ಮಂಗಳವಾರ, 6 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಬಲ್‌ ಎಂಜಿನ್ ಸರ್ಕಾರದಿಂದ ಎಲ್ಲರಿಗೂ ಸೌಲಭ್ಯ: ಕೇಂದ್ರ ಸಚಿವ ಖೂಬಾ

ವಿವಿಧ ಇಲಾಖೆಗಳ ಫಲಾನುಭವಿಗಳಿಗೆ ಪ್ರಮಾಣ ಪತ್ರ, ಸೌಲಭ್ಯ ವಿತರಣೆ
Last Updated 14 ಮಾರ್ಚ್ 2023, 16:06 IST
ಅಕ್ಷರ ಗಾತ್ರ

ಯಾದಗಿರಿ: ಡಬಲ್‌ ಎಂಜಿನ್‌ ಸರ್ಕಾರದಿಂದ ದೇಶದ ಕೋಟ್ಯಂತರ ಜನ ಫಲಾನುಭವಿಗಳಿದ್ದಾರೆ. ಎಲ್ಲರಿಗೂ ಸರ್ಕಾರದ ಸೌಲಭ್ಯ ಕಲ್ಪಿಸಲಾಗಿದೆ ಎಂದು ರಾಸಾಯನಿಕ ಹಾಗೂ ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಹೇಳಿದರು.

ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ಯೋಜನೆಗಳಡಿ ಸೌಲಭ್ಯ ಕಲ್ಪಿಸುವ ಫಲಾನುಭವಿಗಳ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿ, ಶೌಚಾಲಯ, ಆಯುಷ್ಮಾನ್ ಭಾರತ ಯೋಜನೆ ಉಚಿತ ಯೋಜನೆ, ಗರೀಬ್‌ ಕಲ್ಯಾಣ ಯೋಜನೆಯಡಿ ಅಕ್ಕಿ ವಿತರಣೆ ಸೇರಿದಂತೆ ಬಿಜೆಪಿ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ ಎಂದು ತಿಳಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್ ಮಾತನಾಡಿ, ಕೃಷಿ, ಶಿಕ್ಷಣ, ನೀರಾವರಿ, ಗ್ರಾಮೀಣಾಭಿವೃದ್ಧಿ, ಲೋಕೋಪಯೋಗಿ, ಸಮಾಜ ಕಲ್ಯಾಣ ಇಲಾಖೆ ಸೇರಿದಂತೆ ಹಲವು ಯೋಜನೆಗಳ ಅಡಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನೂರಾರು ಕಾರ್ಯಕ್ರಮಗಳ ಮೂಲಕ ಸೌಲಭ್ಯ ಕಲ್ಪಿಸಲಾಗಿದೆ ಎಂದು ಹೇಳಿದರು.

ಸಂಸದ ರಾಜಾ ಅಮರೇಶ್ವರ ನಾಯಕ ಮಾತನಾಡಿ, ಈ ಭಾಗದ ರೈತರಿಗೆ ಅನುಕೂಲವಾಗಲು ಸ್ಕಾಡಾ ಯೋಜನೆ, ಎಸ್‌ಸಿ, ಎಸ್‌ಟಿ ವಿದ್ಯಾರ್ಥಿಗಳ ಗುಣಮಟ್ಟದ ವಿದ್ಯಾಭ್ಯಾಸಕ್ಕಾಗಿ ಏಕಲವ್ಯ ಶಾಲೆ 38 ಸಾವಿರ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗಿದೆ. ಗದಗ-ವಾಡಿ ರೈಲ್ವೆ ಮಾರ್ಗ ಕಾಮಗಾರಿಗೆ ₹ 350 ಕೋಟಿ, ಯಾದಗಿರಿಯ ವೈದ್ಯಕೀಯ ಕಾಲೇಜಿಗೆ ₹440 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. 75 ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ನಿಮಿತ್ತ ₹ 25 ಲಕ್ಷದಂತೆ ಜಿಲ್ಲೆಯ 75 ಕೆರೆಗಳ ಪುನಃ ಶ್ಚೇತನ ಮಾಡಲಾಗಿದೆ ಎಂದರು.

ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಾಬುರಾವ್ ಚಿಂಚನಸೂರ, ಶಾಸಕ ವೆಂಕಟರೆಡ್ಡಿಗೌಡ ಮುದ್ನಾಳ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಿವಿಧ ಇಲಾಖೆಗಳು ಯೋಜನೆಗಳ ಬಗ್ಗೆ ಜನಜಾಗೃತಿ ಮೂಡಿಸಲು ವಸ್ತುಪ್ರದರ್ಶನ ಮಳಿಗೆಗಳನ್ನು ತೆರೆದಿದ್ದವು. ಅದರಲ್ಲೂ ಪ್ರಮುಖವಾಗಿ ಸ್ವ- ಸಹಾಯ ಗುಂಪುಗಳ ಸದಸ್ಯರು ಉತ್ಪಾದಿಸಿರುವ ವಸ್ತುಗಳ ಪ್ರದರ್ಶನ ನಡೆಯಿತು.

ಆರೋಗ್ಯ ಇಲಾಖೆಯಿಂದ ಆರೋಗ್ಯ ತಪಾಸಣೆ ವ್ಯವಸ್ಥೆ, ಜಲಜೀವನ್ ಮಿಷನ್ ಯೋಜನೆಯಡಿ ಮನೆ ಮನೆಗೆ ನೀರು ಪೂರೈಸುವ ಯೋಜನೆ ಮಾದರಿ, ತೋಟಗಾರಿಕೆ ಇಲಾಖೆ, ಕೃಷಿ ಇಲಾಖೆ, ಕೈಗಾರಿಕೆ, ಕೈಮಗ್ಗ ಮತ್ತು ಜವಳಿ ಇಲಾಖೆ, ರೇಷ್ಮೆ ಇಲಾಖೆ, ಆಯುಷ್ಮಾನ್ ಭಾರತ್, ಇನ್ನೂ ವಿವಿಧ ಇಲಾಖೆಗಳು ವಸ್ತು ಪ್ರದರ್ಶನ ಏರ್ಪಡಿಸುವ ಮೂಲಕ ಆಯಾ ಇಲಾಖೆ ಯೋಜನೆಯ ಕುರಿತು ಜನರಲ್ಲಿ ಅರಿವು ಮೂಡಿಸಿದವು.

ಅಲೆಮಾರಿ, ಅರೆ ಅಲೆಮಾರಿ ನಿಗಮದ ಅಧ್ಯಕ್ಷ ದೇವೇಂದ್ರನಾಥ ಕೆ ನಾದ್, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ರುದ್ರಗೌಡ ಪಾಟೀಲ, ನಗರಸಭೆ ಅಧ್ಯಕ್ಷ ಸುರೇಶ ಅಂಬಿಗೇರ, ಜಿಲ್ಲಾಧಿಕಾರಿ ಸ್ನೇಹಲ್ ಆರ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಮರೇಶ ಆರ್ ನಾಯ್ಕ್‌, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ, ಹೆಚ್ಚುವರಿ ಜಿಲ್ಲಾಧಿಕಾರಿ ಶರಣಬಸಪ್ಪ ಕೋಟೆಪ್ಪಗೊಳ, ಉಪವಿಭಾಗಾಧಿಕಾರಿ ಶಾಲಂ ಹುಸೇನ್ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಇದ್ದರು.

***

6.50 ಲಕ್ಷ ಫಲಾನುಭವಿಗಳು

ಸುರಪುರ ಶಾಸಕ ನರಸಿಂಹ ನಾಯಕ(ರಾಜುಗೌಡ) ಪ್ರಾಸ್ತಾವಿಕವಾಗಿ ಮಾತನಾಡಿ, ಜಿಲ್ಲೆಯಲ್ಲಿ ಒಟ್ಟು 11.74 ಲಕ್ಷ ಜನಸಂಖ್ಯೆಯಿದೆ. ಅದರಲ್ಲಿ 6.50 ಲಕ್ಷ ವಿವಿಧ ಯೋಜನೆಗಳಡಿ ಫಲಾನುಭವಿಗಳಿದ್ದಾರೆ. ಮಹಿಳೆಯರು, ಮಕ್ಕಳು, ಹಿರಿಯ ನಾಗರಿಕ, ದಲಿತರು, ಹಿಂದುಳಿದ ವರ್ಗದವರು ಮತ್ತು ಅಲ್ಪಸಂಖ್ಯಾತರ ಎಲ್ಲ ವರ್ಗದವರನ್ನು ಗಮನದಲ್ಲಿಟ್ಟುಕೊಂಡು ಹಲವು ಕಾರ್ಯಕ್ರಮಗಳನ್ನು ರೂಪಿಸಿ ಅವರ ಮನೆ ಬಾಗಿಲಿಗೆ ಯೋಜನೆಗಳನ್ನು ತೆಗೆದುಕೊಂಡು ಸೌಲಭ್ಯ ಒದಗಿಸಲಾಗಿದೆ. ಜನರ ಏಳಿಗೆಯೇ ದೇಶದ ಅಭಿವೃದ್ಧಿ ಎಂಬ ಮಂತ್ರದಡಿ ಕಾರ್ಯಕ್ರಮ ರೂಪಿಸಲಾಗಿದೆ ಎಂದು ಹೇಳಿದರು.

***

ವಿದ್ಯಾರ್ಥಿ ವೇತನಕ್ಕೆ ಆಗ್ರಹ

ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್‌ ಮಾತನಾಡುತ್ತಿರುವ ವೇಳೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಾರಾಯಣ ಕೊಂಕಲ್‌ ಅವರು, ವಿದ್ಯಾರ್ಥಿ ವೇತನ ಬಂದ್‌ ಆಗಿದೆ. ಅದನ್ನೂ ಚಾಲೂ ಮಾಡಿಸಿ ಎಂದು ಏರುಧ್ವನಿಯಲ್ಲಿ ಆಗ್ರಹಿಸಿದರು. ಶಾಲೆಯಲ್ಲಿ ವಿದ್ಯಾರ್ಥಿ ವೇತನವಿಲ್ಲದೆ ಸಮಸ್ಯೆ ಆಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಮ್ಮೇಳನಕ್ಕೆ ಬರಲು ನಕಾರ

ಕುಡಿಯುವ ನೀರು ಪೂರೈಸಿಲ್ಲ. ಈಗ ಸಮ್ಮೇಳನಕ್ಕೆ ಕರೆಯುತ್ತೀರಿ ಎಂದು ವಡಗೇರಾ ತಾಲ್ಲೂಕಿನ ಉಳ್ಳೆಸೂಗುರು ಗ್ರಾಮಸ್ಥರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಫಲಾನುಭವಿಗಳನ್ನು ಜಿಲ್ಲಾ ಕ್ರೀಡಾಂಗಣಕ್ಕೆ ಕರೆತರಲು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಿಂದ 250ಕ್ಕೂ ಹೆಚ್ಚು ಬಸ್‌ ವ್ಯವಸ್ಥೆ ಕಲ್ಪಿಸಲಾಗಿತ್ತು. ಜಿಲ್ಲೆಯ 6 ತಾಲ್ಲೂಕಿನವರು ಪಾಲ್ಗೊಂಡಿದ್ದರು.

ಊಟಕ್ಕಾಗಿ ಪರದಾಟ

ಕಾರ್ಯಕ್ರಮ ಆರಂಭವಾಗುವುದು ತಡವಾಗಿದ್ದರಿಂದ ಫಲಾನುಭವಿಗಳನ್ನು ಊಟಕ್ಕೆ ಕಳುಹಿಸಲಾಯಿತು. ಈ ವೇಳೆ ಏಕಾಏಕಿ ಜನರು ಜನರು ನುಗ್ಗಿದ್ದರಿಂದ ಗೊಂದಲ ಉಂಟಾಯಿತು. ಜನರು ಊಟಕ್ಕಾಗಿ ಪರದಾಡಿದರು. ಕೆಲವರು ಟೇಬಲ್‌ ಮೇಲೆ ನಿಂತು ಊಟದ ತಟ್ಟೆ ಪಡೆದರು. ಜನರು, ಸಮರ್ಪಕವಾಗಿ ಕುಡಿಯುವ ನೀರು, ಆಹಾರ ಸಿಗದೇ ಬಿರು ಬಿಸಿಲಿನಲ್ಲಿ ಗ್ರಾ.ಪಂ. ಪಿಡಿಒ ಅವರನ್ನು ತರಾಟೆಗೆ ತೆಗೆದುಕೊಂಡರು.

***

ಡಬಲ್ ಎಂಜಿನ್ ಸರ್ಕಾರಕ್ಕೆ ಜನತೆಯ ಬೆಂಬಲ ಇರಲಿ. ಕಾಂಗ್ರೆಸ್‌ ಪಕ್ಷದ ವಾರಂಟಿ ಮುಗಿದಿದೆ. ಈಗ ಅವರು ಗ್ಯಾರಂಟಿ ಕೊಡುತ್ತೇವೆ ಎನ್ನುತ್ತಾರೆ.

-ಭಗವಂತ ಖೂಬಾ, ಕೇಂದ್ರ ಸಚಿವ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT