ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುರಪುರ | ಬಾದ್ಯಾಪುರದಲ್ಲಿ ಮತದಾನದ ವೇಳೆ ಘರ್ಷಣೆ: ವ್ಯಕ್ತಿಗೆ ಗಾಯ

Published 7 ಮೇ 2024, 16:29 IST
Last Updated 7 ಮೇ 2024, 16:29 IST
ಅಕ್ಷರ ಗಾತ್ರ

ಸುರಪುರ: ತಾಲ್ಲೂಕಿನ ಬಾದ್ಯಾಪುರ ಗ್ರಾಮದಲ್ಲಿ ಮಂಗಳವಾರ ಮತದಾನದ ವಿಚಾರವಾಗಿ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ಮಧ್ಯೆ ಘರ್ಷಣೆ ನಡೆದಿದ್ದು, ಬಿಜೆಪಿ ಕಾರ್ಯಕರ್ತ ಭೀಮಣ್ಣ ಮಲ್ಲಪ್ಪ ಬ್ಯಾಳಿ ಎಂಬುವವರು ಗಾಯಗೊಂಡಿದ್ದಾರೆ.

ಘಟನೆ ವಿವರ:
ಗುಳೆ ಕಾರ್ಮಿಕರನ್ನು ಎರಡೂ ಪಕ್ಷದವರು ತಲಾ ಮೂರು ಬಸ್‍ಗಳಲ್ಲಿ ಕರೆ ತಂದಿದ್ದರು. ಮೊದಲು ಬಿಜೆಪಿ ಪಕ್ಷದವರು ಕರೆ ತಂದ ಗುಳೆ ಕಾರ್ಮಿಕರು ಮತದಾನ ಮಾಡಿದರು. ನಂತರ ಕಾಂಗ್ರೆಸ್ ಕಾರ್ಯಕರ್ತರು ಕರೆ ತಂದಿದ್ದ ಕಾರ್ಮಿಕರು ಮತದಾನ ಮಾಡಲು ಬಂದ ಸಂದರ್ಭದಲ್ಲಿಯೇ ಬಿಜೆಪಿ ಕಾರ್ಯಕರ್ತರು ಬಂದರು. ಇದಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಅಡ್ಡಿಪಡಿಸಿದಾಗ ಇದರಲ್ಲಿ ನಮ್ಮ ನೆಂಟರು ಇದ್ದಾರೆ. ಭೇಟಿ ಆಗುತ್ತೇವೆ ಎಂದರು. ಮತದಾನ ಮಾಡಿದ ಮೇಲೆ ಭೇಟಿ ಆಗಿ ಎಂದು ಕಾಂಗ್ರೆಸ್ ಕಾರ್ಯಕರ್ತರು ತಡೆದರು.

ಇದೇ ವಿಷಯಕ್ಕೆ ಮಾತಿಗೆ ಮಾತು ಬೆಳೆದು ಕಲ್ಲು ತೂರಾಟ ನಡೆಯಿತು. ಗಂಭೀರ ಗಾಯಗೊಂಡ ಭೀಮಣ್ಣ ಬ್ಯಾಳಿ ಅವರನ್ನು ಸುರಪುರ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಯಾದಗಿರಿ ಜಿಲ್ಲಾಸ್ಪತ್ರೆಗೆ ಕಳಿಸಲಾಗಿದೆ.

ಸುರಪುರ ನಗರದಿಂದ ಬಾದ್ಯಾಪುರವು 8 ಕಿಮೀ. ದೂರವಿದ್ದು, ಸ್ಥಳಕ್ಕೆ ಬಂದ ಪೊಲೀಸರು ಪರಿಸ್ಥಿತಿ ನಿಯಂತ್ರಿಸಿದ್ದಾರೆ.

ಗುಳೆ ಕಾರ್ಮಿಕರ ಮತದಾರರು ಮತದಾನ ಮಾಡಲು ತೆರಳುವ ಸಂದರ್ಭದಲ್ಲಿ ಇನ್ನೊಂದು ಗುಂಪು ತಡೆದ ಪರಿಣಾಮ ಘಟನೆ ನಡೆದಿದೆ ಎಂದು ತಿಳಿಸಿರುವ ಪೊಲೀಸ್ ಇನ್‍ಸ್ಪೆಕ್ಟರ್ ಆನಂದ ವಾಗ್ಮೋಡೆ ಗ್ರಾಮದಲ್ಲಿ ಬೀಡು ಬಿಟ್ಟಿದ್ದಾರೆ. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂಗೀತಾ ಭೇಟಿ ನೀಡಿದ್ದರು.

ಘಟನೆ ಮತಗಟ್ಟೆಯಿಂದ ದೂರದಲ್ಲಿ ನಡೆದಿದ್ದು, ಮತದಾನಕ್ಕೆ ಯಾವುದೇ ತೊಂದರೆಯಾಗಿಲ್ಲ ಎಂದು ಚುನಾವಣಾಧಿಕಾರಿ ಕಾವ್ಯಾರಾಣಿ ತಿಳಿಸಿದರು.

ಸುರಪುರ ತಾಲ್ಲೂಕಿನ ಬಾದ್ಯಾಪುರ ಗ್ರಾಮದಲ್ಲಿ ಮಂಗಳವಾರ ಮತದಾನ ಸಂಬಂಧ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ಮಧ್ಯ ಗಲಾಟೆ ನಡೆಯಿತು
ಸುರಪುರ ತಾಲ್ಲೂಕಿನ ಬಾದ್ಯಾಪುರ ಗ್ರಾಮದಲ್ಲಿ ಮಂಗಳವಾರ ಮತದಾನ ಸಂಬಂಧ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ಮಧ್ಯ ಗಲಾಟೆ ನಡೆಯಿತು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT