ಬುಧವಾರ, ಮೇ 25, 2022
23 °C
ಸ್ವಚ್ಛತೆ ಮರೀಚಿಕೆ, ಮುರಿದ ಹೋದ ಆಸನಗಳು, ಪ್ರಯಾಣಿಕರಿಗೆ ಸೌಲಭ್ಯ ಕಲ್ಪಿಸದ ಅಧಿಕಾರಿಗಳು

ಯಾದಗಿರಿ ಜಿಲ್ಲೆಯಲ್ಲಿ ನಿರ್ವಹಣೆಯಿಲ್ಲದೆ ಸೊರಗಿದ ಬಸ್‌ ನಿಲ್ದಾಣಗಳು

ಬಿ.ಜಿ.ಪ್ರವೀಣಕುಮಾರ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ನಗರ ಸೇರಿ ಜಿಲ್ಲೆಯ ಹೊಸ, ಹಳೆ ಬಸ್‌ ನಿಲ್ದಾಣಗಳಲ್ಲಿ ಮೂಲಸೌಕರ್ಯಗಳ ಕೊರತೆ ಇದೆ. ಎಲ್ಲೆಂದರಲ್ಲೇ ತ್ಯಾಜ್ಯ ಬಿದ್ದು ದುರ್ನಾತ ಬೀರುತ್ತಿದೆ.

ವಿದ್ಯುತ್‌ ದೀಪಗಳೂ ಇಲ್ಲ. ರಾತ್ರಿ ವೇಳೆ ನಿಲ್ದಾಣಗಳು ಕತ್ತಲೆಗೆ ಜಾರುತ್ತವೆ. ಇದರಿಂದ ಮಹಿಳಾ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ.

ಅಧಿಕಾರಿಗಳು ನಾಲ್ಕು ತಿಂಗಳ ಹಿಂದೆ ದೀಪ ಹಾಕಿಸಿದ್ದೇವೆ ಎಂದು ತಿಳಿಸುತ್ತಾರೆ. ಯಾದಗಿರಿ ಕೇಂದ್ರ ಬಸ್‌ ನಿಲ್ದಾಣದ ಮುಂಭಾಗದಲ್ಲಿ ವಿದ್ಯುತ್‌ ದೀಪಗಳಿಲ್ಲದೆ ಕತ್ತಲು ಆವರಿಸುತ್ತದೆ.

ನಾಲ್ಕು ಡಿಪೋಗಳು: ಜಿಲ್ಲೆ ವ್ಯಾಪ್ತಿಯಲ್ಲಿ ಈಶಾನ್ಯ ಸಾರಿಗೆ ಸಂಸ್ಥೆಯ ಯಾದಗಿರಿ, ಶಹಾಪುರ, ಸುರಪುರ, ಗುರುಮಠಕಲ್‌ ಬಸ್‌ ಡಿಪೋಗಳಿವೆ. ಈಚೆಗೆ ಶಹಾಪುರ ಮತ್ತು ಗುರುಮಠಕಲ್‌ ಬಸ್‌ ಡಿಪೋಗಳಿಗೆ ಇಂಧನ ಉಳಿತಾಯಕ್ಕೆ ಪ್ರಶಸ್ತಿ ಬಂದಿದೆ. ಆದರೆ, ಬಸ್‌ ನಿಲ್ದಾಣದಲ್ಲಿ ಸ್ವಚ್ಛತೆ ಇಲ್ಲದಂತಾಗಿದೆ.

ತ್ಯಾಜ್ಯ ವಸ್ತುಗಳು ಎಸೆಯುವ ತಾಣ: ಹೊಸ ಬಸ್‌ ನಿಲ್ದಾಣದಲ್ಲಿ ಬೇಕಾಬಿಟ್ಟಿಯಾಗಿ ತ್ಯಾಜ್ಯ ವಸ್ತುಗಳನ್ನು ಎಲ್ಲೆಂದರಲ್ಲೇ ಎಸೆದಿದ್ದಾರೆ. ಹಂದಿ, ಬಿಡಾಡಿ ದನಗಳ ಹಾವಳಿ ಹೆಚ್ಚಾಗಿದೆ. ಮಲಮೂತ್ರ ದುರ್ನಾತ ಬೀರುತ್ತಿದೆ.

ಶೌಚಾಲಯಗಳು ಸೂಕ್ತ ನಿರ್ವಹಣೆ ಇಲ್ಲದೆ ದುರ್ನಾತ ಬೀರುತ್ತಿವೆ. ಮಲ, ಮೂತ್ರ ವಿಸರ್ಜನೆಗೆ ಹಣ ಪಡೆದರೂ ಸೌಲಭ್ಯ ಅಷ್ಟಕಷ್ಟೆ ಎನ್ನುವಂತಾಗಿದೆ.

ಬಸ್ ನಿಲ್ದಾಣದಲ್ಲಿ ಸ್ವಚ್ಛತೆಯ ಬರ: ಹಳೆ ಬಸ್‌ ನಿಲ್ದಾಣ (ಈಗ ಗ್ರಾಮಾಂತರ ಬಸ್‌ ನಿಲ್ದಾಣ) ಉದ್ಘಾಟನೆಯಾಗಿ ಒಂದು ತಿಂಗಳು ಕಳೆದಿದೆ. ತಕ್ಕಮಟ್ಟಿಗೆ ಸ್ವಚ್ಛತೆ ಕಾಪಾಡಲಾಗುತ್ತಿದೆ. ಆದರೆ, ಕೇಂದ್ರ ಬಸ್‌ ನಿಲ್ದಾಣದಲ್ಲಿ ಸ್ವಚ್ಛತೆಯ ಬರ ಎದುರಾಗಿದೆ. ಕ್ಯಾಂಟೀನ್‌, ಮೂತ್ರ ವಿಸರ್ಜಿಸುವ ಸ್ಥಳ, ನೀರಿನ ತೊಟ್ಟಿಗಳ ಪಕ್ಕದಲ್ಲಿ ಪ್ಲಾಸ್ಟಿಕ್‌ ತ್ಯಾಜ್ಯ, ಕಸ ಎಸೆಯಲಾಗಿದೆ. ಇದರಿಂದ ಈ ಪ್ರದೇಶದಲ್ಲಿ ದುರ್ನಾತ ಬೀರುತ್ತಿದೆ.

‘ಸಾರಿಗೆ ಇಲಾಖೆಯು ನಿಲ್ದಾಣದಲ್ಲಿ ಸಾವಿರಾರು ರೂಪಾಯಿ ಆದಾಯ ಬರುವ ಮಳಿಗೆಗಳನ್ನು ನಿರ್ಮಿಸಿದೆ. ₹50 ರಿಂದ ₹15 ಸಾವಿರ ತನಕ ಬಾಡಿಗೆ ವಸೂಲಿ ಮಾಡಲಾಗುತ್ತಿದೆ. ಆದರೆ, ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಮೂಲ ಸೌಕರ್ಯ ಒದಗಿಸಬೇಕು. ಸಾರಿಗೆ ಸೇವೆ ಎನ್ನುವುದು ಮರೆತು ಹೋಗಿದೆ. ಈಗ ವ್ಯಾಪಾರವಾಗಿದೆ. ಹೀಗಾಗಿ ಬಸ್‌ ನಿಲ್ದಾಣಗಳಲ್ಲಿ ಸೂಕ್ತ ಸೌಲಭ್ಯ ಒದಗಿಸಲು ಪ್ರಯಾಣಿಕರು’ ಎಂದು ಒತ್ತಾಯಿಸಿದ್ದಾರೆ.

ಒಂದೊಂದು ಕಡೆ ಒಂದೊಂದು ಹೆಸರು: ನಗರದ ಕೇಂದ್ರ ಬಸ್‌ ನಿಲ್ದಾಣದಲ್ಲಿ ಯಾದಗಿರಿ ಎಂದು ಬರೆಯಲಾಗಿದೆ. ಆದರೆ, ಹಳೆ ಬಸ್‌ ನಿಲ್ದಾಣದಲ್ಲಿ ಯಾದಗೀರ ಎಂದು ಬರೆಯಲಾಗಿದೆ. ಈ ಬಗ್ಗೆ ಸಾರ್ವಜನಿಕರು ಹಲವಾರು ಬಾರಿ ದೂರು ನೀಡಿದರೂ ಯಾವುದೇ ಪ್ರಯೋಜನವಿಲ್ಲದಂತಾಗಿದೆ ಎಂದು ದೂರುತ್ತಾರೆ.

ಕನ್ನಡ ತಪ್ಪು ಬರವಣಿಗೆಯಿಂದ ಗೊಂದಲ ಮೂಡಿಸಿದಂತಾಗಿದೆ. ಎಲ್ಲ ಕಡೆ ಬಳಕೆ ಇರುವಂತೆ ಯಾದಗಿರಿ ಎಂದೇ ತಿದ್ದುಪಡಿ ಮಾಡಬೇಕು ಎಂದು ಕನ್ನಡಪರ ಹೋರಾಟಗಾರರು ಮನವಿ ಮಾಡಿದ್ದಾರೆ.

***

ಬಸ್‌ ನಿಲ್ದಾಣ ಮುಂಭಾಗದಲ್ಲಿ ಗುಂಡಿ!

ನಗರದ ಕೇಂದ್ರ ಬಸ್‌ ನಿಲ್ದಾಣದಲ್ಲಿ ದೊಡ್ಡದಾಗಿ ಗುಂಡಿ ಬಿದ್ದು ಹಲವಾರು ವರ್ಷಗಳು ಕಳೆದಿವೆ. ಇದನ್ನು ಮುಚ್ಚುವ ಗೋಜಿಗೆ ಸಾರಿಗೆ ಇಲಾಖೆ, ಸಂಬಂಧಿಸಿದ ನಗರಸಭೆ ಗಮನಹರಿಸಿಲ್ಲ. ಇಲ್ಲಿಯೇ ಟಂಟಂ, ಆಟೊ, ಕ್ರೂಸರ್ ವಾಹನಗಳನ್ನು ನಿಲ್ಲಿಸಲಾಗುತ್ತಿದೆ. ಪ್ರಯಾಣಿಕರು ವಾಹನ ಇಳಿದು ಯಾಮಾರಿದರೆ ಅದರೊಳಗೆ ಬೀಳುವುದು ನಿಶ್ಚಿತ. ಈ ಅಪಾಯ ಗೊತ್ತಿದ್ದರೂ ಸಂಬಂಧಿಸಿದವರು ಯಾರೂ ಇತ್ತ ಗಮನ ಹರಿಸಿಲ್ಲ ಎಂದು ಪ್ರಯಾಣಿಕರ ದೂರಾಗಿದೆ.

‘ಆರು ತಿಂಗಳು ಹಿಂದೆ ಇದೇ ಗುಂಡಿಯಲ್ಲಿ ವೃದ್ಧೆಯೊಬ್ಬರು ಕುಸಿದು ಬಿದ್ದರು. ಮೇಲೆಕ್ಕಿತ್ತಿದ್ದಾಗ ಕೈ, ಕಾಲುಗಳಿಗೆ ತರುಚಿದ ಗಾಯಗಳಾಗಿತ್ತು. ಜತೆಗೆ ಕಾಲು ಉಳಿಕಿತ್ತು. ಇನ್ನಾದರೂ ಯಾರೂ ಆ ಗುಂಡಿಯನ್ನು ಮುಚ್ಚಿಲ್ಲ’ ಎಂದು ಹೆಸರೇಳಲು ಇಚ್ಚಿಸದ ಮಳಿಗೆ ಮಾಲೀಕರು ತಿಳಿಸಿದರು.

ಈ ಕುರಿತು ಪ್ರತಿಕ್ರಿಯಿಸಿದ ವಿಭಾಗೀಯ ಸಂಚಾಲನಾಧಿಕಾರಿ ರಮೇಶ ಪಾಟೀಲ, ‘ನಿಲ್ದಾಣದ ಒಳಗಿದ್ದರೆ ಮಾತ್ರ ನಮ್ಮ ವ್ಯಾಪ‍್ತಿಗೆ ಬರುತ್ತದೆ. ಅದು ಮುಂಭಾಗದಲ್ಲಿರುವುದರಿಂದ ನಗರಸಭೆಯವರು ದುರಸ್ತಿ ಮಾಡಬೇಕು. ಈ ಬಗ್ಗೆ ಮಾಹಿತಿ ನೀಡಲಾಗುವುದು’ ಎಂದು ತಿಳಿಸಿದ್ದಾರೆ.
***
ಪ್ರಯಾಣಿಕರ ಸೌಲಭ್ಯ ಮರೆತ ನಿಲ್ದಾಣ

ಶಹಾಪುರ: ಪ್ರಯಾಣಿಕರ ಅನುಕೂಲಕ್ಕಾಗಿ ನಗರದಲ್ಲಿ ಗ್ರಾಮೀಣ ಹಾಗೂ ನಗರ ಬಸ್ ನಿಲ್ದಾಣಗಳನ್ನು ನಿರ್ಮಿಸಲಾಗಿದೆ. ಆದರೆ, ಪ್ರಯಾಣಿಕರು ಕನಿಷ್ಠ ಮೂಲ ಸೌಲಭ್ಯವಿಲ್ಲದೆ ಪರದಾಡುವಂತೆ ಆಗಿದೆ. ಹೊಸ ನಿಲ್ದಾಣವಿದ್ದರೂ ಶುದ್ಧ ಕುಡಿಯುವ ನೀರಿನ ಘಟಕವನ್ನು ಉದ್ದೇಶಪೂರ್ವಕವಾಗಿ ನಿರ್ಮಿಸುವುದನ್ನು ಮರೆಯಲಾಗಿದೆ. ನಿಲ್ದಾಣದಲ್ಲಿ ಸ್ವಚ್ಛತೆ ಹಾಗೂ ಸುರಕ್ಷತೆ ಇಲ್ಲವಾಗಿದೆ.

ಬೀದರ್‌-ಶ್ರೀರಂಗಪಟ್ಟಣ ರಾಜ್ಯ ಹೆದ್ದಾರಿಯ ಕೇಂದ್ರ ಸ್ಥಾನವಾಗಿದ್ದರಿಂದ ಹೆಚ್ಚಿನ ಪ್ರಯಾಣಿಕರ ಇಲ್ಲಿ ಓಡಾಟವಿದೆ. ನಗರದ ಹೃದಯ ಭಾಗದಲ್ಲಿ ನಿಲ್ದಾಣವಿದೆ. ಒಳಗಡೆ ಮಳಿಗೆ ನಿರ್ಮಿಸಿದ್ದಾರೆ. ಪ್ರಯಾಣಿಕರ ಹಿತಕ್ಕಿಂತ ಮುಖ್ಯವಾಗಿ ಸಾರಿಗೆ ಇಲಾಖೆಗೆ ಆದಾಯದ ಬಾಬತ್ತು ನೋಡಿಕೊಳ್ಳುವ ಭರದಲ್ಲಿ ಪ್ರಯಾಣಿಕರಿಗೆ ಕನಿಷ್ಠ ಸೌಲಭ್ಯ ನೀಡುವಲ್ಲಿ ಸೋತಿವೆ. ನಿಲ್ದಾಣದಲ್ಲಿ ಮಹಿಳೆಯರಿಗೆ ಪ್ರತ್ಯೇಕವಾದ ವಿಶ್ರಾಂತಿ ಕೋಣೆಯಿಲ್ಲ. ಸುಸಜ್ಜಿತ ಶೌಚಾಲಯವಿಲ್ಲ. ಮಹಿಳಾ ಶೌಚಾಲಯದ ನಿರ್ವಹಣೆಯನ್ನು ಮಹಿಳೆಯರಿಗೆ ಒಪ್ಪಿಸಿಲ್ಲ. ಇದರಿಂದ ಮಹಿಳೆಯರು ಮುಜುಗರಪಡುವಂತೆ ಆಗಿದೆ. ಬಾಗಿಲು ಕಿತ್ತು ಹೋಗಿವೆ. ಜೀವ ಕೈಯಲ್ಲಿ ಹಿಡಿದುಕೊಂಡು ಒಳ ಹೋಗಿ ಹೊರ ಬರುವಂತೆ ಆಗಿದೆ ಎನ್ನುತ್ತಾರೆ ಮಹಿಳಾ ಪ್ರಯಾಣಿಕರು.

ನಿಲ್ದಾಣದ ಅಕ್ಕಪಕ್ಕದಲ್ಲಿ ತ್ಯಾಜ್ಯ ವಸ್ತುಗಳನ್ನು ಎಸೆದಿದ್ದಾರೆ. ಹಂದಿ, ನಾಯಿ, ಬಿಡಾಡಿ ದನಗಳ ಜೊತೆ ಕುಳಿತುಕೊಳ್ಳಬೇಕು. ತುಸು ಯಾಮಾರಿದರೆ ಕೈಯಲ್ಲಿರುವ ಚೀಲವನ್ನು ಕಿತ್ತುಕೊಂಡು ಪರಾರಿಯಾಗುವುದು ಸಾಮಾನ್ಯ. ಬೇಸಿಗೆ ಶುರುವಾಗತ್ತಲಿದೆ. ಪ್ರಯಾಣಿಕರಿಗೆ ಕಡಿಮೆ ಬೆಲೆಗೆ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಿದರೆ ಹೆಚ್ಚು ಅನುಕೂಲವಾಗುತ್ತದೆ. ಅಲ್ಲದೆ ಪ್ರಯಾಣಿಕರು ಇಳಿದು ಬೇರೆಡೆ ಹೋಗುವುದು ತಪ್ಪುತ್ತದೆ. ನಿಲ್ದಾಣದಲ್ಲಿ ಪ್ಲಾಸ್ಟಿಕ್ ಕಾಗದ, ಗುಟುಕಾ ಜಗಿದು ಗೋಡೆಗೆ ಉಗುಳಿರುವುದು ಕಂಡು ತುಂಬಾ ಬೇಸರವಾಗುತ್ತದೆ. ಕಸದ ರಾಶಿಕಂಡು ಭೀತಿಯಾಗುತ್ತದೆ. ನಿಲ್ದಾಣದಲ್ಲಿ ಪುಂಡರ ಹಾವಳಿ ಹೆಚ್ಚಾಗಿದೆ. ಮಹಿಳೆಯರ ಸುರಕ್ಷತೆಯ ದೃಷ್ಟಿಯಿಂದ ಹೋಂ ಗಾರ್ಡ್ ನೇಮಿಸಬೇಕು ಎನ್ನುತ್ತಾರೆ ಮಹಿಳಾ ಪ್ರಯಾಣಿಕರು.

ಅಲ್ಲದೆ ಹೊಸ ಬಸ್ ನಿಲ್ದಾಣದಲ್ಲಿ ಸಾಕಷ್ಟು ಜಾಗವಿದ್ದು, ಉದ್ಯಾನ ನಿರ್ಮಾಣಕ್ಕೆ ಮೀಸಲಿಡಲಾಗಿತ್ತು. ಅದು ಈಗ ರಾತ್ರಿ ಸಮಯದಲ್ಲಿ ಅನೈತಿಕ ಚಟುವಟಿಕೆಯ ತಾಣವಾಗಿದೆ. ಆಸನಗಳ ಸರಿಯಾದ ವ್ಯವಸ್ಥೆ ಇಲ್ಲ. ಸಾರಿಗೆ ಇಲಾಖೆಯು ಕೇವಲ ನಿಲ್ದಾಣದಲ್ಲಿ ಮಳಿಗೆ ನಿರ್ಮಿಸಿ ಬಾಡಿಗೆ ನೀಡಿದರೆ ಸಾಲದು. ನಿಲ್ದಾಣದಲ್ಲಿ ಅಗತ್ಯ ಸೌಲಭ್ಯಗಳನ್ನು ಪ್ರಯಾಣಿಕರ ಅನುಕೂಲಕ್ಕಾಗಿ ಒದಗಿಸಬೇಕು ಎಂದು ಪ್ರಯಾಣಿಕರು ಮನವಿ ಮಾಡಿದ್ದಾರೆ.
***
ಸುರಪುರ ಬಸ್‍ ನಿಲ್ದಾಣ: ಬಿಡಾಡಿ ದನಗಳ ತಾಣ

ಸುರಪುರ: ಐತಿಹಾಸಿಕ ಸುರಪುರ ಕೋಟೆಯಾಕಾರದಲ್ಲಿ ನಿರ್ಮಿಸಿರುವ ನಗರದ ಬಸ್‍ ನಿಲ್ದಾಣ ಹಲವು ಕೊರತೆ ಎದುರಿಸುತ್ತಿದೆ. ನಿಲ್ದಾಣಕ್ಕೆ ಕಾವಲುಗಾರರನ್ನು ನೇಮಿಸಿಲ್ಲ. ಇದರಿಂದ ಬೆಳಿಗ್ಗೆಯಿಂದಲೇ ಬಿಡಾಡಿ ದನಗಳು, ಹಂದಿ, ನಾಯಿಗಳು ನಿಲ್ದಾಣದಲ್ಲಿ ಆಶ್ರಯ ಪಡೆದುಕೊಳ್ಳುತ್ತವೆ.

ದನಗಳು ನಿಲ್ದಾಣದ ತುಂಬೆಲ್ಲ ಸೆಗಣಿ, ಮೂತ್ರ ಹಾಕುತ್ತವೆ. ಪ್ರಯಾಣಿಕರ ಲಗೇಜ್‍ಗೆ ಬಾಯಿ ಹಾಕುತ್ತವೆ. ರಾತ್ರಿ ಸಮಯದಲ್ಲಿ ಕಳ್ಳ, ಕಾಕರ ಕಾಟ ಇದೆ. ಇದರಿಂದ ಪ್ರಯಾಣಿಕರು ರಾತ್ರಿ ಸಮಯದಲ್ಲಿ ನಿಲ್ದಾಣಕ್ಕೆ ಬರಲು ಹೆದರುವಂತಾಗಿದೆ.

ಖಾಸಗಿ ವಾಹನಗಳು, ಆಟೊ, ಬೈಕ್‍ಗಳು ನಿಲ್ದಾಣದ ಒಳಗೆ ಎಲ್ಲೆಂದರಲ್ಲಿ ನಿಂತಿರುತ್ತವೆ. ನಿಲ್ದಾಣದ ಪ್ರವೇಶದ ದ್ವಾರದಲ್ಲಿ ಕೆಲ ತಿಂಗಳ ಹಿಂದೆ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಇನ್ನೆರಡು ಪ್ರವೇಶ ದ್ವಾರಗಳಿಂದ ವಾಹನಗಳು ಒಳಗೆ ಬಂದು ನಿಂತುಕೊಳ್ಳುತ್ತವೆ.

ರಾತ್ರಿ ಸಮಯದಲ್ಲಿ ಬಹುತೇಕ ವೇಗದೂತ ಬಸ್‍ಗಳು, ಸ್ಲೀಪಿಂಗ್ ಕೋಚ್‍ಗಳು, ರಾಜಹಂಸ ಬಸ್‍ಗಳು ರಾಜಾ ನಾಲ್ವಡಿ ವೆಂಕಟಪ್ಪ ನಾಯಕ ವೃತ್ತದ ಬೈಪಾಸ್ ಮೂಲಕ ಹೋಗುತ್ತವೆ. ಇದರಿಂದ ನಗರದ ಪ್ರಯಾಣಿಕರು 6 ಕಿ.ಮೀ ದೂರದ ವೃತ್ತಕ್ಕೆ ಹೋಗಿ ಬಸ್‍ಗೆ ಕಾಯುವಂತಾಗಿದೆ.

ಬಡ ಪ್ರಯಾಣಿಕರ ಅನುಕೂಲಕ್ಕಾಗಿ ಕಲಬುರ್ಗಿಗೆ ಸಗರನಾಡು ಬಸ್ ಓಡಿಸಲಾಗುತ್ತಿತ್ತು. ಈ ಬಸ್ ಪ್ರಯಾಣಿಕರಿಗೆ ಪ್ರಯಾಣದಲ್ಲಿ ಶೇ 40 ರಷ್ಟು ಉಳಿತಾಯವಾಗುತ್ತಿತ್ತು. ಈಗ ಸಗರನಾಡು ಬಸ್‍ಗಳನ್ನು ಗಣನೀಯವಾಗಿ ಕಡಿಮೆ ಮಾಡಲಾಗಿದೆ.
***
ಹುಣಸಗಿ ಬಸ್ ನಿಲ್ದಾಣ: ಕುಡಿಯುವ ನೀರು ಮರೀಚಿಕೆ

ಹುಣಸಗಿ: ಪಟ್ಟಣದಲ್ಲಿ ಕಳೆದ ಆರು ವರ್ಷಗಳ ಹಿಂದೆ ಸುಸಜ್ಜಿತವಾದ ಬಸ್ ನಿಲ್ದಾಣ ನಿರ್ಮಿಸಲಾಗಿದೆ. ಆದರೆ, ಇದುವರೆಗೂ ಪ್ರಯಾಣಿಕರಿಗೆ ಶುದ್ಧ ಕುಡಿಯುವ ನೀರು ಒದಗಿಸುವಲ್ಲಿ ಅಧಿಕಾರಿಗಳು ಪ್ರಾಮಾಣಿಕ ಪ್ರಯತ್ನ ಮಾಡಿಲ್ಲ.

‘ಸುಮಾರು ಮೂರು ವರ್ಷಗಳಿಗೂ ಹೆಚ್ಚು ಸಮಯ ತೆಗೆದುಕೊಂಡು ಬಸ್ ನಿಲ್ದಾಣ ನಿರ್ಮಿಸಲಾಗಿತ್ತು. ಮಹಿಳೆಯರಿಗಾಗಿ ಪ್ರತ್ಯೇಕ ಕೋಣೆ, ಶೌಚಾಲಯ, ಸಿ.ಸಿ ಕ್ಯಾಮೆರಾ ಸೇರಿದಂತೆ ಇತರ ವ್ಯವಸ್ಥೆ ಕಲ್ಪಿಸಲಾಗಿದೆ. ಆದರೆ, ಮುಖ್ಯವಾಗಿ ಕುಡಿಯುವ ನೀರಿನ ವ್ಯವಸ್ಥೆ ಮಾಡಿಲ್ಲ’ ಎಂದು ಆನಂದ ಬಾರಿಗಿಡದ ಬೇಸರ ವ್ಯಕ್ತಪಡಿಸಿದ್ದಾರೆ.

ಬಸ್ ನಿಲ್ದಾಣ ನಿರ್ಮಾಣದ ಬಳಿಕ ಗುತ್ತಿಗೆದಾರರು ತೋರಿಕೆಗೆ ಮಾತ್ರ ನೀರಿನ ತೊಟ್ಟಿ ನಿರ್ಮಿಸಿದ್ದು, ಅದಕ್ಕೆ ಕುಡಿಯುವ ನೀರಿನ ಸಂಪರ್ಕದ ಮೂಲವೇ ಇಲ್ಲದಂತಾಗಿದೆ.

ಬೇಸಿಗೆ ಆರಂಭವಾಗುತ್ತಿದ್ದಂತೆ ಪಟ್ಟಣಕ್ಕೆ ಆಗಮಿಸುವ ವೃದ್ಧರು, ಮಕ್ಕಳು ವಿದ್ಯಾರ್ಥಿಗಳು ಕುಡಿಯುವ ನೀರಿಗಾಗಿ ಹೋಟೆಲ್‌ಗಳಿಗೆ ತೆರಳುವ ಅನಿವಾರ್ಯತೆ ಇದೆ. ಕೆಲವು ಸಂದರ್ಭಗಳಲ್ಲಿ ಉಚಿತ ನೀರು ಕುಡಿಯಲು ಚಹಾ ಸೇವಿಸುವ ಅನಿವಾರ್ಯತೆ ಬರುತ್ತದೆ ಎಂದು ಬಸವರಾಜ ಹಗರಟಗಿ ಹೇಳುತ್ತಾರೆ. ಗ್ರಾಮೀಣ ಭಾಗದಿಂದ ಪಟ್ಟಣಕ್ಕೆ ಆಗಮಿಸುವ ಜನರಿಗೆ ಸಾರಿಗೆ ಇಲಾಖೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ಮುಂದಾಗಬೇಕಿದೆ.

ಅರವಟಿಗೆ: ಖಾಸಗಿ ವ್ಯಕ್ತಿಗಳು ಸಾರ್ವಜನಿಕರ ಅನುಕೂಲಕ್ಕಾಗಿ ಬಸ್ ನಿಲ್ದಾಣದ ಮುಂಭಾಗದಲ್ಲಿ ಪ್ರತಿವರ್ಷ ಬೇಸಿಗೆ ಸಂದರ್ಭದಲ್ಲಿ ನೀರಿನ ಅರವಟಿಗೆ ಆರಂಭಿಸಿ ಅನುಕೂಲ ಕಲ್ಪಿಸುತ್ತಿದ್ದಾರೆ.
***
ಕೆಂಭಾವಿ: ಇದ್ದು ಇಲ್ಲದಂತಾದ ಬಸ್ ನಿಲ್ದಾಣ

ಕೆಂಭಾವಿ: ಲಕ್ಷಾಂತರ ರೂಪಾಯಿ ಖರ್ಚು ಮಾಡಿ ನಿರ್ಮಾಣ ಮಾಡಿರುವ ಹೊಸ ಬಸ್ ನಿಲ್ದಾಣ ಇದ್ದೂ ಇಲ್ಲದಂತಾಗಿದೆ. ಪ್ರಯಾಣಿಕರಿಗೆ ಸೌಲಭ್ಯಗಳಿಲ್ಲದೆ ಕೇವಲ ರಾತ್ರಿ ಬಸ್ ತಂಗುವುದಕ್ಕೆ ಮಾತ್ರ ಸೀಮಿತವಾಗಿದೆ. ಸಾರ್ವಜನಿಕರ ಸೌಲಭ್ಯಕ್ಕೆ ಬಾರದೆ ಜನರು ಹಿಡಿಶಾಪ ಹಾಕುವಂತಾಗಿದೆ.

ಪಟ್ಟಣದಿಂದ ಕೇವಲ ಅರ್ಧ ಕಿ.ಮೀ ದೂರದಲ್ಲಿದ್ದರೂ ಸಾರ್ವಜನಿಕರು ಅತ್ತ ಕಡೆ ಮುಖ ಮಾಡುವುದಿಲ್ಲ. ಎಲ್ಲರೂ ಹಳೆ ಬಸ್ ನಿಲ್ದಾಣವನ್ನೆ ಅವಲಂಬಿಸಿದ್ದಾರೆ. ಹಳೆ ಬಸ್‍ ನಿಲ್ದಾಣದಲ್ಲೂ ಪ್ರಯಾಣಿಕರ ಕಷ್ಟ ಹೇಳತೀರದು. ಕುಳಿತುಕೊಳ್ಳಲು ಸ್ಥಳವಿಲ್ಲ, ಮಹಿಳೆಯರಿಗೆ ಶೌಚಾಲಯದ ವ್ಯವಸ್ಥೆಯಿಲ್ಲ. ಬಿಸಿಲು, ಮಳೆ, ಗಾಳಿಗೆ ಪ್ರಯಾಣಿಕರು ಸುಸ್ತೋ ಸುಸ್ತು. ಹೊಸ ಬಸ್ ನಿಲ್ದಾಣದಲ್ಲೂ ಶೌಚಾಲಯ, ಕುಡಿಯುವ ನೀರು ಸೇರಿದಂತೆ ಮೂಲಸೌಕರ್ಯಗಳ ಕೊರತೆಯಿದೆ. ಆದರೂ ಪ್ರತಿವರ್ಷ ದುರಸ್ತಿ ನೆಪದಲ್ಲಿ ಲಕ್ಷಾನುಗಟ್ಟಲೆ ಹಣವನ್ನು ಅಧಿಕಾರಿಗಳು ಗುಳುಂ ಮಾಡುತ್ತಿದ್ದಾರೆ ಎಂಬುದು ನಾಗರಿಕರ ಆರೋಪವಾಗಿದೆ.

ಇನ್ನಾದರೂ ಸಾರಿಗೆ ಇಲಾಖೆ ಅಧಿಕಾರಿಗಳು ಎಚ್ಚೆತ್ತು ಪ್ರಯಾಣಿಕರಿಗೆ ಅನುಕೂಲ ಮಾಡುವ ರೀತಿಯಲ್ಲಿ ಸೌಲಭ್ಯಗಳನ್ನು ಒದಗಿಸಬೇಕು ಎಂಬುದು ನಾಗರಿಕರ ಒತ್ತಾಸೆಯಾಗಿದೆ. ಇದೇ ರೀತಿ ಪ್ರಯಾಣಿಕರ ಬಗ್ಗೆ ಅಧಿಕಾರಿಗಳು ನಿರ್ಲಕ್ಷ್ಯ ತೋರಿಸುತ್ತಾ ಹೋದರೆ ಪ್ರಯಾಣಿಕರು ಸಿಡಿದೇಳುವ ಸಂದರ್ಭ ಬಂದರೂ ಬರಬಹುದಾಗಿದೆ.
***
ಗುರುಮಠಕಲ್: ನಿರ್ವಹಣೆಯ ಕೊರತೆ

ಗುರುಮಠಕಲ್: ಪಟ್ಟಣದ ಸುಸಜ್ಜಿತ ಬಸ್ ನಿಲ್ದಾಣದ ಸ್ವಚ್ಛತೆಯ ನಿರ್ವಹಣೆ ಕೊರತೆಯಿಂದ ಬಳಲುತ್ತಿದೆ. ನಿಲ್ದಾಣದ ಆವರಣದ ಕಸ ಗುಡಿಸಿದ ನಂತರ ಕಸವನ್ನು ತಡೆಗೋಡೆಯತ್ತ ಎಸೆದು ಬಿಡುವುದರಿಂದ ಕಸ ಜಮಾವಣೆಗೊಂಡು ತಿಪ್ಪೆಗುಂಡಿಯಂತಾಗಿದೆ.

ಕಸ ಜಮಾವಣೆಯ ಜೊತೆಗೆ ಮುಳ್ಳಿನ ಪೊದೆ ಬೆಳೆದಿದ್ದರಿಂದ ಕೆಲ ಪ್ರಯಾಣಿಕರು ತಡೆಗೋಡೆಯನ್ನು ಮೂತ್ರ ವಿಸರ್ಜನೆಗೆ ಬಳಕೆ ಮಾಡುತ್ತಿರುವುದರಿಂದ ದುರ್ವಾಸನೆಯೂ ಹೆಚ್ಚುತ್ತಿದೆ ಎಂದು ಪ್ರಯಾಣಿಕರೊಬ್ಬರು ದೂರಿದರು.

‘ಇನ್ನು ಬಸ್ ನಿಲ್ದಾಣ ಕಟ್ಟಡವು ಸುಸಜ್ಜಿತವಾಗಿದೆ. ಆದರೆ, ಮೊದಲ ಅಂತಸ್ತು ಸಂಪೂರ್ಣ ಖಾಲಿಯಾಗಿದ್ದು, ಬಳಕೆಯೇ ಮಾಡದ ಕಾರಣ ಧೂಳು ತುಂಬಿದೆ. ಬಸ್ ನಿಲ್ದಾಣದ ಮುಂಭಾಗದ ಸ್ಥಳದಲ್ಲಿದ್ದ ಮಿನಿ ಉದ್ಯಾನವನ್ನು ಈಗ ವ್ಯಾಪಾರಿ ಮಳಿಗೆಯಾಗಿ ಮಾಡುತ್ತಿದ್ದಾರೆ. ಇರುವ ಅಂಗಡಿಗಳೇ ಬಳಕೆ ಮಾಡದೆ ಹೊಸ ಕಟ್ಟಡ ಕಟ್ಟುವ ಅವಶ್ಯಕತೆ ಏನಿತ್ತು’ ಎಂ‍ದು ನಿವೃತ್ತ ಶಿಕ್ಷಕರೊಬ್ಬರು ವ್ಯಂಗ್ಯವಾಡಿದರು.

ಮೇಲಿನ ಕೋಣೆಗಳನ್ನು ಧೂಳುತಿನ್ನಲು ಬಿಡುವ ಬದಲು ಓದುವುದನ್ನು ಪ್ರೇರೇಪಿಸಲು ಗ್ರಂಥಾಲಯದ ವ್ಯವಸ್ಥೆ ಮಾಡಿದರೆ ಎಲ್ಲರಿಗೂ ಉಪಯೋಗವಾಗುತ್ತದೆ. ಆದರೆ, ಅಂಥ ಯಾವ ಪ್ರಯತ್ನಗಳೂ ಸಂಬಂಧಿತರು ಮಾಡುತ್ತಿಲ್ಲ ಎನ್ನುವುದು ಪದವಿ ವಿದ್ಯಾರ್ಥಿಯೊಬ್ಬರ ಮಾತು.

‘ಕಸಗುಡಿಸುವುದರ ಕುರಿತು ಶೌಚಾಲಯಗಳ ನಿರ್ವಹಣೆಯ ಟೆಂಡರ್‌ನಲ್ಲಿಯೇ ಒಂದು ಭಾಗ, ಮುಳ್ಳಿನ ಪೊದೆಗಳು ಅಥಬಾ ಕಳೆ ಬೆಳೆದಿದ್ದೂ ಈ ರೀತಿಯ ಸಮಸ್ಯೆಗಳ ನಿರ್ವಹಣೆಯನ್ನು ನಮ್ಮ ಎಂಜಿನಿಯರಿಂಗ್ ವಿಭಾಗದವರು ನೋಡಿಕೊಳ್ಳುತ್ತಾರೆ. ಗ್ರಂಥಾಲಯಕ್ಕಾಗಿ ಸ್ಥಳಾವಕಾಶ ಅಥವಾ ಕೊಠಡಿಗಳ ಬೇಡಿಕೆ ಸಲ್ಲಿಸಿದರೆ ಕೇಂದ್ರ ಕಚೇರಿಯಿಂದ ಅನುಮತಿ ಪಡೆದು ನೀಡುತ್ತೇವೆ’ ಎಂದು ಈಶಾನ್ಯ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಯ ವಿಭಾಗೀಯ ಸಂಚಾಲನಾಧಿಕಾರಿ ರಮೇಶ ಪಾಟೀಲ್ ತಿಳಿಸಿದರು.

***

ಪೂರಕ ವರದಿ: ಟಿ.ನಾಗೇಂದ್ರ, ಅಶೋಕ ಸಾಲವಾಡಗಿ, ಭೀಮಶೇನರಾವ ಕುಲಕರ್ಣಿ, ಎಂ.ಪಿ.ಚಪೆಟ್ಲಾ, ಪವನ ಕುಲಕರ್ಣಿ
 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು