ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ ಜಿಲ್ಲೆಯಲ್ಲಿ ನೀರಿಗೆ ಹಾಹಾಕಾರ: ಮುನ್ನೆಚ್ಚರಿಕೆ ಅಗತ್ಯ

ಜಿಲ್ಲೆಯ 37 ಗ್ರಾಮಗಳಲ್ಲಿ ನೀರಿನ ಸಮಸ್ಯೆ; ತಪ್ಪಿಲ್ಲ ನೀರಿಗಾಗಿ ಅಲೆದಾಟ
Last Updated 4 ಏಪ್ರಿಲ್ 2021, 19:30 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲೆಯಲ್ಲಿ ಪ್ರತಿ ವರ್ಷ ಏಪ್ರಿಲ್‌, ಮೇ ತಿಂಗಳಲ್ಲಿ ನೀರಿಗೆ ಸಮಸ್ಯೆ ತೀವ್ರವಾಗುತ್ತದೆ. ಗ್ರಾಮಸ್ಥರು ಕೊಡ ಹಿಡಿದು ನೀರಿಗಾಗಿ ಅಲೆಯುವುದು ತಪ್ಪಿಲ್ಲ. ಯಾದಗಿರಿಯ 31ನೇ ವಾರ್ಡ್‌ನ‌ ಗೃಹ ಮಂಡಳಿ ಬಳಿ ಇರುವಬುಡ್ಗ ಜಂಗಮ ಕಾಲೊನಿಯಲ್ಲಿ ನೀರಿಗಾಗಿ ಪರದಾಡುವ ಸ್ಥಿತಿ ಇದೆ.

ಜಿಲ್ಲೆಯ ಸುರಪುರ ನಗರದಲ್ಲಿ ನೀರಿನ ಸಮಸ್ಯೆ ತೀವ್ರವಾಗಿದೆ. 31 ಪೈಕಿ 18 ವಾರ್ಡ್‍ಗಳಲ್ಲಿ ನೀರಿನ ಸಮಸ್ಯೆ ಇದೆ. ಬಡಾವಣೆಗಳ ನಿವಾಸಿಗಳು ಸೈಕಲ್‌, ಬೈಕ್‌, ತಳ್ಳುಗಾಡಿಗಳ ಮೂಲಕ ನೀರು ತರುತ್ತಿರುವುದು ಕಂಡು ಬರುತ್ತಿದೆ.

ಕುಡಿಯುವ ನೀರಿನ ಸಮಸ್ಯೆಗಿಲ್ಲ ಮುಕ್ತಿ:

‘ಗ್ರಾಮದಲ್ಲಿ ದಿನವೂ ನಳದಲ್ಲಿ ನೀರು ಬಂದರೂ ಒಂದು ಮನೆಗೆ ಎರಡು ಕೊಡ ಮಾತ್ರ ನೀರು ಸಿಗುತ್ತದೆ. ನಿತ್ಯದ ಅವಶ್ಯಕತೆಗೆ ನಾವು 1 ಕಿ.ಮೀ. ದೂರದ ಹೊಲದಲ್ಲಿನ ಕೊಳವೆ ಬಾವಿಯಿಂದ ಹೊಲದವರನ್ನು ಬೇಡಿಕೊಂಡು ನೀರು ತರುತ್ತೇವೆ. ನಾವು ಅಲ್ಲಿ ಹೋದಾಗ ವಿದ್ಯುತ್ ಕೈ ಕೊಟ್ಟರೆ ಮತ್ತೆ ಖಾಲಿ ಕೊಡದೊಡನೆ ಹಿಂದಿರುಗಬೇಕು. ನಮ್ಮ ಸಮಸ್ಯೆಗೆ ಮುಕ್ತಿ ಸಿಗೋದಿಲ್ಲ ಅನ್ನುವಂತಾಗಿದೆ’ ಎಂದು ಗುರುಮಠಕಲ್‌ ತಾಲ್ಲೂಕಿನ ಯಂಪಾಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯಂಪಾಡ ಹಾಗೂ ಸುಭಾಷನಗರ ಗ್ರಾಮಗಳ ಮಹಿಳೆಯರು ತಿಳಿಸಿದರು.

ಯಂಪಾಡದಲ್ಲಿ ಪಂಚಾಯಿತಿಯಿಂದ ಕೊರೆದ 9 ಕೊಳವೆಬಾವಿಗಳಲ್ಲಿ 3ರಲ್ಲಿ ಮಾತ್ರ ನೀರು ಬಂದಿತ್ತು. ಪ್ರಸ್ತುತ ಒಂದರಲ್ಲಿ ಮಾತ್ರ ನೀರು ಬರುತ್ತಿದೆ. ಪಂಚಾಯಿತಿಯವರು ಖಾಸಗಿ ಕೊಳವೆ ಬಾವಿಗಳಿಂದ ನೀರು ಪೂರೈಸುತ್ತಿದ್ದಾರೆ. ದಿನಕ್ಕೆ ಎರಡು ಕೊಡ ಸಿಕ್ಕರೆ ಹೆಚ್ಚು ಎಂದು ಗ್ರಾಮಸ್ಥರು ಅಲ್ಲಿನ ಸಮಸ್ಯೆಯ ತೀವ್ರತೆಯನ್ನು ವಿವರಿಸಿದರು.

ನೀರಿನ ಸಮಸ್ಯೆಯ ಕುರಿತು ಮನವಿ ಮಾಡಿದ ಪ್ರತಿ ಬಾರಿಯೂ ‘ಜಲ ಜೀವನ ಮಿಷನ್ ಅಡಿಯಲ್ಲಿ ನೀರು ಸರಬರಾಜು ಕೆಲಸ ಮುಗಿಯುತ್ತಿದ್ದಂತೆ ನಿಮ್ಮ ಸಮಸ್ಯೆ ಬಗೆಹರಿಯುವುದು. ಇನ್ನೇನು ಜೆಜೆಎಂ ಶುರುವಾಗುತ್ತೆ’ ಎಂದು ಹೇಳುತ್ತಾ ಕಾಲ ತಳ್ಳುತ್ತಿದ್ದಾರೆ ಎಂದು ಪಂಚಾಯಿತಿಯಅಧಿಕಾರಿಗಳ ವಿರುದ್ಧಸ್ಥಳೀಯರು ಆರೋಪಿಸಿದರು.

18 ವಾರ್ಡ್‌ಗಳಲ್ಲಿ ನೀರಿನ ಬವಣೆ:

ಸುರಪುರ ನಗರಕ್ಕೆ ನೀರು ಸರಬರಾಜು ಮಾಡುವ ಯೋಜನೆ 1960ರಲ್ಲಿ ಜಾರಿಗೆ ಬಂದಿದೆ. ಜನಸಂಖ್ಯೆಗೆ ಅನುಗುಣವಾಗಿ ಯೋಜನೆಯನ್ನು ಮೇಲ್ದರ್ಜೆಗೆ ಏರಿಸಿಲ್ಲ.

ಕಾಲುವೆಗೆ ಹರಿಸುವ ನೀರು ಸ್ಥಗಿತಗೊಂಡ ನಂತರ ನದಿಯಲ್ಲಿ ನೀರಿನ ಪ್ರಮಾಣ ಗಣನೀಯವಾಗಿ ತಗ್ಗಲಿದೆ. ಹೀಗಾಗಿ ಏಪ್ರಿಲ್‌ ಮತ್ತು ಮೇ ತಿಂಗಳಲ್ಲಿ ಕುಡಿಯುವ ನೀರಿನ ಕೊರತೆ ಉಂಟಾಗಬಹುದೆಂದು ನಾಗರಿಕರು ಆತಂಕದಲ್ಲಿದ್ದಾರೆ.

ಡೊಣ್ಣಗೇರಿ, ಉದ್ದಾರ ಓಣಿ, ರಾಮಕರಣಗಲ್ಲಿ, ಉಪ್ಪಾರ ಮೊಹಲ್ಲಾ, ಕುಂಬಾರಪೇಟ, ವಡ್ಡರ ಓಣಿ, ಧೂಳಪೇಟ, ಮಂಗಲಬಜಾರ ಪ್ರದೇಶದ 18 ವಾರ್ಡ್‍ಗಳಲ್ಲಿ ನೀರಿನ ಸಮಸ್ಯೆ ಉದ್ಭವಿಸಬಹುದೆಂದು ನಗರಸಭೆ ಅಧಿಕಾರಿಗಳು ತಿಳಿಸಿದ್ದಾರೆ.

‘ಪ್ರತಿ ವರ್ಷ ಬೇಸಿಗೆ ಸಮಯದಲ್ಲಿ ನೀರಿನ ಸಮಸ್ಯೆ ಇರುತ್ತೆ. ಇದನ್ನು ಮನಗಂಡರೂ ನಗರಸಭೆ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ. ಜನ ಹನಿ ನೀರಿಗೂ ಪರದಾಡುವ ಪರಿಸ್ಥಿತಿ ಬರುತ್ತದೆ’ ಎಂಬುದು ನಾಗರಿಕರ ಆತಂಕ.

‘ನೀರಿನ ಕೊರತೆ ಉಂಟಾಗಬಹುದಾದ ಸಂಭಾವ್ಯ ವಾರ್ಡ್‍ಗಳನ್ನು ಗುರುತಿಸಲಾಗಿದೆ. ನಗರಸಭೆಯ 3 ನೀರಿನ ಟ್ಯಾಂಕರ್‌ಗಳಿಂದ ಅಗತ್ಯ ಬಿದ್ದಲ್ಲಿ ನೀರು ಪೂರೈಸಲಾಗುವುದು. ಅಲ್ಲಲ್ಲಿ ಕಿರು ನೀರು ಸರಬರಾಜು ಯೋಜನೆ ಮಾಡಲಾಗುತ್ತಿದೆ. ನದಿಯಲ್ಲಿ ನೀರು ಸಂಗ್ರಹಿಸಲು ರಿಂಗ್‍ಬಾಂಡ್ ಹಾಕಲಾಗುತ್ತಿದೆ’ ಎನ್ನುತ್ತಾರೆ ಪೌರಾಯುಕ್ತ ಜೀವನ ಕಟ್ಟಿಮನಿ.

ಪ್ರತಿ ದಿನ ನಗರಕ್ಕೆ 9 ಎಂಎಲ್‍ಡಿ ನೀರಿನ ಅಗತ್ಯವಿದೆ. ಆದರೆ, ನಮಗೆ ಕೇವಲ 4 ಎಂಎಲ್‍ಡಿ ನೀರು ಲಭಿಸುತ್ತಿದೆ. ಅದರಲ್ಲಿ ಸೋರಿಕೆ ಮತ್ತು ಶುದ್ಧೀಕರಣ ಎಂದು 1.5 ಎಂಎಲ್‍ಡಿ ನೀರು ವ್ಯರ್ಥವಾಗುತ್ತಿದೆ. ಇದಕ್ಕೆ ಸಮಸ್ಯೆ ಉದ್ಭವಿಸಿದೆ’ ಎನ್ನುತ್ತಾರೆ ಅವರು.

ಯಾವ ಗ್ರಾಮಗಳಲ್ಲಿ ನೀರಿನ ಸಮಸ್ಯೆ?

ಗುರುಮಠಕಲ್‌ ತಾಲ್ಲೂಕಿನ ಮಾಧ್ವರ ವ್ಯಾಪ್ತಿಯ ಮಾಧ್ವರ, ಸಂಬರ, ಯಂಪಾಡ, ಕೊಂಕಲ್‌ ವ್ಯಾಪ್ತಿಯ ನಂದೇಪಲ್ಲಿ, ಪಡೆಪಲ್ಲಿ, ಕಾಳೆಬೆಳಗುಂದಿ, ಕಣೇಕಲ್‌, ಚಪೆಟ್ಲಾ ವ್ಯಾಪ್ತಿಯ ಕಮಲನಗರ, ಬ್ರುಜುತಾಂಡಾ, ಅಜಲಾಪುರವ್ಯಾಪ್ತಿಯ ತುರಕನದೊಡ್ಡಿ, ಬದ್ದೇಪಲ್ಲಿ.

ಯಾದಗಿರಿ ತಾಲ್ಲೂಕಿನ ಬಾಡಿಯಾಳ ವ್ಯಾಪ್ತಿಯ ಮುನುಗಾತ್‌, ಸಂಗವಾರ, ಹಳಿಗೇರಾ ವ್ಯಾಪ್ತಿಯ ಎಂ. ಹೊಸಳ್ಳಿ, ಮುಂಡರಗಿ ವ್ಯಾಪ್ತಿಯ ಮಂಡರಗಿ, ಅಶೋಕನಗರ, ಮುದ್ನಾಳ ವ್ಯಾಪ್ತಿಯ ಮುದ್ನಾಳ, ಭೀಮನಗರ, ಸ.ತಾಂಡಾ, ಉಮ್ಲಾ ನಾಯಕ ತಾಂಡಾ, ಠಾಣಗುಂದಿ ವ್ಯಾಪ್ತಿಯ ಬೋಮಶೆಟ್ಟಿಹಳ್ಳಿ, ತಳಕ.

ಹುಣಸಗಿ ತಾಲ್ಲೂಕಿನ ಕೋಲಿಹಾಳ ವ್ಯಾಪ್ತಿಯಕೋಲಿಹಾಳ, ಗುಂಡಲಗೇರಾ, ಕೋಲಿಹಾಳ ತಾಂಡಾ, ಕಾಮನಗಟಿ ವ್ಯಾಪ್ತಿಯ ಕನಗಂಡಹಳ್ಳಿ, ಹೊಂಬಳಕಲ್‌, ಹೆಬ್ಬಾಳ ಬಿ, ಹೆಬ್ಬಾಳ ಕೆ, ಸಿದ್ದಾಪುರ, ಬೈಲಾಪುರ ತಾಂಡಾ, ಕಲ್ಲದೇವನಹಳ್ಳಿ, ಬೈಲಾಪುರ, ಅಗ್ನಿ ವ್ಯಾಪ್ತಿಯ ಕರಿಭಾವಿ, ಅಮಲಿಹಾಳ, ಹಗರಟಗಿ ವ್ಯಾಪ್ತಿಯ ಬೂದಿಹಾಳ, ಕರೆಕಲ್‌, ಹೊರಟ್ಟಿ, ಮಾಳನೂರ ವ್ಯಾಪ್ತಿಯ ಮಾರಲಬಾವಿ, ಕುಪ್ಪಿ.

ಸುರಪುರ ತಾಲ್ಲೂಕಿನ ಯಕ್ತಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿ.ತಳ್ಳಳ್ಳಿ (ಆಶ್ರಯ ಕಾಲೊನಿ), ಹೂವಿನಹಳ್ಳಿ, ವಡಗೇರಾ ತಾಲ್ಲೂಕಿನ ಶಿವನೂರ, ಜೋಳದಡಗಿ, ವಡಗೇರಾ, ಗುಂಡ್ಲೂರು, ಅಗ್ನಿಹಾಳ, ಗೊಂದೆನೂರು, ತುಮಕೂರು, ಗುಲಸಂರ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಕಾಡಲಿದೆ ಎಂದು ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ತಿಳಿಸಿದ್ದಾರೆ.

* ನೀರಿನ ಸಮಸ್ಯೆ ಉಂಟಾಗುವ ಗ್ರಾಮಗಳ ಪಟ್ಟಿ ಮಾಡಿದ್ದೇವೆ. ಯಾದಗಿರಿ ತಾಲ್ಲೂಕಿನಲ್ಲಿ ಖಾಸಗಿ ಕೊಳವೆ ಬಾವಿ ಮೂಲಕ ನೀರು ಪೂರೈಸಲಾಗುತ್ತಿದೆ. ಕೊಳವೆಬಾವಿ ದುರಸ್ತಿ ಇದ್ದರೆ ಗ್ರಾಮ ಪಂಚಾಯಿತಿಯಿಂದ ಮಾಡಲಾಗುತ್ತಿದೆ.

-ಶಿಲ್ಪಾ ಶರ್ಮಾ, ಜಿಲ್ಲಾ ಪಂಚಾಯಿತಿ ಸಿಇಒ

* ಕುಡಿಯುವ ನೀರಿಗಾಗಿ ಪ್ರತಿದಿನ ನಾಲ್ಕೈದು ಹೊಲಗಳನ್ನು ದಾಟಿ ಅಲ್ಲಿನ ಕೊಳವೆ ಬಾವಿಗೆ ಹೋಗಿ ನೀರು ಹೊತ್ತು ತರಬೇಕಿದೆ. ನೀರಿನ ಸಮಸ್ಯೆ ನಿವಾರಣೆಗೆಗಾಗಿ ಯಾರನ್ನು ಕೇಳಿದರೂ ಉಪಯೋಗವಿಲ್ಲದಂತಾಗಿದೆ.

-ಶಾಂತಮ್ಮ ಕುರುಬರು, ಗೃಹಿಣಿ ಯಂಪಾಡ

***

* ದಿನವೂ ನಳ ನೀರು ಬರುತ್ತಿದೆ. ಅದು ಬರುತ್ತದೆ ಎಂದು ಹೇಳಿಕೊಳ್ಳಲಷ್ಟೇ ಸೀಮಿತ. ಒಂದು ಕೊಡ ತುಂಬುತ್ತದೆ. ಅದೃಷ್ಟಕ್ಕೆ ಎನ್ನುವಂತೆ ಎರಡನೇ ಕೊಡ ತುಂಬಿದರೆ ಮುಗಿಯಿತು

-ತಾಯಮ್ಮ ದಂತಾಪುರ, ಯಂಪಾಡ ಗ್ರಾಮಸ್ಥರು

* ಬಂದ ನಳದ ನೀರಿನಿಂದ ಮನೆ ಮಂದಿ ಮುಖ ತೊಳೆಯಲೂ ಸಾಲುವುದಿಲ್ಲ. ಇದು ನಮ್ಮ ಹಣೆ ಬರಹ. ತಾಂಡಾ ಮುಂದಿನ ಬಾವಿಯಿಂದ ಹೊತ್ತು ತರುತ್ತೇವೆ

- ಜೈನಿಬಾಯಿ, ಗ್ರಾಮಸ್ಥರು, ಸುಭಾಷನಗರ

* ಯಾರಿಗೆ ಹೇಳಿದರೂ ನೀರಿನ ಸಮಸ್ಯೆಗೆ ಮುಕ್ತಿ ಸಿಗುತ್ತಿಲ್ಲ. ಅಧಿಕಾರಿಗಳು, ಜನಪ್ರತಿನಿಧಿಗಳ ಭರವಸೆಗಳು ಹುಸಿಯಾಗಿವೆ. ಮನೆಗೆ ನೀರು ತರುವುದಕ್ಕಾಗಿಯೇ ಒಬ್ಬರನ್ನು ಮೀಸಲಿರಿಸುವ ಸ್ಥಿತಿಯಿದೆ.

-ಅನಿತಾ ರಾಠೋಡ್, ಸುಭಾಷನಗರ

* ಯಂಪಾಡದಲ್ಲಿ ಒಂದು ಹಾಗೂ ಸುಭಾಷನಗರದಲ್ಲಿ ಎರಡು ಖಾಸಗಿ ಕೊಳವೆಬಾವಿಗಳನ್ನು ಪಡೆದಿದ್ದೇವೆ. ಸಮಸ್ಯೆಯನ್ನು ನೀಗಿಸಲು ಅವಶ್ಯವಾದರೆ ಇನ್ನೂ ಹೆಚ್ಚಿನ ಕೊಳವೆಬಾವಿಗಳನ್ನು ಪಡೆಯುವ ಸಿದ್ಧತೆ ನಡೆದಿದೆ.

-ರಾಜೇಂದ್ರ ಜಮಾದಾರ, ಪಿಡಿಒ

* ₹240 ಕೋಟಿಯ ಯೋಜನೆ ಸರ್ಕಾರದ ಹಂತದಲ್ಲಿದೆ. ಕಂಪಾಪುರದಿಂದ ನೀರು ಪೂರೈಕೆಯ ಯೋಜನೆ ಇದಾಗಿದೆ. ಈ ಯೋಜನೆ ಅನುಷ್ಠಾನಗೊಂಡರೆ ಮುಂದಿನ 30 ವರ್ಷದ ವರೆಗೆ ನೀರಿನ ಚಿಂತೆ ಇಲ್ಲ

- ಜೀವನ ಕಟ್ಟಿಮನಿ, ಪೌರಾಯುಕ್ತ, ಸುರಪುರ

* ಡೊಣ್ಣಿಗೇರಿ ವಾರ್ಡ್‌ನಲ್ಲಿ ನೀರಿನ ಹಾಹಾಕಾರ ಇದೆ. ₹5.5 ಲಕ್ಷ ಸ್ಕೇರ್‍ಸಿಟಿ ಹಣ ಬಿಡುಗಡೆಯಾಗಿದೆ. ನಗರಸಭೆಯವರು ಪ್ರಸ್ತಾವ ತಯಾರಿಸುತ್ತಿಲ್ಲ. ಬೋರ್‌ವೆಲ್ ದುರಸ್ತಿ, ಕಿರುನೀರು ಸರಬರಾಜು ಯೋಜನೆಗೆ ಮುಂದಾಗುತ್ತಿಲ್ಲ

-ಸೋಮನಾಥ ಡೊಣ್ಣಿಗೇರಿ, ನಗರಸಭೆ ಸದಸ್ಯ ಸುರಪುರ

***

ಪೂರಕ ಮಾಹಿತಿ: ಅಶೋಕ ಸಾಲವಾಡಗಿ, ಎಂ.ಪಿ.ಚಪೆಟ್ಲಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT