ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ | ‘ಸಂವಿಧಾನ ಆಶಯ ಭಗ್ನಗೊಳಿಸಿದ ಬಿಜೆಪಿ’

ಭಂಕೂರ: ವಿವಿಧ ಕಾಮಗಾರಿಗಳಿಗೆ ಶಾಸಕ ಪ್ರಿಯಾಂಕ್ ಖರ್ಗೆ ಚಾಲನೆ
Last Updated 27 ಡಿಸೆಂಬರ್ 2021, 4:24 IST
ಅಕ್ಷರ ಗಾತ್ರ

ಶಹಾಬಾದ್: ಮತಾಂತರ ಕಾಯ್ದೆ ತರುವ ಮೂಲಕ ಬಿಜೆಪಿ ಸರ್ಕಾರ ಸಂವಿಧಾನದ ಆಶಯಗಳನ್ನು ಭಗ್ನಗೊಳಿಸಿದೆ ಎಂದು ಶಾಸಕ ಪ್ರಿಯಾಂಕ್ ಖರ್ಗೆ ಆರೋಪಿಸಿದರು.

ತಾಲ್ಲೂಕಿನ ಭಂಕೂರು ಗ್ರಾಮದಲ್ಲಿಶನಿವಾರ ₹50 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಡಾ.ಬಿ.ಆರ್.ಅಂಬೇಡ್ಕರ್ ಭವನಕ್ಕೆ ಅಡಿಗಲ್ಲು ಹಾಗೂ ₹17 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ಶಾಲಾ ಕೋಣೆ, ₹15 ವೆಚ್ಚದಲ್ಲಿ ನಿರ್ಮಾಣಗೊಂಡ ಬಾಬು ಜಗಜೀವನರಾಮ್ ಭವನ ಹಾಗೂ ₹17 ಲಕ್ಷದಲ್ಲಿ ನಿರ್ಮಾಣಗೊಂಡ ಪ್ರೌಢಶಾಲಾ ಕೊಠಡಿ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ತನ್ನ ಬಳಿ ಬಹುಮತ ಇದೆ ಎಂದು ಬಿಜೆಪಿ ಸರ್ಕಾರ ಯಾವುದೇ ಚರ್ಚೆ ಮಾಡದೆ ಕದ್ದು ಮುಚ್ಚಿ ಬಿಲ್‍ಗಳನ್ನು ಪಾಸ್ ಮಾಡುತ್ತಿದೆ. ಸಂವಿಧಾನದ ಅಡಿಯಲ್ಲಿ ಯಾವುದೇ ಕಾಯಿದೆ ಕಾನೂನು ಜಾರಿಯಾಗಬೇಕಾದರೆ ಆ ಬಗ್ಗೆ ಚರ್ಚೆ ನಡೆಸಲೇಬೇಕು ಇಲ್ಲದಿದ್ದರೆ ಅದು ಹೇಗೆ ಜನಪರ ಕಾಯ್ದೆಯಾಗುತ್ತದೆ ಎಂದು ಪ್ರಶ್ನಿಸಿದರು.

ಬಿಜೆಪಿ ಸಂವಿಧಾನದ ನೀತಿ ನಿಯಮ ಗಾಳಿಗೆ ತೂರುವುದರ ಜೊತೆಗೆ ಬುದ್ಧ, ಬಸವ, ಅಂಬೇಡ್ಕರ್ ಹಾಗೂ ಜಗಜೀವನರಾಂ ಅವರ ಆಶಯಗಳನ್ನು ಮಣ್ಣುಪಾಲು ಮಾಡಹೊರಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಭ್ರಷ್ಟಾಚಾರ ತಾರಕಕ್ಕೇರಿದ್ದು ಅಭಿವೃದ್ಧಿ ಕಾರ್ಯಗಳು ಸಂಪೂರ್ಣ ಕುಂಠಿತಗೊಂಡಿವೆ. ಈ ಹಿಂದೆ ಚಿತ್ತಾಪುರ ಕ್ಷೇತ್ರಕ್ಕೆ ಬಿಡುಗಡೆಯಾದ ₹270 ಕೋಟಿ ಅನುದಾನವನ್ನೂ ಕೂಡಾ ಈ ಸರ್ಕಾರ ತಡೆ ಹಿಡಿದಿದೆ ಎಂದು ಆರೋಪಿಸಿದರು.

ಇದಕ್ಕೂ ಮುನ್ನ ಭಂಕೂಡ ವಾಡದಲ್ಲಿ ₹48 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಹಿರಿಯ ಪ್ರಾಥಮಿಕ ಶಾಲೆಯ ಹೆಚ್ಚುವರಿ ಕೋಣೆ ಹಾಗೂ ತರಿತಾಂಡಾದಲ್ಲಿ ₹12 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಕಿರಿಯ ಪ್ರಾಥಮಿಕ ಶಾಲೆಯ ಹೆಚ್ಚುವರಿ ಕೋಣೆಯನ್ನು ಅವರು ಉದ್ಘಾಟಿಸಿದರು.

ಮುಖಂಡರಾದ ಶಿವಾನಂದ ಪಾಟೀಲ, ಮಲ್ಲಿಕಾರ್ಜುನ ಪೂಜಾರಿ, ರಶೀದ್ ಮರ್ಚಂಟ್, ಭೀಮಣ್ಣ ಸಾಲಿ, ಸಿದ್ದುಗೌಡ ಅಫಜಲಪೂರಕರ್, ಅಣ್ಣಪ್ಪ ಸರಡಗಿ, ಪ್ರಕಾಶ ಜೈನ್, ಶರಣಬಸಪ್ಪ ಧನ್ನಾ, ರಮೇಶ ಮರಗೋಳ, ನಾಮದೇವ ರಾಠೋಡ, ದೇವೆಂದ್ರ ಕಾರೊಳ್ಳಿ, ತಿಪ್ಪಣ್ಣ ಕೋಮಟೆ, ರೌಫ್ ಸೇಠ,ಈರಣ್ಣ ಗುಡೂರ, ವಿಜಯಲಕ್ಷ್ಮಿ ವಗ್ಗನ್, ಜ್ಯೋತಿ ಮೋರೆ, ಗಿರೀಶ ಕಂಬಾನೂರ, ಮೃತ್ಯುಂಜಯ, ಮುಜಾಹಿದ್ದಿನ್, ಅಜಿತಕುಮಾರ, ಜಾಕೀರ ಹುಸೇನ್, ರಾಜೇಶ ಯನ ಗುಂಟಿಕರ್,ಕಿರಣ ಚವ್ಹಾಣ, ಶಿವಾನಂದ ಹೊನಗುಂಟಿ, ಶೇಖರ್ ಕಾಸಿ, ಸುನಿಲ್ ದೊಡ್ಡಮನಿ, ಮನಸೂರ ಪಟೇಲ್, ಮಲ್ಲಪ್ಪ, ಸೂರ್ಯಕಾಂತ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT