ಮಂಗಳವಾರ, ಜೂನ್ 28, 2022
23 °C
‘ಅಮೃತ ಭಾರತಿಗೆ ಕನ್ನಡದಾರತಿ’ ಕಾರ್ಯಕ್ರಮದಲ್ಲಿ ಸಚಿವ

ಸುರಪುರ ರಾಜರ ಚರಿತ್ರೆ ಸ್ಮರಣೀಯ: ಸುನೀಲಕುಮಾರ ಅಭಿಮತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸುರಪುರ: ‘1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಸುರಪುರದಿಂದಲೇ ಆರಂಭಗೊಂಡಿರುವುದು ಅವಿಸ್ಮರಣೀಯ. ಇಲ್ಲಿಯ ಅರಸರ ಚರಿತ್ರೆ ಇತಿಹಾಸದ ಪುಟ ಸೇರದಿರುವುದು ವಿಪರ್ಯಾಸ. ಸರ್ಕಾರಗಳ ತಪ್ಪಿನಿಂದ ಅನೇಕ ಅರಸರ ಇತಿಹಾಸ ಮರೆಯಾಗಿ ಹೋಗಿದೆ. ಇತಿಹಾಸ ಮತ್ತು ಸಂಸ್ಕೃತಿಯನ್ನು ಯುವ ಜನಾಂಗಕ್ಕೆ ತಿಳಿಸಿಕೊಡುವ ಕೆಲಸ ನಮ್ಮ ಸರ್ಕಾರ ಮಾಡುತ್ತಿದೆ’ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನೀಲಕುಮಾರ ಹೇಳಿದರು.

ನಗರದ ಗರುಡಾದ್ರಿ ಕಲಾಮಂದಿರದಲ್ಲಿ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಮತ್ತು ತಾಲ್ಲೂಕು ಆಡಳಿತ ಶನಿವಾರ ಏರ್ಪಡಿಸಿದ್ದ ‘ಅಮೃತ ಭಾರತಿಗೆ ಕನ್ನಡದಾರತಿ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಸ್ವಾತಂತ್ರ್ಯ ಚಳವಳಿ ನೂರಾರು ವರ್ಷ ನಡೆದ ಹೋರಾಟ. ಅನೇಕರ ತ್ಯಾಗ ಬಲಿದಾನಗಳ ಫಲವಾಗಿ ಸ್ವಾತಂತ್ರ್ಯ ಲಭಿಸಿದೆ. ಹುತಾತ್ಮ ಮನಸ್ಸುಗಳಿಗೆ ವಂದಿಸಿ ಅವರೆಲ್ಲರ ಹೋರಾಟವನ್ನು ನೆನಪಿಸುವ ಮೂಲಕ ಯುವಜನಾಂಗಕ್ಕೆ ನೈಜ ಇತಿಹಾಸ ತಿಳಿಸಿಕೊಡುವುದು ಈ ಕಾರ್ಯಕ್ರಮದ ಉದ್ದೇಶ’ ಎಂದರು.

ಶಾಸಕ ರಾಜೂಗೌಡ ಮಾತನಾಡಿ, ‘ಸ್ವಾತಂತ್ರ್ಯ ಚಳವಳಿಯಲ್ಲಿ ಸುರಪುರ ಅರಸರ ಕೊಡುಗೆ ಅಪಾರವಾಗಿದೆ. ಐತಿಹಾಸಿಕ ಪರಂಪರೆಯುಳ್ಳ ಕ್ಷೇತ್ರಕ್ಕೆ ಸಚಿವರು ಆಗಮಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದು ನಮ್ಮ ಸೌಭಾಗ್ಯ’ ಎಂದರು.

ನಗರದ ಆರೋಗ್ಯ ಕೇಂದ್ರದ ಆವರಣದಲ್ಲಿನ 1857ರ ಸ್ವಾತಂತ್ರ್ಯ ಚಳವಳಿಯ ಸ್ಮರಣಾರ್ಥವಾಗಿ ಸ್ಥಾಪಿಸಿರುವ ಸ್ಮಾರಕ ವಿಜಯಸ್ತಂಭದ ಪಕ್ಕದಲ್ಲಿ ಸಾತಂತ್ರ್ಯೋತ್ಸವ ಅಮೃತಮಹೋತ್ಸವ ಸವಿನೆನಪಿಗಾಗಿ ಶಿಲಾನ್ಯಾಸವನ್ನು ಸಚಿವರು ನೆರವೇರಿಸಿದರು. ಅರಸು ಮನೆತನದ ರಾಜಾ ಕೃಷ್ಟಪ್ಪನಾಯಕ ಅವರನ್ನು ಸಚಿವರು ಸರ್ಕಾರದ ಪರವಾಗಿ ಸನ್ಮಾನಿಸಿದರು.

ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಪ್ರಕಾಶ ಸಜ್ಜನ, ನಗರಸಭೆ ಅಧ್ಯಕ್ಷೆ ಸುಜಾತ ಜೇವರ್ಗಿ, ಎಸ್ಪಿ ಡಾ.ಸಿ.ಬಿ. ವೇದಮೂರ್ತಿ, ಹೆಚ್ಚುವರಿ ಜಿಲ್ಲಾಧಿಕಾರಿ ಶಂಕರಗೌಡ ಸೋಮನಾಳ, ಜಿ.ಪಂ ಸಿ.ಎಸ್. ಅಮರೇಶನಾಯ್ಕ, ತಹಶೀಲ್ದಾರ್ ಸುಬ್ಬಣ್ಣ ಜಮಖಂಡಿ, ತಾ.ಪಂ ಇಒ ರವಿಚಂದ್ರರೆಡ್ಡಿ, ಪ್ರಮುಖರಾದ ಡಾ.ಸುರೇಶ ಸಜ್ಜನ, ರಾಜಾ ಹನುಮಪ್ಪ ನಾಯಕ, ಯಲ್ಲಪ್ಪ ಕುರುಕುಂದಿ, ಕಿಶೋರಚಂದ್ ಜೈನ್, ಡಾ.ಬಿ.ಎಂ ಹಳ್ಳಿಕೋಟಿ, ವೇಣುಗೋಪಾಲ ಜೇವರ್ಗಿ, ರಾಜಾ ಮುಕುಂದ ನಾಯಕ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು