಜಾವಾಣಿ’ ವಿಶೇಷ ವರದಿ ಪ್ರಕಟಿಸಿತ್ತು. ಇದಕ್ಕೆ ಸ್ಪಂದಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿ ಕುಟುಂಬಕ್ಕೆ ₹ 5 ಲಕ್ಷ ಪರಿಹಾರ ಘೋಷಿಸಿದ್ದಾರೆ. ಆದರೆ ‘ಮೃತಪಟ್ಟ ಕುಟುಂಬಗಳ ಪರಿಸ್ಥಿತಿ ಭಿನ್ನವಾಗಿದ್ದು, ಅದನ್ನು ಗಮನಿಸಿ ಪರಿಹಾರ ಘೋಷಿಸಬೇಕಿತ್ತು’ ಎಂದು ಕುಟುಂಬಸ್ಥರು ಆಗ್ರಹಿಸಿದ್ದಾರೆ.

‘ಬಳ್ಳಾರಿಯಲ್ಲಿ ಗಲಭೆಯಲ್ಲಿ ಮೃತಪಟ್ಟ ಪಕ್ಷವೊಂದರ ಕಾರ್ಯಕರ್ತನಿಗೆ ಇರುವ ಬೆಲೆ ಸಾಮಾನ್ಯರ ಮಕ್ಕಳಿಗೆ ಇಲ್ಲವೇ’ ಎಂಬ ಪ್ರಶ್ನೆ ಅವರಲ್ಲಿ ಉದ್ಭವಿಸಿದೆ.

‘ವಾಸ್ತವದ ಬಗ್ಗೆ ಪರಿಶೀಲಿಸಿ ಸರ್ಕಾರ ಪರಿಹಾರ ಘೋಷಿಸಬೇಕು. ಲಕ್ಷ್ಮಿ ಅವರ ಪತಿಯೂ ಮಗು ಸಾಕುವ ಬಗ್ಗೆ ನಿರ್ಧಾರ ತಿಳಿಸಿಲ್ಲ. ಸದಾ ಪಾನಮತ್ತರಾಗಿರುವ ಅವರ ಬಳಿ ಮಗುವನ್ನು ಬಿಡಲೂ ಸಾಧ್ಯವಿಲ್ಲ. ಆಕೆಗೆ ವರ್ಷಕ್ಕೆ ₹60 ಸಾವಿರ ಶಿಕ್ಷಣಕ್ಕೆ ಬೇಕಾಗುತ್ತದೆ. ಅದಕ್ಕಾದರೂ ಸರ್ಕಾರ ಸಹಾಯ ಮಾಡಬೇಕು’ ಎನ್ನುತ್ತಾರೆ ಡಿಂಪಲ್ ಚಿಕ್ಕಪ್ಪ ಮಧು.

ಹಾಗಂತ ಘಟನೆಯಲ್ಲಿ ಮೃತಪಟ್ಟ ಇಬ್ಬರದ್ದು ಯಾವುದೇ ತಪ್ಪುಗಳಿಲ್ಲ. ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದವರು, ಅನಿರೀಕ್ಷಿತ ಘಟನೆಯಲ್ಲಿ ಮೃತಪಟ್ಟಿದ್ದಾರೆ. ಘಟನೆಯ ಬಳಿಕ ಪೊಲೀಸ್ ಇಲಾಖೆಯು ಎಚ್ಚೆತ್ತುಕೊಂಡಿದ್ದು, ಭದ್ರತೆ ದೃಷ್ಟಿಯಿಂದ ಅರಮನೆ ಸುತ್ತಲೂ ಅನಧಿಕೃತವಾಗಿ ವ್ಯಾಪಾರ ಮಾಡಲು ಬಿಡುತ್ತಿಲ್ಲ. ಬಲೂನ್ ಮಾರಾಟ ಹಾಗೂ ಬಳಕೆಗೆ ಬ್ರೇಕ್ ಹಾಕಿದೆ. ಹಾಗಿದ್ದರೆ ಎಚ್ಚೆತ್ತುಕೊಳ್ಳಲು ಮೂರು ಸಾವು ಆಗಲೇ ಬೇಕೆ..

ಮೈಸೂರಿನಲ್ಲಿ ಈ ಕಥೆ ಹೊಸತಲ್ಲ.. 2024ರ ಜ.27ರಂದು ಮೈಸೂರು ವಿಶ್ವವಿದ್ಯಾಲಯ ಮುಖ್ಯ ಪ್ರವೇಶ ದ್ವಾರದಿಂದ ಆಯಿಷ್ ಜಂಕ್ಷನ್ ನಡುವಿನ ಬೋಗಾದಿ ಮುಖ್ಯ ರಸ್ತೆಯಲ್ಲಿ ಅಲ್ಲಲ್ಲಿ ದಿಢೀರ್ ಅವೈಜ್ಞಾನಿಕ ರಸ್ತೆ ಉಬ್ಬುಗಳನ್ನು ನಿರ್ಮಿಸಲಾಗಿತ್ತು. ಇದರ ಅರಿವಿಲ್ಲದೆ ಬಂದ ಬೈಕ್ ಸವಾರರು ನಿಯಂತ್ರಣ ತಪ್ಪಿ ಬಿದ್ದು, ಮೂವರು ಮೃತಪಟ್ಟಿದ್ದರು. ಸಾವಿನ ಬಳಿಕ ರಸ್ತೆ ಉಬ್ಬು ತೆರವುಗೊಳಿಸಲಾಯಿತು. ಆದರೆ ಕುಟುಂಬಕ್ಕೆ ಪರಿಹಾರವಾಗಲಿ, ಸಾವಿಗೆ ಕಾರಣರಾದವರಿಗೆ ಶಿಕ್ಷೆಯಾಗಲಿ ದೊರೆಯಲಿಲ್ಲ. ಯಾರದೋ ತಪ್ಪಿನಿಂದ ಇನ್ಯಾರೋ ನೋವು ಅನುಭವಿಸುವುದು ನಿಲ್ಲುವುದು ಯಾವಾಗ...?