ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಮನ ಸೆಳೆಯುವ ವಿಶಿಷ್ಟ ವಿನ್ಯಾಸದ ಬೈಕ್

Last Updated 3 ಡಿಸೆಂಬರ್ 2020, 13:13 IST
ಅಕ್ಷರ ಗಾತ್ರ

ಸುರಪುರ: ಕಳೆದ ಕೆಲ ದಿನಗಳಿಂದ ನಗರದಲ್ಲಿ ವಿಶಿಷ್ಟ ವಿನ್ಯಾಸದ ಮೋಟಾರ್ ಬೈಕ್ ಸದ್ದು ಮಾಡುತ್ತಿದೆ. ತಕ್ಷಣ ಎಲ್ಲರ ಗಮನ ಆ ಬೈಕ್ ಮೇಲೆ ಹೋಗುತ್ತದೆ. ಈಗ ಎಲ್ಲರ ಬಾಯಲ್ಲಿ ಈ ಬೈಕ್‍ನದ್ದೆ ಮಾತು.

ಎಲ್ಲರ ಆಕರ್ಷಣೆಯ ಕೇಂದ್ರವಾಗಿರುವ ಈ ಬೈಕ್ ತಾಲ್ಲೂಕಿನಿಂದ 6 ಕಿ.ಮೀ ಅಂತರದಲ್ಲಿರುವ ದೇವಿಕೇರಿ ಗ್ರಾಮದ ಮಲ್ಲಪ್ಪ ಖಂಡಪ್ಪ ಹಾದಿಮನಿ ಎಂಬ ಯುವಕನದ್ದು.

ಈ ಯುವಕ ಕುರುಬ ಸಮುದಾಯಕ್ಕೆ ಸೇರಿದ್ದು, ಕನಕದಾಸ, ಸಂಗೊಳ್ಳಿ ರಾಯಣ್ಣ ಅವರ ಅಪ್ಪಟ ಅಭಿಮಾನಿ. ಟಗರಿನ ಅಭಿಮಾನಿಯೂ ಹೌದು.

ವೃತ್ತಿಯಿಂದ ಆಟೊ ಓಡಿಸುವ ಮಲ್ಲಪ್ಪ ಅವರ ದಿನದ ಸಂಪಾದನೆ ₹ 500. ಇವರಿಗೆ 4 ಎಕರೆ ಜಮೀನಿದ್ದು ಹತ್ತಿ ಬೆಳೆ ಬೆಳೆಯುತ್ತಾರೆ. ಮದುವೆಯಾಗಿದ್ದು ಒಂದು ಮಗುವಿದೆ.

ಅನಕ್ಷರಸ್ಥನಾದ ಮಲ್ಲಪ್ಪ ಅವರಿಗೆ ಟಗರಿನ ಮೇಲೆ ಸವಾರಿ ಮಾಡಬೇಕೆನ್ನುವ ಉತ್ಕಟ ಆಸೆ. ಅದೂ ಎಲ್ಲರಿಗೂ ಕಾಣಬೇಕೆಂಬ ಇಚ್ಛೆ. ಇದಕ್ಕಾಗಿ ಕಳೆದ 6 ತಿಂಗಳಿಂದ ಯೋಚನೆ ನಡೆಸಿದ್ದರು.

ಟಗರು ಪ್ರಾಣಿಯ ಮೇಲೆ ಸವಾರಿ ಮಾಡುವುದು ಕಷ್ಟ ಸಾಧ್ಯ. ಏಕೆ ಮೋಟಾರ್ ಬೈಕ್‍ನ್ನು ಟಗರಿನಂತೆ ವಿನ್ಯಾಸ ಮಾಡಬಾರದು ಎಂಬ ಆಲೋಚನೆ ಹೊಳೆದದ್ದೆ ತಡ ₹25 ಸಾವಿರ ಮೌಲ್ಯದ ಸೆಕೆಂಡ್ ಹ್ಯಾಂಡ್ ಬಜಾಜ ಪ್ಲಾಟಿನಾ ಬೈಕ್ ಖರೀದಿಸಿದರು.

ಸಿಂದಗಿಯ ಕಕ್ಕಳಮೇಲಿ ಗ್ರಾಮದಲ್ಲಿ ರಾಮಣ್ಣ ಎಂಬ ವಿಶಿಷ್ಟ ವಿನ್ಯಾಸಕಾರರನ್ನು ಹುಡುಕಿದರು. ಫೈಬರ್‌ನಲ್ಲಿ ಟಗರಿನ ಮುಖ ಮಾಡಿ ಬೈಕ್ ಹ್ಯಾಂಡಲ್‍ಗೆ ಜೋಡಣೆ ಮಾಡಿದರು. ಬೈಕ್ ಹಿಂದೆ ರಿವಾಲ್ವರ್ ಹಿಡಿದ ಮನುಷ್ಯನ ವಿನ್ಯಾಸ ಮಾಡಿಸಿದರು.

ಮಲ್ಲಪ್ಪ ಈ ಬೈಕ್ ಮೇಲೆ ಹೊರಟರೆ ಟಗರಿನ ಮೇಲೆ ಸವಾರಿ ಮಾಡುತ್ತಿದ್ದಾರೆ ಎಂದು ಭಾಸವಾಗುತ್ತದೆ. ವಿನ್ಯಾಸ ಮಾಡಲು ₹ 45 ಸಾವಿರ ಖರ್ಚು ಬಂದಿದೆ. ಈ ಬೈಕ್ ನೋಡಿದ ಜನ ಟಗರ್ ಗಾಡಿ ಬಂತು ಎಂದೇ ಮಾತಾಡಿಕೊಳ್ಳುತ್ತಾರೆ.

* ಏನು ಮಾಡಿದರೂ ವಿಶೇಷ ಇರಬೇಕೆನ್ನುವುದು ನನ್ನ ಇಚ್ಛೆ. ಅದಕ್ಕೆ ಬೈಕ್‍ಗೆ ವಿಶಿಷ್ಟ ವಿನ್ಯಾಸ ಮಾಡಿಸಿದೆ. ಬೈಕ್ ಗ್ರಿಪ್ ಇದ್ದು ಚೆನ್ನಾಗಿ ಓಡುತ್ತದೆ. ಓಡಿಸುವಾಗ ನನಗಾಗುವ ಆನಂತ ಎಲ್ಲೆ ಮೀರಿದ್ದು.

-ಮಲ್ಲಪ್ಪ ಹಾದಿಮನಿ, ಬೈಕ್ ಮಾಲಿಕ

* ಮಲ್ಲಪ್ಪ ಟಗರಿನ ಅಪ್ಪಟ ಅಭಿಮಾನಿ. ಜಿಲ್ಲೆಯಲ್ಲಿಯೇ ಇಂತಹ ವಿಶಿಷ್ಟ ವಿನ್ಯಾಸದ ಮೋಟಾರ್ ಬೈಕ್ ಇಲ್ಲ. ಆತನ ಅಭಿಮಾನಕ್ಕೆ ಇಡೀ ಕುರುಬ ಜನಾಂಗ ಫಿದಾ ಆಗಿದೆ.
- ರಂಗನಗೌಡ ಪಾಟೀಲ, ಕನಕ ಯುವಸೇನೆಯ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT