ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ: ವಾರ್ಡ್‌ಗೆ ₹5 ಲಕ್ಷ ಕಾಯ್ದಿರಿಸಲು ತೀರ್ಮಾನ

ನಗರಸಭೆ ಅಧ್ಯಕ್ಷ ಸುರೇಶ ಅಂಬಿಗೇರ ನೇತೃತ್ವದ ಸಾಮಾನ್ಯ ಸಭೆಯಲ್ಲಿ ಅನುಮೋದನೆ
Last Updated 27 ಜನವರಿ 2023, 16:16 IST
ಅಕ್ಷರ ಗಾತ್ರ

ಯಾದಗಿರಿ: ನಗರಸಭೆ ಅಧ್ಯಕ್ಷ ಸುರೇಶ ಅಂಬಿಗೇರ ನೇತೃತ್ವದಲ್ಲಿ ಶುಕ್ರವಾರ ಸಾಮಾನ್ಯ ಸಭೆ ನಡೆಯಿತು. ನಗರಸಭೆ ವ್ಯಾಪ್ತಿಯಲ್ಲಿ ಬರುವ 31 ವಾರ್ಡ್‌ಗಳಿಗೆ ತುರ್ತಾಗಿ ವಿವಿಧ ಕಾಮಗಾರಿಗಳಿಗೆ ಪ್ರತಿ ವಾರ್ಡ್‌ಗೆ ₹ 5 ಲಕ್ಷ ಕಾಯ್ದಿರಿಸಲು ಒಮ್ಮತದಿಂದ ನಿರ್ಣಯಿಸಲಾಯಿತು.

ಸಭೆಯಲ್ಲಿ ಹಲವು ವಿಷಯಗಳನ್ನು ಚರ್ಚೆ ಮಾಡುವ ಮೂಲಕ ಸರ್ವಾನುಮತದಿಂದ ನಿರ್ಣಯ ಕೈಗೊಳ್ಳಲಾಯಿತು.

ಸಭೆ ಆರಂಭ ಆಗುತ್ತಿದ್ದಂತೆಯೇ ಹಿಂದಿನ ಸಾಮಾನ್ಯ ನಡವಳಿಗಳ ಮತ್ತು ವಿಶೇಷ ತುರ್ತು ಸಭೆ ನಡವಳಿಗಳಿಗೆ ಹಾಗೂ ಸ್ಥಾಯಿ ಸಮಿತಿ ಸಭೆಯ ನಡವಳಿಗಳಿಗೆ ಅನುಮೋದನೆ ಪಡೆಯಲಾಯಿತು.

ನಗರದ ಶಾಸ್ತ್ರಿ ವೃತ್ತದ ಸ್ಟೇಷನ್‌ ರಸ್ತೆಯಲ್ಲಿ ಬರುವ ಎಸ್‌ಬಿಐ ಬ್ಯಾಂಕ್‌ಗೆ ನೀಡಿರುವ ಸ್ಥಳದ ಬಗ್ಗೆ ಚರ್ಚೆ ನಡೆಯಿತು. ಸದಸ್ಯ ಹಣಮಂತ ಇಟಗಿ ಮಾತನಾಡಿ, ‘ಈ ಪ್ರಕರಣ ನ್ಯಾಯಾಲಯದಲ್ಲಿದೆ. ಇದನ್ನು ನಾವು ಗೆಲುವು ಸಾಧಿಸಲು ಎಲ್ಲ ರೀತಿಯಿಂದ ದಾಖಲಾತಿಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು’ ಎಂದು ತಿಳಿಸಿದರು. ಇದಕ್ಕೆ ಪೌರಾಯುಕ್ತ ಶರಣಪ್ಪ, ‘ಸಂಬಂಧಿಸಿದ ಎಲ್ಲ ದಾಖಲಾತಿ ನೀಡಲಾಗುವುದು’ ಎಂದರು.

ಸದಸ್ಯ ಹಣಮಂತ ಇಟಗಿ ಮಾತನಾಡಿ, ‘ಸರ್ವೇ ನಂ. 387ರಲ್ಲಿ ನಿವೇಶನಗಳಿವೆ. ಅವುಗಳನ್ನು ಇನ್ನೂ ಮಾಡಿಕೊಡುತ್ತಿಲ್ಲ. ಅಧಿಕಾರಿಗಳು ಹಿಂದೇಟು ಹಾಕುತ್ತಿರುವುದು ಸರಿಯಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ಪೌರಾಯುಕ್ತರು, ‘ಸೂಕ್ತವಾಗಿ ಪರಿಶೀಲನೆ ಮಾಡಿ ಫೆ.10ರೊಳಗೆ ಸಮಸ್ಯೆ ನಿವಾರಿಸಲಾಗುವುದು’ ಎಂದು ಭರವಸೆ ನೀಡಿದರು.

ಸದಸ್ಯ ವಿಲಾಸ್ ಪಾಟೀಲ, ‘ಹಲವು ಕಾಮಗಾರಿಗಳ ಬಿಲ್ ಸುಮಾರು ₹ 6 ಲಕ್ಷ ಬಾಕಿ ಉಳಿದುಕೊಂಡಿದೆ. ಇದನ್ನು ಕೂಡಲೇ ಸಂಬಂಧಪಟ್ಟವರಿಗೆ ಪಾವತಿ ಮಾಡಬೇಕು’ ಎಂದಾಗ ‘ವಾರದಲ್ಲಿಯೇ ನೀಡಲಾಗುವುದು’ ಎಂದು ಪೌರಾಯುಕ್ತರು ಹೇಳಿದರು.

ಸದಸ್ಯೆ ಪ್ರಭಾವತಿ ಕಲಾಲ್, ‘ಅಧಿಕಾರಿಗಳು ವಿಳಂಬ ಧೋರಣೆ ಮಾಡಬಾರದು. ಸರ್ಕಾರದ ಸೌಲಭ್ಯ ಗಳನ್ನು ತಲುಪಿಸಲು ಪ್ರಾಮಾಣಿಕವಾಗಿ ಕೆಲಸ ಮಾಡಬೇಕಿದೆ’ ಎಂದರು.

2022ರ ಜೂನ್‌ 1ರಿಂದ ಸೆ.30ರ ವರೆಗಿನ ಆದಾಯ ಮತ್ತು ಖರ್ಚು ವೆಚ್ಚಗಳಿಗೆ ಅನುಮೋದನೆ ಹಾಗೂ ಯಾದಗಿರಿ ನಗರದ ಸರ್ವೇ ನಂಬರ್ 396/ಇ ಬಾಕಿ ಉಳಿದ 3,079 ಚದುರ ಅಡಿಯಲ್ಲಿ ಸಾರ್ವಜನಿಕರಿಗೆ ಮೀಸಲಿಟ್ಟ ಸ್ಥಳದಲ್ಲಿ ಈಗಾಗಲೇ ನೀಡಿರುವ ಆರೋಗ್ಯ ಇಲಾಖೆಗೆ ಇದರಲ್ಲಿ ಉಳಿದ ಸಿಎ ಸೈಟ್‌ನ್ನು ಮಾತಾ ಮಾಣಿಕೇಶ್ವರ ಮಹಿಳಾ ಸಂಘಕ್ಕೆ ನೀಡಲು ಎಲ್ಲ ಸದಸ್ಯರು ಒಪ್ಪಿಗೆ ನೀಡಿದರು.

ಯಾದಗಿರಿ ನಗರ ವ್ಯಾಪ್ತಿಯಲ್ಲಿ ಬರುವ 31 ವಾರ್ಡ್‌ಗಳ ಉದ್ಯಾನಗಳಿಗೆ ತಂತಿ ಬೇಲಿ ಅಳವಡಿಸುವುದು, ನಗರ ಸಭೆ ಕಾರ್ಯಾಲಯದ ಸಕ್ಕಿಂಗ್ ಮಷಿನನ್ನು ವಾರ್ಷಿಕವಾಗಿ ಏಜೆನ್ಸಿ ದಾರರಿಗೆ ಟೆಂಡರ್ ಮೂಲಕ ನೀಡು ವುದಕ್ಕೆ ಅನುಮೋದನೆ ನೀಡಲಾಯಿತು. ಇದಾದ ಮೇಲೆ ಜಿಲ್ಲಾ ಕೇಂದ್ರದಲ್ಲಿ ಪತ್ರಕರ್ತರ ಮನೆ ನಿರ್ಮಾಣಕ್ಕೆ ಸರ್ವೇ ನಂಬರ್ 284ರಲ್ಲಿ 1 ಎಕರೆ ಜಾಗ ವನ್ನು ಮಂಜೂರಾತಿ ಮಾಡಲು ಸರ್ವಾ ನುಮತದಿಂದ ನಿರ್ಣಯ ಕೈಗೊಳ್ಳುವ ಮೂಲಕ ಅನುಮೋದನೆ ನೀಡಿದರು.

ಉಪಾಧ್ಯಕ್ಷೆ ಚಂದ್ರಕಲಾ ಮಡ್ಡಿ, ಸ್ಥಾಯಿ ಸಮಿತಿ ಅಧ್ಯಕ್ಷೆ ರುಕಯ್ಯ ಬೇಗಂ ಸೇರಿದಂತೆ ಸದಸ್ಯರು ಹಾಗೂ ಅಧಿಕಾರಿಗಳು ಇದ್ದರು.

***

ಅಂಗಡಿಗಳ ತೆರವಿಗೆ ನಿರ್ಣಯ

ನಗರದ ಫುಟ್‌ಪಾತ್ ಆಕ್ರಮಿಸಿಕೊಂಡು ವ್ಯಾಪಾರ ವಹಿವಾಟು ನಡೆಸುತ್ತಿರುವ ಅಂಗಡಿಗಳನ್ನು ತೆರವುಗೊಳಿಸಬೇಕು ಎಂದು ಸಭೆಯಲ್ಲಿ ಸರ್ವಾನುಮತದಿಂದ ನಿರ್ಣಯ ಮಾಡಲಾಯಿತು. ಇದಲ್ಲದೇ 1970ರಿಂದ ಇಲ್ಲಿಯವರೆಗೆ ಆಶ್ರಯ ಮತ್ತು ನಗರಸಭೆಯ ಬಡಾವಣೆಗಳನ್ನು ಎಡಿಎಲ್‌ಆರ್ (ತಹಶೀಲ್ದಾರ್‌ ಕಚೇರಿ) ಇವರಿಂದ ವಿವಿಧ ಸರ್ವೇ ನಂಬರ್‌ಗಳ ಸರ್ವೇ ಮಾಡಿ ಹದ್ದು ಬಸ್ತು ಮಾಡಲು ಸಭೆಯಲ್ಲಿ ಸದಸ್ಯರು ಒಪ್ಪಿಗೆ ಸೂಚಿಸಿದರು.

2021-22ನೇ ಸಾಲಿನ ಎಸ್‌ಎಫ್‌ಸಿ ಮುಕ್ತನಿಧಿ ಅನುದಾದಡಿ ತೆಗೆದುಕೊಂಡ ನಿರ್ಣಯ ವಾರ್ಡ್ ನಂಬರ್ 9ರಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಾಣ ಕಾಮಗಾರಿಯನ್ನು ಬದಲಾವಣೆ ಮಾಡಿ ಸಿಸಿ ರಸ್ತೆ ನಿರ್ಮಾಣ ಕಾಮಗಾರಿ ತೆಗೆದುಕೊಳ್ಳುವ ಪರಿಷ್ಕೃತ ಕ್ರಿಯಾ ಯೋಜನೆ ತಯಾರಿಸುವ ಕುರಿತು ಸಭೆಯಲ್ಲಿ ನಿರ್ಣಯ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT