ಶುಕ್ರವಾರ, ಆಗಸ್ಟ್ 6, 2021
22 °C
ಜನರಲ್ಲಿ ಆತಂಕ, ಕೊರೊನಾ ಸೇನಾನಿಗಳ ಸೇವೆಗೆ ಶ್ಲಾಘನೆ

ಚಿಂಚೋಳಿ: ತಾಲ್ಲೂಕಿನಾದ್ಯಂತ ಚಾಚಿದ ಕೋವಿಡ್ ಕಬಂಧಬಾಹು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಂಚೋಳಿ: ತಾಲ್ಲೂಕಿನಲ್ಲಿ ಕೊವಿಡ್–19 ಕಬಂಧಬಾಹು ವಿಸ್ತರಿಸುತ್ತ ಸಾಗಿದ್ದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ತಾಲ್ಲೂಕಿನ ಸುಲೇಪೇಟ, ಕುಂಚಾವರಂ, ಸಾಲೇಬೀರನಹಳ್ಳಿ, ಮೋನು ನಾಯಕ ತಾಂಡಾ, ಮಂಡಗೋಳ ತಾಂಡಾ, ಚಂದಾಪುರ, ಚಂದನಕೇರಾ, ಕಲದೊಡ್ಡಿ ತಾಂಡಾ ಮತ್ತು ಮಂಡಗೋಳ ತಾಂಡಾಗಳ ಜನರಲ್ಲಿ ಕೋವಿಡ್ ಪತ್ತೆಯಾಗಿದೆ.

ಮಹಾರಾಷ್ಟ್ರದಿಂದ ವಾಪಸ್ಸಾದ ಹಿನ್ನೆಲೆ ಹೊಂದಿರುವ ಇವರು, ಕ್ವಾರಂಟೈನ್‌ನಲ್ಲಿದ್ದು ಕೊರೊನಾ ಪತ್ತೆಗೆ ಸಹಕರಿಸಿದ್ದರು. ಕೊರೊನಾ ಪತ್ತೆಯ ಪ್ರಯೋಗಾಲಯದ ವರದಿ ಬುಧವಾರ ಪ್ರಕಟವಾಗಿದ್ದು ಅವಿಭಜಿತ ಚಿಂಚೋಳಿ ತಾಲ್ಲೂಕಿನಲ್ಲಿ 42 ಪ್ರಕರಣಗಳು ವರದಿಯಾಗಿವೆ.

ಕಲದೊಡ್ಡಿ ತಾಂಡಾ ಹಾಗೂ ಚಂದನಕೇರಾ–12, ಮಂಡಗೋಳ ತಾಂಡಾ–6, ಮೋನು ನಾಯಕ ತಾಂಡಾ–1, ಸಾಲೇಬೀರನಹಳ್ಳಿ–1, ಕುಂಚಾವರಂ–1, ಸುಲೇಪೇಟ–1 ಮತ್ತು ಚಿಂಚೋಳಿ ಪುರಸಭೆಯ ಚಂದಾಪುರದಲ್ಲಿ 1 ಪ್ರಕರಣ ಪತ್ತೆಯಾಗಿವೆ ಎಂದು ತಾಲ್ಲೂಕು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ದೀಪಕ್ ಪಾಟೀಲ ತಿಳಿಸಿದರು.

ಕೋವಿಡ್–19 ದೃಢಪಟ್ಟ ಜನವಸತಿ ಪ್ರದೇಶಗಳಲ್ಲಿ ಹಾಗೂ ಗ್ರಾಮಗಳಲ್ಲಿ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. 200 ಮೀಟರ್ ವ್ಯಾಪ್ತಿಯ ಪ್ರದೇಶವನ್ನು ಕಂಟೇನ್ಮೆಂಟ್ ವಲಯವೆಂದು ಘೋಷಿಸಿ ಜನರ ಸಂಚಾರ ನಿಷೇಧಿಸಲಾಗಿದೆ. ಈಗ ಕೋವಿಡ್ ದೃಢಪಟ್ಟವರು ಹೋಂ ಕ್ವಾರಂಟೈನ್‌ನಲ್ಲಿದ್ದರು. ಇವರ ಮೇಲೆ ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿ ಹದ್ದಿನ ಕಣ್ಣಿರಿಸಿದ್ದಾರೆ ಎಂದು ತಹಶೀಲ್ದಾರ ಅರುಣಕುಮಾರ ಕುಲಕರ್ಣಿ ತಿಳಿಸಿದರು.

ತಮ್ಮ ಜೀವದ ಹಂಗು ತೊರೆದು ಕೊರೊನಾ ವಾರಿಯರ್ಸ್ ಕೆಲಸ ಮಾಡುತ್ತಿದ್ದಾರೆ. ಇವರ ಸೇವೆಯನ್ನು ಪ್ರತಿಯೊಬ್ಬರು ಗೌರವಿಸಬೇಕು. ಗೃಹ ಬಂಧನದಲ್ಲಿರುವ ವಲಸೆ ಕಾರ್ಮಿಕರು ಮುಂಜಾಗ್ರತಾ ಕ್ರಮವಾಗಿ ತಮ್ಮ ವರದಿ ಬರುವವರೆಗೆ ಮನೆಗಳಿಂದ ಹೊರ ಬರಬಾರದು ಎಂದು ಭೀಮಾ ಮಿಷನ್ ಅಧ್ಯಕ್ಷ ಭೀಮಶೆಟ್ಟಿ ಮುಕ್ಕಾ ಮನವಿ ಮಾಡಿದ್ದಾರೆ.

ಮದುವೆ ಮನೆಗೂ ವಕ್ಕರಿಸಿದ ಕೊವಿಡ್!

ತಾಲ್ಲೂಕಿನ ಗ್ರಾಮವೊಂದರ ಮನೆಯಲ್ಲಿ ಮದುವೆಯ ತಯಾರಿ ಭರದಿಂದ ನಡೆದಿತ್ತು. ಆದರೆ ಇದೇ ಮನೆಯಲ್ಲಿ ಮಂಗಳವಾರ ವ್ಯಕ್ತಿಯೊಬ್ಬರಲ್ಲಿ ಕೊವಿಡ್–19 ಪ್ರಕರಣ ಪತ್ತೆಯಾಗಿದ್ದು ಮದುವೆ ಮನೆಯಲ್ಲಿ ಆತಂಕ ಮೂಡಿಸಿದೆ.

ಆಶಾ ಕಾರ್ಯಕರ್ತೆ ನಿಗಾವಹಿಸಿ ಮೇಲಿಂದ ಮೇಲೆ ಸೂಚನೆ ನೀಡಿದರೂ ವ್ಯಕ್ತಿಯು ಅಕ್ಕನ ಮದುವೆಗಾಗಿ ಬಟ್ಟೆ ಖರೀದಿಗೆ ಬೇರೊಂದು ನಗರಕ್ಕೆ ಹೋಗಿದ್ದ ಎಂದು ಮೂಲಗಳು ತಿಳಿಸಿವೆ. ಕೋವಿಡ್ ದೃಢಪಟ್ಟ ಮಾಹಿತಿ ಸಿಗುತ್ತಿದ್ದಂತೆ ಅವನನ್ನು ವೈದ್ಯಕೀಯ ಸಿಬ್ಬಂದಿ‌ ಕರೆದೊಯ್ದು ನಿಗದಿತ ಆಸ್ಪತ್ರೆಗೆ ದಾಖಲಿಸಿದ್ದಾರೆ. ಕೆಲವು ಕಡೆ ಕೋವಿಡ್–19 ದೃಢಪಟ್ಟ ಮೇಲೆ ಆ ವ್ಯಕ್ತಿಗಳನ್ನು ಹುಡುಕಿ ತರುವುದು ಸಿಬ್ಬಂದಿಗೆ ತಲೆ ನೋವಾಗಿ ಪರಿಣಮಿಸಿದೆ. ಅಜ್ಞಾತ ಸ್ಥಳಗಳಲ್ಲಿ ಅಡಗಿ ಕುಳಿತುಕೊಳ್ಳುತ್ತಿದ್ದರೂ ಆರೋಗ್ಯ ಇಲಾಖೆ ಅಧಿಕಾರಿಗಳು ಬೆಂಬಿಡದೇ ಅವರನ್ನು ಪತ್ತೆ ಹಚ್ಚಿ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು