ಬುಧವಾರ, ಮೇ 25, 2022
23 °C
ಶುದ್ಧ ನೀರಿನ ಘಟಕ ದುರಸ್ತಿಗೆ ಗ್ರಾಮಸ್ಥರ ಒತ್ತಾಯ

ಯಕ್ತಾಪುರ: ಕುಡಿಯವ ನೀರಿಗೆ ಪರದಾಟ

ಪವನ ಕುಲಕರ್ಣಿ Updated:

ಅಕ್ಷರ ಗಾತ್ರ : | |

Prajavani

ಕೆಂಭಾವಿ: ಬೇಸಿಗೆ ಬಂದಾಗಲೆಲ್ಲ ಸಮೀಪದ ಯಕ್ತಾಪುರ ಗ್ರಾಮದಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗುತ್ತದೆ. ಗ್ರಾಮಕ್ಕೆ ಸರಬರಾಜು ಮಾಡುವ ಬಾವಿಯು ಬತ್ತಿ ಹೋಗಿರುವ ಕಾರಣ ಗ್ರಾಮಸ್ಥರು ತೀವ್ರ ತೊಂದರೆ ಅನುಭವಿಸುವಂತಾಗಿದೆ.

ಇದ್ದ ಒಂದು ಬಾವಿಯೂ ಬತ್ತಿ ಹೋಗುತ್ತಿದ್ದು ಶಾಶ್ವತ ಪರಿಹಾರವಿಲ್ಲದೆ ಜನರು ಪರದಾಡುವಂತಾಗಿದೆ. ಗ್ರಾಮ ಪಂಚಾಯಿತಿ ಕೇಂದ್ರವಾಗಿರುವ ಈ ಗ್ರಾಮದಲ್ಲಿ ಮೂವರು ಸದಸ್ಯರಿದ್ದಾರೆ. ಒಂದು ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿದೆ.

ಗ್ರಾಮದಲ್ಲಿ ಒಂದು ಸೇದು ಬಾವಿಯಿದ್ದು, ಅಲ್ಲಿನ ನೀರು ದಿನಬಳಕೆಗೆ ಮಾತ್ರ ಉಪಯೋಗವಿದೆ. ಕುಡಿಯಲು ಯೋಗ್ಯವಾಗಿಲ್ಲ ಎನ್ನುತ್ತಾರೆ ಮುಖಂಡ ಕಾಂತಪ್ಪ ಕುಂಬಾರ.

ಗ್ರಾಮದಲ್ಲಿ ಶುದ್ಧ ಕುಡಿಯುವ ನೀರು ಮರೀಚಿಕೆಯಾಗಿದ್ದು, ಸೇದುಬಾವಿಯ ನೀರೆ ಗತಿಯಾಗಿದೆ. ಕಳೆದ ಎರಡು ವರ್ಷದಿಂದ ಶುದ್ಧಕುಡಿಯುವ ನೀರಿನ ಘಟಕ ದುರಸ್ತಿ ಮಾಡದಿರುವುದರಿಂದ ಅನಿವಾರ್ಯವಾಗಿ ಗ್ರಾಮಸ್ಥರು ಬಾವಿ ನೀರು ಬಳಸುತ್ತಿದ್ದಾರೆ.

ಶುದ್ಧ ಕುಡಿಯುವ ನೀರಿನ ಘಟಕದ ಮೋಟಾರ್ ದುರಸ್ತಿ ಮಾಡದಿರುವುದರಿಂದ ಘಟಕ ಹಾಳು ಬಿದ್ದಿದೆ. ಅದನ್ನು ದುರಸ್ತಿ ಮಾಡಿದರೆ ಬೇಸಿಗೆಯಲ್ಲಿ ಒಳ್ಳೆಯ ನೀರು ಕುಡಿಯಬಹುದು. ಆದರೆ ಗ್ರಾಮ ಪಂಚಾಯತಿ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸುತ್ತಿಲ್ಲ. ಅನೇಕ ಬಾರಿ ದೂರುಗಳನ್ನು ನೀಡಿದರೂ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಗ್ರಾಮಸ್ಥರು.

ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಕುಡಿಯುವ ನೀರು, ರಸ್ತೆ, ಚರಂಡಿ, ಶೌಚಾಲಯ ಸೇರಿದಂತೆ ಅನೇಕ ಅಭಿವೃದ್ಧಿ ಕಾಮಗಾರಿಗಳಿಗೆ ಗ್ರಾಮ ಪಂಚಾಯಿತಿ ಮುಖಾಂತರ ಕೋಟಿ ಕೋಟಿ ಹಣ ಬಿಡುಗಡೆ ಮಾಡುತ್ತಿದ್ದು, ಹಣ ಸರಿಯಾಗಿ ಬಳಕೆಯಾಗದಿರುವುದೇ ಇಂದು ಗ್ರಾಮಗಳು ಈ ಮಟ್ಟಕ್ಕೆ ತಲುಪಿದೆ.

ಕ್ಷೇತ್ರದ ಶಾಸಕರು ಮತ್ತು ಜಿಲ್ಲಾಧಿಕಾರಿಗಳು ಇತ್ತ ಗಮನ ಹರಿಸಬೇಕಾಗಿದೆ ಎಂದು ಗ್ರಾಮಸ್ಥರ ಒತ್ತಾಯವಾಗಿದೆ.

*ಯಕ್ತಾಪುರ ಗ್ರಾ.ಪಂ.ವ್ಯಾಪ್ತಿಯ ಹಲವು ಗ್ರಾಮಗಳಲ್ಲಿ ಬಾವಿ ತೆರೆಸಿ ನೀರಿನ ಸಮಸ್ಯೆ ಬಗೆಹರಿಸಲಾಗಿದೆ. ಯುಕ್ತಾಪುರ ನೀರಿನ ಸಮಸ್ಯೆ ಬಗೆಹರಿಸುವಂತೆ ಸೂಚಿಸಲಾಗಿದೆ

- ಶರಣಬಸಪ್ಪಗೌಡ ದರ್ಶನಾಪುರ, ಶಾಸಕ

*ಕಳೆದ ದಶಕಗಳಿಂದ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಕಾಡುತ್ತಿದೆ. ಈ ಹಿಂದೆ ಶಾಸಕರು ಬಾವಿಯನ್ನು ನಿರ್ಮಿಸಿದ್ದಾರೆ. ಆದರೆ ಅದು ಬೇಸಿಗೆಯಲ್ಲಿ ಬತ್ತಿ ಹೋಗುತ್ತದೆ. ಶಾಶ್ವತ ಪರಿಹಾರ ಕಲ್ಪಿಸಿ

-ಸಿದ್ದು ಎಂ.ಅಸ್ಕಿ, ಮುಖಂಡ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು