ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೂಲಿಕಾರರ ಧರಣಿ ಸತ್ಯಾಗ್ರಹ

ನರೇಗಾ; ದಿನಕ್ಕೆ ಎರಡು ಬಾರಿ ಹಾಜರಾತಿ ಅಸಂಬದ್ಧ– ಟೀಕೆ
Last Updated 8 ಏಪ್ರಿಲ್ 2022, 4:09 IST
ಅಕ್ಷರ ಗಾತ್ರ

ಯಾದಗಿರಿ: ನರೇಗಾ ಯೋಜನೆಯಡಿ ದಿನಕ್ಕೆ ಎರಡು ಬಾರಿ ಕೆಲಸಗಾರರ ಹಾಜರಾತಿ, ಛಾಯಾಚಿತ್ರ ತೆಗೆದುಕೊಳ್ಳುವುದು ಕೈಬಿಡುವುದು ಸೇರಿದಂತೆ ಇತರೆ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಬಳಿ ಧರಣಿ ಸತ್ಯಾಗ್ರಹವನ್ನು ಗುರುವಾರ ನಡೆಸಿದರು.

ಈ ವೇಳೆ ಮಾತನಾಡಿದ ಮುಖಂಡರು, ಕೆಲಸಗಾರರ ಹಾಜರಾತಿ ಮತ್ತು ಛಾಯಾಚಿತ್ರವನ್ನು ದಿನಕ್ಕೆ ಎರಡು ಬಾರಿ ಸೆರೆಹಿಡಿದು ಅಪ್ಲೋಡ್ ಮಾಡಬೇಕೆಂಬ ಕೇಂದ್ರ ಸರ್ಕಾರದ ಆದೇಶ ಅಸಂಬದ್ಧವು ಅನಗತ್ಯವೂ ಆಗಿದ್ದು, ನಾವು ಅದನ್ನು ಬಲವಾಗಿ ವಿರೋಧಿಸುತ್ತೇವೆ. ಕೂಲಿಕಾರರ ಮುಖ ಸ್ಪಷ್ಟವಾಗಿ ಕಾಣಬೇಕಾದರೆ ಒಳ್ಳೆಯ ಗುಣಮಟ್ಟದ ಸ್ಮಾರ್ಟ್ ಫೋನ್ ಬೇಕಾಗುತ್ತದೆ. ನಮ್ಮ ಮೇಟಿಗಳ, ಕೂಲಿಕಾರರ ಹತ್ತಿರವಾಗಲಿ ಅಂಥ ಸ್ಮಾರ್ಟ್ ಫೋನ್ ಇಲ್ಲ. ಕೂಲಿಕಾರರು ದಿನದ ನಿಗದಿತ ಕೆಲಸ ಮುಗಿದ ನಂತರ ಸಂಜೆ 5ಕ್ಕೆ ಕೆಲಸದ ಸ್ಥಳದಲ್ಲೇ ಇರಬೇಕೆಂಬ ನಿರ್ದೇಶನವೂ ಕೂಲಿಕಾರರಿಗೆ ಕಿರುಕುಳ ಕೊಟ್ಟು ಕೆಲಸಕ್ಕೆ ಬಾರದಂತೆ ಮಾಡುವ ದುರುದ್ದೇಶ ಇದ್ದಂತೆ ಕಾಣುತ್ತದೆ ಎಂದು ಆರೋಪಿಸಿದರು.

ಕೆಲಸದಲ್ಲಿ ಪಾರದರ್ಶಕತೆ, ಸರ್ಕಾರದ ಹಣ ಪೋಲಾಗುವುದನ್ನು ತಡೆಯುವುದು ಭ್ರಷ್ಟಾಚಾರ ಮುಕ್ತ ಕೆಲಸದ ನಿರ್ವಹಣೆಗೆ ನಾವು ಸಂಪೂರ್ಣ ಬೆಂಬಲ ಕೊಡಲು ಸಿದ್ಧ. ಆದರೆ, ಕೆಲವು ಅಧಿಕಾರಿಗಳು ಮತ್ತು ಚುನಾಯಿತ ಪ್ರತಿನಿಧಿಗಳು ಮಾಡುವ ಕರ್ತವ್ಯ ಲೋಪಕ್ಕೆ ಕೂಲಿಕಾರರನ್ನು ಬಲಿಪಶು ಮಾಡಬಾರದು. ಆದ್ದರಿಂದ ನಾವು ಮೊದಲಿನಂತೆಯೇ ಕೆಲಸ ಮಾಡಿಕೊ೦ಡು ಹೋಗುತ್ತೇವೆ. ನಮ್ಮೊಂದಿಗೆ ಚರ್ಚೆ ಮಾಡದೆ ತಂದಿರುವ ಹೊಸ ಸೂಚನೆಗಳನ್ನು ನಾವು ತಿರಸ್ಕರಿಸುತ್ತೇವೆ ಎಂದರು.

ಕೇಂದ್ರ ಸರ್ಕಾರ ನರೇಗಾ ಕೂಲಿಯನ್ನು ಇತ್ತೀಚಿಗೆ ಪರಿಷ್ಕರಿಸಿದ್ದು ಏನೇನೂ ಸಾಲದು. ಅಗತ್ಯ ವಸ್ತುಗಳ ಬೆಲೆಗಳು ಗಗನಕ್ಕೇರುತ್ತಿವೆ. ದಿನಗೂಲಿ ಕೇವಲ ಶೇ 4 ರಿ೦ದ 21ರಷ್ಟು ಮಾತ್ರ ಏರಿಕೆಯಾಗಿದೆ. ಕೇಂದ್ರ ಸರ್ಕಾರಕ್ಕೆ ಗ್ರಾಮೀಣ ಜನರ ಪರಿಸ್ಥಿತಿ ಕಣ್ಣಿಗೆ ಕಾಣುತ್ತಿಲ್ಲ. ಈ ಧೋರಣೆ ಖಂಡಿಸಿ ಅಹೋರಾತ್ರಿ ಪ್ರತಿಭಟನೆ ಮಾಡುತ್ತಿದ್ದೇವೆ. ದಿನಕ್ಕೆ ₹600ರ ವೇತನ ನೀಡಬೇಕು ಎಂದು ಆಗ್ರಹಿಸಿದರು.

ಜಿಲ್ಲಾಧ್ಯಕ್ಷ ದಾವಲಸಾಬ್ ನದಾಫ್, ಚಂದ್ರಪ್ಪ ಹೊಸ್ಕೇರ, ರ೦ಗಮ್ಮ ಕಟ್ಟಿಮನಿ, ಚಂದ್ರರಡ್ಡಿ ಕಾಡಂಗೇರ, ಶರಣಪ್ಪ ಜಂಬಲದಿನ್ನಿ, ಅಯ್ಯಪ್ಪ ಅನಸೂರ ಜುಬೇರ ಪಾಷ, ಮಮಾತಾಜ್ ಬೇಗಂ, ರವಿಕುಮಾರ, ಅಂಬ್ಲಯ್ಯ ಬೇವಿಕಟ್ಟಿ ಇದ್ದರು.

***

ಕೂಲಿಕಾರರಿಗೆ ಬಾಕಿ ವೇತನ, ಕೊರೊನಾ ಪರಿಹಾರ, ಬಾಕಿ ಉಳಿಸಕೊಂಡ ಪ್ರೋತ್ಸಾಹಧನವನ್ನು ಕೂಡಲೇ ಪಾವತಿ ಮಾಡಬೇಕು

-ದಾವಲಸಾಬ್ ನದಾಫ್, ಜಿಲ್ಲಾಧ್ಯಕ್ಷ, ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT