ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸುರಪುರ: ಸಮೃದ್ಧ ಸೆಲೆಯ ‘ದೇವರಬಾವಿ’

ಅನನ್ಯ ಕಟ್ಟಡ ನೈಪುಣ್ಯದ ಮೋಹಕ ‘ಕಲ್ಯಾಣಿ’
Published 12 ಮೇ 2024, 4:44 IST
Last Updated 12 ಮೇ 2024, 4:44 IST
ಅಕ್ಷರ ಗಾತ್ರ

ಸುರಪುರ:  ನಗರದ ಮಹಾಕವಿ ಲಕ್ಷ್ಮೀಶ ಮಾರ್ಗದಲ್ಲಿರುವ ಐತಿಹಾಸಿಕ ‘ದೇವರಬಾವಿ’ ಇಂದಿಗೂ ಸುಸ್ಥಿತಿಯಲ್ಲಿದ್ದು ಸಮೃದ್ಧ ನೀರಿನ ಸೆಲೆ ಹೊಂದಿದೆ. ಬಿರು ಬೇಸಿಗೆಯಲ್ಲೂ ಬಾವಿಯ ತುಂಬ ನೀರಿನ ಸಂಗ್ರಹವಿದೆ.

ಇಲ್ಲಿನ ಅರಸ ಪಿತಾಂಬರ ಬಹಿರಿ ಪಿಡ್ಡನಾಯಕ (1687-1726) ಸಂಸ್ಥಾನದ ಆರಾಧ್ಯ ದೈವ ವೇಣುಗೋಪಾಲಸ್ವಾಮಿ ದೇಗುಲವನ್ನು ನಿರ್ಮಿಸುತ್ತಾನೆ. ಬೆಟ್ಟ ಪ್ರದೇಶದಲ್ಲಿ ನಿರ್ಮಿಸಿರುವ ಈ ದೇವಸ್ಥಾನದ ಪೂಜಾ ಕೈಂಕರ್ಯಕ್ಕೆ 50 ಅಡಿ ಕೆಳಗೆ ‘ದೇವರಬಾವಿ’ ಕಟ್ಟಿಸುತ್ತಾನೆ.

ಮೂರು ಶತಮಾನಕ್ಕೂ ಹಿಂದಿನ ಈ ಬಾವಿ ವಿಶಾಲವಾಗಿದೆ. ಆಯತಾಕಾರದಲ್ಲಿದ್ದು, 100 ಚದುರಡಿ ವಿಸ್ತಾರ ಹೊಂದಿದೆ. 60 ಅಡಿ ಆಳ ಹೊಂದಿದೆ. ನಾಲ್ಕು ಕಡೆಯಿಂದಲೂ ಆಕರ್ಷಕ ಮೆಟ್ಟಿಲುಗಳಿವೆ. ಇಂದಿಗೂ ಬಾವಿಯ ಕಟ್ಟಡ ಸುಸಜ್ಜಿತವಾಗಿದೆ.

ಮೇಲೆ ವಿಶಾಲವಾಗಿರುವ ಮೆಟ್ಟಿಲುಗಳು ಕೆಳಗೆ ಹೋದಂತೆ ಕಿರಿದಾಗುತ್ತಾ ಹೋಗುತ್ತವೆ. ಕೊನೆಯಲ್ಲಿ 10 ಚದುರಡಿ ಬಾವಿಯ ಸ್ಥಳವಿದೆ. ಬಾವಿಯ ಹೆಚ್ಚಿನ ನೀರು ಹೊರಗೆ ಹೋಗಲು ಚರಂಡಿ ವ್ಯವಸ್ಥೆ ಮಾಡಲಾಗಿದೆ. ಹೀಗಾಗಿ ನೀರು ಸದಾ ಶುದ್ಧವಾಗಿರುತ್ತದೆ.

ದೇವರಬಾವಿ ನಮ್ಮ ಧಾರ್ಮಿಕ ಐತಿಹಾಸಿಕ ಪರಂಪರೆಯ ಪ್ರತೀಕ. ನಾಗರಿಕರು ಬಾವಿಯಲ್ಲಿ ತ್ಯಾಜ್ಯವನ್ನು ಹಾಕಬಾರದು.
ಅನಂತಕೃಷ್ಣ ಮೇದಕ್, ನಗರದ ನಿವಾಸಿ

ಬಾವಿಯ ನಾಲ್ಕು ಬದಿಯಲ್ಲಿ ಕಮಾನುಗಳನ್ನು ಮಾಡಿ ಕಟ್ಟೆಗಳನ್ನು ನಿರ್ಮಿಸಲಾಗಿದೆ. ಇಲ್ಲಿ ಪೂಜಾ ವಿಧಿಗಳನ್ನು ನಡೆಸಲು ಮತ್ತು ಅಪರ ಕರ್ಮಗಳನ್ನು ಮಾಡಿಕೊಳ್ಳಲು ರಾಜರು ಆಶ್ರಯ ಕಲ್ಪಿಸಿದ್ದಾರೆ.

ವೇಣುಗೋಪಾಲಸ್ವಾಮಿ ದೇವಸ್ಥಾನದಿಂದ ಕೆಳಗೆ ವೀಕ್ಷಿಸಿದರೆ ಬಾವಿಯ ವಿಹಂಗಮ ನೋಟ ಕಣ್ಣಿಗೆ ಹಬ್ಬ ಉಂಟು ಮಾಡುತ್ತದೆ. ದೇಗುಲದ ಗೋಪುರದ ಬಿಂಬ ಬಾವಿಯ ನೀರಿನಲ್ಲಿ ಕಂಡು ಮುದಗೊಳಿಸುತ್ತದೆ.

ವೇಣುಗೋಪಾಲಸ್ವಾಮಿಯ ನಿತ್ಯದ ಪೂಜಾ ವಿಧಿ ವಿಧಾನಗಳಿಗೆ ಇದೇ ಬಾವಿಯ ನೀರನ್ನು ಬಳಸಲಾಗುತ್ತಿತ್ತು. ದೇವರ ಸೇವೆಗೆಂದೆ ಬಾವಿ ಮೀಸಲಾಗಿತ್ತು. ಅಂತೆಯೇ ಈ ಕಲ್ಯಾಣಿಗೆ ‘ದೇವರಬಾವಿ’ ಎಂಬ ಅಭಿದಾನ.

ವೇಣುಗೋಪಾಲಸ್ವಾಮಿ ಜಾತ್ರೆಯಲ್ಲೂ ಈ ಬಾವಿಯ ನೀರನ್ನು ಬಳಸಿ ಸ್ತಂಭದ ಆರೋಹಿಗಳಿಗೆ ಮತ್ತು ಜಾತ್ರೆಗೆ ಬಂದ ಭಕ್ತರಿಗೆ ಪಿಚಗಾರಿಯಿಂದ ನೀರು ಸಿಂಪಡಿಸಲಾಗುತ್ತದೆ. ಈ ನೀರು ಸಿಂಪಡಿಸಿಕೊಂಡರೆ ಆರೋಗ್ಯ ವೃದ್ಧಿಸುತ್ತದೆ ಎಂಬ ನಂಬಿಕೆ ಇದೆ.

ದೀಪಾವಳಿ ಹಬ್ಬದ ಪ್ರತಿಪದಾ ಮತ್ತು ತೃತೀಯ ದಿನದಂದು ಸಂಜೆ ಹೊತ್ತಿನಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಈ ಬಾವಿಗೆ ಬರುವ ವಾಡಿಕೆ ಇದೆ. ಇಡೀ ಬಾವಿ ಮಹಿಳೆಯರಿಂದ ತುಂಬಿ ತುಳುಕಿರುತ್ತದೆ.

ತಮ್ಮ ಮನೆಗಳಿಂದ ಫಲಾಹಾರಗಳನ್ನು ತಂದು ಪರಸ್ಪರ ವಿನಿಮಯ ಮಾಡಿಕೊಂಡು ಸೇವಿಸುತ್ತಾರೆ. ಗಂಗೆ ಪೂಜೆ ಸಲ್ಲಿಸಿ ದೀಪವನ್ನು ಬಾವಿಯ ನೀರಿನಲ್ಲಿ ತೇಲಿ ಬಿಡುತ್ತಾರೆ. ತಮಗೆ ಒಳ್ಳೆಯದಾಗಲೆಂದು ವೇಣುಗೋಪಾಲಸ್ವಾಮಿಗೆ ಪ್ರಾರ್ಥಿಸುತ್ತಾರೆ.

ನಾಗರಿಕತೆ ಬೆಳೆದಂತೆ ಮತ್ತು ಮನೆ ಮನೆಗೆ ನಲ್ಲಿ ನೀರು ಪೂರೈಕೆಯಾಗುತ್ತಿದ್ದಂತೆ ದೇವರಬಾವಿಯ ನೀರಿನ ಬಳಕೆ ಕಡಿಮೆಯಾಗತೊಡಗಿತು. ಸಾಲದ್ದಕ್ಕೆ ಜನರು ದೇವರಿಗೆ ಹಾಕಿದ ಹಾರ, ತೆಂಗಿನಕಾಯಿ, ಹಳೆಯ ದೇವರ ಫೋಟೋ, ಬಟ್ಟೆಗಳು ಇತರ ಪೂಜಾ ವಸ್ತುಗಳನ್ನು ಬಾವಿಯಲ್ಲಿ ಹಾಕತೊಡಗಿದ್ದಾರೆ. ಹೀಗಾಗಿ ಬಾವಿ ತ್ಯಾಜ್ಯದ ಆಗರವಾಗಿತ್ತು.

ಈಗ ಬಾವಿ ಈಜುಕೊಳವಾಗಿದೆ. ದಿನಾಲೂ ನೂರಾರು ಯುವಕರು, ಮಕ್ಕಳು ಗಂಟೆಗಟ್ಟಲೆ ಈಜಾಡುತ್ತಾರೆ. ಈ ಯುವಕರು ತ್ಯಾಜ್ಯವನ್ನು ದಿನಾಲೂ ಎತ್ತಿ ಬಾವಿಯ ಹೊರಗೆ ಹಾಕುತ್ತಾರೆ. ಈಜುಗಾರರ ಈ ಪರಿಸರ ಪ್ರೀತಿಯಿಂದ ಕಲ್ಯಾಣಿ ಈಗ ಅಲ್ಪ ಸ್ವಲ್ಪ ಶುದ್ಧವಾಗಿದೆ.

ಈ ‘ದೇವರಬಾಯಿ’ ಐತಿಹಾಸಿಕ ಕುರುಹು. ಸುರಪುರವನ್ನು ವೀಕ್ಷಿಸಲು ಬರುವ ಪ್ರವಾಸಿಗರು ಈ ಬಾವಿಯನ್ನು ನೋಡಿಯೇ ಹೋಗುತ್ತಾರೆ. ಮುಖ್ಯರಸ್ತೆಯಲ್ಲಿ ಇರುವ ಈ ಬಾವಿ ನೋಡಲು ವಾಹನದಲ್ಲೂ ಬರಬಹುದು. ಇಂತಹ ಅನನ್ಯ ಕಲ್ಯಾಣಿಯನ್ನು ಮುಂದಿನ ಪೀಳಿಗೆಗೆ ಉಳಿಸುವ ಅಗತ್ಯವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT