ಶನಿವಾರ, ಜನವರಿ 18, 2020
20 °C

ನಿವೃತ್ತಿ ವೇತನ ಹೆಚ್ಚಳಕ್ಕೆ ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ಸುಪ್ರೀಂಕೋರ್ಟ್ ಆದೇಶದಂತೆ ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ನಿವೃತ್ತ ನೌಕರರಿಗೆ ನಿವೃತ್ತಿ ವೇತನ ಹಾಗೂ ಉಪದಾನ ಮೊತ್ತವನ್ನು ಹೆಚ್ಚಳ ಮಾಡುವಂತೆ ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆ ನೌಕರರ ಮತ್ತು ನಿವೃತ್ತರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಶಾಖೆ ಸಂಸದ ಡಾ.ಉಮೇಶ ಜಾಧವ ಅವರಿಗೆ ಮನವಿ ಮಾಡಿದೆ.

ಕಲಬುರ್ಗಿಯ ಡಾ. ಉಮೇಶ ಜಾಧವ ನಿವಾಸಕ್ಕೆ ತೆರಳಿದ ನೌಕರರ ನಿವೃತ್ತರ ಸಂಘದ ಪದಾಧಿಕಾರಿಗಳು ಸುಪ್ರೀಂಕೋರ್ಟ್ 2019 ರಲ್ಲಿ ನೀಡಿದ ತೀರ್ಪಿನ ಆದೇಶದಲ್ಲಿ ನಿವೃತ್ತರಿಗೆ ಕನಿಷ್ಠ ₹6 ಸಾವಿರ ಗರಿಷ್ಠ ₹15 ಸಾವಿರ ವರೆಗೆ ಪಿಂಚಣಿ ನೀಡಬೇಕೆಂದು ತೀರ್ಪು ನೀಡಿದೆ. ಆದರೆ, ಆದೇಶವಾಗಿ ಅದು ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆ ವ್ಯವಸ್ಥಾಪಕರಿಗೆ ಪ್ರತಿಯನ್ನು ನೀಡಿದ್ದರೂ ಇದುವರೆಗೆ ಅವರು ಸುಪ್ರೀಂ ಆದೇಶ ಜಾರಿಮಾಡದೇ ನಿವೃತ್ತರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ದೂರಿದರು.

ನಿವೃತ್ತರಿಗೆ ಸದ್ಯ ಕೇವಲ ₹1 ಸಾವಿರದಿಂದ ₹2 ಸಾವಿರ ಮಾತ್ರ ಪಿಂಚಣಿ ಬರುತ್ತಿದ್ದು, ಇದರಿಂದ ಕುಟುಂಬ ನಿರ್ವಹಣೆ ಕಷ್ಟಕರವಾಗಿದೆ. ಸಾರಿಗೆ ಸಂಸ್ಥೆಯು ಅವಶ್ಯಕ ಸೇವೆಗಳಲ್ಲಿ ಒಂದಾಗಿದ್ದು, ಸಂಸ್ಥೆಯ ಭಾಗವೇ ಆಗಿರುವ ಸಿಬ್ಬಂದಿ ಹಾಗೂ ನಿವೃತ್ತರಿಗೆ ಅವಶ್ಯಕತೆಗೆ ತಕ್ಕಂತೆ ಇಲ್ಲವೇ ಕನಿಷ್ಠ ಅಗತ್ಯ ಪೂರೈಸುವ ಪಿಂಚಣಿಯಾದರೂ ನೀಡಬೇಕು. ಬೇರೆ ಇಲಾಖೆಗಳಲ್ಲಿ ವೇತನದ ಅರ್ಧದಷ್ಟು ಪಿಂಚಣಿ ನೀಡಲಾಗುತ್ತಿದೆ. ಸಂಸ್ಥೆಯ ನೌಕರರಿಗೆ ಶೇ. 2 ರಿಂದ 4 ರಷ್ಟು ಮಾತ್ರ ನೀಡುತ್ತಿರುವುದು ದ್ರೋಹವಾಗಿದೆ ಎಂದು ವಿವರಿಸಿದರು.

ಮನವಿ ಸ್ವೀಕರಿಸಿದ ಡಾ.ಜಾಧವ ಪ್ರಧಾನಿ ಮುಂದೆ ವಿಷಯ ಪ್ರಸ್ತಾಪ ಮಾಡಿ ನ್ಯಾಯ ಒದಗಿಸಲು ಕ್ರಮ ವಹಿಸುವುದಾಗಿ ಭರವಸೆ ನೀಡಿದರು.

ನೌಕರರ ನಿವೃತ್ತರ ಸಂಘದ ಜಿಲ್ಲಾಧ್ಯಕ್ಷ ಸಿದ್ದನಗೌಡ ಚೆನ್ನೂರು, ಕಾರ್ಯಾಧ್ಯಕ್ಷ ಕೆ.ಟಿ. ಜಾಧವ, ಉಪಾದ್ಯಕ್ಷ ನರಸಪ್ಪ ಸುರಪುರ, ಪ್ರಧಾನ ಕಾರ್ಯದರ್ಶಿ ಮಲ್ಲರಡ್ಡೆಪ್ಪ ಸಗರ, ಖಜಾಂಚಿ ಸಾಯಿಬಣ್ಣ ಪಾಂಚಾಳ, ಭೀಮರಾಯ ದೊರೆ, ಅಬ್ದುಲ್ ಅಲಿಂ, ನಾಗಪ್ಪ ಶಿರವಾಳ, ಯಂಕೋಬ ಭಂಡಾರಿ, ಹನುಮಯ್ಯ, ಶರಣಯ್ಯ ಮೋತಕಪಲ್ಲಿ, ಮಲ್ಲಿಕಾರ್ಜುನ, ಮನೋಹರ್ ಪವಾರ್ ಠಾಣಾಗುಂದಿ ಇದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು