ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್ಥಿಕ ಪ್ರಗತಿಯಲ್ಲಿ ಗ್ರಾಹಕರ ಪಾತ್ರ ಮುಖ್ಯ: ಸುರೇಶ ಸಜ್ಜನ್

ಕೃಷಿ ಪತ್ತಿನ ಸಹಕಾರ ಸಂಘದ 2021-22ನೇ ಸಾಲಿನ ವಾರ್ಷಿಕ ಮಹಾಸಭೆ
Last Updated 26 ಸೆಪ್ಟೆಂಬರ್ 2022, 16:09 IST
ಅಕ್ಷರ ಗಾತ್ರ

ಯಾದಗಿರಿ: ಗ್ರಾಮೀಣ ಭಾಗದಲ್ಲಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಆರ್ಥಿಕ ಪ್ರಗತಿಯಲ್ಲಿ ಗ್ರಾಹಕರ ಪಾತ್ರ ಮುಖ್ಯವಾಗಿದೆ. ತಾವೂ ತೆಗೆದುಕೊಂಡ ಸಾಲವನ್ನು ಸಕಾಲದಲ್ಲಿ ಮರುಪಾವತಿಸಬೇಕು. ಇದರಿಂದ ಹೊಸ ಗ್ರಾಹಕರಿಗೆ ಸಾಲ ಯೋಜನೆ ವಿಸ್ತರಿಸಲು ಅನುಕೂಲವಾಗುತ್ತದೆ ಎಂದು ಕೆವೈಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಸುರೇಶ ಸಜ್ಜನ್ ಹೇಳಿದರು.

ತಾಲ್ಲೂಕಿನ ಹತ್ತಿಕುಣಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಚೇರಿ ಆವರಣದಲ್ಲಿ ಹಮ್ಮಿಕೊಂಡಿದ್ದ ಸಂಘದ 2021-22ನೇ ಸಾಲಿನ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿದರು.

ಬರುವ ದಿನಗಳಲ್ಲಿ ಕೇಂದ್ರ ಬ್ಯಾಂಕ್‌ನಿಂದ ಸಹಕಾರ ಸಂಘಗಳ ಮೂಲಕ ರೈತರಿಗೆ ₹3 ಲಕ್ಷ ವರೆಗೆ ಬಡ್ಡಿ ರಹಿತ ಸಾಲ ನೀಡುವ ಗುರಿ ಹೊಂದಲಾಗಿದೆ. ಜೊತೆಗೆ ಕೃಷಿ ಉಪಕಸುಬುಗಳನ್ನು ಕೈಗೊಳ್ಳಲು ಅಗತ್ಯ ಸಾಲ ನೀಡಲಾಗುವುದು. ರೈತರು ಅದರ ಲಾಭ ಪಡೆದುಕೊಂಡು ಆರ್ಥಿಕವಾಗಿ ಬದಲಾವಣೆ ಸಾಧಿಸಬೇಕು ಎಂದು ಕರೆ ನೀಡಿದರು.

ಕೆವೈಡಿಸಿಸಿ ಬ್ಯಾಂಕ್ ನಿರ್ದೇಶಕ ಸಿದ್ರಾಮರೆಡ್ಡಿ ಪಾಟೀಲ ಕೌಳೂರ ಮಾತನಾಡಿ, ಜಿಲ್ಲೆಯಲ್ಲಿಯೇ ಇಲ್ಲಿರುವ ಸಂಘದ ಆಡಳಿತ ಮಂಡಳಿಯವರು ಕ್ರಿಯಾಶೀಲವಾಗಿ ಕೆಲಸ ಮಾಡಿ, ಪ್ರಥಮ ಸ್ಥಾನದಲ್ಲಿದ್ದಾರೆ. ಪರಿಣಾಮ ಕಲಬುರಗಿಯಲ್ಲಿ ನಡೆದ ಕೇಂದ್ರ ಬ್ಯಾಂಕ್ ವಾರ್ಷಿಕ ಮಹಾಸಭೆಯಲ್ಲಿ ಅಪೆಕ್ಸ್ ಬ್ಯಾಂಕ್‌ನಿಂದ ಅತ್ಯುತ್ತಮ ಸಾಧನೆ ಮಾಡಿದ ಸಂಘವೆಂದು ಅಧ್ಯಕ್ಷ-ಕಾರ್ಯದರ್ಶಿಯವರಿಗೆ ಪ್ರಶಸ್ತಿ ಪತ್ರವನ್ನು ನೀಡಿ ಗೌರವಿಸಲಾಗಿದೆ. ನಾವೂ ಸರ್ಕಾರದ ಯೋಜನೆಗಳ ಲಾಭ ರೈತರಿಗೆ ತಲುಪಿಸಲು ಆದ್ಯತೆ ನೀಡುತ್ತಿದ್ದೇವೆ ಎಂದು ತಿಳಿಸಿದರು.

ಕೇಂದ್ರ ಬ್ಯಾಂಕ್‌ನ ಮುಖ್ಯ ಕಾರ್ಯನಿರ್ವಾಣಾಧಿಕಾರಿ ಶರಣಬಸಪ್ಪ ಬೆಣ್ಣೂರ ಮಾತನಾಡಿ, ಹತ್ತಿಕುಣಿ ಸಂಘದಲ್ಲಿರುವ 35 ಸ್ವಸಹಾಯ ಗುಂಪುಗಳಿಗೆ ಸಾಲ ಮಂಜೂರಾತಿ ನೀಡಿ 27 ಗುಂಪುಗಳಿಗೆ ₹40 ಲಕ್ಷ ಬಿಡುಗಡೆ ಮಾಡಲಾಗಿದೆ. ಇನ್ನೂಳಿದ 8 ಗುಂಪುಗಳಿಗೆ ಸಭೆಯಲ್ಲಿ ₹13 ಲಕ್ಷ ಮಂಜೂರಾತಿ ಪತ್ರ ನೀಡುತ್ತಿದ್ದೇವೆ ಎಂದು ಪ್ರಕಟಿಸಿದರು.

ಅಧ್ಯಕ್ಷತೆ ವಹಿಸಿದ ಸಂಘದ ಅಧ್ಯಕ್ಷ ಮಹಿಪಾಲರೆಡ್ಡಿ ಪಾಟೀಲ ಮಾತನಾಡಿ, ಪ್ರಸಕ್ತ ಸಾಲಿನಲ್ಲಿ ಸಂಘಕ್ಕೆ ₹12.90 ಲಕ್ಷ ಲಾಭ ಬಂದಿದೆ. ಸಂಘದ ವ್ಯಾಪ್ತಿಯಲ್ಲಿ 556 ರೈತರಿಗೆ ₹2.4 ಕೋಟಿ ಬೆಳೆ ಸಾಲ ವಿತರಿಸಲಾಗಿದೆ. ಅದರಂತೆ ಸಣ್ಣ ಪುಟ್ಟ ವ್ಯಾಪಾರಸ್ಥರಿಗೆ ₹1.60 ಕೋಟಿ ಸಾಲ ವಿತರಿಸಲಾಗಿದೆ ಎಂದು ಮಾಹಿತಿ ನೀಡಿದರು.

ಸಂಘದ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಸಂಜೀವ್ ಕುಮಾರ ಪುಟಗಿ, ಸಂಘದ ವಾರ್ಷಿಕ ವರದಿ ವಾಚಿಸಿದರು.

ಸಮಾರಂಭದಲ್ಲಿ ಸಂಘದೊಂದಿಗೆ ಉತ್ತಮ ಆರ್ಥಿಕ ವಹಿವಾಟು ನಡೆಸಿದ 5 ಸ್ವಸಹಾಯ ಸಂಘದ ಅಧ್ಯಕ್ಷ-ಕಾರ್ಯದರ್ಶಿಗಳನ್ನು, ಪಿಗ್ಮಿದಾರರನ್ನು, ಎಸ್.ಬಿ ಠೇವಣಿದಾರರನ್ನು ಮತ್ತು ಮುದ್ದತ ಠೇವಣಿದಾರರನ್ನು ಸನ್ಮಾನಿಸಲಾಯಿತು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಮಲ್ಲಿಕಾರ್ಜುನ, ಶಾಖಾ ವ್ಯವಸ್ಥಾಪಕ ಮಹ್ಮದ್‌ ರಫೀಕ್, ಮೇಲ್ವಿಚಾರಕ ಶಿವರಾಜ ಪಾಟೀಲ, ಸಂಘದ ಉಪಾಧ್ಯಕ್ಷ ತಿಮ್ಮಣ್ಣ ಇದ್ಲಿ, ನಿರ್ದೇಶಕರಾದ ಶರಣಪ್ಪಗೌಡ ಮಾಲಿ ಪಾಟೀಲ, ಅಮೀನರೆಡ್ಡಿ ಬಿಳ್ಹಾರ, ಶರಣಪ್ಪ ಸೋಮಣ್ಣೋರ, ಸಾಬರೆಡ್ಡಿ ತಮ್ಮಣ್ಣೋರ, ಬೋಜಣ್ಣಗೌಡ ಯಡ್ಡಳ್ಳಿ, ವೀರಭದ್ರಪ್ಪ ಯಡ್ಡಳ್ಳಿ, ಅಲ್ಲಿಸಾಬ್, ಬಾಯಮ್ಮ, ಹಣಮವ್ವ ಜಾಕನಳ್ಳಿ, ಶರಣಪ್ಪ ಮೋಟ್ನಳ್ಳಿ, ಚಂದ್ರಾರೆಡ್ಡಿ ಬಂದಳ್ಳಿ, ಸಾಬಣ್ಣ ಯಾದಗಿರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT