ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಷರತ್ತಿಗೊಳಪಟ್ಟು ಲಾಕ್‍ಡೌನ್ ಸಡಿಲಿಕೆ

ನಿಷೇಧಿತ ಚಟುವಟಿಕೆ ಹೊರತುಪಡಿಸಿ ಎಲ್ಲಾ ಅಂಗಡಿ ತೆರೆಯಲು ಅನುಮತಿ
Last Updated 5 ಮೇ 2020, 10:05 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲೆ ಹಸಿರು ವಲಯವಾಗಿರುವುದರಿಂದ ಸರ್ಕಾರದ ಆದೇಶದಂತೆ ಮೇ 4ರ ಮಧ್ಯರಾತ್ರಿಯಿಂದ ಮೇ 17ರ ಮಧ್ಯರಾತ್ರಿಯವರೆಗೆ ಲಾಕ್‍ಡೌನ್ ಕ್ರಮಗಳಿಗೆ ಕೆಲವೊಂದು ಬದಲಾವಣೆ ತಂದು ನಿಷೇಧಿತ ಚಟುವಟಿಕೆ ಹೊರತುಪಡಿಸಿ, ಜಿಲ್ಲೆಯಲ್ಲಿ ಎಲ್ಲಾ ಅಂಗಡಿಗಳನ್ನು ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ಮಾತ್ರ ತೆರೆಯಲು ಅನುಮತಿ ನೀಡಿ ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್ ಅವರು ಆದೇಶ ಹೊರಡಿಸಿದ್ದಾರೆ.

ಮುಂಜಾಗ್ರತಾ ಕ್ರಮವಾಗಿ ನಿಗದಿಪಡಿಸಿದ ಸಮಯಗಳ ಬದಲಾವಣೆ ಮಾಡುವುದು ಅತ್ಯವಶ್ಯಕವೆಂದು ಕಂಡುಬಂದಿರುತ್ತದೆ. ಆದ್ದರಿಂದ ಸಾರ್ವಜನಿಕರು ಅನುಸರಣ ಕ್ರಮಗಳನ್ನು ಪಾಲಿಸುವಂತೆ ಆದೇಶಿಸಿದ್ದಾರೆ.

ಯಾವ ಅಂಗಡಿಗಳಿಗೆ ಅನುಮತಿ

ನಿಷೇಧಾಜ್ಞೆ ಅವಧಿಯಲ್ಲಿ ಜಿಲ್ಲೆಯಾದ್ಯಂತ ಮಧ್ಯಾಹ್ನ 3 ಗಂಟೆಯವರೆಗೆ ಮಾತ್ರ ದಿನಬಳಕೆಯ ದಿನಸಿ, ತರಕಾರಿ, ಹಾಲು, ಹಣ್ಣು, ಪೆಟ್ರೋಲ್ ಬಂಕ್‍ ಹಾಗೂ ಅತ್ಯವಶ್ಯಕ ಇನ್ನಿತರೆ ಅಂಗಡಿಗಳು ಮಾತ್ರ ತೆರೆದಿರುತ್ತವೆ.

ಕೃಷಿ ಹಾಗೂ ತೋಟಗಾರಿಕೆಗೆ ಸಂಬಂಧಿಸಿದ ಎಲ್ಲಾ ಚಟುವಟಿಕೆಗಳಿಗೆ ಬೇಕಾಗುವ ರಸಗೊಬ್ಬರ, ಕೀಟನಾಶಕ, ಬೀಜಗಳ ಉತ್ಪಾದನೆ ವಿತರಣೆ ಮತ್ತು ಚಿಲ್ಲರೆ ಅಂಗಡಿಗಳು, ಯಂತ್ರೋಪಕರಣಗಳ ಹಾಗೂ ಅದರ ಬಿಡಿಭಾಗಗಳ ಪೂರೈಕೆ ಮತ್ತು ರಿಪೇರಿ ಸೇರಿದಂತೆ ಅವಶ್ಯಕವಿರುವ ಅಂಗಡಿಗಳು ಜಿಲ್ಲೆಯಾದ್ಯಂತ ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ತೆರೆದಿರುತ್ತವೆ.

ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದ ಎಲ್ಲಾ ಚಟುವಟಿಕೆಗಳಿಗೆ ಬೇಕಾಗುವ ಸಿಮೆಂಟ್, ಕಬ್ಬಿಣ, ಹಾರ್ಡ್‍ವೇರ್ ಪ್ಲಂಬರಿಂಗ್ ಹಾಗೂ ಅದಕ್ಕೆ ಸಂಬಂಧಿಸಿದ ಇನ್ನಿತರೆ ವಸ್ತುಗಳ ಅಂಗಡಿಗಳಿಗೂ ಇದೇ ಸಮಯ ಅನ್ವಯ ಆಗಲಿದೆ.

ಮದ್ಯ ಮಾರಾಟ ಸನ್ನದುಗಳಾದ ಸಿಎಲ್-02 ಹಾಗೂ ಸಿಎಲ್-11 ಸಿ (ಎಂಎಸ್‌ಐಎಲ್ ಮದ್ಯ ಮಳಿಗೆಗಳು) ಜಿಲ್ಲೆಯಾದ್ಯಂತ ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ಸರ್ಕಾರವು ನೀಡಿರುವ ಮಾರ್ಗಸೂಚಿಗಳನ್ವಯ ಮಾತ್ರ ಕಾರ್ಯನಿರ್ವಹಿಸಲಿವೆ.

ಷರತ್ತುಗಳು:ಸಾರ್ವಜನಿಕ ಸ್ಥಳ/ಅಂಗಡಿಗಳಲ್ಲಿ ಮಾಸ್ಕ್, ಮುಖಗವಸು ಕಡ್ಡಾಯವಾಗಿ ಧರಿಸತಕ್ಕದ್ದು. ಸ್ಯಾನಿಟೈಸರ್ ಕಡ್ಡಾಯವಾಗಿ ಉಪಯೋಗಿಸತಕ್ಕದ್ದು. ಸಾರ್ವಜನಿಕ ಸ್ಥಳಗಳಲ್ಲಿ ಪಾನ್, ಗುಟ್ಕಾ, ತಂಬಾಕು ಇತ್ಯಾದಿಗಳನ್ನು ಸೇವಿಸಿ ಉಗುಳುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ.

ಕಂಟೈನ್ಮೆಂಟ್ ವಲಯಕ್ಕೆ ಸಂಬಂಧಿಸಿದಂತೆ ಪ್ರತ್ಯೇಕ ಕಟ್ಟುನಿಟ್ಟಿನ ನಿರ್ಬಂಧನೆಗಳು ಇರುವುದರಿಂದ, ಈ ಆದೇಶ ಅನ್ವಯಿಸುವುದಿಲ್ಲ. ಈ ಆದೇಶವು ಆಸ್ಪತ್ರೆ ಸೇವೆಗಳು, ಪಶು ಆಸ್ಪತ್ರೆಗಳು, ಔಷಧಿ ಅಂಗಡಿಗಳು ಇತ್ಯಾದಿ ತುರ್ತು ಸೇವೆಗಳಿಗೆ ಅನ್ವಯಿಸುವುದಿಲ್ಲ ಎಂದು ಆದೇಶದಲ್ಲಿ ತಿಳಿಸಿದ್ದಾರೆ.

41 ಜನರ ಬಂಧನ, 85 ಎಫ್‌ಐಆರ್

ಕೋವಿಡ್-19 ವೈರಾಣು ಇಡೀ ದೇಶಾದ್ಯಂತ ವ್ಯಾಪಕವಾಗಿ ಹರಡುತ್ತಿರುವುದರಿಂದ ಜಿಲ್ಲಾಡಳಿತದಿಂದ ಜಿಲ್ಲೆಯ ಗಡಿ ಭಾಗದಲ್ಲಿ ಒಟ್ಟು 16 ಚೆಕ್‌ಪೋಸ್ಟ್‌ಗಳನ್ನು ತೆರೆಯಲಾಗಿದೆ. ಲಾಕ್‍ಡೌನ್ ನಿಯಮ ಉಲ್ಲಂಘನೆ ಮಾಡಿದವರ ವಿರುದ್ಧ ಕ್ರಮ ಜರುಗಿಸಲಾಗುತ್ತಿದೆ. ಇಲ್ಲಿಯವರೆಗೆ ಒಟ್ಟು 1,283 ವಾಹನಗಳನ್ನು ಜಪ್ತಿ ಮಾಡಲಾಗಿದೆ. 41 ಜನರನ್ನು ಬಂಧಿಸಲಾಗಿದ್ದು, ಒಟ್ಟು 85 ಎಫ್‌ಐಆರ್ ದಾಖಲಾಗಿವೆ ಮತ್ತು ಇಲ್ಲಿಯವರೆಗೆ ₹14,87,800 ದಂಡ ವಿಧಿಸಲಾಗಿರುತ್ತದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.

***

ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಸರ್ಕಾರದ ಆದೇಶದಲ್ಲಿನ ಕೆಲವೊಂದು ಸಡಿಲಿಕೆ ನೀಡಿದಂತೆ ಬದಲಾವಣೆ ಮಾಡಿ ಆದೇಶಿಸಲಾಗಿದೆ

-ಎಂ.ಕೂರ್ಮಾರಾವ್‌, ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT