ಸುರಪುರ: ತಾಲ್ಲೂಕಿನ ದೇವಪುರ ಗ್ರಾಮ ಪಂಚಾಯಿತಿಯ ಬಿಲ್ ಕಲೆಕ್ಟರ್ ಯಲ್ಲಪ್ಪ ಅರಳಗುಂಡಗಿ ಬುಧವಾರ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ದೇವಪುರ ಶೆಳ್ಳಗಿ ಮಾರ್ಗ ಮಧ್ಯೆದಲ್ಲಿ ವಿಷ ಸೇವಿಸಿ ಒದ್ದಾಡುತ್ತಿದ್ದ ಅವರನ್ನು ದಾರಿಹೋಕರು ಆಸ್ಪತ್ರೆಗೆ ಸೇರಿಸಿದ್ದಾರೆ.
ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮತ್ತು ಅಧ್ಯಕ್ಷರು ತನ್ನಿಂದ ₹ 1.50 ಲಕ್ಷ ವೆಚ್ಚದ ವಿವಿಧ ಕಾಮಗಾರಿ ಮಾಡಿಸಿ ಹಣ ನೀಡದೆ ಸತಾಯಿಸುತ್ತಿದ್ದಾರೆ. ಮನನೊಂದು ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದೆ ಎಂದು ಯಲ್ಲಪ್ಪ ಆಸ್ಪತ್ರೆಗೆ ಭೇಟಿ ನೀಡಿದ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾರೆ.
ಸುರಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಯಲ್ಲಪ್ಪ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಕಲಬುರಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.