ಗುರುವಾರ , ಮೇ 26, 2022
25 °C
ಮಳೆ, ಪ್ರವಾಹದಿಂದ 540 ವಿದ್ಯುತ್‌ ಕಂಬ, 145 ವಿದ್ಯುತ್ ಪರಿವರ್ತಕಗಳಿಗೆ ಹಾನಿ

ಯಾದಗಿರಿ ಜಿಲ್ಲೆಯಲ್ಲಿ 6,500 ಹೆಕ್ಟೇರ್ ಬೆಳೆ, 2,900 ಮನೆಗಳಿಗೆ ಹಾನಿ

ಬಿ.ಜಿ.ಪ್ರವೀಣಕುಮಾರ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ಜಿಲ್ಲೆಯಲ್ಲಿ ಭಾರಿ ಮಳೆ, ಪ್ರವಾಹದಿಂದ 6,500 ಹೆಕ್ಟೇರ್‌ಗೂ ಹೆಚ್ಚು ಬೆಳೆ, 2,900 ಮನೆಗಳಿಗೆ ಹಾನಿಯಾಗಿದೆ. ಇದು ಕೇವಲ ಅಂದಾಜು ಮಾತ್ರ ಆಗಿದೆ. ಪ್ರವಾಹ ತಗ್ಗಿದ ಬಳಿಕ ಕಂದಾಯ, ಕೃಷಿ ಇಲಾಖೆಯಿಂದ ಜಂಟಿ ಸರ್ವೆ ನಡೆಸಿದಾಗ ನಷ್ಟದ ಪ್ರಮಾಣ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

ಜಿಲ್ಲೆಯಲ್ಲಿ ಮುಂಗಾರು ಆರಂಭದಿಂದಲೇ ಉತ್ತಮ ಮಳೆ ಸುರಿದಿದ್ದರಿಂದ ಬರಗಾಲದ ಭೀತಿ ದೂರವಾಗಿತ್ತು. ಲಾಕ್‌ಡೌನ್‌ ಕಾರಣ ಹಳ್ಳಿಗಳಿಗೆ ಹಿಂತಿರುಗಿ ಬಂದವರು ಕೃಷಿಯಲ್ಲಿ ತೊಡಗಿಸಿಕೊಂಡಿದ್ದರು. ಆದರೆ, ಅತಿವೃಷ್ಟಿ, ಪ್ರವಾಹದಿಂದ ಬದುಕು ಮುಳುಗಿ ಹೋಗಿದೆ.

ಕಳೆದ ವರ್ಷ ಕೃಷ್ಣಾ ನದಿ ಪ್ರವಾಹದಿಂದ ಸಾವಿರಾರು ಹೆಕ್ಟೇರ್ ಬೆಳೆ ಹಾನಿಯಾಗಿತ್ತು. ಭೀಮಾ ನದಿ ಪ್ರವಾಹದಿಂದ ವಡಗೇರಾ ತಾಲ್ಲೂಕಿನ ಜೋಳದಡಿಗಿ, ಗೂಡೂರು ಬ್ರಿಜ್‌ ಕಂ ಬ್ಯಾರೇಜ್‌ ತುಂಬಿ ಅಕ್ಕಪಕ್ಕದ ಜಮೀನುಗಳಿಗೆ ನೀರು ನುಗ್ಗಿತ್ತು. ಈ ವರ್ಷ ಕೃಷ್ಣೆ ಅಬ್ಬರ ಸ್ವಲ್ಪ ಕಡಿಮೆ ಇದ್ದರೆ, ಭೀಮೆ ಅಬ್ಬರಿಸುತ್ತಿದ್ದಾಳೆ. 

ಜಿಲ್ಲೆಯಲ್ಲಿ ಇತ್ತೀಚೆಗೆ ಸುರಿದ ಧಾರಾಕಾರ ಮಳೆಗೆ ಹಳೆ ಮನೆಗಳು ಬಿದ್ದಿವೆ. ಇನ್ನೂ ಕೆಲ ಕಡೆ ಭಾಗಶಃ ಕುಸಿದ ಕಾರಣ ಮನೆ ತೊರೆಯುವಂತೆ ಆಗಿದೆ. 

ಮುಳುಗಿದ ವಿದ್ಯುತ್‌ ಕಂಬಗಳು: ‘ಮಳೆ, ಪ್ರವಾಹದಿಂದ ಜಿಲ್ಲೆಯಲ್ಲಿ 540 ವಿದ್ಯುತ್‌ ಕಂಬಗಳು, 145 ವಿದ್ಯುತ್ ಪರಿವರ್ತಕಗಳಿಗೆ ಹಾನಿಯಾಗಿದೆ. ಭೀಮಾ ನದಿ ವ್ಯಾಪ್ತಿಯ ರೈತರ ಲೈನ್‌ ವಿದ್ಯುತ್‌ ಕಡಿತ ಮಾಡಲಾಗಿದೆ. ಪ್ರವಾಹ ನಿಂತ ನಂತರ ಸರ್ವೆ ಮಾಡಲಾಗುತ್ತಿದೆ’ ಎನ್ನುತ್ತಾರೆ ಜೆಸ್ಕಾಂ ಎಇ ರಾಘವೇಂದ್ರ ದುಕಾನ್.  

ಸಿಡಿಲು ಬಡಿದು ಸುರಪುರ ತಾಲ್ಲೂಕಿನ ದೀವಳಗುಡ್ಡದ ಹಣಮಂತ ತಿಮ್ಮಯ್ಯ ಪುರ್ಲೆ ಅವರಿಗೆ ಸೇರಿದ 25 ಕುರಿಗಳು ಸಾವನ್ನಪ್ಪಿವೆ. ಸುಮಾರು ₹8 ಲಕ್ಷ ನಷ್ಟವಾಗಿದೆ. ಪರಿಹಾರ ಕಲ್ಪಿಸುವ ಭರವಸೆಯನ್ನು ಕಂದಾಯ ಇಲಾಖೆ ಅಧಿಕಾರಿಗಳು ನೀಡಿದ್ದಾರೆ. 

ಕೃಷ್ಣಾ ನದಿ ತೀರದಲ್ಲಿ ಪ್ರವಾಹದ ಆತಂಕ: ಜಿಲ್ಲೆಯ ಹುಣಸಗಿ ತಾಲ್ಲೂಕಿನ ನಾರಾಯಣಪುರ ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ ಹರಿಸುವ ಪ್ರಮಾಣ ಏರಿಳಿಕೆಯಾಗುತ್ತಿದ್ದು, ನದಿ ಪಾತ್ರದ ಗ್ರಾಮಸ್ಥರಲ್ಲಿ ಪ್ರವಾಹದ ಆತಂಕ ಇನ್ನೂ ದೂರವಾಗಿಲ್ಲ. ಸುರಪುರ, ಹುಣಸಗಿ ತಾಲ್ಲೂಕಿನ ಹಲವಾರು ಗ್ರಾಮಗಳು ಮಳೆ, ಪ್ರವಾಹಕ್ಕೆ ಸಿಲುಕಿ ಸಾವಿರಾರು ಎಕರೆ ಬೆಳೆ ನಾಶವಾಗಿವೆ.

ಸಂಬಂಧಿಕರ ಮನೆಯಲ್ಲಿ ಠಿಕಾಣಿ: ಪ್ರವಾಹ ಭೀತಿ ಇರುವ ಗ್ರಾಮದಲ್ಲಿರುವ ಬಾಣಂತಿ ಹಾಗೂ ಗರ್ಭಿಣಿಯರು ದೂರದ ಸಂಬಂಧಿಕರ ಊರಲ್ಲಿ ವಾಸವಾಗಿದ್ದಾರೆ. ಅಲ್ಲದೆ ವೃದ್ಧರು, ಮಕ್ಕಳು ಸಂಬಂಧಿಕರ ಮನೆಗಳಲ್ಲಿ ಠಿಕಾಣಿ ಹೂಡಿದ್ದಾರೆ. ಪ್ರವಾಹದ ಪರಿಸ್ಥಿತಿ ನದಿ ತೀರದ ಗ್ರಾಮಸ್ಥರನ್ನು ಹೈರಾಣು ಮಾಡಿದೆ.

ವಿಷ ಜಂತುಗಳ ಭಯ: ಪ್ರವಾಹದಿಂದ ನದಿಯಲ್ಲಿ ವಿಷ ಜಂತುಗಳು ಕಾಣಿಸಿಕೊಳ್ಳುತ್ತಿವೆ. ಹುರಸಗುಂಡಗಿ, ರೋಜಾ, ನಾಯ್ಕಲ್‌ ಗ್ರಾಮಗಳಲ್ಲಿ ಹಾವುಗಳು ಪ್ರತ್ಯಕ್ಷವಾಗಿವೆ. ಪ್ರವಾಹ ಪೀಡಿತ ಗ್ರಾಮಗಳಿಗೆ ಅಧಿಕಾರಿಗಳ ತಂಡ ವೀಕ್ಷಣೆಗೆ ತೆರಳುತ್ತಿರುವಾಗ ರಸ್ತೆ ಮೇಲೆ ಹೆಬ್ಬಾವು ಪ್ರತ್ಯಕ್ಷವಾಗಿದೆ. ವಡಗೇರಾ ತಾಲ್ಲೂಕಿನ ಗೋಡಿಹಾಳ, ಅರ್ಜುಣಗಿ ರಸ್ತೆ ಮೇಲೆ ಹಾವು ಪ್ರತ್ಯಕ್ಷವಾಗಿದ್ದು, ಅದನ್ನು ಕೆಲವರು ವಿಡಿಯೊ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದಾರೆ. ಇದರಿಂದ ಪ್ರವಾಹ ಪೀಡಿತ ಗ್ರಾಮಸ್ಥರು ಮತ್ತಷ್ಟು ಹೈರಾಣಾಗುವ ಪರಿಸ್ಥಿತಿ ಏರ್ಪಟ್ಟಿದೆ. ಮೊದಲು ನೀರು ಆಹಾರಕ್ಕಾಗಿ ಪರಿತಪಿಸುವಾಗ ಇವುಗಳ ಕಾಟದಿಂದ ನಿವಾಸಿಗಳು ಬೇಸತ್ತಿದ್ದಾರೆ.

ಶುದ್ಧ ನೀರಿನ ಕೊರತೆ: ಪ್ರವಾಹ ಪೀಡಿತ ಗ್ರಾಮಗಳಲ್ಲಿ ಎಲ್ಲಿ ನೋಡಿದರೂ ರಾಡಿ ನೀರು ಕಾಣುತ್ತಿದೆ. ಇದರಿಂದ ಶುದ್ಧ ನೀರು ಇಲ್ಲದೆ ಗ್ರಾಮಸ್ಥರು ಪರದಾಡುತ್ತಿದ್ದಾರೆ. ವಡಗೇರಾ ತಾಲ್ಲೂಕಿನ ನಾಯ್ಕಲ್, ಗುಲಸರಂ, ಬಿರನಾಳ, ಬಬಲಾದಿ, ಹಾಲಗೇರಾ, ಕಂದಳ್ಳಿ, ಮಾಚನೂರು, ಶಿವುನೂರ, ಜೋಳದಡಗಿ, ಯಾದಗಿರಿ ತಾಲ್ಲೂಕಿನ ಹೆಡಗಿಮದ್ರಾ, ಅಬ್ಬೆತುಮಕೂರು, ಶಹಾಪುರ ತಾಲ್ಲೂಕಿನ ರೋಜಾ ಎಸ್., ಹುರಸಗುಂಡಗಿ ಗ್ರಾಮಗಳಲ್ಲಿ ಶುದ್ಧ ನೀರಿನ ಕೊರತೆ ಉಂಟಾಗಿದೆ.

‘ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ಎದುರಿಸಲು ಈಗಾಗಲೇ ಜಿಲ್ಲೆಗೆ ಮೂರು ಎನ್‌ಡಿಆರ್‌ಎಫ್ ಹಾಗೂ ಭಾರತೀಯ ಸೇನಾ ತಂಡ ಆಗಮಿಸಿವೆ. ಪರಿಸ್ಥಿತಿ ಎದುರಿಸಲು ಅಧಿಕಾರಿಗಳಿಗೆ ಖಡಕ್‌ ಸೂಚನೆ ಕೊಟ್ಟಿದ್ದೇನೆ. ಈಗಾಗಲೇ ಜಿಲ್ಲಾಡಳಿತದಿಂದ ನದಿ ತೀರದ ಕೆಲ ಗ್ರಾಮಸ್ಥರನ್ನು ಸ್ಥಳಾಂತರ ಮಾಡಲಾಗಿದೆ. ಶನಿವಾರ ಪ್ರವಾಹ ಕಡಿಮೆ ಆಗಿದ್ದರಿಂದ ಕೆಲ ಗ್ರಾಮಸ್ಥರು ಊರಿಗೆ ತೆರಳಿದ್ದರು. ಮತ್ತೆ ಅವರನ್ನು ಮನವೊಲಿಸಿ ಕಾಳಜಿ ಕೇಂದ್ರಕ್ಕೆ ರಾತ್ರಿಯೇ ಕರೆತರಲಾಗಿದೆ. ಅಲ್ಲಿನ ಸೌಲಭ್ಯಗಳ ಕುರಿತು ಪರಿಶೀಲಿಸಿದ್ದೇನೆ. ಅಗತ್ಯವಿದ್ದರೆ ಮತ್ತೆ ಕಾಳಜಿ ಕೇಂದ್ರ ಸ್ಥಾಪನೆ ಮಾಡಲಾಗುವುದು ಎನ್ನುತ್ತಾರೆ ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್‌.

‘ರೈತರ ಬದುಕು ಬರ್ಬಾದ್‌ ಆಯ್ತು’
ಜಿಲ್ಲೆಯಲ್ಲಿ ಮುಂಗಾರು ಉತ್ತಮವಾಗಿ ಬಂದಿದ್ದರಿಂದ ಹೆಸರು ಬೆಳೆ ಬಿತ್ತಿದ್ದರು. ಆದರೆ, ಕಾಳು ರಾಶಿಗೆ ಬಂದಾಗ ವಿಪರೀತ ಮಳೆ ಬಂದು ಎಲ್ಲವೂ ನೆಲಕಚ್ಚಿ ಮೊಳಕೆ ಬಂದಿತ್ತು. ಎಪಿಎಂಸಿಯಲ್ಲಿ ದರವಿದ್ದರೂ ಬೆಳೆ ಇಲ್ಲದೆ ಸಾಕಷ್ಟು ರೈತರಿಗೆ ನಷ್ಟವಾಗಿತ್ತು. ಇದೀಗ ಅಧಿಕ ಮಳೆ, ಪ್ರವಾಹದಿಂದ ಮತ್ತಷ್ಟು ಕುಗ್ಗುವಂತಾಗಿದೆ ಎನ್ನುವುದು ರೈತರ ಅಭಿಪ್ರಾಯ.

ಹತ್ತಿಕಾಯಿಯಲ್ಲಿ ಮೊಳಕೆ ಬಂದಿದೆ. ಭತ್ತ ನೆಲಕಚ್ಚಿದೆ. ಎನ್‌ಡಿಆರ್‌ಎಫ್ ವರದಿ ಪ್ರಕಾರ ಕಡಿಮೆ ಪ್ರಮಾಣದ ಪರಿಹಾರ ಸಿಗುತ್ತದೆ. ಇದರಿಂದ ರೈತರ ಬದುಕು ಬರ್ಬಾದ್ ಆಗಿದೆ ಎಂದು ರೈತ ಮಲ್ಲಯ್ಯ ನಾಯಕ ಕಣ್ಣೀರು ಹಾಕಿದರು.

ಎಲ್ಲ ಬೆಳೆಗೆ ಒಂದೇ ಪರಿಹಾರ ನೀಡಬಾರದು. ಹಾನಿ ಪ್ರಮಾಣ ನೋಡಿಕೊಂಡು ಹೆಚ್ಚು ಮಾಡಬೇಕು ಎನ್ನುವುದು ರೈತರ ಒತ್ತಾಯ.

ನದಿಪಾತ್ರದ ಗ್ರಾಮಸ್ಥರನ್ನು ಶಾಲೆ, ವಸತಿ ಶಾಲೆಗಳಲ್ಲಿ ತೆಗೆದಿರುವ ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಿಸಲಾಗುತ್ತಿದೆ. ಆದರೆ, ಅಲ್ಲಿ ಯಾವುದೇ ಸೌಲಭ್ಯವನ್ನು ನೀಡದಿರುವುದು ಕಂಡು ಬರುತ್ತಿದೆ.

ಕಾಳಜಿ ಕೇಂದ್ರಗಳಲ್ಲಿ ಸೌಲಭ್ಯ ಕೊರತೆ
ವಡಗೇರಾ ತಾಲ್ಲೂಕಿನ ಬೆಂಡೆಬೆಂಬಳಿ ಗ್ರಾಮದ ಮೊರಾರ್ಜಿ ವಸತಿ ಶಾಲೆಯಲ್ಲಿ ಶಿವನೂರ ಗ್ರಾಮಸ್ಥರು, ವಡಗೇರಾ ಮೊರಾರ್ಜಿ ವಸತಿ ಶಾಲೆಯಲ್ಲಿ ಕುಮನೂರ ಗ್ರಾಮಸ್ಥರು ಇದ್ದಾರೆ. ಅವರಲ್ಲಿ ಚಿಕ್ಕ ಮಕ್ಕಳು ಇದ್ದರು. ಆದರೆ, ಮಾಸ್ಕ್‌, ಸ್ಯಾನಿಟೈಸರ್‌, ಸ್ವಚ್ಛತೆ ಇಲ್ಲದಿರುವುದು ಕಂಡು ಬಂತು.

ಹಿಂದೆ ಇದ್ದ ಕ್ವಾರಂಟೈನ್‌ಗಳಲ್ಲಿಯೂ ಹೀಗೆ ಗುಂಪುಗುಂಪಾಗಿ ಜನರನ್ನು ಕೂಡಿ ಹಾಕಲಾಗಿತ್ತು. ಇದರಿಂದ ಜಿಲ್ಲೆಯಲ್ಲಿ ಕೋವಿಡ್‌ ಪ್ರಕರಣಗಳು ಹೆಚ್ಚಾಗಿದ್ದನ್ನು ಇಲ್ಲಿ ಸ್ಮರಿಸಬಹುದು. ಅಗತ್ಯ ಸೌಲಭ್ಯ ಕಲ್ಪಿಸಲು ಅನುದಾನ ಕೊರತೆ ಇಲ್ಲ ಎಂದು ಈಚೆಗೆ ಜಿಲ್ಲೆಗೆ ಭೇಟಿ ನೀಡಿದ್ದ ಕಂದಾಯ ಇಲಾಖೆ ಸಚಿವ ಆರ್‌.ಅಶೋಕ ಅವರು ಹೇಳಿದ್ದರು. ಆದರೆ, ಇಲ್ಲಿ ಸೌಲಭ್ಯಗಳೇ ಇಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು