ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ| ಖಾಸಗಿ ಆಸ್ಪತ್ರೆಗಳು ಕಾರ್ಯನಿರ್ವಹಿಸದಿದ್ದರೆ ಕ್ರಮ: ಜಿಲ್ಲಾಧಿಕಾರಿ

ಸೇವೆ ನೀಡದ ಖಾಸಗಿ ಆಸ್ಪತ್ರೆಗಳ ಪಟ್ಟಿ ನೀಡಲು ಜಿಲ್ಲಾಧಿಕಾರಿ ಸೂಚನೆ
Last Updated 1 ಏಪ್ರಿಲ್ 2020, 15:55 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲೆಯ ಎಲ್ಲ ಖಾಸಗಿ ಆಸ್ಪತ್ರೆಗಳು ಹಾಗೂ ಔಷಧಾಲಯಗಳು ಕಾರ್ಯನಿರ್ವಹಿಸಬೇಕು. ಖಾಸಗಿ ಆಸ್ಪತ್ರೆಗಳು ತುರ್ತು ಸೇವೆ ಅಡಿ ಬರುತ್ತವೆ. ಸೇವೆ ನೀಡಲು ನಿರಾಕರಿಸುವ ಆಸ್ಪತ್ರೆಗಳಿಗೆ ನೋಟಿಸ್ ನೀಡಿ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್ ಎಚ್ಚರಿಕೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯಲ್ಲಿ ಕೋವಿಡ್-19 ವೈರಸ್ ಹರಡುವುದನ್ನು ತಡೆಗಟ್ಟುವ ಕುರಿತು ಬುಧವಾರ ಹಮ್ಮಿಕೊಂಡಿದ್ದ ಫೋನ್-ಇನ್ ಕಾರ್ಯಕ್ರಮದಲ್ಲಿ ಬಹುತೇಕ ಜನರು ಖಾಸಗಿ ಆಸ್ಪತ್ರೆಗಳು ಮುಚ್ಚಿರುವುದರಿಂದ ತೊಂದರೆಯಾಗುತ್ತಿರುವ ಬಗ್ಗೆ ತಮ್ಮ ಅಳಲು ತೋಡಿಕೊಂಡಾಗ ಜಿಲ್ಲಾಧಿಕಾರಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಹೇಳಿದರು.

ಖಾಸಗಿ ಆಸ್ಪತ್ರೆಗಳು ಮತ್ತು ಅವುಗಳ ಉತ್ಪಾದನೆ ಸೇರಿದಂತೆ ಎಲ್ಲಾ ಸಂಬಂಧಿತ ವೈದ್ಯಕೀಯ ಸಂಸ್ಥೆಗಳು ಮತ್ತು ಸಾರ್ವಜನಿಕ ಹಾಗೂ ಖಾಸಗಿ ವಲಯದ ವಿತರಣಾ ಘಟಕಗಳು, ಅಂದರೆ ಔಷಧಾಲಯಗಳು, ರಸಾಯನ ಶಾಸ್ತ್ರಜ್ಞ ಮತ್ತು ವೈದ್ಯಕೀಯ ಸಲಕರಣೆಗಳ ಅಂಗಡಿಗಳು, ಪ್ರಯೋಗಾಲಯಗಳು, ಚಿಕಿತ್ಸಾಲಯಗಳು, ನರ್ಸಿಂಗ್ ಹೋಮ್‍ಗಳು, ಆಂಬ್ಯುಲೆನ್ಸ್ ಇತ್ಯಾದಿಗಳು ಕಾರ್ಯನಿರ್ವಹಿಸಬೇಕು. ಜಿಲ್ಲೆಯಲ್ಲಿ ನಿಯಮಾನುಸಾರ ಸೇವೆ ನೀಡದ ಖಾಸಗಿ ಆಸ್ಪತ್ರೆಗಳ ಪಟ್ಟಿ ಮಾಡಿ ನೀಡುವಂತೆ ಹಾಜರಿದ್ದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಂ.ಎಸ್.ಪಾಟೀಲ ಅವರಿಗೆ ಸೂಚಿಸಿದರು.

30ಕ್ಕೂ ಹೆಚ್ಚು ಕರೆ ಸ್ವೀಕಾರ:ನೇರ ಪೋನ್-ಇನ್ ಕಾರ್ಯಕ್ರಮದಲ್ಲಿ ಜಿಲ್ಲೆಯ ನಾಯ್ಕಲ್, ಕಕ್ಕೇರಾ, ಬಳಿಚಕ್ರ, ಸುರಪುರ, ದೇವಳಗುಡ್ಡ, ಯಾದಗಿರಿ ನಗರ, ವನದುರ್ಗ, ಏವೂರು ತಾಂಡಾ, ಹುಣಸಗಿ, ಯರಗೋಳ, ಮೈಲಾಪುರ, ಕಣೇಕಲ್, ಮಾಧ್ವಾರ, ವಡಗೇರಾ ಸೇರಿದಂತೆ 30ಕ್ಕೂ ಹೆಚ್ಚು ಗ್ರಾಮ/ ನಗರಗಳ ಸಾರ್ವಜನಿಕರಿಂದ ಕರೆಗಳು ಸ್ವೀಕೃತವಾದವು. ಎಲ್ಲಾ ಕರೆಗಳನ್ನು ಶಾಂತಚಿತ್ತದಿಂದ ಆಲಿಸಿದ ಜಿಲ್ಲಾಧಿಕಾರಿಗಳು, ದೂರುಗಳನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ಕಳುಹಿಸಿ ಕ್ರಮ ಜರುಗಿಸುವುದಾಗಿ ತಿಳಿಸಿದರು. ಅಲ್ಲದೇ, ಕೊರೊನಾ ವೈರಸ್ ಕುರಿತಾಗಿ ಸಾರ್ವಜನಿಕರಲ್ಲಿದ್ದ ಸಂಶಯ ಮತ್ತು ಗೊಂದಲಗಳನ್ನು ನಿವಾರಿಸಿದರು. ಕರೆ ಮಾಡಿದ ಅನೇಕರು ದೂರುಗಳ ಜೊತೆಗೆ ಜಿಲ್ಲಾಡಳಿತದ ಮುಂಜಾಗ್ರತಾ ಕ್ರಮಕ್ಕೆ ಅಭಿನಂದನೆ ಸಲ್ಲಿಸಿದರು.

ಸುರಪುರದಲ್ಲಿ ಹಾಲು, ಅಡುಗೆ ಎಣ್ಣೆ ಸೇರಿದಂತೆ ಅಗತ್ಯ ವಸ್ತುಗಳನ್ನು ನಿಗದಿತ ಬೆಲೆಗಿಂತ ಹೆಚ್ಚಿನ ದರಕ್ಕೆ ಮಾರಾಟ ಮಾಡಲಾಗುತ್ತಿದೆ. ಕಕ್ಕೇರಾ ಹೋಬಳಿಯ ಹೋಟೆಲ್ ಮತ್ತು ಅಂಗಡಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ ಎಂಬ ದೂರುಗಳಿಗೆ ಸಂಬಂಧಪಟ್ಟ ಅಧಿಕಾರಿಗಳಿಂದ ದಾಳಿ ನಡೆಸಿ ಪ್ರಕರಣ ದಾಖಲಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಮಾಸ್ಕ್‌ ಅಗತ್ಯವಿಲ್ಲ: ಪ್ರತಿಯೊಬ್ಬರೂ ಮಾಸ್ಕ್ ಹಾಕಿಕೊಳ್ಳುವ ಅಗತ್ಯವಿಲ್ಲ. ಸಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಜ್ವರ, ಕೆಮ್ಮು, ನೆಗಡಿ ಇದ್ದವರು ಹತ್ತಿರದ ಆಸ್ಪತ್ರೆಗಳಿಗೆ ಭೇಟಿ ನೀಡಿ ಆರೋಗ್ಯ ತಪಾಸಣೆ ಮಾಡಿಕೊಳ್ಳಬೇಕು. ಪ್ರತಿಯೊಬ್ಬರೂ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುವುದು ಕಡ್ಡಾಯ. ಮನೆಯಲ್ಲಿದ್ದು ವೈರಸ್ ಹರಡುವುದನ್ನು ತಡೆಗಟ್ಟುವಂತೆ ಕರೆ ಮಾಡಿದ ಅನೇಕರಿಗೆ ಜಿಲ್ಲಾಧಿಕಾರಿ ಸಲಹೆ ನೀಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಕಾಶ್ ಜಿ.ರಜಪೂತ, ಸಹಾಯಕ ಆಯುಕ್ತ ಶಂಕರಗೌಡ ಎಸ್.ಸೋಮನಾಳ ಉಪಸ್ಥಿತರಿದ್ದರು.

***

ಹೆಚ್ಚಿನ ಬಿಸಿಲಿರುವ ಪ್ರದೇಶದಲ್ಲಿ ಕೊರೊನಾ ಸೋಂಕು ಹರಡುವುದಿಲ್ಲ ಎನ್ನುವುದಕ್ಕೆ ಆಧಾರವಿಲ್ಲ. ವದಂತಿಗಳಿಗೆ ಕಿವಿಗೊಡಬಾರದು. ಜಿಲ್ಲೆಯಲ್ಲಿ ಇದುವರೆಗೂ ಕೊರೊನಾ ಪ್ರಕರಣ ಪತ್ತೆಯಾಗಿಲ್ಲ

– ಎಂ.ಕೂರ್ಮಾರಾವ್‌, ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT