ಬುಧವಾರ, ಆಗಸ್ಟ್ 10, 2022
20 °C

ಪೆಟ್ರೋಲ್ ಬೆಲೆ ಏರಿಕೆಗೆ ಕಾಂಗ್ರೆಸ್ ಕಾರಣ: ಡಾ. ಶರಣಭೂಪಾಲರಡ್ಡಿ ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ಪ್ರಸ್ತುತ ರಾಷ್ಟ್ರದಲ್ಲಿ ತೈಲ ಬೆಲೆ ನೂರರ ಗಡಿ ದಾಟಿದ್ದು, ಇದಕ್ಕೆ ಸುದೀರ್ಘ 70 ವರ್ಷ ಆಳ್ವಿಕೆ ನಡೆಸಿದ ಕಾಂಗ್ರೆಸ್ ಪಕ್ಷವೇ ಕಾರಣ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಡಾ. ಶರಣಭೂಪಾಲರಡ್ಡಿ ದೂರಿದ್ದಾರೆ.

ಈ ಹಿಂದೆ ಕೇಂದ್ರದಲ್ಲಿ ಆಡಳಿತ ನಡೆಸಿದ ಯುಪಿಎ ಸರ್ಕಾರದ ಅವಧಿಯಲ್ಲಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ 100 ಡಾಲರ್‌ರೆಗೂ ಏರಿಕೆಯಾಗಿತ್ತು. ಆಗ ಅದನ್ನು ಸರಿದೂಗಿಸಲು ಪೆಟ್ರೋಲ್ ಬಾಂಡ್ ಮೂಲಕ ಲಕ್ಷಾಂತರ ಕೋಟಿ ರೂಪಾಯಿಗಳನ್ನು ಹೊರಗಿನಿಂದ ಸಾಲ ಪಡೆದು ಪೆಟ್ರೋಲ್ ಮತ್ತು ಡೀಸೆಲ್‍ಗೆ ಸಬ್ಸಿಡಿ ನೀಡಲಾಗುತ್ತಿತ್ತು. ಆದ್ದರಿಂದ ದೇಶದ ಜನರಿಗೆ ಕಡಿಮೆ ಬೆಲೆಗೆ ಇಂಧನವನ್ನು ಪೂರೈಕೆ ಮಾಡಲಾಗುತ್ತಿತ್ತಾದರೂ, ಜನರ ತೆರಿಗೆ ಹಣವನ್ನೇ ಸಾಲ ಕೊಟ್ಟವರಿಗೆ ವರ್ಷಕ್ಕೆ 27 ಸಾವಿರ ಕೋಟಿ ಬಡ್ಡಿಯನ್ನಾಗಿ ನೀಡಲಾಗುತ್ತಿತ್ತು ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಪೆಟ್ರೋಲ್ ಬಾಂಡ್‍ನ ಮೂಲಕ ಲಕ್ಷಾಂತರ ರೂಪಾಯಿ ಸಾಲ ಪಡೆದು ಸಾವಿರಾರು ಕೋಟಿ ರೂಪಾಯಿ ಬಡ್ಡಿ ಕಟ್ಟುವುದನ್ನು ತಪ್ಪಿಸುವ ಉದ್ದೇಶದಿಂದ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಮೊದಲು ಸಾಲವನ್ನು ತೀರಿಸಿ, ದೇಶದ ಜನರ ತೆರಿಗೆ ಹಣ ಬಡ್ಡಿಗೆ ಪಾವತಿಯಾಗುತ್ತಿದ್ದುದ್ದನ್ನು ತಪ್ಪಿಸಲಾಯಿತು. ಪ್ರಸ್ತುತ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪೆಟ್ರೋಲ್‍ಗೆ ತಲಾ 32 ರೂ. ತೆರಿಗೆ ವಿಧಿಸುತ್ತಿವೆ. ಇದರಲ್ಲಿ ಕೇಂದ್ರ ಪಡೆದ 32 ರೂ. ಪೈಕಿ 11 ರೂ. ಗಳನ್ನು ಮತ್ತೆ ರಾಜ್ಯದ ಯೋಜನೆಗಳಿಗಾಗಿ ವಾಪಸ ನೀಡುತ್ತಿದೆ. ಜೊತೆಗೆ ಇದೊಂದು ಸಂಪನ್ಮೂಲವನ್ನಾಗಿ ಬಳಕೆ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಬಿಜೆಪಿಯೇತರ ರಾಜ್ಯಗಳಲ್ಲಿ ತೆರಿಗೆ ಇಳಿಸಲಿ: ಛತ್ತೀಸ್‌ಗಢ, ರಾಜಸ್ತಾನ, ಪಶ್ಚಿಮ ಬಂಗಾಳ, ಕೇರಳ ಸೇರಿದಂತೆ ಬಜೆಪಿಯೇತರ ರಾಜ್ಯಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆಯನ್ನು ಮೊದಲು ಇಳಿಸಲಿ. ಆಗ ನಮ್ಮಲ್ಲೂ ಈ ಬಗ್ಗೆ ಚಿಂತನೆ ನಡೆಸಲಾಗುವುದು. ಅದು ಬಿಟ್ಟು ಕಾಂಗ್ರೆಸ್ಸಿಗರು ಜನರಲ್ಲಿ ಇಲ್ಲದ ಗೊಂದಲವನ್ನು ಮೂಡಿಸುವ ಯತ್ನ ಮಾಡಬಾರದು ಎಂದು ಟೀಕಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು