ಭಾನುವಾರ, ಜನವರಿ 24, 2021
17 °C
₹560 ಕೋಟಿ ವೆಚ್ಚದ ವಿವಿಧ ಕಾಮಗಾರಿಗೆ ಚಾಲನೆ ನೀಡಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ

ಯಾದಗಿರಿ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಬದ್ಧ: ಬಿಎಸ್‌ವೈ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ‘ಕಲ್ಯಾಣ ಕರ್ನಾಟಕದ ಆರು ಜಿಲ್ಲೆಗಳಲ್ಲಿ ಯಾದಗಿರಿ ಅತ್ಯಂತ ಹಿಂದುಳಿದ ಜಿಲ್ಲೆಯಾಗಿದೆ. ಹೀಗಾಗಿ ಇದರ ಸರ್ವಾಂಗೀಣ ಅಭಿವೃದ್ಧಿಗೆ ಬದ್ಧವಿರುವುದಾಗಿ’ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.

ನಗರ ಹೊರವಲಯದ ಮುದ್ನಾಳ ಗ್ರಾಮದ ನೂತನ ಜಿಲ್ಲಾಸ್ಪತ್ರೆ ಬಳಿ ಬುಧವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ₹455.84 ಕೋಟಿ ವೆಚ್ಚದ 11 ಕಾಮಗಾರಿಗಳಿಗೆ ಶಂಕುಸ್ಥಾಪನೆ ಹಾಗೂ ₹105.89 ಕೋಟಿ ವೆಚ್ಚದ 9 ವಿವಿಧ ಕಾಮಗಾರಿಗಳು ಸೇರಿದಂತೆ ₹560.66 ಕೋಟಿ ವೆಚ್ಚದ ಅಭಿವೃದ್ಧಿ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು.

ರಾಜ್ಯದ ಎರಡನೇ ಚಿಕ್ಕ ಜಿಲ್ಲೆ ಯಾದಗಿರಿ. ಶ್ರೀಮಂತ ಐತಿಹಾಸಿಕ ಸಾಂಸ್ಕೃತಿಕ ಪರಂಪರೆಯನ್ನು ಹೊಂದಿದೆ. ₹438 ಕೋಟಿ ವೆಚ್ಚದಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆಯಾಗಲಿದೆ. ಇದರಲ್ಲಿ ₹195 ಕೋಟಿ ಕೇಂದ್ರದಿಂದ ಹಾಗೂ ಉಳಿದ ಅನುದಾನ ರಾಜ್ಯದಿಂದ ಒದಗಿಸಲಾಗುತ್ತದೆ. ವೈದ್ಯಕೀಯ ಕಾಲೇಜು ಕಟ್ಟಡ ಕಾಮಗಾರಿ ಶೀಘ್ರ ಮುಗಿಸಲು ಪ್ರಯತ್ನಿಸುತ್ತೇನೆ. ಕಾಲೇಜು ಸ್ಥಾಪನೆಯಿಂದ ಜಿಲ್ಲೆ ಮತ್ತು ನೆರೆ ಜಿಲ್ಲೆಯ ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡಲು ಸಾಧ್ಯವಾಗುತ್ತದೆ. ಈಗಾಗಲೇ 300 ಹಾಸಿಗೆ ಆಸ್ಪತ್ರೆ ನಿರ್ಮಾಣವಾಗಿ ಉದ್ಘಾಟನೆಯಾಗಿದೆ. ಆಸ್ಪತ್ರೆಗೆ ಬೇಕಾಗುವ ಅಗತ್ಯ ಸಲಕರಣೆ ಹಾಗೂ ಮೂಲಭೂತ ಸೌಲಭ್ಯ ಒದಗಿಸಲಾಗಿದೆ ಎಂದರು.

ಆರೋಗ್ಯ ಕ್ಷೇತ್ರ ಸರ್ಕಾರದ ಆದ್ಯತೆಯಲ್ಲಿದೆ. ಪ್ರತಿಯೊಬ್ಬರಿಗೂ ಆರೋಗ್ಯ ಸೇವೆ ಕಲ್ಪಿಸುವುದು ನಮ್ಮ ಉದ್ದೇಶವಾಗಿದೆ. ಸಕಲ ಸೌಕರ್ಯ ಒಳಗೊಂಡಿರುವ ನೂತನ ಜಿಲ್ಲಾಸ್ಪತ್ರೆ ನಿರ್ಮಾಣ ಹಾಗೂ ಯಾದಗಿರಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಆರಂಭವಾಗುವುದರಿಂದ ಈ ಭಾಗದ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆ ಲಭಿಸಲಿದೆ ಎಂಬ ಆಶಾಭಾವನೆ ವ್ಯಕ್ತಪಡಿಸಿದರು.

ಎಂಬಿಬಿಎಸ್ ಪದವೀಧರರಿಗೆ ಕಡ್ಡಾಯವಾಗಿ ಗ್ರಾಮೀಣ ಪ್ರದೇಶದಲ್ಲಿ ಸೇವೆ ಸಲ್ಲಿಸುವುದಕ್ಕೆ ಆದೇಶಿಸಿರುವುದರಿಂದ ಗ್ರಾಮೀಣ ಪ್ರದೇಶದಲ್ಲಿ ಆರೋಗ್ಯ ಸೇವೆ ಲಭ್ಯವಾಗುತ್ತಿದೆ ಎಂದರು. ₹560.66 ಕೋಟಿ ವೆಚ್ಚದ ಅಭಿವೃದ್ಧಿ ಕೆಲಸಗಳಿಗೆ ಸಂತೋಷದಿಂದ ಚಾಲನೆ ನೀಡಿದ್ದೇನೆ ಎಂದರು.

ಯಾದಗಿರಿ ಶಾಸಕ ವೆಂಕಟರೆಡ್ಡಿ ಮುದ್ನಾಳ ಹಾಗೂ ಸಂಸದ ರಾಜಾ ಅಮರೇಶ್ವರ ನಾಯಕ ಅವರ ಬೇಡಿಕೆಗಳನ್ನು ಈಡೇರಿಸಲು ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರು.

ಈ ವೇಳೆ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್, ಯಾದಗಿರಿ ಶಾಸಕ ವೆಂಕಟರೆಡ್ಡಿಗೌಡ ಮುದ್ನಾಳ, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷ ಹಾಗೂ ಶಾಸಕ ನರಸಿಂಹ ನಾಯಕ (ರಾಜೂಗೌಡ), ಸಂಸದ ರಾಜಾ ಅಮರೇಶ್ವರ ನಾಯಕ, ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಾಬುರಾವ ಚಿಂಚನಸೂರು, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಸನಗೌಡ ಯಡಿಯಾಪುರ, ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿಲ್ಪಾಶರ್ಮಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಷ್ ಭಗವಾನ್ ಸೋನವಣೆ ಇದ್ದರು.

ಮುದ್ನಾಳ-ಚಿಂಚನಸೂರ್‌ಗೆ ಜೈಕಾರ: ವೇದಿಕೆಯ ಮೇಲೆ ಯಾದಗಿರಿಯ ಶಾಸಕ ವೆಂಕಟರೆಡ್ಡಿಗೌಡ ಮುದ್ನಾಳ ಅವರ ಹೆಸರು ಹಾಗೂ ಮಾಜಿ ಸಚಿವ ಬಾಬುರಾವ್ ಚಿಂಚನಸೂರ ಅವರ ಹೇಳುತ್ತಿದ್ದಂತೆ ಜನರು ಜೈಕಾರ ಕೂಗಿದರು. ಚಪ್ಪಾಳೆ ತಟ್ಟಿ ತಮ್ಮ ನಾಯಕರಿಗೆ ಜೈಕಾರ ಹಾಕುತ್ತಿದ್ದರು.

ಊಟದ ವ್ಯವಸ್ಥೆ: ಸಾರ್ವಜನಿಕರಿಗಾಗಿ ವೇದಿಕೆಯ ಪಕ್ಕದಲ್ಲಿ ಊಟದ ವ್ಯವಸ್ಥೆ ಮಾಡಲಾಗಿತ್ತು. ಕಾರ್ಯಕ್ರಮ ಆರಂಭಕ್ಕೂ ಮೊದಲಿನಿಂದಲೇ ಊಟ ಮಾಡಲು ಅವಕಾಶ ಕಲ್ಪಿಸಲಾಗಿತ್ತು. ಉತ್ತರ ಕರ್ನಾಟಕದ ಸಿಹಿ ಊಟ ಗೋಧಿ ಹುಗ್ಗಿ, ಪೂರಿ, ಭಜ್ಜಿ, ರೈಸ್, ಆಲೂಗಡ್ಡೆ ತರಕಾರಿ, ಮಜ್ಜಿಗೆ, ಮೊಸರು ಹಾಗೂ ಬೇಳೆಸಾರಿನ ಊಟ ತಯಾರಿಸಲಾಗಿತ್ತು. ಸುಮಾರು ಹದಿನೈದು ಕೌಂಟರ್‌ಗಳ ಮೂಲಕ ಜನರಿಗೆ ಊಟ ಬಡಿಸಲಾಯಿತು.

ಊಟದ ಕೌಂಟರ್‌ನಲ್ಲಿ ಊಟಕ್ಕೆ ತಾಮುಂದು ನಾಮುಂದು ಎಂದು ಜನ ಮುಗಿಬಿದ್ದಿದ್ದರು. ಸಾವಿರಾರು ಜನರಿಗೆ ಊಟದ ವ್ಯವಸ್ಥೆ ಕಲ್ಪಿಸಲಾಗಿತ್ತು.

ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಲೋಟ: ಊಟದ ನಂತರ ಜನ ನೀರು ಕುಡಿಯಲು ಬಳಸಿದ ಪ್ಲಾಸ್ಟಿಕ್ ಲೋಟಗಳನ್ನು ಕಸದ ಡಬ್ಬಿಗಳಿಗೆ ಎಸೆಯದೆ ಎಲ್ಲೆಂದರಲ್ಲಿ ಎಸೆದಿದ್ದು, ವೇದಿಕೆಯ ಹಿಂಭಾಗದ ಬಹುತೇಕ ಪರಿಸರದಲ್ಲಿ ಪ್ಲಾಸ್ಟಿಕ್ ಲೋಟಗಳು ಗಾಳಿಗೆ ಚದುರಿದ್ದು ಕಂಡು ಬಂತು.

ಭಾಷಣದ ಮಧ್ಯೆ ಹೊರ ನಡೆದ ಜನ
ತರಾತುರಿಯಲ್ಲಿ ಭಾಷಣ ಮುಗಿಸಲು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮುಂದಾಗುತ್ತಿದ್ದಂತೆ ಕಾರ್ಯಕ್ರಮಕ್ಕೆ ಬಂದಿದ್ದ ಸಾರ್ವಜನಿಕರು ಸಿಎಂ ಭಾಷಣದ ಮಧ್ಯೆ ಜನರು ಎದ್ದು ಹೊರಟರು. ಇದರಿಂದ ಕೆಲ ಕಾಲ ಗದ್ದಲ ಉಂಟಾಗಿತ್ತು.

ಸಂಜೆ 4.35 ನಿಮಿಷಕ್ಕೆ ಭಾಷಣಕ್ಕೆ ಆಗಮಿಸಿ ಸಿಎಂ 5 ಗಂಟೆಗೆ ಇಲ್ಲಿಂದ ಹೊರಡಬೇಕಿದೆ. ಹೀಗಾಗಿ ಯಾರೂ ತಪ್ಪು ತಿಳಿಯಬಾರದು. 5 ಗಂಟೆಗೆ ಹೆಲಿಕ್ಯಾಪ್ಟರ್‌ ಇದೆ. ಸಮಯಕ್ಕೆ ಸರಿಯಾಗಿ ತೆರಳದಿದ್ದರೆ ಬೆಂಗಳೂರು ತಲುಪಲು ಆಗುವುದಿಲ್ಲ. ಅವಸರವಾಗಿ ಹೋಗಬೇಕಾಗಿದೆ ಎಂದರು.

ಒಂದು ಗಂಟೆಯಲ್ಲಿ ಉದ್ಘಾಟನಾ ಕಾರ್ಯಕ್ರಮ ಮುಗಿದು ಹೋಯಿತು. ಮುಖ್ಯಮಂತ್ರಿಯಿಂದ ಜಿಲ್ಲೆಗೆ ಯಾವುದಾದರೂ ಕೊಡುಗೆ ಕೊಡುತ್ತಾರೆ ಎನ್ನುವ ಆಶಾ ಭಾವನೆಯಿಂದ ಬಂದಿದ್ದ ಸಾರ್ವಜನಿಕರಿಗೆ ತೀವ್ರ ನಿರಾಶೆ ಉಂಟಾಯಿತು.

ವಿವಿಧ ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಿದರೂ ಯಾವ ಇಲಾಖೆಯ ಕಾಮಗಾರಿ ಎಂದು ಸಾರ್ವಜನಿಕರಿಗೆ ತಿಳಿದು ಬರಲಿಲ್ಲ. ಅದ್ಧೂರಿ ವೆಚ್ಚಕ್ಕೆ ಮಾತ್ರ ಸೀಮಿತವಾಗಿದ್ದು ಕಂಡು ಬಂತು.

ಸರ್ಕಾರಿ ಕಾರ್ಯಕ್ರಮವಾದರೂ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಶರಣಭೂಪಾಲರೆಡ್ಡಿ ವೇದಿಕೆಯಲ್ಲಿ ಆಸೀನರಾಗಿದ್ದರು. ಜಿಲ್ಲಾಧಿಕಾರಿ ಹಾಗೂ ಸಿಒಇ ಅವರು ಕೊನೆ ಆಸನದಲ್ಲಿ ಕುಳಿತುಕೊಂಡಿದ್ದರು.

ಹೆದ್ದಾರಿಯಲ್ಲಿ ಟ್ರಾಫಿಕ್‌ ಜಾಂ
ನಗರ ಹೊರ ವಲಯದಲ್ಲಿನ ಹೊಸ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ನೂರಾರು ವಾಹನಗಳು ಬಂದಿದ್ದರಿಂದ ಪದವಿ ಮಹಾವಿದ್ಯಾಲಯದಿಂದ ಕಾರ್ಯಕ್ರಮ ನಡೆಯುವ ಸ್ಥಳದವರೆಗೆ ಟ್ರಾಫಿಕ್‌ ಜಾಂ ಉಂಟಾಗಿತ್ತು.

ವಾಹನಗಳು ಮುಖಾಮುಖಾಯಾಗಿ ಬಂದಿದ್ದರಿಂದ ಹೆಚ್ಚಿನ ವಾಹನಗಳು ರಸ್ತೆಯಲ್ಲಿ ನಿಂತಿಕೊಂಡಿದ್ದವು. ಬೈಕ್‌ ಸವಾರರು ಟ್ರಾಫಿಕ್‌ ಮಧ್ಯೆ ಸಂಚರಿಸಲು ಹರಸಾಹಸಪಟ್ಟರು.

ಎಲ್ಲಿ ನೋಡಿದರೂ ಜನಸ್ತೋಮ
ಪೆಂಡಾಲ್ ಒಳಗಡೆ ಆಸನ ವ್ಯವಸ್ಥೆ ಕಲ್ಪಿಸಿದ್ದರೂ ಒಳಗೆ ಸ್ಥಳಾವಕಾಶವಿಲ್ಲದೆ ಪೆಂಡಾಲಿನ ಹೊರ ಭಾಗದಲ್ಲಿ ಜನರು ನಿಂತುಕೊಂಡೇ ಕಾರ್ಯಕ್ರಮ ವೀಕ್ಷಿಸಿದರು. ಬಿ.ಎಸ್.ಯಡಿಯೂರಪ್ಪ ಅವರು ವೇದಿಕೆಗೆ ಬರುತ್ತಿದ್ದಂತೆ ಜನರು ಹೆಚ್ಚು ಜಮಾಯಿಸಿದ್ದರು. ಪೆಂಡಾಲ್ ಹೊರಗಡೆ ನಿಂತುಕೊಂಡಿದ್ದರು.

ಕಾರ್ಯಕ್ರಮ ನಡೆದ ಜಿಲ್ಲಾಸ್ಪತ್ರೆ ಆವರಣದ ಅಕ್ಕಪಕ್ಕದಲ್ಲಿ ಎಲ್ಲಿ ನೋಡಿದರೂ ಜನ ಕಾಣಿಸುತ್ತಿದ್ದರು. ಆಟೊ, ಟಂಟಂ, ಕ್ರೂಸರ್, ಬಸ್‌, ಬೈಕ್‌, ಕಾರುಗಳಲ್ಲಿ ಜನ ಆಗಮಿಸಿದ್ದರು. ಇದರಿಂದ ಕಾರ್ಯಕ್ರಮಕ್ಕೆ ತೆರಳುವಾಗ ಹಿಂತಿರುವಾಗಲೂ ಟ್ರಾಫಿಕ್‌ ಜಾಂ ಉಂಟಾಗಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು