ಗುರುವಾರ, 8 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ ಜಿಲ್ಲೆಯ ರೇಷ್ಮೆ ಬೆಳೆಗಾರರಿಗಿಲ್ಲ ಸೂಕ್ತ ಮಾರುಕಟ್ಟೆ

ರೇಷ್ಮೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ಶಂಕರ್ ಜಿಲ್ಲೆಯಲ್ಲಿ ಪರದಾಟ, ದೂರದ ರಾಮನಗರದಲ್ಲಿ ಮಾರಾಟ
Last Updated 23 ಜೂನ್ 2021, 3:09 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲೆಯಲ್ಲಿ 296 ರೇಷ್ಮೆ ಬೆಳೆಗಾರರಿದ್ದು, ತಾವು ಬೆಳೆಸಿರುವ ಗೂಡು ಮಾರಾಟ ಮಾಡಲು ಸೂಕ್ತ ಮಾರುಕಟ್ಟೆ ಇಲ್ಲದೆ ಪರದಾಡುತ್ತಿದ್ದಾರೆ.

ರೇಷ್ಮೆ ಮತ್ತು ತೋಟಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್‌. ಶಂಕರ್‌ ಅವರು ಜಿಲ್ಲೆಗೆ ಬಂದು ಒಂದೂವರೆ ತಿಂಗಳಾಗಿದ್ದು, ಅವರ ಮೇಲೆ ಬೆಳೆಗಾರರು ಭರವಸೆ ಇಟ್ಟಿದ್ದಾರೆ.

ರೇಷ್ಮೆ ಬೆಳೆಗಾರರು ಸೂಕ್ತ ಮಾರುಕಟ್ಟೆ ಇಲ್ಲದೆ ನೂರಾರು ಕಿ.ಮೀ ದೂರ ಇರುವ ರಾಮನಗರ ಜಿಲ್ಲೆಗೆ ಕೊಂಡೊಯ್ಯುತ್ತಿದ್ದಾರೆ. ಅಕ್ಕಪಕ್ಕದ ಜಿಲ್ಲೆಗಳಲ್ಲಿದ್ದರೂ ಸ್ಮರ್ಧಾತ್ಮಕ ಬೆಲೆ ಸಿಗದೆ ಪರದಾಡುತ್ತಿದ್ದಾರೆ.

ಶಹಾಪುರ ತಾಲ್ಲೂಕಿನಲ್ಲಿ ಹೆಚ್ಚು ಬೆಳೆಗಾರರು: ಜಿಲ್ಲೆಯಲ್ಲಿ ಆರು ತಾಲ್ಲೂಕುಗಳಿದ್ದು, ಮೂರು ರೇಷ್ಮೆ ತಾಂತ್ರಿಕ ಸೇವಾ ವಲಯಗಳಿವೆ. ಶಹಾಪುರ ತಾಲ್ಲೂಕಿನಲ್ಲಿ ಮಾತ್ರ ಹೆಚ್ಚು ರೇಷ್ಮೆ ಬೆಳೆಗಾರರಿದ್ದಾರೆ. ಅದರಲ್ಲೂ ಚಾಮನಾಳ, ಚಂದಾಪುರ, ದರ್ಶನಾಪುರ, ಉಕ್ಕಿನಾಳ ಗ್ರಾಮ, ತಾಂಡಾಗಳಲ್ಲಿ ಚಾಕಿ, ಗೂಡು ಇತ್ಪಾದನೆ ಮಾಡುತ್ತಾರೆ.

ಇನ್ನುಳಿದಂತೆ ಯಾದಗಿರಿ, ಸುರಪುರ, ಹುಣಸಗಿ, ಗುರುಠಮಕಲ್‌, ವಡಗೇರಾ ತಾಲ್ಲೂಕಿನಲ್ಲಿ ಬೆರಳೆಣಿಕೆ ಸಂಖ್ಯೆಯಲ್ಲಿ ರೇಷ್ಮೆ ಬೆಳೆಗಾರರಿದ್ದಾರೆ.

600 ಕಿ.ಮೀ ಪ್ರಯಾಣ: ಜಿಲ್ಲೆಯಲ್ಲಿ ಉತ್ಪಾದನೆ ಮಾಡಿರುವ ರೇಷ್ಮೆ ಗೂಡನ್ನು 600 ಕಿ.ಮೀ ದೂರದ ರಾಮನಗರ ಜಿಲ್ಲೆಯ ರೇಷ್ಮೆ ಮಾರುಕಟ್ಟೆಗೆ ಮಾರಾಟ ಮಾಡಲು ತೆರಳಬೇಕಿದೆ. ಇದು ಬೆಳೆಗಾರರರಿಗೆ ಸಮಸ್ಯೆಯನ್ನು ತಂಡೊಡ್ಡಿದೆ.

10ರಿಂದ 11 ಗಂಟೆ ಪ್ರಯಾಣ ಮಾಡಬೇಕಿದ್ದು, ವಾಹನ ಬಾಡಿಗೆಗೆ ಸುಮಾರು ₹15 ಸಾವಿರ ಖರ್ಚು ಮಾಡಬೇಕು. ಗೂಡಿಗೆ ಕಾವು ಜಾಸ್ತಿಯಾಗಿ ಉತ್ತಮ ದರ ಸಿಗುವುದಿಲ್ಲ ಎನ್ನುವುದು ಬೆಳೆಗಾರರ ಆತಂಕವಾಗಿದೆ.

‘ನಮ್ಮ ಭಾಗದ 4ರಿಂದ 5 ಬೆಳೆಗಾರರು ಬಾಡಿಗೆ ವಾಹನದಲ್ಲಿ ಗೂಡು ಸಾಗಿಸುತ್ತೇವೆ. ಸಾಕಷ್ಟು ಖರ್ಚು ಮಾಡಬೇಕಾಗಿದೆ. ಸ್ಮರ್ಧಾತ್ಮಕ ದರವಿದ್ದರೂ ನಮ್ಮ ಭಾಗವರನ್ನು ಕಡೆಗಣಿಸಲಾಗುತ್ತಿದೆ. ಇದರಿಂದ ನಮಗೆ ಸ್ಥಳೀಯ ಮಟ್ಟದಲ್ಲೇ ಸರ್ಕಾರ ಮಾರುಕಟ್ಟೆ ಸ್ಥಾಪಿಸಿದರೆ ಅನುಕೂಲವಾಗುತ್ತದೆ’ ಎನ್ನುತ್ತಾರೆ ರೇಷ್ಮೆ ಬೆಳೆಗಾರರಾದ ಪಂಪಣ್ಣ ರಾಥೋಡ, ಗುರುನಾಥ ರೇವು.

ಸಿಬ್ಬಂದಿ ಕೊರತೆ: ಜಿಲ್ಲೆಯಲ್ಲಿ ಕ್ಷೇತ್ರ ಮಟ್ಟದ ಅಧಿಕಾರಿ, ಸಿಬ್ಬಂದಿ ಕೊರತೆಯಿಂದ ಹೆಚ್ಚಿನ ರೇಷ್ಮೆ ಬೆಳೆಗಾರರನ್ನು ತಲುಪಿಸಲು ಆಗುತ್ತಿಲ್ಲ. ಇದರಿಂದವೂ ಕ್ಷೇತ್ರವೂ ಹೆಚ್ಚಾಗುತ್ತಿಲ್ಲ. ಕೇವಲ ಶಹಾಪುರ ವಲಯದಲ್ಲಿ ಮಾತ್ರ ಬೆಳೆಗಾರರಿದ್ದಾರೆ. ನೀರಾವರಿ ಸೌಲಭ್ಯ ಇರುವ ರೈತರನ್ನು ಗುರುತಿಸಿ ಹಿಪ್ಪು ನೇರಳೆ ನಾಟಿ ಮಾಡಲು ಪ್ರೇರೆಪಿಸಲಾಗುತ್ತಿದೆ.

‘ಕಲಬುರ್ಗಿ, ಜೇವರ್ಗಿ, ಹುಮಾನಬಾದ್‌, ವಿಜಯಪುರ, ಲಿಂಗಸೂರುನಲ್ಲಿ ಸಣ್ಣಮಟ್ಟದ ಮಾರುಕಟ್ಟೆಗಳಿವೆ. ಇವುಗಳನ್ನು ಪುನಶ್ಚೇತನ ಗೊಳಿಸಬೇಕು. ಆದರೆ, ರೀಲರ್ಸ್‌ಗಳ ಕೊರತೆ ಇದೆ. ಜೊತೆಗೆ ಒಂದು ತಿಂಗಳು ಹಣ ನಂತರ ನೀಡುತ್ತಾರೆ. ಅಲ್ಲದೇ ಬೇಕಾಬಿಟ್ಟಿ ವ್ಯಾಪಾರ ಮಾಡಲಾಗುತ್ತಿದೆ. ಇದರಿಂದ ದೂರವಾದರೂ ಸರಿ ರಾಮನಗರ, ಕನಕಪುರಕ್ಕೆ ತೆರಳುತ್ತೇವೆ. ಹೀಗಾಗಿ ಜಿಲ್ಲಾ ಉಸ್ತುವಾರಿ ಸಚಿವರು ಇತ್ತ ಗಮನಹರಿಸಿ ನಮಗೆ ಸಹಾಯ ಹಸ್ತ ಚಾಚಬೇಕು’ ಎಂದು ಅವರು ಒತ್ತಾಯಿಸುತ್ತಾರೆ.

‘ಮಾರುಕಟ್ಟೆ ವಿಷಯವಾಗಿ ಗುರುವಾರ ಅಧಿಕಾರಿಗಳ ಸಭೆ ಕರೆಯಲಾಗಿದೆ. ಇಲ್ಲಿ ಹಲವು ವಿಷಯಗಳನ್ನು ಚರ್ಚಿಸಿ ಬೆಳೆಗಾರರಿಗೆ ಅನುಕೂಲವಾಗುವಂತೆ ತೀರ್ಮಾನ ಕೈಗೊಳ್ಳಲಾಗುವುದು’ ಎನ್ನುತ್ತಾರೆ ಜಿಲ್ಲಾ ಉಸ್ತುವಾರಿ ಸಚಿವ ಆರ್‌. ಶಂಕರ್ ಅವರು.

***

ಬಾರದ ಸಾಗಣಿಕೆ ವೆಚ್ಚ

ದೂರದ ಮಾರುಕಟ್ಟೆಗೆ ಗೂಡು ಸಾಗಿಸಿದರೆ ಬೆಳೆಗಾರರಿಗೆ ಸರ್ಕಾರದ ವತಿಯಿಂದ ₹ 10 ಸಾಗಣಿಕೆ ವೆಚ್ಚ ಜಮಾ ಮಾಡಲಾಗುತ್ತಿದೆ. ಆದರೆ, ಕಳೆದ ಒಂದೂವರೆ ವರ್ಷದಿಂದ ಹಣ ಬಾರದೆ ಬೆಳೆಗಾರರು ಕೈಚೆಲ್ಲಿ ಕುಳಿತ್ತಿದ್ದಾರೆ.

ಗೋಗಿ ವ್ಯಾಪ್ತಿಯ ಗ್ರಾಮ, ತಾಂಡಾಗಳ ರೇಷ್ಮೆ ಬೆಳೆಗಾರರಿಗೆ ಸಾಗಣಿಕೆ ವೆಚ್ಚ ಬಾರದೆ ಸಂಕಷ್ಟ ಅನುಭವಿಸುತ್ತಿದ್ದಾರೆ. ಇದರ ಜೊತೆಗೆ ವಿದ್ಯುತ್‌ ಸಮಸ್ಯೆಯೂ ಬೆಳೆಗಾರರನ್ನು ಕಾಡುತ್ತಿದೆ.

‘ಒಂದೊಂದು ವಾರದಲ್ಲಿ ಒಂದೊಂದು ಸಮಯ ನಿಗದಿ ಮಾಡಲಾಗಿದೆ. ಕೇವಲ 6 ತಾಸು ತ್ರಿ ಫೇಸ್‌ ವಿದ್ಯುತ್‌ ನೀಡಲಾಗುತ್ತಿದೆ. ಇದರಿಂದ ಹಿಪ್ಪು ನೇರಳೆಗೆ ನೀರು ಸಾಕಾಗುವುದಿಲ್ಲ. ಮೊದಲೆಲ್ಲ ಕೊಳವೆಬಾವಿಯಲ್ಲಿ 400 ಅಡಿಗೆ ನೀರು ಸಿಗುತ್ತಿತ್ತು. ಈಗ 1000 ಅಡಿಗೆ ಇಳಿದಿವೆ. ಅದು 1ರಿಂದ 2 ಇಂಚು ಮಾತ್ರ ನೀರು ಬರುತ್ತಿದೆ. ಹೀಗಾಗಿ ನಿರಂತರವಾಗಿ 10 ತಾಸು ವಿದ್ಯುತ್‌ ನೀಡಬೇಕು’ ಎಂದು ರೇಷ್ಮೆ ಬೆಳೆಗಾರ ಪಂಪಣ್ಣ ರಾಥೋಡ ಆಗ್ರಹಿಸುತ್ತಾರೆ.

***

₹ 15 ಸಾವಿರ ಬಾಡಿಗೆ ವಾಹನ ಮಾಡಿಕೊಂಡು ರಾಮನಗರಕ್ಕೆ ತೆರಳಬೇಕಿದೆ. ಕಲಬುರ್ಗಿಯಲ್ಲಿ ಮಾರುಕಟ್ಟೆ ಇದ್ದರೂ ಉಪಯೋಗವಿಲ್ಲ. ನಮ್ಮ ಭಾಗದಲ್ಲಿ ಮಾರುಕಟ್ಟೆ ಇದ್ದರೆ ನಮಗೆ ಅನುಕೂಲ

- ಪಂಪಣ್ಣ ರಾಥೋಡ, ರೇಷ್ಮೆ ಬೆಳೆಗಾರ

***

ದೂರ ಪ್ರದೇಶದವರಿಗೆ ಸಮಸ್ಯೆಯಾಗುತ್ತಿರುವುದು ಗಮನಕ್ಕೆ ಬಂದಿದೆ. ಹೀಗಾಗಿ ರಾಜ್ಯದ ಮೂರು ಕಡೆ ಮಾರುಕಟ್ಟೆ ಮಾಡಲು ಯೋಜನೆ ರೂಪಿಸಲಾಗುತ್ತಿದೆ. ಇಲಾಖೆ ಅಧಿಕಾರಿಗಳ ಸಭೆ ಕರೆಯಲಾಗಿದೆ

- ಆರ್‌.ಶಂಕರ್‌, ಜಿಲ್ಲಾ ಉಸ್ತುವಾರಿ ಸಚಿವ

***

ಕಲಬುರ್ಗಿಯಲ್ಲಿ ಮಾರುಕಟ್ಟೆ ಇದ್ದರೂ ರಾಮನಗರಕ್ಕಿಂತ ₹ 100 ಕಡಿಮೆ ಕೊಡುತ್ತಿದ್ದಾರೆ. ಹೀಗಾಗಿ ದೂರವಾದರೂ ಅಲ್ಲಿಗೆ ತೆರಳುತ್ತೇವೆ. ಇಲ್ಲಿ ಸ್ಪರ್ಧಾತ್ಮಕ ದರ ಇಲ್ಲ

- ಗುರುನಾಥ ರೇವು, ರೇಷ್ಮೆ ಬೆಳೆಗಾರ

***

ಕಳೆದ ಮೂರು ವರ್ಷಗಳಿಂದ ರೇಷ್ಮೆ ಕೃಷಿ ಸಹಾಯಕ ನಿರ್ದೇಶಕ ಹುದ್ದೆ ಖಾಲಿ ಇದೆ. ಅಲ್ಲದೇ ಕ್ಷೇತ್ರ ಮಟ್ಟದ ಅಧಿಕಾರಿ, ಸಿಬ್ಬಂದಿ ಕೊರತೆ ಇದೆ

-ಅಬ್ದುಲ್‌ ನಯಿಮ್‌ ಚೌಧರಿ, ಪ್ರಭಾರಿ ರೇಷ್ಮೆ ಕೃಷಿ ಉಪನಿರ್ದೇಶಕ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT