ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೊಡ್ಡ ಹಳ್ಳಕ್ಕೆ ಬೇಕಿದೆ ಬ್ರಿಜ್‌ ಕಂ ಬ್ಯಾರೇಜ್‌

ಕರ್ನಾಟಕದ ನೀರು ತೆಲಂಗಾಣ ಪಾಲು, ಮರಳು ಗಣಿಗಾರಿಕೆಯಿಂದ ಅಂತರ್ಜಲಕ್ಕೆ ಧಕ್ಕೆ
Last Updated 18 ನವೆಂಬರ್ 2022, 6:11 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲೆಯ ಕರ್ನಾಟಕದ ಗಡಿಯ ನಂದೇಪಲ್ಲಿ, ಇಡ್ಲೂರು, ಚಲ್ಹೇರಿ ಮೂಲಕ ಹರಿಯುವ ದೊಡ್ಡ ಹಳ್ಳಕ್ಕೆ ಬ್ರಿಜ್‌ ಕಂ ಬ್ಯಾರೇಜ್‌ ನಿರ್ಮಾಣ ಮಾಡಬೇಕು ಎನ್ನುವುದು ಸ್ಥಳೀಯರ ಆಗ್ರಹ.

ಗುರುಮಠಕಲ್‌ ತಾಲ್ಲೂಕಿನ ಚಿಂತನ‍ಪಲ್ಲಿ, ಕಂದಕೂರು, ಎಲ್ಹೇರಿ, ಕೊಂಕಲ್‌, ನಂದೇಪಲ್ಲಿ, ಕರಣಗಿ, ಜೈಗ್ರಾಮ, ಮತ್ತಿತರರ ಕಡೆಯ ನೀರು ದೊಡ್ಡ ಹಳ್ಳ ಸೇರುತ್ತಿದ್ದು, ಇದು ನಾರಾಯಣಪೇಟ ಜಿಲ್ಲೆಯ ಸಂಗಂಬಂಡಾ (ನೆರಡಂಗಂ) ಜಲಾಶಯಕ್ಕೆ ಸೇರುತ್ತಿದೆ.

ಕರ್ನಾಟಕದ ನೀರು ತೆಲಂಗಾಣ ಪಾಲು: ಮಳೆಗಾಲದಲ್ಲಿ ಹಳ್ಳಗಳ ಮೂಲಕ ಹರಿಯುವ ನೀರನ್ನು ಹಿಡಿದುಕೊಳ್ಳಲು ಈ ಭಾಗದಲ್ಲಿ ಯಾವುದೇ ಜಲಾಶಯ, ಬ್ರಿಜ್‌ ಕಂ ಬ್ಯಾರೇಜ್‌ ಇಲ್ಲ. ಹೀಗಾಗಿ ತೆಲಂಗಾಣ ರಾಜ್ಯದವರು ಚಲ್ಹೇರಿ ಸಮೀಪದ ಹಳ್ಳಕ್ಕೆ ಸಂಗಂಬಂಡಾ ಜಲಾಶಯ ನಿರ್ಮಿಸಿಕೊಂಡಿದ್ದಾರೆ.

ಮಳೆಗಾಲದಲ್ಲಿ ಕರ್ನಾಟಕದಿಂದ ಹರಿದುಹೋಗುವ ನೀರಿನಿಂದಲೇ ಜಲಾಶಯ ಭರ್ತಿಯಾಗುತ್ತದೆ. ಇದರಿಂದ ಕರ್ನಾಟಕದ ನೀರು ತೆಲಂಗಾಣ ಪಾಲಾಗುತ್ತಿದೆ.

ಯಾದಗಿರಿ ಜಿಲ್ಲಾ ಕೇಂದ್ರದಿಂದ ಸುಮಾರು 50 ಕಿ.ಮೀ ದೂರದಲ್ಲಿರುವ ಇಡ್ಲೂರು ಶಂಕರಲಿಂಗ ದೇವಸ್ಥಾನದ ಹಿಂಭಾಗದಲ್ಲಿ ದೊಡ್ಡ ಹಳ್ಳ ನದಿಯೋಪಾದಿಯಲ್ಲಿ ಮಳೆಗಾಲದಲ್ಲಿ ಹರಿಯುತ್ತಿದೆ. ಇಡ್ಲೂರು ಹಳ್ಳದ ಸಮೀಪ ಇಡ್ಲೂರು ಮತ್ತು ಸಂಕ್ಲಪುರ ಗ್ರಾಮಸ್ಥರಿಗೆ ಇದೇ ನೀರನ್ನು ಪೂರೈಕೆ ಮಾಡಲಾಗುತ್ತಿದೆ.

ಸಂಗಂಬಂಡಾ ಜಲಾಶಯ: ಪಕ್ಕದ ತೆಲಂಗಾಣ ನಾರಾಯಣಪೇಟ ಜಿಲ್ಲೆಯ ಸಂಗಂಬಂಡಾ ಜಲಾಶಯ ಅವಿಜಿತ ಆಂಧ್ರಪ್ರದೇಶ ಇದ್ದಾಗ ಈ ಯೋಜನೆ ರೂಪಿಸಲಾಗಿದೆ.

ಕರ್ನಾಟಕದಿಂದ ನೀರು ಬರದಿದ್ದಲ್ಲಿ ಪಕ್ಕದ ಜುರಾಲ ಡ್ಯಾಂ ಮೂಲಕ ನೀರು ಹರಿಸುವ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಆದರೆ, ಕರ್ನಾಟಕದ ನೀರು ಯಥೇಚ್ಛವಾಗಿ ದೊಡ್ಡ ಹಳ್ಳದ ಮೂಲಕ ಹರಿಯುತ್ತಿದ್ದರಿಂದ ತೆಲಂಗಾಣದವರಿಗೆ ಯಾವುದೇ ಸಮಸ್ಯೆ ಆಗಿಲ್ಲ.

ಯೋಜನೆ ನೆನಗುದಿಗೆ: ಗುರುಮಠಕಲ್‌ ತಾಲ್ಲೂಕಿನ ನಂದೇಪಲ್ಲಿ–ಇಡ್ಲೂರು ದೊಡ್ಡ
ಹಳ್ಳಕ್ಕೆ ಚಲ್ಹೇರಿ ಗ್ರಾಮದ ಸಮೀಪ ಬ್ರಿಜ್‌ ಕಂ ಬ್ಯಾರೇಜ್‌ ನಿರ್ಮಾಣ ಮಾಡಬೇಕು ಎಂದು ₹50 ಕೋಟಿ ವೆಚ್ಚದಲ್ಲಿ ಯೋಜನೆ ರೂಪಿಸಲಾಗಿತ್ತು. ಸಮ್ಮಿಶ್ರ ಸರ್ಕಾರ ಪತನವಾದ ಈ ಯೋಜನೆ ನೆನಗುದಿಗೆ ಬಿದ್ದಿದೆ. ಮತ್ತೆ ಮಳೆಗಾಲ ಬಂದು ಸಮಸ್ಯೆಯಾದ ಮಾತ್ರ ಈ ಯೋಜನೆ ಬಗ್ಗೆ ನೆನಪು ಬರುತ್ತದೆ.

ಇಲ್ಲಿಯೇ ಬ್ರಿಜ್‌ ಕಂ ಬ್ಯಾರೇಜ್‌ ಅಥವಾ ಜಲಾಶಯ ನಿರ್ಮಿಸಿಕೊಂಡಿದ್ದರೆ ಈ ಭಾಗದ ಸಾವಿರಾರು ರೈತರಿಗೆ ನೀರಾವರಿ ಯೋಜನೆ ಕಲ್ಪಿಸಬಹುದಿತ್ತು. ಜನಪ್ರತಿನಿಧಿಗಳ ರಾಜಕೀಯ ಇಚ್ಛಾಶಕ್ತಿ, ಅಧಿಕಾರಿಗಳ ನಿರ್ಲಕ್ಷ್ಯದಿಂದ ಕರ್ನಾಟಕದ ಜಲ ತೆಲಂಗಾಣದಲ್ಲಿ ಸಂಗ್ರಹವಾಗುತ್ತಿದೆ. ಪಕ್ಕದಲ್ಲೇಯೇ ದೊಡ್ಡ ಹರಿಯುತ್ತಿದ್ದರೂ ಒಣ ಬೇಸಾಯವನ್ನೇ ಈ ಭಾಗದ ಜನರು ಹೊಂದಿಕೊಂಡಿದ್ದಾರೆ. ಸಂಗಂಬಂಡಾ ಜಲಾಶಯ 3 ಟಿಎಂಸಿ ಸಂಗ್ರಹ ಸಾಮಾರ್ಥ್ಯ ಹೊಂದಿದೆ.

ಮರಳು ತಪಾಸಣೆ ಕೇಂದ್ರ ಸ್ಥಾಪನೆಯಾಗಲಿ: ಗಡಿಯಲ್ಲಿ ಮರಳು ಗಣಿಗಾರಿಕೆ ನಿರಂತರವಾಗಿ ನಡೆದಿದ್ದು, ಕರ್ನಾಟಕದವನ್ನು ಬೆದರಿಸಿ ತೆಲಂಗಾಣದವರು ಮರಳು ಕೊಂಡೊಯ್ಯುತ್ತಿದ್ದಾರೆ. ಇದರಿಂದ ದೊಡ್ಡ ಹಳ್ಳದಲ್ಲಿ ಅಂತರ್ಜಲ ಮಟ್ಟ ಕುಸಿಯುತ್ತಿದೆ ಎನ್ನುವುದು ಸ್ಥಳೀಯರ ಆರೋಪವಾಗಿದೆ.

ಇಲ್ಲಿ ಮರಳುಗಾರಿಕೆ ಚೆಕ್‌ಪೋಸ್ಟ್‌ ತೆಗೆಯುವ ಮೂಲಕ ಕರ್ನಾಟಕ ಸರ್ಕಾರ ಮರಳು ನಿಯಂತ್ರಣ ಮಾಡಬಹುದು. ಈ ಮೂಲಕ ಮರಳು ಗಣಿಗಾರಿಕೆ ಮಾಡುವವರಿಂದ ರಾಯಲ್ಟಿ ಪಡೆಯಬಹುದು ಎಂದು ಈ ಭಾಗದವರ ಒತ್ತಾಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT