ಮಂಗಳವಾರ, ಮಾರ್ಚ್ 9, 2021
23 °C
ಮದ್ಯದ ಅಂಗಡಿಗಳ ಮುಂದೆ ಜನಜಂಗುಳಿ, ಅಂಗಡಿ ತೆರೆಯುವ ಮುಂಚೆಯೇ ಸರದಿ

ಯಾದಗಿರಿ: ಮದ್ಯಕ್ಕೆ ಮುಗಿಬಿದ್ದ ಮದಿರೆ ಪ್ರಿಯರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ಜಿಲ್ಲೆಯಲ್ಲಿ ಸೋಮವಾರ 65 ಮದ್ಯದಂಗಡಿಯಲ್ಲಿ ಮಾರಾಟಕ್ಕೆ ಅನುಮತಿ ನೀಡಿದ್ದು, ಮದ್ಯದ ಅಂಗಡಿ ತೆಗೆಯುವುದಕ್ಕೆ ಮುನ್ನವೇ ಮದಿರೆ ಪ್ರಿಯರು ಸರದಿಯಲ್ಲಿ ನಿಂತಿದ್ದರು.

ನಗರ ಸೇರಿದಂತೆ ಜಿಲ್ಲೆಯಾದ್ಯಂತ ಸಿಎಲ್‌–2ನ 49, ಎಂಎಸ್‌ಐಎಲ್‌ನ 16 ಸೇರಿದಂತೆ 65 ಮದ್ಯದ ಅಂಗಡಿಗಳಿವೆ. ಇಲ್ಲಿ ಜನ ಜಂಗುಳಿ ಸೇರಿತ್ತು.

ಬೆಳಿಗ್ಗೆ 9 ಗಂಟೆಗೆ ಅಂಗಡಿ‌ ತೆಗೆಯದಿದ್ದರೂ ಬೆಳಗಿನ ಜಾವವೇ ಅನೇಕರು ಬಂದು ಸರದಿಯಲ್ಲಿ ನಿಂತಿರುವುದು ಕಂಡು ಬಂದಿತು.

ಬಾರ್‌ಗಳ ಮಾಲೀಕರು ಪೂಜೆ ಮಾಡಿದ ನಂತರ ಮಾರಾಟ ಆರಂಭಿಸಿದರು. ಇದಕ್ಕೂ ಮುಂಚೆ ಚಾತಕ ಪಕ್ಷಿಯಂತೆ ಮದ್ಯ ಪ್ರಿಯರು ಕಾದು ಕುಳಿತಿದ್ದರು.

ಲಾಕ್‌ಡೌನ್ ಹಿನ್ನೆಲೆಯಲ್ಲಿ ಕಳೆದ 40ಕ್ಕೂ ಅಧಿಕ ದಿನಗಳಿಂದ ಮದ್ಯ ಸಿಗದೆ ಮದ್ಯವ್ಯಸನಿಗಳು ಕಂಗಾಲಾಗಿದ್ದರು. ನಗರದಲ್ಲಿ ಬೆಳಿಗ್ಗೆಯಿಂದಲೇ ಮದ್ಯವ್ಯಸನಿಗಳು ಮದ್ಯ ಮಾರಾಟ ಮಳಿಗೆಗಳ ಮುಂದೆ ಸರದಿ ಸಾಲಿನಲ್ಲಿ ಉರಿ ಬಿಸಿಲನ್ನೂ ಲೆಕ್ಕಿಸದೇ ಎಣ್ಣೆಗಾಗಿ ಕಾದು ನಿಂತಿದ್ದರು.

ಮಹಿಳೆಯರು ಸರದಿಯಲ್ಲಿ

ಮದ್ಯ ಖರೀದಿಗೆ ಪುರುಷರು ಮಾತ್ರವಲ್ಲದೆ ವಯಸ್ಸಾದ ಮಹಿಳೆಯರು ಮದ್ಯ ಪಡೆಯಲು ಸಾಲಿನಲ್ಲಿ ನಿಂತುಕೊಂಡಿರುವು ಕಂಡು ಬಂತು. 

ಮದ್ಯ ಕುಡಿದ ಗುಂಗಿನಲ್ಲಿ ನಗರದ ಪದವಿ ಕಾಲೇಜು ಸಮೀಪದ ಪಾಳು ಬಿದ್ದ ಸರ್ಕಾರಿ ಹಳೆ ಕಟ್ಟಡದಲ್ಲಿ ಕುಡುಕನೊಬ್ಬ ನಶೆಯ ನಿದ್ದೆಯಲ್ಲಿ ಮುಳುಗಿದ್ದರು. 

ಚಪ್ಪಲಿ ಇಟ್ಟರು: ನಗರದ ಸುಭಾಷ ವೃತ್ತದಲ್ಲಿರುವ ಆನಂದ್ ವೈನ್ಸ್ ಶಾಪ್ ಆರಂಭಕ್ಕಿಂತಲೂ ಮೊದಲು ಸಾಲಿನಲ್ಲಿ ನಿಲ್ಲಲು ನಾಚಿಕೆ ಪಟ್ಟ ಕುಡುಕರು ತಮ್ಮ ಪಾದ ರಕ್ಷೆಗಳನ್ನು ಬಾಕ್ಸ್‌‌ಗಳಲ್ಲಿ ಬಿಟ್ಟಿರುವುದು ಕಂಡು ಬಂದಿತು.

ಎಂಟು ವರ್ಷದ ತಾಂಡಾದ ಬಾಲಕನೊಬ್ಬ ಕೈ ಚೀಲ ಹಿಡಿದು ಮದ್ಯಕ್ಕಾಗಿ ಸಾಲಿನಲ್ಲಿ ನಿಂತಿದ್ದ. ಈ ವೇಳೆ ಮಾಧ್ಯಮವರನ್ನು ಕಂಡ ವೈನ್ಸ್ ಮಾಲೀಕರು ಬಾಲಕನನ್ನು ಸ್ಥಳದಿಂದ ಜಾಗ ಖಾಲಿ ಮಾಡಿಸಿದರು. ಕೆಲವೆಡೆ ಸಾಲಿನಲ್ಲಿ ನಿಂತಿದ್ದವರು ‘ಯಡಿಯೂರಪ್ಪಗೆ ಜೈ’ ಅಂತ ಘೋಷಣೆ ಕೂಗಿದರು.

ಕಕ್ಕೇರಾದಲ್ಲಿ ಸಾಲಿನಲ್ಲಿ ನಿಂತು ಖರೀದಿ

ಪಟ್ಟಣದಲ್ಲಿರುವ ವೈನ್‌ ಶಾಪ್‌ಗಳಲ್ಲಿ ಮಾಲೀಕರು ಭಾನುವಾರ ರಾತ್ರಿಯಿಂದಲೇ ಮದ್ಯ ಖರೀದಿಗಾಗಿ ಬರುವ ಗ್ರಾಹಕರಿಗೋಸ್ಕರ ಕಟ್ಟಿಗೆಯ ಬ್ಯಾರಿಕೇಡ್ ನಿರ್ಮಿಸಿದ್ದರು. ಸೋಮವಾರ ಸರತಿ ಸಾಲಿನಲ್ಲಿ ನಿಂತು ಗ್ರಾಹಕರು ಮದ್ಯ ಖರೀದಿಸಿದರು.

ಸೋಮವಾರ ಬೆಳಿಗ್ಗೆ ಒಂಬತ್ತು ಗಂಟೆಯಾಗುತ್ತಿದ್ದಂತೆ ಮದ್ಯದ ಅಂಗಡಿಗೆ ಆಗಮಿಸಿದ ಮದ್ಯಪ್ರಿಯರು ಸರತಿ ಸಾಲಿನಲ್ಲಿ ನಿಂತು ಮುಖಕ್ಕೆ ಮಾಸ್ಕ್ ಧರಿಸಿಕೊಂಡು, ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಮದ್ಯ ಖರೀದಿಸಿದರು. 

ಕೆಂಭಾವಿಯಲ್ಲಿ ನಿಯಮಾನುಸಾರ ಖರೀದಿ

ಪಟ್ಟಣದಲ್ಲಿ ಮದ್ಯದಂಗಡಿ ತೆರೆಯುವುದನ್ನೇ ಕಾಯುತ್ತಿದ್ದ ಮದ್ಯಪ್ರಿಯರು ಸೋಮವಾರ ನಸುಕಿನಲ್ಲೇ ಮದ್ಯದಂಗಡಿಗಳ ಮುಂದೆ ಜಮಾಯಿಸಿದ್ದರು.

ಪಟ್ಟಣದ ಎರಡು ಮದ್ಯದಂ ಗಡಿಗಳ ಮುಂದೆ ಸರದಿ ಸಾಲಿನಲ್ಲಿ ನಿಂತಿದ್ದರು. 9 ಗಂಟೆಗೆ ಮದ್ಯದಂಗಡಿ ತೆರೆಯುತ್ತಿದ್ದಂತೆ ಮದ್ಯ ಖರೀದಿಸಿ ಹೊರನಡೆದರು. ಇಷ್ಟು ದಿನ ಮದ್ಯ ಸಿಗದೆ ಬಾಯಿ ಒಣಗಿಸಿಕೊಂಡಿದ್ದ ಮದ್ಯಪ್ರಿಯರು ನಿಯಮದಂತೆ ಅಂತರ ಕಾಪಾಡಿಕೊಳ್ಳುವುದರ ಜೊತೆಗೆ ಮಾಸ್ಕ್ ಧರಿಸಿಕೊಂಡು ಮದ್ಯ ಖರೀದಿಸಿದರು.

‘ಲಾಕ್‍ಡೌನ್ ಸಡಿಲಿಕೆ ನಂತರ ಮದ್ಯದ ದರ ಹೆಚ್ಚಲಿದೆ ಎಂದುಕೊಂಡಿದ್ದೆವು. ಆದರೆ ಮದ್ಯ ದಂಗಡಿಗಳಲ್ಲಿ ಎಂಆರ್‌ಪಿ ದರಕ್ಕೆ ಮದ್ಯ ಮಾರಾಟ ಮಾಡಿದ್ದಾರೆ’ ಎಂದು ರಂಗಪ್ಪ ವಡ್ಡರ ಎಂಬುವವರು ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು