ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ ಜಿಲ್ಲೆಯಲ್ಲಿ ಕೊರೊನಾ ಸಕ್ರಿಯ ಪ್ರಕರಣ ಇಳಿಕೆ

ಜಿಲ್ಲೆಯಲ್ಲಿ ಒಂದಂಕಿಗಿಳಿದ ಕೋವಿಡ್‌ ಪ್ರಕರಣಗಳು, ಅನ್‌ಲಾಕ್‌ನಲ್ಲಿ ಮುಂಜಾಗ್ರತೆ ಅವಶ್ಯ
Last Updated 20 ಜೂನ್ 2021, 1:38 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲೆಯಲ್ಲಿ ಕಳೆದ ವಾರದಿಂದ ಕೋವಿಡ್‌ ಸಕ್ರಿಯ ಪ್ರಕರಣಗಳು ಇಳಿಕೆಯಾಗುತ್ತಿದ್ದು, ಶನಿವಾರ ಒಂದಂಕಿಯ ಪ್ರಕರಣ ಪತ್ತೆಯಾಗಿದೆ.

1,729 ಪರೀಕ್ಷಗಾಗಿ ಮಾದರಿ ಕಳಿಸಿದ್ದು, ಇದರಲ್ಲಿ ಶನಿವಾರ 5 ಪ್ರಕರಣಗಳು ದೃಢವಾಗಿವೆ. 55 ಪ‍್ರಾಥಮಿಕ ಸಂಪರ್ಕ, 50 ದ್ವಿತೀಯ ಸಂಪರ್ಕದಲ್ಲಿದ್ದವನ್ನು ಗುರುತಿಸಲಾಗಿದೆ.

ದೃಢಪಟ್ಟ ಐದು ಪ್ರಕರಣಗಳಲ್ಲಿ ಇಬ್ಬರನ್ನು ಹೊಸ ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿ ಇರಿಸಲಾಗಿದೆ. ಮೂವರು ಹೋಂ ಐಸೊಲೇಷನ್‌ನಲ್ಲಿದ್ದಾರೆ. ಜಿಲ್ಲಾಸ್ಪತ್ರೆಯಲ್ಲಿ 8 ಜನ, ಶಹಾಪುರ ತಾಲ್ಲೂಕು ಆಸ್ಪತ್ರೆಯಲ್ಲಿ 4, ಗುರುಮಠಕಲ್‌ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಒಬ್ಬರು ಸೇರಿದಂತೆ ಒಟ್ಟಾರೆ 13 ಜನರನ್ನು ವಿವಿಧ ಆಸ್ಪತ್ರೆಗಳಲ್ಲಿ ಪ್ರತ್ಯೇಕವಾಗಿ ಇರಿಸಲಾಗಿದೆ. ಸುರಪುರ ತಾಲ್ಲೂಕು ಆಸ್ಪತ್ರೆಯಿಂದ ಒಬ್ಬರನ್ನು ಶನಿವಾರ ಬಿಡುಗಡೆಗೊಳಿಸಲಾಗಿದೆ.

ಕ್ವಾರಂಟೈನ್‌ ಕೇಂದ್ರಗಳು ಖಾಲಿ:

ಜಿಲ್ಲೆಯಲ್ಲಿ ಮೂರು ತಾಲ್ಲೂಕುಗಳಲ್ಲಿ ಸ್ಥಾಪಿಸಿರುವ ಕೊರೊನಾ ಕೇರ್‌ ಸೆಂಟರ್ (ಸಿಸಿಸಿ) ಈಗ ಖಾಲಿಯಾಗಿವೆ. ಯಾದಗಿರಿ ತಾಲ್ಲೂಕಿನ ಬಂದಳ್ಳಿ ಏಕಲವ್ಯ ಮಾದರಿ ವಸತಿ ಶಾಲೆ, ಶಹಾಪುರ ತಾಲ್ಲೂಕಿನ ಭೀಮರಾಯನಗುಡಿ ಕೃಷಿ ವಿದ್ಯಾಲಯ, ಸುರಪುರ ತಾಲ್ಲೂಕಿನ ಹಿಂದುಳಿದ ವರ್ಗಗಳ ಮೆಟ್ರಿಕ್‌ ನಂತರದ ಬಾಲಕರ ವಸತಿ ನಿಲಯದಲ್ಲಿ ಕೊರೊನಾ ಕೇರ್‌ ಸೆಂಟರ್ ಸ್ಥಾಪಿಸಲಾಗಿತ್ತು. ಈಗ ಇಲ್ಲಿ ಕೊರೊನಾ ಸೋಂಕಿತರು ಇಲ್ಲ.

ಕೋವಿಡ್‌ ಆರೈಕೆ ಕೇಂದ್ರಗಳು ಖಾಲಿಯಾಗಿವೆ. ಶಹಾಪುರ ತಾಲ್ಲೂಕಿನ ಬೇವಿನಳ್ಳಿ ಕ್ರಾಸ್‌ ಮೊರಾರ್ಜಿ ದೇಸಾಯಿ ವಸತಿ ಶಾಲೆ (ಎಂಡಿಆರ್‌ಎಸ್‌), ಕೆಂಭಾವಿ ಎಂಡಿಆರ್‌ಎಸ್‌, ಹುಣಸಗಿ ಎಂಡಿಆರ್‌ಎಸ್‌, ಕೋಡೆಕಲ್ಲ ಎಂಡಿಆರ್‌ಎಸ್‌, ಕೆಆರ್‌ಸಿಆರ್‌ಎಸ್‌ ರಾಜನಕೊಳ್ಳೂರ, ಎಂಡಿಆರ್‌ಎಸ್‌ ಬಂದಳ್ಳಿ, ಕಕ್ಕೇರಾ ಪಿಯು ಕಾಲೇಜು, ಸುರಪುರ ಮೆಟ್ರಿಕ್‌ ನಂತರದ ಬಾಲಕರ ಹಾಸ್ಟೆಲ್‌, ಮೆಟ್ರಿಕ್‌ ನಂತರದ ಬಾಲಕರ ಹಾಸ್ಟೆಲ್‌ ಅನಪುರ, ಸರ್ಕಾರಿ ಬಾಲಕಿಯರ ಹಾಸ್ಟೆಲ್‌ ಕಂದಕೂರ, ಎಂಡಿಆರ್‌ಎಸ್‌ ಕೊಂಕಲ್‌ನಲ್ಲಿ ಸ್ಥಾಪಿಸಿರುವ ಕೇಂದ್ರಗಳಲ್ಲಿ ಈಗ ರೋಗಿಗಳೇ ಇಲ್ಲದೆ ಖಾಲಿಯಾಗಿವೆ.

ಪ್ರತಿದಿನ ಸಾವಿರ ಮೇಲ್ಪಟ್ಟು ಪರೀಕ್ಷೆ:

ಜಿಲ್ಲೆಯಲ್ಲಿ ಪ್ರತಿದಿನ ವಿವಿಧ ಆರೋಗ್ಯ ಕೇಂದ್ರಗಳಲ್ಲಿ ಸಾವಿರಕ್ಕೂ ಹೆಚ್ಚು ಗಂಟಲು ದ್ರವ ಮಾದರಿ ಸಂಗ್ರಹ ಮಾಡಲಾಗುತ್ತಿದೆ. ಕೋವಿಡ್‌ ಪ್ರಕರಣಗಳು ಕಡಿಮೆಯಾದರೂ ಪರೀಕ್ಷೆ ಮಾತ್ರ ಕಡಿಮೆಯಾಗಿಲ್ಲ.

ಸ್ವಯಂ ಜಾಗೃತಿ ಅವಶ್ಯ:

ಜೂನ್‌ 21ರಿಂದ ಎರಡನೇ ಅನ್‌ಲಾಕ್‌ ಇದ್ದು, ಜನ ಮೈಮರೆತರೆ ಅಪಾಯ ತಂದೊಡ್ಡುಕೊಳ್ಳುವ ಸಾಧ್ಯತೆ ಇದೆ. ಸರ್ಕಾರ ಎಷ್ಟು ಜಾಗೃತಿ ಮೂಡಿಸಿದರೂ ಜನರು ಸ್ವಯಂ ಜಾಗೃತಿಗೊಳ್ಳುವ ಅವಶ್ಯವಾಗಿದೆ. ಇಲ್ಲದಿದ್ದರೆ ಮೂರನೇ ಅಲೆಗೆ ದಾರಿ ಮಾಡಿಕೊಟ್ಟಂತೆ ಆಗುತ್ತದೆ ಎನ್ನುತ್ತಾರೆ ಅಧಿಕಾರಿಗಳು.

‘ಕೋವಿಡ್‌ ಎರಡನೇ ಅಲೆಯಲ್ಲಿ ಹಲವಾರು ಜನರು ತಮ್ಮ ಪ್ರೀತಿ ಪಾತ್ರರನ್ನು ಕಳೆದುಕೊಂಡಿದ್ದಾರೆ. ಆರ್ಥಿಕ ಸಂಕಷ್ಟ ಎದುರಿಸಿದ್ದಾರೆ. ಹಲವರು ಆರೋಗ್ಯ ಕಾಪಾಡಿಕೊಳ್ಳಲು ಹೆಣಗಾಡುತ್ತಿದ್ದಾರೆ. ಇದಕ್ಕೆಲ್ಲ ಕಾರಣ ನಿರ್ಲಕ್ಷ್ಯತನ. ಮೊದಲನೇ ಅಲೆಯಲ್ಲಿ ಕೋವಿಡ್‌ ಕುರಿತು ಅರಿವು ಇರಲಿಲ್ಲ. ಈಗ ಎರಡನೇಅಲೆಯಲ್ಲಿ ಎಲ್ಲರಿಗೂ ಅರಿವು ಬಂದಿದೆ. ಮೂರನೇ ಅಲೆ ಬಗ್ಗೆ ತಜ್ಞರು ಎಚ್ಚರಿಕೆ ನೀಡುತ್ತಿದ್ದಾರೆ. ಹೀಗಾಗಿ ಪ್ರತಿಯೊಬ್ಬರು ಕೇಂದ್ರ, ರಾಜ್ಯ ಸರ್ಕಾರದ ಸೂಚನೆಗಳನ್ನು ತಪ್ಪದೇ ಪಾಲಿಸಬೇಕು. ಈ ಮೂಲಕ ಕೊರೊನಾ ಮುಕ್ತವಾಗಿಸಬೇಕು’ ಎನ್ನುತ್ತಾರೆ ರೇಷ್ಮೆ ಮತ್ತು ತೋಟಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್‌. ಶಂಕರ್‌ ಅವರು.

‘ಲಾಕ್‌ಡೌನ್‌ ತೆರುವುಗೊಳಿಸಿದ ನಂತರ ಅಂಗಡಿ ಮುಂಗಟ್ಟುಗಳಲ್ಲಿ ಜನರು ಮುಗಿ ಬೀಳಬಾರದು. ಎಲ್ಲ ವರ್ಗದ ಜನರು ಲಸಿಕೆ ಹಾಕಿಸಿಕೊಳ್ಳುವ ತನಕ ಎಚ್ಚರಿಕೆ ವಹಿಸಬೇಕು. ಇದರ ಜೊತೆಗೆ ಅಧಿಕಾರಿಗಳು ನಿಗಾ ವಹಿಸಬೇಕು. ಮದುವೆ, ಜಾತ್ರೆ ಮುಂತಾದ ಹೆಚ್ಚು ಜನರು ಸೇರುವ ಸ್ಥಳಗಳಲ್ಲಿ ಕೋವಿಡ್ ನಿಯಮ ಉಲ್ಲಂಘನೆಯಾಗದಂತೆ ನೋಡಿಕೊಳ್ಳಬೇಕು. ವೇಗವಾಗಿ ಹರಡುತ್ತಿದ್ದ ಕೋವಿಡ್‌ ಅಧಿಕಾರಿಗಳ ಶ್ರಮದಿಂದ ಹತೋಟಿಗೆ ಬಂದಿದೆ. ಇದನ್ನು ದುರುಪಯೋಗ ಮಾಡಿಕೊಳ್ಳಬಾರದು’ ಎನ್ನುತ್ತಾರೆ ಅವರು.

‘ಈಹಿಂದೆಬದುಕಿದಂತೆ ಈಗ ಜೀವಿಸಲು ಸಾಧ್ಯವಿಲ್ಲ. ಅಂತರ ಕಾಪಾಡಿಕೊಳ್ಳದಿದ್ದರೂ ಕಡ್ಡಾಯವಾಗಿ ಮಾಸ್ಕ್‌ ಧರಿಸಬೇಕು. ಇದರಿಂದ ಶೇ 90ರಷ್ಟು ಸೋಂಕನ್ನು ಕಡಿಮೆ ಮಾಡಬಹುದು. ಮಾಸ್ಕ್‌ ಧರಿಸುವುದರಿಂದ ಕೆಮ್ಮ, ನೆಗಡಿ ಸೇರಿದಂತೆ ದೂಳು, ಗಾಳಿಯಿಂದ ಹರಡುವ ರೋಗಗಳಿಂದ ರಕ್ಷಣೆ ಸಿಗುತ್ತದೆ. ಸರಳ ಮದುವೆಗಳಿಗೆ ಒತ್ತು ನೀಡಬೇಕು’ ಎಂದು ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್‌ ಹೇಳುತ್ತಾರೆ.

‘ಜಿಲ್ಲೆಯಲ್ಲಿ ಕೊರೊನಾ ಒಂದಂಕಿಗೆ ಇಳಿದರೂ ಸೋಂಕು ಹೋಗಿಲ್ಲ. ಎಷ್ಟು ಅಲೆಗಳಾದರೂ ಬರಬಹುದು. ಹೀಗಾಗಿ ಪ್ರತಿಯೊಬ್ಬರು ಲಸಿಕೆ ಹಾಕಿಸಿಕೊಳ್ಳಬೇಕು. ಮೂರನೇ ಅಲೆ ಬರುವುದರೊಳಗಾಗಿ ಜಿಲ್ಲೆಯಲ್ಲಿ ಶೇ 60ರಿಂದ 70ರಷ್ಟು ಜನತೆಗೆ ಲಸಿಕೆ ಹಾಕಿಸುವ ಗುರಿ ಹೊಂದಲಾಗಿದೆ. ಹಳ್ಳಿಗಳಲ್ಲಿ ಇನ್ನೂ ಕೊರೊನಾ ಚುಚ್ಚುಮದ್ದು ಬಗ್ಗೆ ಮೂಢನಂಬಿಕೆಗಳಿವೆ. ಅವುಗಳನ್ನು ಬಿಟ್ಟು ಎಲ್ಲರೂ ಲಸಿಕೆ ಹಾಕಿಸಿಕೊಳ್ಳಬೇಕು’ ಎನ್ನುತ್ತಾರೆ ಅವರು.

***

ಲಾಕ್‌ಡೌನ್‌ ಪರಿಣಾಮಕಾರಿ ಜಾರಿಯಿಂದ ಕೊರೊನಾ ನಿಯಂತ್ರಣಕ್ಕೆ ಬಂದಿದೆ. ಅನ್‌ಲಾಕ್‌ ನಂತರವೂ ಸಾರ್ವಜನಿಕರು ಕೋವಿಡ್‌ ನಿಯಮ ಪಾಲಿಸಬೇಕು
ಡಾ.ರಾಗಪ್ರಿಯಾ ಆರ್‌., ಜಿಲ್ಲಾಧಿಕಾರಿ

***

ಸಾರ್ವಜನಿಕರು ಜವಾಬ್ದಾರಿ ಅರಿತು ಬಾಳಿದರೆ ಕೊರೊನಾ ದೂರವಾಗುತ್ತದೆ. ಎರಡನೇ ಅಲೆಯಲ್ಲಿ ಸಾವು–ನೋವುಗಳಾಗಿವೆ. ಕೊರೊನಾ ನಿಮಯಗಳನ್ನು ಎಲ್ಲರೂ ತಪ್ಪದೇ ಪಾಲಿಸಬೇಕು

- ಆರ್‌.ಶಂಕರ್‌, ಜಿಲ್ಲಾ ಉಸ್ತುವಾರಿ ಸಚಿವ

***

ಕೋವಿಡ್‌ ಅಂಕಿ ಅಂಶ

ಒಟ್ಟು ಸೋಂಕಿತರು; 27,339
ಸಕ್ರಿಯ ಪ್ರಕರಣ: 165
ಗುಣಮುಖ ಆದವರು; 26,968
ಒಟ್ಟು ಸಾವು;206

ದಿನದ ಏರಿಕೆ
ಹೊಸ ಪ್ರಕರಣ; 05
ಗುಣಮುಖ;33
ಸಾವು;0
ಆಧಾರ: ಆರೋಗ್ಯ ಇಲಾಖೆ
___
ಕೋವಿಡ್‌ನಿಂದ ಚೇತರಿಸಿಕೊಂಡವರ ವಿವರ

ತಾಲ್ಲೂಕು;ಗುಣಮುಖರಾದವರ ಸಂಖ್ಯೆ
ಯಾದಗಿರಿ;9,033
ಗುರುಮಠಕಲ್‌;2,156
ಶಹಾಪುರ;6,555
ವಡಗೇರಾ;1,623
ಸುರಪುರ;4,456
ಹುಣಸಗಿ;3,145
ಒಟ್ಟು;26,968
_____

ಕೋವಿಡ್‌ನಿಂದ ಸಂಭವಿಸಿದ ಸಾವುಗಳ ವಿವರ

ತಾಲ್ಲೂಕು;ಮೃತಪಟ್ಟವರ ಸಂಖ್ಯೆ
ಯಾದಗಿರಿ;66
ಗುರುಮಠಕಲ್‌;20
ಶಹಾಪುರ;64
ವಡಗೇರಾ;14
ಸುರಪುರ;36
ಹುಣಸಗಿ;6
ಒಟ್ಟು;206

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT