ಭಾನುವಾರ, ಸೆಪ್ಟೆಂಬರ್ 26, 2021
22 °C
ಕೋವಿಡ್‌ ಅಲೆ ಎದುರಿಸಲು ವೈದ್ಯಕೀಯ ಉಪಕರಣ ಖರೀದಿ: ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ

ಯಾದಗಿರಿ ಜಿಲ್ಲೆಗೆ ₹14 ಕೋಟಿ ಸಿಎಸ್‌ಆರ್‌ ಅನುದಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ಕೋವಿಡ್‌ 3ನೇ ಅಲೆ ಎದುರಿಸಲು ವಿವಿಧ ಸಂಘ– ಸಂಸ್ಥೆಗಳು ₹14 ಕೋಟಿ ಸಿಎಸ್‌ಆರ್‌ ಅನುದಾನವನ್ನು ಜಿಲ್ಲಾಡಳಿತಕ್ಕೆ ನೀಡಿವೆ ಎಂದು ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್‌, ತಿಳಿಸಿದರು.

ಜಿಲ್ಲೆಯು ನೀತಿ ಆಯೋಗದ ಮಹತ್ವಾಕಾಂಕ್ಷಿ ಜಿಲ್ಲೆಗಳಲ್ಲಿ ಒಂದಾಗಿದ್ದು, ಕೋವಿಡ್ ಮೂರನೇ ಅಲೆಯನ್ನು ನಿಯಂತ್ರಿಸಲು ಅವಶ್ಯವಿರುವ ವೈದ್ಯಕಿಯ ಉಪಕರಣಗಳನ್ನು ಈಗಾಗಲೇ ಟೆಂಡರ್‌ ಮೂಲಕ ಖರೀದಿಸಲಾಗಿದೆ ಎಂದು ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಜಿಲ್ಲೆಯ ಆರೋಗ್ಯ ಕೇಂದ್ರಗಳಲ್ಲಿ ಹೆಚ್ಚುವರಿ ಆಮ್ಲಜನಕ ಪೈಪ್‍ಲೈನ್ ಮತ್ತು ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ಹುಡ್ಕೋ ಸಂಸ್ಥೆ ಮುಂದೆ ಬಂದಿದೆ. ಜಿಲ್ಲಾ ಆಸ್ಪತ್ರೆ, ದೋರನಹಳ್ಳಿ, ಶಹಾಪುರ, ಹುಣಸಗಿ ಸಮುದಾಯ ಆರೋಗ್ಯ ಕೇಂದ್ರ, ಸುರಪುರ ನಗರ ಆರೋಗ್ಯ ಕೇಂದ್ರಗಳಲ್ಲಿ ಸುಮಾರು ₹2 ಕೋಟಿ ವೆಚ್ಚದಲ್ಲಿ ಈ ಯೋಜನೆ ಜಾರಿಗೆ ಬರಲಿದ್ದು, ಸಿಎಸ್‌ಆರ್‌ ಅನುಮೋದನೆಗಾಗಿ ಕಾಯಲಾಗುತ್ತಿದೆ. ಸುಮಾರು 250 ಹಾಸಿಗೆಗಳನ್ನು ಹೊಸದಾಗಿ ಕಾರ್ಯ ರೂಪಕ್ಕೆ ಬರಲಿದೆ ಎಂದು ತಿಳಿಸಿದರು.

ಆರ್‌ಇಸಿ ಫೌಂಡೇಷನ್‌ ವತಿಯಿಂದ ಜಿಲ್ಲಾ ಹೊಸ ಆಸ್ಪತ್ರೆಯಲ್ಲಿ ₹ 2.22 ಕೋಟಿ ವೆಚ್ಚದಲ್ಲಿ ಸಿಟಿ ಸ್ಕ್ಯಾನ್ ಘಟಕ ಸ್ಥಾಪನೆಗೆ ಟೆಂಡರ್ ಕರೆಯಲಾಗಿದೆ ಎಂದರು.

ಗಿವ್‌ ಇಂಡಿಯಾ ಫೌಂಡೇಷನ್‌ ಮೂಲಕ ಸುರಪುರ, ಹುಣಸಗಿ, ಗುರುಮಠಕಲ್, ಶಹಾಪುರ ತಾಲ್ಲೂಕಾಸ್ಪತ್ರೆಯಲ್ಲಿ ತಲಾ ₹75 ಲಕ್ಷ ವೆಚ್ಚದಲ್ಲಿ ವೈದ್ಯಕೀಯ ಆಮ್ಲಜನಕ ಉತ್ಪಾದಕ ಸ್ಥಾವರ ಸ್ಥಾಪನೆಗೆ ಸಿಎಸ್‍ಆರ್ ಪಾಲುದಾರರ ಅನುಮೋದನೆ ನೀಡಿದ್ದಾರೆ ಎಂದು ಮಾಹಿತಿ ನೀಡಿದರು.

ಇದಲ್ಲದೆ ವಿವಿಧ ಸಂಸ್ಥೆಗಳ ಮೂಲಕ ₹12 ಕೋಟಿ ಕೋವಿಡ್‌ಗೆ ಸಂಬಂಧಿಸಿದ ಉಪಕರಣ, ₹2 ಕೋಟಿ ಕೋವಿಡೇತರ ಉಪಕರಣ ಖರೀದಿಗೆ ಅನುಮೋದಿಸಲಾಗಿದೆ. ಒಂದು ತಿಂಗಳಲ್ಲಿ ಈ ಎಲ್ಲ ಉಪಕರಣ ಅಳವಡಿಸಲಾಗುತ್ತಿದೆ ಎಂದರು.

ಜಿಲ್ಲೆಯಲ್ಲಿ ನದಿಯಂಚಿನಲ್ಲಿರುವ 9 ಗ್ರಾಮಗಳ ಸ್ಥಳಾಂತರಕ್ಕೆ ₹288 ಕೋಟಿ ಪ್ರಸ್ತಾವಣೆ ಸಲ್ಲಿಸಲಾಗಿದೆ. ಇದು ಯುಕೆಪಿ–3 ಯೋಜನೆಯಡಿ ಸೇರಿಸುವಂತೆ ಕೆಬಿಜೆಎನ್‌ಎಲ್‌ ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿ ಮಾಡಲಾಗಿದೆ ಎಂದರು.

ಜಿಲ್ಲೆಯಲ್ಲಿ 8 ಚೆಕ್‌ ಪೋಸ್ಟ್‌ಗಳಲ್ಲಿ ಪೊಲೀಸ್‌, ಕಂದಾಯ, ಆರೋಗ್ಯ ಇಲಾಖೆಯ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಅವರಿಗೆ ಮೂಲಸೌಕರ್ಯಗಳನ್ನು ಕಲ್ಪಿಸಲಾಗುವುದು. ಕಟ್ಟುನಿಟ್ಟಾಗಿ ಮಾಡಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಸೂಚಿಸಲಾಗುವುದು ಎಂದರು.

ಪ್ರವಾಹದಿಂದ 3,300 ಹೆಕ್ಟೇರ್‌ ಪ್ರದೇಶ ಹಾಳಾಗಿದೆ. ನದಿಯಂಚಿನ ಜಮೀನುಗಳಲ್ಲಿ ನೀರು ನುಗ್ಗಿದೆ. ವಡಗೇರಾದ ಕೋರ್‌ ಗ್ರೀನ್‌ ಸಕ್ಕರೆ ಕಾರ್ಖಾನೆಯವರು ತ್ಯಾಜ್ಯವನ್ನು ಹಳ್ಳಕೊಳ್ಳಗಳಿಗೆ ಹರಿಬಿಟ್ಟರೆ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಈ ವೇಳೆ ಹೆಚ್ಚುವರಿ ಜಿಲ್ಲಾಧಿಕಾರಿ ಶಂಕರಗೌಡ ಸೋಮನಾಳ, ಆರ್‌ಸಿಎಚ್‌ ಡಾ.ಲಕ್ಷ್ಮಿಕಾಂತ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಸಂಜೀವಕುಮಾರ ರಾಯಚೂರುಕರ್ ಇದ್ದರು.

***

ಶಹಾಪುರ ತಾಲ್ಲೂಕಿನ ಕೊಳ್ಳೂರು (ಎಂ) ಸೇತುವೆ ಎತ್ತರಿಸಲು ₹150 ಕೋಟಿ ವೆಚ್ಚದ ಪ್ರಸ್ತಾವನೆ ಸಲ್ಲಿಸಲಾಗಿದೆ. ಯೋಜನೆ ಜಾರಿಯಿಂದ ಸಾರ್ವಜನಿಕರಿಗೆ ಅನುಕೂಲವಾಗಲಿದೆ
ಆರ್.ರಾಗಪ್ರಿಯಾ, ಜಿಲ್ಲಾಧಿಕಾರಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.