ಮಂಗಳವಾರ, ಸೆಪ್ಟೆಂಬರ್ 27, 2022
27 °C
ರಾಜಕೀಯ ಪಕ್ಷಗಳ ಮುಖಂಡರೊಂದಿಗೆ ಜಿಲ್ಲಾಧಿಕಾರಿ ಸಭೆ

ಆಧಾರ್‌ ಜೋಡಣೆಗೆ ಸಹಕರಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ಚುನಾವಣೆ ಗುರುತಿನ ಚೀಟಿಗೆ ಆಧಾರ್ ಜೋಡಣೆ ಮಾಡಲು ಸಾರ್ವಜನಿಕರಿಗೆ ಪ್ರೇರಣೆ ನೀಡಿ ಎಂದು ರಾಜಕೀಯ ಪಕ್ಷಗಳ ಮುಖಂಡರಿಗೆ ಎಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್. ಮನವಿ ಮಾಡಿದರು.

ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಬುಧವಾರ ನಡೆದ ಚುನಾವಣೆ ಗುರುತಿನ ಚೀಟಿಗೆ ಆಧಾರ್‌ ಜೋಡಣೆ ಕುರಿತಂತೆ ರಾಜಕೀಯ ಪಕ್ಷಗಳ ಮುಖಂಡರೊಂದಿಗೆ ಸಭೆಯಲ್ಲಿ ಅವರು ಮಾತನಾಡಿದರು.

ಗುರುತಿನ ಚೀಟಿ ಜತೆಗೆ ಆಧಾರ್ ಕಾರ್ಡ್ ಲಿಂಕ್ ಮಾಡಲು ಅವಕಾಶವಿದೆ. ಆಧಾರ್ ಕಾರ್ಡ್ ಇಲ್ಲದಿದ್ದರೆ ಪರ್ಯಾಯ ದಾಖಲಾತಿಯೂ ನೀಡಬಹುದಾಗಿದೆ. ಆಧಾರ್ ಸಂಖ್ಯೆ ಒದಗಿಸುವುದು ಸಂಪೂರ್ಣವಾಗಿ ಸ್ವಯಂ ಪ್ರೇರಿತವಾಗಿದೆ. ಆಧಾರ್ ಜೋಡಣೆ ಕಡ್ಡಾಯವಲ್ಲ, ಬದಲಾಗಿ ಮತದಾರರ ಆಧಾರ್ ಮತ್ತು ಮತದಾರರ ಚೀಟಿ ಜೋಡಣೆಯಾದರೆ ಹಲವು ಪ್ರಯೋಜನಗಳಿವೆ ಎಂದು ಮಾಹಿತಿ
ನೀಡಿದರು.

ಮುಖ್ಯವಾಗಿ ನಕಲಿ ಮತದಾನದ ಕಿರಿಕಿರಿ ತಪ್ಪಲಿದೆ. ಮತಗಟ್ಟೆ ಅಧಿಕಾರಿಯು ಮತದಾರರ ಆಧಾರ್ ಗುರುತಿನ ಚೀಟಿ ಪಡೆದು ದಾಖಲು ಮಾಡಿಕೊಳ್ಳುತ್ತಾರೆ. ಒಮ್ಮೆ ಮತದಾರರ ಆಧಾರ್ ಕಾರ್ಡ್ ಸಂಖ್ಯೆ ದಾಖಲಾದರೆ, ಮತ್ತೊಂದು ಬೂತ್‌ಗೆ ಹೋಗಿ ನಕಲಿ ಮತದಾನ ಮಾಡಿ ವಂಚಿಸುವುದು ತಪ್ಪಲಿದೆ ಎಂದು ತಿಳಿಸಿದರು.

ಆನ್‌ಲೈನ್, ಆಫ್‌ಲೈನ್‌ಲ್ಲಿಯೂ ಸಲ್ಲಿಸಬಹುದು: NVSP, VHA, ERONET ಮತ್ತು GARUDA ಅಪ್ಲಿಕೇಶನ್‌ಗಳಲ್ಲಿ ಫಾರ್ಮ್ 6 ಅನ್ನು ಪಡೆದು ಆಧಾರ್‌ ಸಂಖ್ಯೆಯನ್ನು ಜನರು ಸ್ವಯಂ ನೋಂದಾಯಿಸಬಹುದು ಎಂದರು.

ಬೂತ್ ಮಟ್ಟದ ಕಚೇರಿಯಲ್ಲಿ ಅರ್ಜಿಯನ್ನು ಸಲ್ಲಿಸುವ ಮೂಲಕ ಮತದಾರರ ಗುರುತಿನ ಚೀಟಿಯೊಂದಿಗೆ ಆಧಾರ್ ಲಿಂಕ್ ಮಾಡಬಹುದಾಗಿದೆ. ಬೂತ್ ಮಟ್ಟದ ಅಧಿಕಾರಿಯು ಎಲ್ಲಾ ವಿವರಗಳನ್ನು ಪರಿಶೀಲಿಸುತ್ತಾರೆ. ವಿವರಗಳನ್ನು ಪರಿಶೀಲಿಸಲು ನಿಮ್ಮ ಮನೆಗಳಿಗೆ ಭೇಟಿ ನೀಡಬಹುದು. ಒಮ್ಮೆ ಪರಿಶೀಲಿಸಿದರೆ, ನಂತರ ಅದು ದಾಖಲೆಗಳಲ್ಲಿ ಕಾಣಿಸಿಕೊಳ್ಳಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಪರ್ಯಾಯ ದಾಖಲೆಗಳು: ಆಧಾರ್ ಸಂಖ್ಯೆಯನ್ನು ಹೊಂದಿರದವರು ಒದಗಿಸಬಹುದಾದ ಪರ್ಯಾಯ ದಾಖಲೆಗಳಾದ ನರೇಗಾ ಜಾಬ್ ಕಾರ್ಡ್, ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್ ನೀಡಿದ ಭಾವಚಿತ್ರವಿರುವ ಪಾಸ್ ಬುಕ್, ಕಾರ್ಮಿಕ ಇಲಾಖೆ ನೀಡಿದ ಆರೋಗ್ಯ ವಿಮಾ ಸ್ಮಾರ್ಟ್ ಕಾರ್ಡ್, ಚಾಲನಾ ಪರವಾನಗಿ, ಪ್ಯಾನ್ ಕಾರ್ಡ್, ಎನ್‌ಪಿ ಆರ್ ಅಡಿಯಲ್ಲಿ ನೀಡಿದ ಆರ್‌ಜಿಐ ನೀಡಿದ ಸ್ಮಾರ್ಟ್ ಕಾರ್ಡ್, ಭಾರತೀಯ ಪಾಸ್‌ಪೋರ್ಟ್, ಭಾವಚಿತ್ರವಿರುವ ಪಿಂಚಣಿ ದಾಖಲೆಗಳು, ರಾಜ್ಯ ಮತ್ತು ಕೇಂದ್ರ ಸರ್ಕಾರ ನೀಡಿದ ಭಾವಚಿತ್ರವಿರುವ ಸೇವಾ ಗುರುತಿನ ಚೀಟಿ, ಸಂಸದರು, ಶಾಸಕರು, ಎಂಎಲ್ಸಿಗಳಿಗೆ ನೀಡಲಾದ ಅಧಿಕೃತ ಗುರುತಿನ ಚೀಟಿ, ಕೇಂದ್ರ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯಿಂದ ನೀಡಲಾದ ವಿಶಿಷ್ಟ ಗುರುತಿನ ಚೀಟಿಯ ದಾಖಲೆಗಳನ್ನು ನಮೂದಿಸಬಹುದಾಗಿದೆ ಎಂದು ತಿಳಿಸಿದರು.

ಈ ವೇಳೆ ಹೆಚ್ಚುವರಿ ಜಿಲ್ಲಾಧಿಕಾರಿ ಶರಣಬಸಪ್ಪ ಕೋಟೆಪ್ಪಗೊಳ, ಚುನಾವಣಾ ತಹಶೀಲ್ದಾರ್‌ ಸಂತೋಷರಾಣಿ, ರಾಜಕೀಯ ಮುಖಂಡರಾದ ನಾಗರತ್ನ ಅನಪುರ, ಶಾಂತಪ್ಪ ಡಿ ಜಾಧವ್, ವಿಶ್ವನಾಥ ಸಿರವಾರ, ಅಬ್ದುಲ್ ಕರೀಮ್, ಎಚ್.ಆರ್.ಮೊಕಾಶಿ, ಚೆನ್ನಾರೆಡ್ಡಿ ಬಿಳ್ಹಾರ, ಸುರೇಶ ಜೈನ್, ಜಗನ್ನಾಥ ಎಸ್ ಚಿಂತನಹಳ್ಳಿ, ಬಸವರಾಜ ಠಾಣಗುಂದಿ, ಲಿಂಗಪ್ಪ ಪೂಜಾರಿ
ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು