ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

6 ಸಾವಿರ ಅರ್ಜಿಗಳ ವಿಲೇವಾರಿ: ಡಾ.ರಾಗಪ್ರಿಯಾ

ವಡಿಗೇರಾ ತಾಲ್ಲೂಕಿನ ಹೈಯ್ಯಾಳ (ಬಿ) ಗ್ರಾಮದಲ್ಲಿ ‘ಜಿಲ್ಲಾಧಿಕಾರಿ ನಡೆ- ಹಳ್ಳಿಯ ಕಡೆ’ ಕಾರ್ಯಕ್ರಮ: ಹಲವು ಸಮಸ್ಯೆಗಳನ್ನು ಮುಂದಿಟ್ಟ ಜನ
Last Updated 17 ಏಪ್ರಿಲ್ 2022, 5:01 IST
ಅಕ್ಷರ ಗಾತ್ರ

ಹೈಯ್ಯಾಳ (ಬಿ)(ಯಾದಗಿರಿ): ‘ಜಿಲ್ಲಾಧಿಕಾರಿ ನಡೆ-ಹಳ್ಳಿಯ ಕಡೆ ಕಾರ್ಯಕ್ರಮದ ಮೂಲಕ ಗ್ರಾಮೀಣ ಭಾಗದ ಜನರ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ನೀಡಲು ಜಿಲ್ಲಾಡಳಿತ ಸದಾ ಸಿದ್ಧವಾಗಿದೆ. ಇಲ್ಲಿಯವರೆಗೆ ಜಿಲ್ಲೆಯಲ್ಲಿ ಸುಮಾರು 6 ಸಾವಿರ ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ’ ಎಂದು ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್. ತಿಳಿಸಿದರು.

ವಡಗೇರಾ ತಾಲ್ಲೂಕಿನ ಹೈಯ್ಯಾಳ (ಬಿ) ಗ್ರಾಮದಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ಜಿಲ್ಲಾಧಿಕಾರಿ ನಡೆ-ಹಳ್ಳಿಯ ಕಡೆ’ ಕಾರ್ಯಕ್ರಮದಲ್ಲಿ ಗ್ರಾಮದ ಜನರ ಅಹವಾಲುಗಳನ್ನು ಸ್ವೀಕರಿಸಿ, ಸ್ಥಳದಲ್ಲೇ 42 ಅರ್ಜಿಗಳನ್ನು ಇತ್ಯರ್ಥಪಡಿಸಿ ಅವರು ಮಾತನಾಡಿದರು.

ಕಂದಾಯ ಇಲಾಖೆಗಳಲ್ಲಿನ ಪಹಣಿ ತಿದ್ದುಪಡಿ 11, ಪಡಿತರ ಚೀಟಿ 13, ಅಂಗವಿಕಲ ಮಾಸಾಶನ 1, ಇಂದಿರಾ ಗಾಂಧಿ ವೃದ್ಧಾಪ್ಯ ವೇತನ 11, ವಿಧವಾ ವೇತನ 2, ಸಂಧ್ಯಾಸುರಕ್ಷಾ ವೇತನ 3, ಇನ್ನಿತರ 1 ಒಟ್ಟು 42 ಅರ್ಜಿಗಳನ್ನು ಸ್ಥಳದಲ್ಲೇ ಇತ್ಯರ್ಥ ಪಡಿಸಿದರು.

ಜಮೀನು ಸರ್ವೆ, ಟಿಪ್ಪಣಿ, ಪಹಣಿ ತಿದ್ದುಪಡಿ, ರಸ್ತೆ , ಚರಂಡಿ, ಮನೆ ಮಂಜೂರಾತಿ ಮೂಲ ಸೌಕರ್ಯ, ವಿದ್ಯುತ್ ಸಮಸ್ಯೆ ಹಾಗೂ ಸಾರಿಗೆ, ಶಿಕ್ಷಣ ಇಲಾಖೆಗಳಿಗೆ ಸೇರಿದ ಅರ್ಜಿ ಸೇರಿ ಒಟ್ಟು 116 ಅರ್ಜಿಗಳು ಬಂದಿದ್ದು, ಅರ್ಜಿಗಳ ಇತ್ಯರ್ಥಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಈ ಕಾರ್ಯಕ್ರಮ ಕೇವಲ ಅರ್ಜಿಗಳನ್ನು ಸ್ವೀಕಾರ ಮಾಡುವುದಲ್ಲದೇ ಗ್ರಾಮವನ್ನು ಅಭಿವೃದ್ಧಿ ಮಾಡುವ ಉದ್ದೇಶ ಹೊಂದಿದೆ ಎಂದು ಹೇಳಿದರು.

ತ್ರೀ ಆ್ಯಂಡ್ ನೈನ್ ( 3 ಮತ್ತು 9 ಕಲಂ) ಮಿಸ್ ಮ್ಯಾಚ್, ಪೈಕಿ ಪಹಣಿ, ಮೋಜನಿ ಕಡತಗಳು, ಪಿಂಚಣಿ, ಆಶ್ರಯ ಯೋಜನೆ, ಪೌತಿ ಖಾತೆ, ಮತದಾರರ ಪಟ್ಟಿ ಪರಿಷ್ಕರಣೆ, ಬರ, ಪ್ರವಾಹ ಪರಿಶೀಲನೆ ಹಾಗೂ ಪರಿಹಾರ ನೀಡುವುದು, ಅರ್ಹ ಕುಟುಂಬಗಳಿಗೆ ಬಿಪಿಎಲ್ ಕಾರ್ಡ್ ಹಂಚಿಕೆ, ಪೋಡಿ ಪ್ರಕರಣ ಇತ್ಯರ್ಥಕ್ಕೆ ಸಂಬಂಧಿಸಿದ ಅಡೆತಡೆ ನಿವಾರಣೆ ಸಂಬಂಧ ಅರ್ಜಿಗಳನ್ನು ಕೊಡಬಹುದು ಎಂದು ಜಿಲ್ಲಾಧಿಕಾರಿ ಸಾರ್ವಜನಿಕರಿಗೆ ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಕೇವಲ ಕಂದಾಯ ಇಲಾಖೆಗೆ ಸಂಬಂಧಪಟ್ಟ ಸಮಸ್ಯೆಗಳಿಗೆ ಪರಿಹಾರ ಮಾತ್ರವಲ್ಲ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಪಂಚಾಯಿತಿ ಅಭಿವೃದ್ಧಿ ಇಲಾಖೆ ಇನ್ನಿತರ ಯಾವುದೇ ಇಲಾಖೆಗೆ ಸಂಬಂಧಪಟ್ಟ ಸಮಸ್ಯೆಗಳನ್ನು ನಮ್ಮ ಗಮನಕ್ಕೆ ತಂದರೆ ಜಿಲ್ಲಾಡಳಿತ ಹಂತದಲ್ಲಿ ಇರುವ ಸಮಸ್ಯೆಗಳಿದ್ದರೆ ಪರಿಹರಿಸುತ್ತೇವೆ ಎಂದರು.

ಈ ವೇಳೆ ಉಪವಿಭಾಗಾಧಿಕಾರಿ ಶಾ ಆಲಂ ಹುಸೇನ್, ತಹಶೀಲ್ದಾರ್‌ ಸುರೇಶ ಅಂಕಲಗಿ, ಹೈಯ್ಯಾಳ ಗ್ರಾಮ ಪಂಚಾಯಿತಿ ಅಧ್ಯಕ್ಷ ಮೌನೇಶ ಪೂಜಾರಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಪ್ರಭಾಕರ್ ಕವಿತಾಳ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಚನ್ನಬಸವ ಎಸ್, ದೇವರಾಜ ಅರಸು ನಿಗಮ ನಿರ್ದೇಶಕ ಪ್ರಭು ದೊರೆ, ಗ್ರೇಡ್ - 2 ತಹಶೀಲ್ದಾರ್‌ ಪ್ರಕಾಶ ಹೊಸಮನಿ, ಉಪ ತಹಶೀಲ್ದಾರ್‌ ಸಿದ್ದಯ್ಯಸ್ವಾಮಿ, ಪಶು ಇಲಾಖೆ ಮತ್ತು ಪಶುಪಾಲನೆ ಸೇವಾ ಇಲಾಖೆ ಉಪನಿರ್ದೇಶಕ ರಾಜು ದೇಶಮುಖ್, ಕೃಷಿ ಇಲಾಖೆ ಅಧಿಕಾರಿ ಡಾ.ಬಾಲರಾಜ್ ರಂಗರಾವ್, ರಸ್ತೆ ಸಾರಿಗೆ ವಿಭಾಗೀಯ ಸಂಚಾಲನಾಧಿಕಾರಿ ರಮೇಶ ಪಾಟೀಲ ಇದ್ದರು.

ಸುರಪುರ: 46 ಅರ್ಜಿ ವಿಲೇವಾರಿ

ಸುರಪುರ:‘ಜಮೀನುಗಳಿಗೆ ಸಂಬಂಧಪಟ್ಟ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ಸೂಚಿಸುವುದು ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ ಕಾರ್ಯಕ್ರಮದ ಉದ್ದೇಶ. ಸೇವೆ ನೀಡಲು ಸರ್ಕಾರ ನಿಮ್ಮ ಮನೆ ಬಾಗಿಲಿಗೆ ಬಂದಿದೆ’ ಎಂದು ತಹಶೀಲ್ದಾರ್ ಸುಬ್ಬಣ್ಣ ಜಮಖಂಡಿ ಹೇಳಿದರು.

ತಾಲ್ಲೂಕಿನ ಕವಡಿಮಟ್ಟಿ ಗ್ರಾಮದಲ್ಲಿ ಶನಿವಾರ ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿ,‘ಜಮೀನಿನ ವಾರ್ಸಾ, ವರ್ಗಾವಣೆ, ಪಹಣಿ ತಿದ್ದುಪಡಿ, ಸ್ಮಶಾನಭೂಮಿ, ವಿಧವಾ, ಸಂಧ್ಯಾ ಸುರಕ್ಷೆ, ಮಸಾಶನ ಸೇರಿದಂತೆ ಕಂದಾಯ ಇಲಾಖೆಗೆ ಸಂಬಂಧಪಟ್ಟ ಸಮಸ್ಯೆಗಳಿಗೆ ಪರಿಹಾರ ಸೂಚಿಸಲಾಗುವುದು’ ಎಂದರು.

‘ಜಮೀನುಗಳ ಸರ್ವೆ, ಹದ್ದು ಬಸ್ತು, ಮೋಜಣಿ, ರೇಷನ್ ಕಾರ್ಡ್ ತಿದ್ದುಪಡಿ, ಸೇರ್ಪಡೆ, ಆಧಾರ್ ಕಾರ್ಡ್, ಈ ಶ್ರಮ ಕಾರ್ಡ್, ಕಾರ್ಮಿಕ ಕಾರ್ಡ್, ಆರೋಗ್ಯ ಕಾರ್ಡ್ ಸೇರಿದಂತೆ ಇನ್ನಿತರ ಸಮಸ್ಯೆಗಳ ಅರ್ಜಿಗಳನ್ನು ಸಂಬಂಧಪಟ್ಟ ಇಲಾಖೆಗೆ ಕಳುಹಿಸಿ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.

ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಆರ್.ವಿ. ನಾಯಕ ಮಾತನಾಡಿ, ‘ಪ್ರಧಾನಮಂತ್ರಿ ಆರೋಗ್ಯ ಭಾಗ್ಯ ಯೋಜನೆ ಅಡಿ ಬಿಪಿಎಲ್ ಕಾರ್ಡ್ ಹೊಂದಿರುವ ಫಲಾನುಭವಿಗೆ ₹5 ಲಕ್ಷದವರೆಗೆ ಉಚಿತ ಆರೋಗ್ಯ ಸೇವೆ ಸಿಗಲಿದೆ’ ಎಂದರು.

ಕಂದಾಯ ಇಲಾಖೆಯ 71 ಅರ್ಜಿಗಳು, ತಾ.ಪಂ.–12, ಕೆಬಿಜೆಎನ್‌ಎಲ್‌-1, ಜೆಸ್ಕಾಂ-2, ಎಡಿಎಲ್‍ಆರ್-1, ಸಾರಿಗೆ ಸಂಸ್ಥೆ-1 ಸೇರಿ ಒಟ್ಟು 88 ಅರ್ಜಿಗಳು ಸಲ್ಲಿಕೆಯಾಗಿದ್ದು, ಕಂದಾಯ ಇಲಾಖೆಯ 46 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. 25 ಅರ್ಜಿಗಳನ್ನು ಆಯಾ ಇಲಾಖೆಗಳಿಗೆ ರವಾನಿಸಲಾಯಿತು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಲ್ಲಮ್ಮ, ಪಿಡಿಒ ಸಂಗೀತಾ ಸಜ್ಜನ್, ಆರ್‌ಡಿಪಿಆರ್ ಎಇಇ ಹಣಮಂತಪ್ಪ ಅಂಬಲಿ, ಸಮಾಜ ಕಲ್ಯಾಣ ಇಲಾಖೆ ಎಡಿ ಸತ್ಯನಾರಾಯಣ ದರಬಾರಿ, ಎಸ್‍ಟಿ ಇಲಾಖೆ ಎಡಿ ಸಲೀಂ, ಬಿಇಒ ಮಹಾದೇವರೆಡ್ಡಿ, ಪಶುಸಂಗೋಪನಾ ಇಲಾಖೆ ಎಡಿ ಡಾ. ಸುರೇಶ್ ಹಚ್ಚಡ, ತಾ.ಪಂ. ವ್ಯವಸ್ಥಾಪಕ ವೆಂಕಟೇಶ ಬಾಕಲಿ ಇದ್ದರು.

‘ಯೋಜನೆಗಳ ಲಾಭ ಪಡೆಯಿರಿ’

ಕಾಮನಟಗಿ (ಹುಣಸಗಿ): ‘ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಸಾರ್ವಜನಿಕರಿಗೆ ತಲುಪಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮ ಸಹಕಾರಿ’ ಎಂದು ಹುಣಸಗಿ ತಹಶಿಲ್ದಾರ್ ಅಶೋಕ ಸುರಪುರಕರ್ ಹೇಳಿದರು.

ಕಾಮನಟಗಿ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ನಡೆದ ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಮಸ್ಯೆಗಳನ್ನು ತ್ವರಿತವಾಗಿ ಬಗೆಹರಿಸಲು ಪ್ರಯತ್ನಿಸಲಾಗುವುದು ಎಂದರು.

ಗ್ರೇಡ್-2 ತಹಶಿಲ್ದಾರ್ ಮಹಾದೇವಪ್ಪಗೌಡ ಬಿರಾದಾರ ಹಾಗೂ ಸಿಡಿಪಿಒ ಲಾಲಸಾಬ್ ಮಾತನಾಡಿ,‘ಸಾರ್ವಜನಿಕರು ಇಂಥ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮೂಲಕ ತಮ್ಮ ಸಮಸ್ಯೆಗಳನ್ನು ಪರಿಹರಿಸಿ ಕೊಳ್ಳಬೇಕು. ಗ್ರಾಮೀಣಾಭಿವೃದ್ಧಿಯ ಕನಸನ್ನು ಸಾಕಾರಗೊಳಿಸಬೇಕು’ ಎಂದು ಹೇಳಿದರು. ಜಮೀನು ದಾಖಲಾತಿ ಸರಿಪಡಿಸುವುದು, ರಸ್ತೆ, ಬಲಶೆಟ್ಟಿಹಾಳ ಗ್ರಾಮದಲ್ಲಿ ರಸ್ತೆ ನಿರ್ಮಾಣ, ಬಸ್ ಸೇವೆ, ಪಿಯುಸಿ ಕಾಲೇಜು, ಸ್ಮಶಾನ ಭೂಮಿ ಮಂಜೂರು ಸೇರಿದಂತೆ ಇತರ ಸಮಸ್ಯೆಗಳ ಒಟ್ಟು 59 ಮನವಿಗಳು ಸಲ್ಲಿಕೆಯಾದವು. ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಶಂಕನಾಯಕ ಕರೇಕಲ್ಲ, ಜೆಸ್ಕಾಂ ಎಇಇ ಮಹಮ್ಮದ್ ರಫೀಕ್, ಗವಿಸಿದ್ದಯ್ಯ, ಹಣಮರಡ್ಡಿ ಪಾಟೀಲ, ತಾಲ್ಲೂಕು ಪಂಚಾಯಿತಿಯ ಬೂದೆಪ್ಪ ಪವಾರ್ ಇದ್ದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಿದ್ರಾಮಪ್ಪ ಪಾಟೀಲ ಸ್ವಾಗತಿಸಿದರು. ಕಾರ್ಯದರ್ಶಿ ಕಾಸೀಂಸಾಬ್ ವಂದಿಸಿದರು.

46 ಅರ್ಜಿ ಸ್ವೀಕಾರ

ಶಹಾಪುರ: ‘ತಾಲ್ಲೂಕಿನ ಮುಡಬೂಳ ಗ್ರಾಮದಲ್ಲಿ ಶನಿವಾರ ನಡೆದ ‘ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ’ ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಗಳ ಸಮಸ್ಯೆಗಳಿಗೆ ಸಂಬಂಧಿಸಿದಂತೆ 46 ಅರ್ಜಿಗಳನ್ನು ಸ್ವೀಕರಿಸಿ ಅದರಲ್ಲಿ 15 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ’ ಎಂದು ತಹಶೀಲ್ದಾರ್ ಮಧುರಾಜ ಕೂಡ್ಲಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಂದಾಯ 25, ಪಂಚಾಯತ್‌ ರಾಜ್ 13, ಜೆಸ್ಕಾಂ, 2 ಸರ್ವೆ ಇಲಾಖೆ 4, ಸಮಾಜ ಕಲ್ಯಾಣ ಇಲಾಖೆ ಹಾಗೂ ವಿಶ್ವಕರ್ಮ ಅಭಿವೃದ್ದಿ ನಿಗಮ ತಲಾ ಒಂದು ಅರ್ಜಿಯನ್ನು ಸ್ವೀಕರಿಸಲಾಯಿತು. ಅದರಲ್ಲಿ ವಿವಿಧ ಇಲಾಖೆಗಳ ಸಮಸ್ಯೆಗಳಿಗೆ ಸೇರಿದ 15 ಅರ್ಜಿಗಳನ್ನು ಸ್ಥಳದಲ್ಲಿಯೇ ವಿಲೇವಾರಿ ಮಾಡಲಾಯಿತು ಎಂದು ಹೇಳಿದ್ದಾರೆ.

ತಾಲ್ಲೂಕಿನ ವಿವಿಧ ಇಲಾಖೆಗಳ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

‘ಕಾಟಾಚಾರದ ನಡೆ’: ‘ತಾಲ್ಲೂಕಿನ ಮುಡಬೂಳ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ‘ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ’ ಕಾರ್ಯಕ್ರಮ ಕಾಟಾಚಾರಕ್ಕೆ ಎಂಬಂತೆ ನಡೆದಿದೆ. ತಾಲ್ಲೂಕಿನ ಅಧಿಕಾರಿಗಳು ಗ್ರಾಮದ ಸಮಸ್ಯೆಗಳನ್ನು ಅತ್ಯಂತ ಹಗುರವಾಗಿ ತೆಗೆದುಕೊಂಡಿದ್ದಾರೆ. ಮೇಲಧಿಕಾರಿಗಳಿಗೆ ವರದಿ ನೀಡುತ್ತೇವೆ ಎಂದು ಹಾರಿಕೆ ಉತ್ತರ ನೀಡಿರುವುದು ಬೇಸರ ಮೂಡಿಸಿದೆ’ ಎಂದು ಮುಡಬೂಳ ಗ್ರಾಮದ ರೈತ ಮುಖಂಡ ಅಶೋಕರಾವ ಮಲ್ಲಾಬಾದಿ, ಮಲ್ಲಣ್ಣ ದ್ಯಾವಗೊಂಡ ಹಾಗೂ ಶಾಂತಗೌಡ ಪಾಟೀಲ ಆರೋಪಿಸಿದ್ದಾರೆ.

ಕೇವಲ ಅರ್ಜಿಗಳನ್ನು ಸ್ವೀಕರಿಸಲು ಇಲ್ಲಿಗೆ ಬಂದಿದ್ದಾರೆ. ಗ್ರಾಮವು ಹತ್ತಾರು ಸಮಸ್ಯೆಗಳನ್ನು ಹೊತ್ತುಕೊಂಡು ಮಲಗಿದೆ. ಕೊನೆಪಕ್ಷ ಸಮಸ್ಯೆಗೆ ಸೂಕ್ತ ಪರಿಹಾರದ ಭರವಸೆಯನ್ನೂ ನೀಡಿಲ್ಲ’ ಎಂದು ಅವರು ಆಕ್ರೋಶ ಹೊರ ಹಾಕಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT