ಯಾದಗಿರಿ: ‘ಹಗರಣಗಳಿಂದ ನೈತಿಕತೆ ಕಳೆದುಕೊಂಡಿರುವ ರಾಜ್ಯ ಸರ್ಕಾರ ವಿಶೇಷವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು’ ಎಂದು ಬಿಜೆಪಿ ರಾಜ್ಯ ವಕ್ತಾರ ಎಚ್.ವೆಂಕಟೇಶ ದೊಡ್ಡೇರಿ ಆಕ್ರೋಶ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಾವಿರಾರು ಕೋಟಿ ರೂಪಾಯಿಯ ಮುಡಾ ಹಗರಣದಲ್ಲಿ ಸ್ವತಃ ಸಿಎಂ ಅವರೇ ಭಾಗಿಯಾಗಿದ್ದಾರೆ. ವಾಲ್ಮೀಕಿ ನಿಗಮದ ಹಗರಣದಲ್ಲಿ ಅಂದಿನ ಸಚಿವ ನಾಗೇಂದ್ರ ಕಿಂಗ್ ಪಿನ್ ಎಂದು ಇಡಿ ಆರೋಪ ಪಟ್ಟಿ ಸಲ್ಲಿಸಿದೆ. ಆದರೆ, ರಾಜ್ಯ ಸರ್ಕಾರದ ಎಸ್ಐಟಿ ನಾಗೇಂದ್ರ ಪಾತ್ರವೇ ಇಲ್ಲ ಎಂದು ಕ್ಲೀನ್ ಚೀಟ್ ನೀಡಿ ನಗೆಪಾಟಲೀಗೀಡಾಗಿದೆಯಲ್ಲದೇ ಹಗರಣ ನಡೆದಿರುವುದನ್ನು ಮುಚ್ಚಿಹಾಕಲು ಎಸ್‌ಐಟಿ ಬಳಸಿಕೊಳ್ಳಲು ಯತ್ನಿಸಿರುವುದು ಬಹಿರಂಗವಾದಂತಾಗಿದೆ’ ಎಂದು ವ್ಯಂಗ್ಯವಾಡಿದರು.
‘ಪಕ್ಷಪಾತ ಮಾಡುವುದಿಲ್ಲ ಎಂದು ಪ್ರಮಾಣ ವಚನ ಸ್ವೀಕರಿಸಿದ ಸಚಿವ ಪ್ರಿಯಾಂಕ್ ಖರ್ಗೆ ಅವರು ತಮ್ಮ ಟ್ರಸ್ಟ್‌ಗೆ ನೋಂದಣಿ ಮಾಡಿಸಿಕೊಂಡ ಒಂದೇ ತಿಂಗಳಲ್ಲಿಯೇ 5 ಎಕರೆ ಭೂಮಿ ಮಂಜೂರು ಮಾಡಿಸಿಕೊಂಡು ಅಧಿಕಾರದ ಸ್ಪಷ್ಟ ದುರುಪಯೋಗ ಮಾಡಿಕೊಂಡು ಅಕ್ರಮ ಎಸಗಿದ್ದಾರೆ’ ಎಂದು ಆರೋಪಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತ ಪಡೆದುಕೊಂಡು ಅಧಿಕಾರಕ್ಕೆ ಬಂದ ಮೇಲೆ ಜನಾದೇಶಕ್ಕೆ ನಾವು ಗೌರವ ನೀಡಿ ವಿಪಕ್ಷ ಸ್ಥಾನದಲ್ಲಿ ಕುಳಿತಿದ್ದೇವೆ. ಆದರೆ, ಆಡಳಿತ ಪಕ್ಷದಲ್ಲಿ ಕುಳಿತ ಕಾಂಗ್ರೆಸ್ ವರ್ಷದಲ್ಲಿಯೇ ಸಾಲು ಸಾಲು ಹಗರಣ ಮಾಡಿ ಕೋಟ್ಯಂತರ ರೂಪಾಯಿ ದರೋಡೆ ಮಾಡಿದೆ ಎಂದು ಆರೋಪಿಸಿದರು.
ಬಿಜೆಪಿ ರಾಜ್ಯ ಮಾಧ್ಯಮ ಸಮಿತಿ ಸದಸ್ಯ ವೆಂಕಟಪ್ರಸಾದ್ ಮಾಲಿಪಾಟೀಲ, ಅಲೆಮಾರಿ ಅರೆ ಅಲೆಮಾರಿ ನಿಗಮದ ಮಾಜಿ ಅಧ್ಯಕ್ಷ ದೇವಿಂದ್ರನಾಥ ನಾದ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪರುಶುರಾಮ ಕುರಕುಂದಿ, ನಗರಸಭೆ ಸದಸ್ಯ ಹಣಮಂತ ಇಟಗಿ, ಎಸ್.ಸಿ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ಭೀಮಾಶಂಕರ ಬಿಲ್ಲವ, ಜಿಲ್ಲಾ ಮಾಧ್ಯಮ ಸಂಚಾಲಕ ವಿರುಪಾಕ್ಷಯ್ಯ ಸ್ವಾಮಿ ಹೆಡಗಿಮದ್ರಾ ಹಾಗೂ ಸಹ ಸಂಚಾಲಕ ಚಂದ್ರಶೇಖರ ಕಡೆಸೂರ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.