ಗುರುವಾರ , ಅಕ್ಟೋಬರ್ 22, 2020
22 °C
ಕಾಂಗ್ರೆಸ್ ಪಕ್ಷದಿಂದ ಹಿಂದೂ–ಮುಸ್ಲಿಂ ನಡುವೆ ಬೆಂಕಿ ಹಚ್ಚುವ ಕೆಲಸ: ಈಶ್ವರಪ್ಪ ಕಿಡಿ

ಚುನಾವಣೆಯಲ್ಲಿ ಕಾಂಗ್ರೆಸ್‌ ಧೂಳಿಪಟವಾಗಲಿದೆ: ಈಶ್ವರಪ್ಪ ಭವಿಷ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ‘ಕಾಂಗ್ರೆಸ್‌ ಪಕ್ಷದಿಂದ ಹಿಂದೂ–ಮುಸ್ಲಿಂ ನಡುವೆ ಬೆಂಕಿ ಹಚ್ಚುವ ಕೆಲಸ ನಡೆಯುತ್ತಿದೆ. ಜನರು ಸಂತೋಷದಿಂದ ಇರಲು ಅವರು ಬಿಡುವುದಿಲ್ಲ. ಹೀಗಾಗಿ ಈ ಚುನಾವಣೆಯಲ್ಲಿ ಕಾಂಗ್ರೆಸ್‌ ಧೂಳಿಪಟವಾಗಲಿದೆ’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.

ಈಶಾನ್ಯ ಶಿಕ್ಷಕರ ವಿಧಾನ ಪರಿಷತ್‌ ಅಭ್ಯರ್ಥಿ ಪರ ನಗರದ ವಿದ್ಯಾಮಂಗಲ ಕಾರ್ಯಾಲಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

‘ಬೆಂಗಳೂರಿನ ಡಿ.ಜೆ.ಹಳ್ಳಿಯಲ್ಲಿ ಹಿಂದೂ–ಮುಸ್ಲಿಂ ಒಡೆದಾಡುಕೊಳ್ಳುವಂತೆ ಮಾಡಿದರು. ಎಲ್ಲ ವಿಷಯಗಳನ್ನು ಅವರು ರಾಜಕೀಯ ಮಾಡುತ್ತಾ ಬಂದಿದ್ದಾರೆ. ಮಾಸ್ಕ್‌ ವಿಚಾರದಲ್ಲೂ ರಾಜಕೀಯ ಮಾಡುತ್ತಾರೆ’ ಎಂದು ಆರೋಪಿಸಿದರು. 

‘ಹವಾಲ ದುಡ್ಡು ಯಾರಲ್ಲಿ ಸಿಕ್ಕಿದೆ ಎನ್ನುವುದನ್ನು ಕಾಂಗ್ರೆಸ್‌ನವರು ಅರಿಯಲಿ. ಕೋಟ್ಯಂತರ ರೂಪಾಯಿ ಹಣ ಸಿಕ್ಕಿದೆ. ಜೈಲಿಗೆ ಹೋಗಿ ಬಂದಿದ್ದಾರೆ. ಉಪ್ಪು ತಿಂದವರು ನೀರು ಕುಡಿಯಲೇಬೇಕು’ ಎಂದರು.

‘ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸೀತೇಯಷ್ಟೆ ಪವಿತ್ರರಾಗಿದ್ದಾರೆ. ಯಾವುದರಲ್ಲೂ ಲೋಪ ಮಾಡಿಲ್ಲ’ ಎಂದರು.

ಫ್ಯಾಷನ್‌ ಆಗಿದೆ: ‘ಕೆಲವರಿಗೆ ಮಾಸ್ಕ್‌ ಇಳಿಬಿಟ್ಟುಕೊಳ್ಳುವುದು ಫ್ಯಾಷನ್‌ ಆಗಿದೆ. ಮಾಸ್ಕ್‌ ಮುಖದ ತುಂಬಿ ಮುಚ್ಚಿಕೊಳ್ಳಬೇಕು’ ಎಂದು ಹೇಳಿ ಮಾಸ್ಕ್‌ ಹಾಕಿಕೊಳ್ಳದ ಸಭೆಯಲ್ಲಿದ್ದ ವ್ಯಕ್ತಿಯೊಬ್ಬರಿಗೆ ಕರವಸ್ತ್ರ ಕಟ್ಟಿಕೊಳ್ಳುವಂತೆ ಸೂಚಿಸಿದರು.

ಈಶಾನ್ಯ ಮತಕ್ಷೇತ್ರದ ಅಭ್ಯರ್ಥಿ ಶಶೀಲ್‌ ಜಿ.ನಮೋಶಿ ಮಾತನಾಡಿ, ‘ಶಿಕ್ಷಕರು ಬುದ್ದಿ ಜೀವಿಗಳಿದ್ದಾರೆ. ಕಳೆದ ಬಾರಿ ಸೋಲಿಸಿದ್ದರಿಂದ ಅವರಿಗೆ ನನ್ನ ಸಾಮಾರ್ಥ್ಯ ಅರ್ಥವಾಗಿದೆ. ಸೋತರೂ ಶಿಕ್ಷಕರನ್ನು ಕೈ ಬಿಟ್ಟಿಲ್ಲ. ಅವರು ನನ್ನ ಕೈಬಿಟ್ಟಿಲ್ಲ. ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದರಿಂದ ಸತತ ಮೂರು ಬಾರಿ ಆರಿಸಿ ಕಳಿಸಿದ್ದಾರೆ. ಶಿಕ್ಷಕರ ಹಲವಾರು ಸಮಸ್ಯೆಗಳಿಗೆ ಸ್ಪಂದಿಸಿದ್ದೇನೆ’ ಎಂದರು.

‘ಹೊಸ ಶಿಕ್ಷಣ ನೀತಿ ಉದ್ಯೋಗ ಕಲ್ಪಿಸುವ ಭರವಸೆ ಇದೆ. ಜಿಲ್ಲೆ ಹಿಂದುಳಿದ ಭಾಗವಾಗಿದೆ. ಇದಕ್ಕೆ ಶಿಕ್ಷಣ ವ್ಯವಸ್ಥೆ ಹೆಚ್ಚಳವಾಗಬೇಕು. ಹಲವಾರು ಹುದ್ದೆಗಳು ಖಾಲಿ ಇವೆ. ಇವುಗಳನ್ನು ಭರ್ತಿ ಮಾಡಬೇಕಾಗಿದೆ. ಈ ಕುರಿತು ಸರ್ಕಾರದೊಂದಿಗೆ ಮಾತನಾಡುತ್ತೇನೆ’ ಎಂದರು.

ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಾಬುರಾವ ಚಿಂಚನಸೂರ ಮಾತನಾಡಿ, ‘ಶಿಕ್ಷಕ ಮತದಾರರು ನಮ್ಮ ಪಕ್ಷದರಿಗೆ ಮತ ಹಾಕುವ ಮೂಲಕ ಗೆಲ್ಲಿಸಿ ಕಳಿಸಬೇಕು’ ಎಂದು ಮನವಿ ಮಾಡಿದರು.

ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಿಗಿಮಠ ಮಾತನಾಡಿ, ‘ನೂತನ ಶಿಕ್ಷಣ ನೀತಿ ಬಗ್ಗೆ ಶಿಕ್ಷಕರಿಗೆ ತಿಳಿ ಹೇಳುವ ಕೆಲಸ ಮಾಡಬೇಕು. ಶಿಕ್ಷಕರನ್ನು ಮನವೊಲಿಸಿ ಪಕ್ಷಕ್ಕೆ ಮತ ಹಾಕಿಸಬೇಕು’ ಎಂದರು. 

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಶರಣಭೂಪಾಲರೆಡ್ಡಿ ನಾಯ್ಕಲ್‌ ಪ್ರಸ್ತಾವಿಕವಾಗಿ ಮಾತನಾಡಿ, ‘ನಮ್ಮ ಪಕ್ಷದ ಅಭ್ಯರ್ಥಿ ಶಶೀಲ್‌ ಜಿ ನಮೋಶಿ ಪರ ಶಿಕ್ಷಕರ ಒಲಿವಿದೆ. ಕಳೆದ ಬಾರಿ ಸೋಲಿಸಿದ್ದಕ್ಕೆ ಅವರ ಅನುಪಸ್ಥಿತಿ ಕಾಡಿದೆ. ಹೀಗಾಗಿ ಅವರನ್ನು ಶಿಕ್ಷಕರು ತಮ್ಮ ಪಕ್ಷದವರನ್ನು ಕೈ ಹಿಡಿಯಲಿದ್ದಾರೆ’ ಎಂದರು.

ಮಾಜಿ ಶಾಸಕ ವೀರಬಸಂತರೆಡ್ಡಿ ಮುದ್ನಾಳ, ವಿಧಾನ ಪರಿಷತ್‌ ಮಾಜಿ ಸದಸ್ಯ ಹನುಮಂತಪ್ಪ ಕಂದಕೂರ, ನಗರಾಭಿವೃದ್ಧಿ ಅಧ್ಯಕ್ಷ ಬಸವರಾಜ ಚಂಡರಕಿ, ರಾಜ್ಯ ಬಿಜೆಪಿ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಲಲಿತಾ ಮೌಲಾಲಿ ಅನಪುರ, ಸಿದ್ದನಗೌಡ ಕಾಡಂನೋರ, ಸಾಯಿಬಣ್ಣ ಬೋರಬಂಡಾ, ದೇವರಾಜ ನಾಯಕ, ಹಣಮಂತ ಇಟಗಿ, ವೆಂಕಟರೆಡ್ಡಿ ಅಬ್ಬೆತುಮಕೂರ, ರಘುನಾಥರಾವ ಮಲ್ಕಾಪುರ, ದೇವಿಂದ್ರನಾಥ ನಾದ‌, ಗುರು ಕಾಮಾ ಸೇರಿದಂತೆ ವಿವಿಧ ಮೋರ್ಚಾಗಳ ಅಧ್ಯಕ್ಷರು, ಪದಾಧಿಕಾರಿಗಳು, ಕಾರ್ಯಕರ್ತರು ಇದ್ದರು.

***

ಕಾಂಗ್ರೆಸ್‌ ಶಾಸಕ ಅಖಂಡ ಶ್ರೀನಿವಾಸಮೂರ್ತಿ ದರಿದ್ರ ನಾಯಕ ಆಗಿದ್ದಾರೆ. ಅವರ ಮನೆಗೆ ಬೆಂಕಿ ಹಚ್ಚುವಂತೆ ಮಾಡಿದ್ದಾರೆ
ಕೆ.ಎಸ್.ಈಶ್ವರಪ್ಪ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.