ಗುರುವಾರ, 18 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೊರತೆ ನಡುವೆ ಅನ್ಯ ಜಿಲ್ಲೆಗೆ ನಾಲ್ವರು ಶಿಕ್ಷಕರ ನಿಯೋಜನೆ!

ಶಹಾಪುರ, ವಡಗೇರಾ ತಾಲ್ಲೂಕಿನ ಮೂವರು, ಹುಣಸಗಿಯಲ್ಲಿ ಒಬ್ಬ ಶಿಕ್ಷಕರ ವರ್ಗಾವಣೆ
Published 10 ಜುಲೈ 2024, 16:00 IST
Last Updated 10 ಜುಲೈ 2024, 16:00 IST
ಅಕ್ಷರ ಗಾತ್ರ

ಶಹಾಪುರ: ಪ್ರಾಥಮಿಕ ಶಾಲಾ 68 ಶಿಕ್ಷಕರನ್ನು 2024-25ನೇ ಶೈಕ್ಷಣಿಕ ಸಾಲಿಗೆ ನಿಯೋಜಿಸಿ ಮತ್ತು ನಿಯೋಜನೆ ಮುಂದುವರೆಸಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ (ಪ್ರಾಥಮಿಕ) ಸರ್ಕಾರದ ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಿದ್ದು, ಅದರಲ್ಲಿ ಜಿಲ್ಲೆಯ ನಾಲ್ವರು ಶಿಕ್ಷಕರು ಅನ್ಯ ಜಿಲ್ಲೆಗೆ ನಿಯೋಜನೆ ಮಾಡಲಾಗಿದ್ದು, ಶಹಾಪುರ ಹಾಗೂ ವಡಗೇರಾ ತಾಲ್ಲೂಕಿನ ಮೂವರು ಶಿಕ್ಷಕರು ಹಾಗೂ ಹುಣಸಗಿ ತಾಲ್ಲೂಕಿನ ಒಬ್ಬರು ಶಿಕ್ಷಕರು ಇದ್ದಾರೆ.

ಜಿಲ್ಲೆಯಲ್ಲಿ ಶಿಕ್ಷಕರ ಕೊರತೆ ನಡುವೆ ಅನ್ಯ ಜಿಲ್ಲೆಗೆ ನಿಯೋಜನೆ ಮೇಲೆ ಬಿಡುಗಡೆ ಮಾಡುವಂತೆ ಸರ್ಕಾರದ ಆದೇಶಕ್ಕೆ ಜನರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ವಡಗೇರ ತಾಲ್ಲೂಕಿನ ಬಸವೇಶ್ವರ ನಗರದ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿ ಶ್ರುತಿ ಎಂ.ಅವರನ್ನು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಧನರಾಜ್ ಹೇಮರಾಜ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ನಿಯೋಜನೆ ಮಾಡಿದೆ. ಮುಖ್ಯ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿರುವ ಶ್ರುತಿ ಅವರು ನಿಯೋಜನೆಗೊಂಡು ತೆರಳಿದರೆ ಆ ಶಾಲೆಯಲ್ಲಿ ಕೇವಲ ಒಬ್ಬ ಶಿಕ್ಷಕರು ಉಳಿಯುತ್ತಾರೆ. ಅಲ್ಲಿ ಈಗಾಗಲೇ 10 ಶಿಕ್ಷಕರ ಕೊರತೆ ಇದೆ ಎನ್ನುತ್ತಾರೆ ಪಾಲಕರು.

ಅದರಂತೆ ಕುರಕುಂದ ಶಾಲೆಯ ಮಂಜುಳಾ ಅವರು ನಿಯೋಜನೆ ಮೇಲೆ ತೆರಳಿದರೆ, ಐವರು ಶಿಕ್ಷಕರು ಸೇವೆ ಸಲ್ಲಿಸಬೇಕಾಗುತ್ತದೆ. ಶಹಾಪುರ ತಾಲ್ಲೂಕಿನ ಶಾರದಹಳ್ಳಿ ಗ್ರಾಮದ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿ ಪ್ರಭಾವತಿ ಮೆಣಸಗಿ ಅವರನ್ನು ಕೊಪ್ಪಳ ತಾಲ್ಲೂಕಿನ ಯಾವುದಾದರು ಶಾಲೆಗೆ ಎಂದು ಸರ್ಕಾರ ಸುತ್ತೋಲೆಯಲ್ಲಿ ನಮೂದಿಸಲಾಗಿದೆ.

ಹುಣಸಗಿ ಮಾದರಿ ಪ್ರಾಥಮಿಕ ಶಾಲೆಯ ಶಿಕ್ಷಕ ಮಲ್ಲಪ್ಪ ಯಮನಪ್ಪ ಕಂಠಿ ಅವರನ್ನು ವಿಜಯಪುರ ಜಿಲ್ಲೆಯ ನಿಡಗುಂದಿ ತಾಲ್ಲೂಕಿಗೆ ನಿಯೋಜಿಸಲಾಗಿದೆ ಎಂದು ತಿಳಿಸಲಾಗಿದೆ.

ವಿಚಿತ್ರವೆಂದರೆ ನಿಯೋಜನೆ ಮೇಲೆ ತೆರಳಿರುವ ಶಿಕ್ಷಕಿ ಅವರಿಗೆ ಕೊಪ್ಪಳ ತಾಲ್ಲೂಕಿನ ಯಾವುದಾದರು ಶಾಲೆಗೆ ಎಂದು ನಮೂದಿಸಿರುವುದು ಸರ್ಕಾರದ ಲಜ್ಜಗೇಡಿತನದ ಪರಮಾವಧಿ ಎಂದು ಖಾಸಗಿ ಶಾಲಾ ಶಿಕ್ಷಕ ಸಂಘದ ಅಧ್ಯಕ್ಷ ಆರ್.ಚೆನ್ನಬಸ್ಸು ವನದುರ್ಗ ಅಸಮಾಧಾನ ವ್ಯಕ್ತ‍ಪಡಿಸಿದರು.

ತಾಲ್ಲೂಕಿನಲ್ಲಿ ಈಗಾಗಲೇ ಪ್ರಾಥಮಿಕ ಶಾಲೆಯಲ್ಲಿ 834 ಶಿಕ್ಷಕರ ಹುದ್ದೆ ಖಾಲಿ ಇರುವಾಗ ಇವೆಲ್ಲದರ ನಡುವೆ ಶಿಕ್ಷಕರನ್ನು ನಿಯೋಜನೆ ಮೇಲೆ ಬಿಡುಗಡೆ ಮಾಡುತ್ತಿರುವುದು ಹಾಸ್ಯಾಸ್ಪದವಾಗಿದೆ ಎನ್ನುತ್ತಾರೆ ಶಾಲಾ ಮಕ್ಕಳ ಪಾಲಕರು.

2023-24 ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶದಲ್ಲಿ ಜಿಲ್ಲೆಯು ರಾಜ್ಯದಲ್ಲೇ ಕೊನೆ ಸ್ಥಾನ ಪಡೆದುಕೊಂಡಿರುವುದು ಎಲ್ಲರಿಗೂ ತಿಳಿದ ಸಂಗತಿಯಾಗಿದೆ. ಯಾವುದೇ ಕಾರಣಕ್ಕೂ ನಿಯೋಜನೆ ಮೇಲೆ ಅನ್ಯ ಜಿಲ್ಲೆಗೆ ಶಿಕ್ಷಕರನ್ನು ಬಿಡುಗಡೆ ಮಾಡಬಾರದು ಎಂದು ಪಾಲಕರು ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT