ಮಂಗಳವಾರ, ಮಾರ್ಚ್ 21, 2023
20 °C
ದಲಿತ ಸಮನ್ವಯ ಸಮಿತಿಯಿಂದ ಶಾಸಕ ಕಂದಕೂರ, ಶರಣಗೌಡ ಅವರಿಗೆ ಅಭಿನಂದನೆ ಸಮಾರಂಭ

‘ದಲಿತರ ಅಪ್ಪಿಕೊಳ್ಳುವವರನ್ನು ಒಪ್ಪಿಕೊಳ್ಳುತ್ತೇವೆ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ‘ಈ ಭಾಗದಲ್ಲಿ ದಲಿತರೇ 40 ವರ್ಷ ಆಳ್ವಿಕೆ ಮಾಡಿದರೂ ಮಹಾನ್‌ ನಾಯಕರ ಪುತ್ಥಳಿ ಆನಾವರಣ ಮಾಡಲು ಸಾಧ್ಯವಾಗಿಲ್ಲ. ಈಗ ಜೆಡಿಎಸ್‌ ಶಾಸಕ ನಾಗನಗೌಡ ಕಂದಕೂರ ಅವರು ಡಾ.ಅಂಬೇಡ್ಕರ್‌ ಮತ್ತು ಡಾ.ಬಾಬೂಜಿ ಪುತ್ಥಳಿ ಸ್ಥಾಪನೆಗೆ ಅಡಿಗಲ್ಲು ಹಾಕಿರುವುದು ಅವರ ಬದ್ಧತೆಗೆ ಸಾಕ್ಷಿಯಾಗಿದೆ’ ಎಂದು ಮೈಸೂರಿನ ಉರಿಲಿಂಗ ಪೆದ್ದಿ ಆಶ್ರಮದ ಪೀಠಾಧಿಪತಿ ಡಾ.ಜ್ಞಾನಪ್ರಕಾಶ ಸ್ವಾಮೀಜಿ ಹೇಳಿದರು.

ಗುರುಮಠಕಲ್ ಪಟ್ಟಣದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಮತ್ತು ಹಸಿರುಕ್ರಾಂತಿ ಹರಿಕಾರ ಡಾ.ಬಾಬು ಜಗಜೀವನ್ ರಾಂ ಅವರ ಪುತ್ಥಳಿ ನಿರ್ಮಾಣಕ್ಕೆ ಶ್ರಮಿಸಿದ ಶಾಸಕ ನಾಗನಗೌಡ ಕಂದಕೂರ ಅವರಿಗೆ ದಲಿತ ಸಮನ್ವಯ ಸಮಿತಿಯಿಂದ ಬುಧವಾರ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.

‘‌ದಲಿತರನ್ನು ಯಾರು ಅಪ್ಪಿಕೊಳ್ಳುತ್ತಾರೊ ಅವರನ್ನು ನಾವು ಒಪ್ಪಿಕೊಳ್ಳುತ್ತೇವೆ. ಒಂದೇ ಬಾರಿ ಗೆದ್ದ ಕಂದಕೂರ ಪುತ್ಥಳಿ ಸ್ಥಾಪನೆಗೆ ಮುಂದಾಗಿರುವುದು ಉತ್ತಮ ಕಾರ್ಯ. ಫೆಬ್ರುವರಿಯೊಳಗೆ ಪುತ್ಥಳಿಗಳ ಉದ್ಘಾಟನೆ ಕಾರ್ಯಕ್ರಮ ನಡೆಯಲಿ’ ಎಂದು ಆಶಿಸಿದರು.

ಮಳವಳ್ಳಿ ಶಾಸಕ ಕೆ.ಅನ್ನದಾನಿ ಮಾತನಾಡಿ, ‘ಎಐಸಿಸಿ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಗುರುಮಠಕಲ್‌ನಲ್ಲಿ ಮಹನೀಯರ ಪುತ್ಥಳಿ ಸ್ಥಾಪಿಸಬೇಕು ಎನ್ನುವ ನೆನಪೇ ಇರಲಿಲ್ಲ ಎನಿಸುತ್ತಿದೆ. ಇದರಿಂದ ಇಷ್ಟು ವರ್ಷಗಳಾದರೂ ಈ ಭಾಗದಲ್ಲಿ ಅಂಬೇಡ್ಕರ್‌, ಬಾಬೂಜಿ ಮೂರ್ತಿ ಸ್ಥಾಪನೆಯಾಗಿಲ್ಲ’ ಎಂದು ಕಿಡಿಕಾರಿದರು.

‘ದಲಿತರ ಪರವಾಗಿ ಕೆಲಸ ಮಾಡುವ ನಾಯಕರನ್ನು ನಾವು ಸ್ಮರಿಸಬೇಕು. ಈ ಸಲ ವಿಧಾನಸಭೆಗೆ ಕ್ರೀಯಾಶೀಲ ಯುವ ಶರಣಗೌಡ ಕಂದಕೂರ ಅವರನ್ನು ಬಹುಮತದಿಂದ ಗೆಲ್ಲಿಸಿ ವಿಧಾನಸಭೆ ಕಳುಹಿಸುವ ಜಾವಬ್ದಾರಿ ನಿಮ್ಮ ಮೇಲಿದೆ’ ಎಂದರು.

‘ಮೀಸಲಾತಿ ಜಾರಿ ಹೋರಾಟಕ್ಕೆ ಶ್ರಮಿಸುವ ಸಮಾನ ಮನಸ್ಕರ ಕೂಟಕ್ಕೆ ಶಕ್ತಿ ತುಂಬಲು ಮುಂದಿನ ಚುನಾವಣೆಯಲ್ಲಿ ಶರಣಗೌಡ ಅವರನ್ನು ಗೆಲ್ಲಿಸುವಂತೆ’ ಪಾವಗಡ ಮಾಜಿ ಶಾಸಕ ಕೆ.ಎಂ.ತಿಮ್ಮರಾಯಪ್ಪ ಮನವಿ ಮಾಡಿದರು.

ಜೆಡಿಎಸ್ ಎಸ್ಸಿ ಘಟಕದ ರಾಜ್ಯಾಧ್ಯಕ್ಷ ಅಮರನಾಥ ಮಾತನಾಡಿ, ‘ಈವರೆಗೆ ದಲಿತರನ್ನು ಮತ ಬ್ಯಾಂಕ್ ರೀತಿ ಬಳಕೆ ಮಾಡಿಕೊಂಡವರನ್ನು ನಂಬದೆ ಕೊಟ್ಟ ಮಾತಿನಂತೆ ಕೆಲಸ ಮಾಡುತ್ತಿರುವ ಮತ್ತು ದಲಿತ ಸಮುದಾಯದ ಬೇಡಿಕೆಗಳಿಗೆ ಸಕಾರಾತ್ಮಕ ಸ್ಪಂದಿಸಿ ಅಭಿವೃದ್ಧಿಗೆ ಶ್ರಮಿಸುವ ಶರಣಗೌಡ ಅವರನ್ನು ಸಮುದಾಯ ಬೆಂಬಲಿಸಬೇಕು’ ಎಂದರು.

ಅಭಿನಂದನೆ ಸ್ವೀಕರಿಸಿದ ಶಾಸಕ ನಾಗನಗೌಡ ಕಂದಕೂರ, ‘ಗುರುಮಠಕಲ್‌ನಲ್ಲಿ 50 ವರ್ಷಗಳ ಕಾಲ ದಲಿತ ನಾಯಕರು ಶಾಸಕರಾಗಿದ್ದರು. ದಲಿತರನ್ನು ತುಳಿದು ರಾಜಕೀಯ ಮಾಡಿದ್ದಾರೆ ಹೊರತು ಡಾ.ಅಂಬೇಡ್ಕರ್, ಬಾಬೂಜಿ ಮೂರ್ತಿ ಸ್ಥಾಪನೆಗೆ ಮನಸ್ಸು ಮಾಡಲಿಲ್ಲ ಎನ್ನು ವುದು ವಿಪರ್ಯಾಸ’ ಎಂದು ಪರೋಕ್ಷ ವಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ವಾಗ್ದಾಳಿ ನಡೆಸಿದರು.

ಶಾಸಕ ನಾಗನಗೌಡ ಕಂದಕೂರ ಹಾಗೂ ಜೆಡಿಎಸ್‌ ಘೋಷಿತ ಅಭ್ಯರ್ಥಿ ಶರಣಗೌಡ ಕಂದಕೂರ ಅವರನ್ನು ಪಕ್ಷದ ದಲಿತ ಸಮನ್ವಯ ಸಮಿತಿಯ ಪದಾಧಿಕಾರಿಗಳು, ಅಭಿಮಾನಿಗಳು ಅಭಿನಂದನೆ ಸಲ್ಲಿಸಿ ಸನ್ಮಾನಿಸಿದರು.

ಆದಿ ಜಾಂಬವ ಕೋಡಿಮಠದ ಷಡಕ್ಷರಿ ಮುನಿಗಳು, ಧಾರವಾಡ ಜೆಡಿಎಸ್‌ ಪಕ್ಷದ ಮಹಿಳಾ ಘಟಕದ ಅಧ್ಯಕ್ಷೆ ಶೋಭಾ, ಪುರಸಭೆ ಅಧ್ಯಕ್ಷ ಪಾಪಣ್ಣ ಮನ್ನೆ, ಉಪಾಧ್ಯಕ್ಷೆ ಭೀಮಮ್ಮ ಮುಕಡಿ, ಪ್ರಮುಖರಾದ ಡಿ.ತಾಯಪ್ಪ ಬದ್ದೇಪಲ್ಲಿ, ಬೆಂಜುಮಿನ್ ಬಳಿಚಕ್ರ, ವೆಂಕಟೇಶ ಪುಟಪಾಕ್, ಮಧು ಗಾಜರಕೋಟ, ಕೃಷ್ಣ ಚೆಪೆಟ್ಲಾ, ಉದಯ ದೊಡ್ಮನಿ, ಬ್ಲಾಕ್ ಅಧ್ಯಕ್ಷ ಪ್ರಕಾಶ್ ನಿರೆಟ್ಟಿ, ಜಿಲ್ಲಾ ವಕ್ತಾರ ಮಲ್ಲನಗೌಡ ಹಳಿಮನಿ ಕೌಳೂರು ಇದ್ದರು. ಮುಖಂಡ ಮಾರ್ತಾಂಡಪ್ಪ ಮುಷ್ಟೂರು ಪ್ರಾಸ್ತಾವಿಕ ಮಾತನಾಡಿದರು. ಪುರಸಭೆ ಮಾಜಿ ಸದಸ್ಯ ಭೀಮಶಪ್ಪ ಗುಡಸೆ ಸ್ವಾಗತಿಸಿದರು.

ಜೆಡಿಎಸ್ ಶಕ್ತಿ ಪ್ರದರ್ಶನ

ಇನ್ನೂ ಕೆಲವೇ ತಿಂಗಳಗಳಲ್ಲಿ ರಾಜ್ಯ ವಿಧಾನಸಭಾ ಚುನಾವಣೆ ಇದ್ದು, ಜೆಡಿಎಸ್ ಶಕ್ತಿ ಪ್ರದರ್ಶನದಂತೆ ಸಮಾರಂಭ ಬಿಂಬಿತವಾಯಿತು. ಅಭಿನಂದನಾ ಕಾರ್ಯಕ್ರಮಕ್ಕೆ ಗುರುಮಠಕಲ್ ಮತಕ್ಷೇತ್ರದ ದಲಿತ ಸಮುದಾಯದವರು ಮತ್ತು ಜೆಡಿಎಸ್ ಕಾರ್ಯಕರ್ತರು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ಹರ್ ಘರ್ ಸೇ ಸಂವಿಧಾನ: ಒತ್ತಾಯ

‘ಹರ್ ಘರ್ ತಿರಂಗಾ ತೀರ್ಮಾನದಂತೆ ಪ್ರತಿಯೊಬ್ಬರ ಮನೆಯಲ್ಲಿ ಸಂವಿಧಾನ ಇರಬೇಕೆಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಬೇಕು. ಜನವರಿ 26ರಂದು ಗಣರಾಜ್ಯೋತ್ಸವ ದಿನವೇ ಹರ್ ಘರ್ ಸೇ ಸಂವಿಧಾನ ಎಂದು ತೀರ್ಮಾನ ಮಾಡಬೇಕು. ಮನೆ ಮನೆಗೆ ಸಂವಿಧಾನವೆಂದು ಮೋದಿ ಅವರು ಚಾಲನೆ ಮಾಡಬೇಕು’ ಎಂದು ಡಾ.ಜ್ಞಾನಪ್ರಕಾಶ ಸ್ವಾಮೀಜಿ ಒತ್ತಾಯಿಸಿದರು.

‘ದೇಶಕ್ಕೆ ಸ್ವಾತಂತ್ರ‍್ಯ ಬಂದು 75 ವರ್ಷ ಕಳೆದರೂ ದಲಿತರು ಸಮಾಜದ ಮುಖ್ಯ ವಾಹಿನಿಗೆ ಬರಲು ಸಾಧ್ಯವಾಗಿಲ್ಲ. ಈಗ ಸಮಾಜದಲ್ಲಿ ಜಾತಿ ಪದ್ಧತಿ ಹೆಚ್ಚಾಗಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಜಾತಿ ನಡುವೆ ಜಾತಿ ಕಂದಕ ಉಂಟು ಮಾಡಿ ಮತ ಬ್ಯಾಂಕ್‌ಗಾಗಿ ವಿಭಜನೆ ಮಾಡುವ ಷಡ್ಯಂತರ ರಾಜ್ಯದಲ್ಲಿ ನಡೆಯುತ್ತಿದೆ’ ಎಂದು ಆರೋಪಿಸಿದರು.

***

ಭರ್ಜರಿ ರೋಡ್ ಶೋ

ಗುರುಮಠಕಲ್ ಪಟ್ಟಣದ ಹಳೆ ತಹಶೀಲ್ದಾರ್ ಕಚೇರಿಯಿಂದ ಸಮಾರಂಭ ನಡೆದ ಅಂಬೇಡ್ಕರ್ ವೃತ್ತದ ವರಗೆ ಭರ್ಜರಿ ಮೆರವಣಿಗೆ ನಡೆಯಿತು. ತೆರೆದ ವಾಹನದಲ್ಲಿ ಉರಿಲಿಂಗಪೆದ್ದಿ ಮಠದ ಜ್ಞಾನ ಪ್ರಕಾಶ ಸ್ವಾಮೀಜಿ, ಆದಿ ಜಾಂಬವ ಕೋಡಿಮಠದ ಷಡಕ್ಷರಿ ಮುನಿಗಳು ಸೇರಿದಂತೆ ಹಲವರು ಭಾಗವಹಿಸಿದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು