ಶನಿವಾರ, ಡಿಸೆಂಬರ್ 3, 2022
20 °C
; ಕಾರ್ಯಕರ್ತರಿಗೆ ರವಿಕುಮಾರ ಸಲಹೆ

ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಸಭೆ: ಸರ್ಕಾರದ ಯೋಜನೆಗಳ ಜಾಗೃತಿ ಮೂಡಿಸಲು ಕರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ಜಿಲ್ಲೆಯ 4 ಮತಕ್ಷೇತ್ರಗಳಲ್ಲಿ ಮುಂದಿನ ಚುನಾವಣೆಯಲ್ಲಿ ಕಮಲ ಅರಳಿಸಿ ಅಭಿವೃದ್ಧಿಗೆ ನಾಂದಿ ಹಾಡಬೇಕು ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ ಕಾರ್ಯಕರ್ತರಿಗೆ ಕರೆ ನೀಡಿದರು.

ನಗರದ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಭಾನುವಾರ ಆಯೋಜಿಸಿದ್ದ ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಬದಲಾವಣೆಯಾಗಿದ್ದು, ಅಭಿವೃದ್ಧಿ ಕಾಣುತ್ತಿದೆ. ಇದಕ್ಕೆ ಮತ್ತಷ್ಟು ವೇಗ ಸಿಗಲು ಬಿಜೆಪಿಯನ್ನು ಬೆಂಬಲಿಸಬೇಕು. ಕೇಂದ್ರ, ರಾಜ್ಯ ಸರ್ಕಾರದ ಯೋಜನೆಗಳನ್ನು ಜನರಿಗೆ ತಿಳಿಸಬೇಕು. ನಾಡಪ್ರಭು ಕೆಂಪೇಗೌಡರ ಪ್ರಗತಿ ಪ್ರತಿಮೆ ಅನಾವರಣ ಕಾರ್ಯಕ್ರಮ ಯಶಸ್ವಿಯಾಗಿದ್ದರಿಂದ ವಿರೋಧ ಪಕ್ಷಗಳು ಟೀಕೆ ಮಾಡುತ್ತಿವೆ. ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಮೀಸಲಾತಿ ಹೆಚ್ಚಿಸಿ ನಮ್ಮ ಸರ್ಕಾರ ಬದ್ಧತೆ ಮೆರೆದಿದೆ
ಎಂದರು.

ಕೋವಿಡ್‌ ನಂತರ ಜಿಲ್ಲಾ, ತಾಲ್ಲೂಕು ಆಸ್ಪತ್ರೆಗಳಲ್ಲಿ ಅಮೂಲಾಗ್ರ ಬದಲಾವಣೆ ಆಗಿದೆ. ಅನೇಕ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ದೇಶ ಮೊದಲು, ಪಕ್ಷ ನಂತರ ಆಮೇಲೆ ಕಾರ್ಯಕರ್ತ ಎಂಬ ಸಿದ್ಧಾಂತ ಬಿಜೆಪಿಯದ್ದು. ನಾವು ಮೊದಲು ದೇಶದ ಅಭಿವೃದ್ಧಿಯ ಬಗ್ಗೆ ಚಿಂತನೆ ಮಾಡುತ್ತೇವೆ ಎಂದರು.

ಆರ್ಥಿಕವಾಗಿ ಹಿಂದುಳಿದ ಮೇಲ್ಜಾತಿಯವರಿಗೂ ಕೇಂದ್ರ ಸರ್ಕಾರ ಶೇ 10 ರಷ್ಟು ಮೀಸಲಾತಿ ಕಲ್ಪಿಸುವ ಮೂಲಕ ಎಲ್ಲ ಸಮುದಾಯವನ್ನು ಸಾಮಾಜಿಕ ನ್ಯಾಯದ ದೃಷ್ಟಿಯಿಂದ ನೋಡುತ್ತಿದೆ. ಗ್ರಾಮೀಣ ಭಾಗದಲ್ಲಿನ ಎಲ್ಲ ಮನೆಗಳಿಗೆ ಶುದ್ಧ ಕುಡಿಯುವ ನೀರು, ರಸ್ತೆ ಹಾಗೂ ಮೂಲಸೌಲಭ್ಯ ಒದಗಿಸುವ ಕೆಲಸ ಪ್ರಧಾನಿ ಮಾಡುತ್ತಿದ್ದಾರೆ ಎಂದು
ಹೇಳಿದರು.

ಜಿಲ್ಲಾಧ್ಯಕ್ಷ ಡಾ.ಶರಭೂಪಾಲರಡ್ಡಿ ನಾಯ್ಕಲ್ ಪ್ರಾಸ್ತಾವಿಕ ಮಾತನಾಡಿದರು.

ಶಾಸಕ ವೆಂಕಟರಡ್ಡಿ ಮುದ್ನಾಳ, ಮಾಜಿ ಶಾಸಕರಾದ ಡಾ.ವೀರಬಸವಂತರಡ್ಡಿ ಮುದ್ನಾಳ, ಗುರು ಪಾಟೀಲ ಶಿರವಾಳ, ಜಿಲ್ಲಾ ಪ್ರಭಾರಿ ಅಮರನಾಥ್ ಪಾಟೀಲ, ಕರ್ನಾಟಕ ಅಲೆಮಾರಿ, ಅರೆಅಲೆಮಾರಿ ಅಭಿವೃದ್ಧಿ ನಿಗಮ ಅಧ್ಯಕ್ಷ ದೇವೇಂದ್ರನಾಥ ಕೆ.ನಾದ್‌, ಚಂದ್ರಶೇಖರಗೌಡ ಮಾಗನೂರ, ನಾಗರತ್ನ ಕುಪ್ಪಿ, ಅಮೀನರಡ್ಡಿ ಯಾಳಗಿ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಸುರೇಶ ಸಜ್ಜನ್, ಎಚ್.ಸಿ.ಪಾಟೀಲ, ವೀಣಾ ಮೋದಿ, ಪ್ರಭಾವತಿ ಕಲಾಲ್ ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರು ಇದ್ದರು.

ಪ್ರಧಾನ ಕಾರ್ಯದರ್ಶಿ ವೆಂಕಟರಡ್ಡಿ ಅಬ್ಬೆತುಮಕೂರು ನಿರೂಪಿಸಿದರು. ಗುರು ಕಾಮಾ ಸ್ವಾಗತಿಸಿದರು.

***

‘ಶಾಸಕ ಪ್ರಿಯಾಂಕ್‌ ಖರ್ಗೆ ಧಮ್ಕಿಯ ಮಾತು‘

ವಿಧಾನ ಪರಿಷತ್‌ ಸದಸ್ಯ ಬಾಬುರಾವ ಚಿಂಚನಸೂರ ಮಾತನಾಡಿ, ಬಿಜೆಪಿಯವರು ಮುಂದಿನ ದಿನಗಳಲ್ಲಿ ಓಡಾಡಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಲಿದೆ ಎಂಬ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಹೇಳಿಕೆ ಪ್ರಜಾಪ್ರಭುತ್ವ ವ್ಯವಸ್ಥೆಗೆ ಕುಂದುಂಟು ಮಾಡುವಂತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿಯವರಿಗೆ ಶಾಸಕ ಪ್ರಿಯಾಂಕ್‌ ಖರ್ಗೆ ಧಮ್ಕಿಯ ಮಾತನಾಡಿದ್ದಾರೆ. ಶಾಸಕರಾಗಿ ಧಮ್ಕಿ ಮಾತು ಆಡಬಾರದಿತ್ತು. ಧಮ್ಕಿ ಮಾತನಾಡಿದ್ದು ಆತನ ಸಂಸ್ಕೃತಿ ತಿಳಿಸುತ್ತದೆ. ಧಮ್ಕಿ ಮಾತಿಗೆ ಯಾರು ಬಗ್ಗುವದಿಲ್ಲ ಎಂದರು.

ಸೂರ್ಯ-ಚಂದ್ರ ಹುಟ್ಟುವುದು ಎಷ್ಟು ಸತ್ಯವೋ ಮುಂದಿನ ಚುನಾವಣೆಯಲ್ಲಿ ಪ್ರಿಯಾಂಕ್‌ ಖರ್ಗೆ ಸೋಲುವುದು ಖಚಿತ. ಅವರ ತಂದೆಗೆ ಯಾವ ರೀತಿ ಸೋಲಿಸಿದ್ದೇವೆ.

ಅದೇ ರೀತಿ ಪ್ರಿಯಾಂಕ್‌ಗೆ ಸೋಲಿಸುತ್ತೇವೆ. ಮಾನಸಿಕ ಸ್ಥಿಮಿತ ಕಳೆದುಕೊಂಡು ಇಂತಹ ಹೇಳಿಕೆ ನೀಡುತ್ತಿದ್ದಾರೆ. ಶಾಸಕ ಪ್ರಿಯಾಂಕ್ ಖರ್ಗೆ ಹೆದರಿಕೆ ಮಾತಿಗೆ ಬಗ್ಗಲ್ಲ ಎಂದು ಗುಡುಗಿದರು.

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು