ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ ಜಿಲ್ಲೆಯಲ್ಲಿ ‘ಬಹುಗ್ರಾಮ’ಗಳಿಗೆ ತಲುಪದ ಕುಡಿಯುವ ನೀರು

ಜಲ ನಿರ್ಮಲ 2007–8ರಲ್ಲೇ ಆರಂಭವಾದರೂ ಇನ್ನೂ ಮುಕ್ತಾಯವಾಗಿಲ್ಲ; ನೀಗದ ನೀರಿನ ಸಮಸ್ಯೆ
Last Updated 11 ಏಪ್ರಿಲ್ 2021, 19:30 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲೆ ಆಗುವುದಕ್ಕಿಂತ ಮುಂಚೆ 2007–08ರಲ್ಲೇ ಬಹುಗ್ರಾಮ ಕುಡಿವ ನೀರು ಯೋಜನೆ ಆರಂಭವಾಗಿದ್ದರೂ ಇಲ್ಲಿಯವರೆಗೆ ಪೂರ್ಣಗೊಂಡಿಲ್ಲ.

ಶಾಶ್ವತ ಕುಡಿಯುವ ನೀರು ಬರುತ್ತದೆ ಎಂದು ಕನಸು ಕಾಣುತ್ತಿರುವ ಗ್ರಾಮಗಳ ಜನರಿಗೆ ನಿರಾಸೆಯಾಗಿದೆ. ಇದರಿಂದ ಜನರು ಅಧಿಕಾರಿ, ಜನಪ್ರತಿನಿಧಿಗಳಿಗೆ ಹಿಡಿ ಶಾಪ ಹಾಕುತ್ತಿದ್ದಾರೆ. ಕೆಲ ಗ್ರಾಮಸ್ಥರು ಆಯಾ ಕ್ಷೇತ್ರದ ಶಾಸಕ, ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಿಲ್ಲದಂತಾಗಿದೆ. ಮತ ರಾಜಕಾರಣಕ್ಕಾಗಿ ಈ ಯೋಜನೆ ಬಳಕೆಯಾಗುತ್ತಿದೆ. ಚುನಾವಣೆ ಬಂದಾಗ ಮಾತ್ರ ಹೆಚ್ಚು ಪ್ರಚಲಿತಕ್ಕೆ ಬರುತ್ತದೆ.

ಎಲ್ಲೆಲ್ಲಿವೆ ಯೋಜನೆಯ ಘಟಕಗಳು?:ಯಾದಗಿರಿ ತಾಲ್ಲೂಕಿನ ಯರಗೋಳ, ಆನೂರ ಕೆ, ಗೊಂದಡಗಿ, ಕೌಳೂರು, ಗುರುಮಠಕಲ್‌ ತಾಲ್ಲೂಕಿನ ಅರಕೇರಾ (ಕೆ), ವಡಗೇರಾ ತಾಲ್ಲೂಕಿನ ವಡಗೇರಾ, ಹೈಯಾಳ (ಬಿ), ನಾಯ್ಕಲ್‌, ಶಹಾಪುರ ತಾಲ್ಲೂಕಿನ ಗೋಗಿ (ಕೆ), ವನದುರ್ಗಾ,ಶೆಟ್ಟಿಕೇರಾ, ಸುರಪುರ ತಾಲ್ಲೂಕಿನ ಅರಕೇರಾ (ಕೆ), ಕಿರದಳ್ಳಿ ಗ್ರಾಮಗಳಲ್ಲಿ ಈ ಯೋಜನೆಯಡಿ ಘಟಕಗಳನ್ನು ಸ್ಥಾಪಿಸಲಾಗಿದೆ.

ಏನಿದು ಬಹುಗ್ರಾಮ ಕುಡಿವ ನೀರಿನ ಯೋಜನೆ?: ಒಂದಕ್ಕಿಂತ ಹೆಚ್ಚು ಗ್ರಾಮಗಳಿಗೆ ನೀರು ಪೂರೈಸುವ ಯೋಜನೆಯಾಗಿದೆ. ಕೋಟ್ಯಂತರ ರೂಪಾಯಿ ವೆಚ್ಚ ಮಾಡಿ ನೀರು ಸರಬರಾಜು ಮಾಡುವ ಯೋಜನೆ ಇದಾಗಿದೆ. ಆದರೆ, ಯೋಜನೆಯಡಿ ಕೈಗೊಂಡ ಕಾಮಗಾರಿ ಇನ್ನೂ ಪೂರ್ಣವಾಗದಿರುವುದು ಅಧಿಕಾರಿ, ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿಯಾಗಿದೆ.

ಗೋಗಿ (ಕೆ), ಗೊಂದಡಗಿ, ಅನೂರು(ಕೆ), ಅರಕೇರಾ (ಕೆ) ಗ್ರಾಮದಿಂದ 8 ಗ್ರಾಮಗಳಿಗೆ, ಕೌಳೂರು 7 ಗ್ರಾಮಗಳಿಗೆ, ಅರಕೇರಾ (ಕೆ) ಗ್ರಾಮದಿಂದ 5 ಗ್ರಾಮಗಳಿಗೆ, ಕಿರದಳ್ಳಿಯಿಂದ 14 ಗ್ರಾಮಗಳಿಗೆ, ಯರಗೋಳಕ್ಕೆ ನೀರು ಪೂರೈಸುವ ಯೋಜನೆ ಇನ್ನೂ ಜಾರಿಗೆ ಬಂದಿಲ್ಲ. ಕೆಲ ಕಡೆ ಕಾಮಗಾರಿ ಎಲ್ಲಿ ಇದೆ ಎನ್ನುವುದೇ ಗ್ರಾಮಸ್ಥರಿಗೆ ತಿಳಿದಿಲ್ಲ.

ಹನಿ ನೀರು ಹರಿಸದ ಯೋಜನೆ: ಶಹಾಪುರ ತಾಲ್ಲೂಕಿನಲ್ಲಿ ಸುಮಾರು 9 ವರ್ಷದ ಹಿಂದೆ ತಾಲ್ಲೂಕಿನ ಶೆಟ್ಟಿಕೇರಾ, ನಾಯ್ಕಲ್, ಹೈಯಾಳ ಗ್ರಾಮದಲ್ಲಿ ಬಹುಗ್ರಾಮ ಯೋಜನೆ ಜಾರಿಗೆ ತರಲಾಗಿತ್ತು. ಆದರೆ, ನೀರಿಗಿಂತಲೂ ಹೆಚ್ಚು ಹಣ ಯೋಜನೆಯಲ್ಲಿ ಹರಿದು ಬಂದಿತು. ಆದರೆ, ಬಹುಗ್ರಾಮವಿರಲಿ ಕೊನೆ ಪಕ್ಷ ಒಂದು ಗ್ರಾಮಕ್ಕೂ ಹನಿ ನೀರು ಹರಿಸಲಿಲ್ಲ.

ಇದಕ್ಕೆ ತಾಜಾತನ ಎನ್ನುವಂತೆ ತಾಲ್ಲೂಕಿನ ಶೆಟ್ಟಿಕೇರಾ ಗ್ರಾಮ ಕೆರೆಯಂಗಳದಲ್ಲಿ ನೀರು ಸಂಗ್ರಹಿಸಿ ಶೆಟ್ಟಿಕೇರಾ, ವನದುರ್ಗ, ಹೊಸಕೇರಾ ಹಾಗೂ ಚೆನ್ನೂರ ಗ್ರಾಮಕ್ಕೆ ನೀರು ಹರಿಸುವ ಉದ್ದೇಶದಿಂದ ₹5.60 ಕೋಟಿ ಅನುದಾನ ಬಿಡುಗಡೆಯಾಗಿತ್ತು. ಕಾಮಗಾರಿ ನಡೆಸಲಾಯಿತು. ಆದರೆ, ಬಿಲ್ ಪಡೆಯುವ ಉದ್ದೇಶದಿಂದ ಒಮ್ಮೆ ನೀರು ನಲ್ಲಿಯಲ್ಲಿ ಹರಿಬಿಟ್ಟು ಪರೀಕ್ಷೆ ನಡೆಸಿದ್ದೆ ಸಾಧನೆಯಾಯಿತು. ಆನಂತರ ಹೇಳ ಹೆಸರಿಲ್ಲದಂತೆ ಮುಚ್ಚಿ ಹೋಯಿತು. ಸಾಕಷ್ಟು ನೀರಿನ ಲಭ್ಯತೆ ಇದೆ. ಯೋಜನೆಗಾಗಿ ದುಬಾರಿ ವೆಚ್ಚದ ಯಂತ್ರಗಳನ್ನು ಅಳವಡಿಸಲಾಗಿತ್ತು. ನಂತರ ಮಾಯವಾಗಿಬಿಟ್ಟವು. ಇದರಿಂದ ಬಹುಮುಖ್ಯ ಯೋಜನೆ ದುರುಪಯೋಗಕ್ಕೆ ಕಾರಣವಾಯಿತು.

ಸಚಿವರು ಎಚ್ಚರಿಸಿದ್ದರು: ‘ಯರಗೋಳ, ಆನೂರ (ಕೆ), ಗೊಂದಡಗಿ, ಕೌಳೂರು, ಗೋಗಿ ಗ್ರಾಮದ ಬಹುಗ್ರಾಮ ಕುಡಿಯುವ ನೀರು ಯೋಜನೆ ಪುನಶ್ಚೇತನಕ್ಕೆ ಕೆಕೆಆರ್‌ಡಿಬಿ ವತಿಯಿಂದ ₹5 ಕೋಟಿ ಮಂಜೂರು ಆಗಿದೆ. ಮಾರ್ಚ್‌ ಅಂತ್ಯದೊಳಗೆ ಕಾಮಗಾರಿ ಮುಗಿಸಬೇಕು’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಫೆಬ್ರುವರಿಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳಿಗೆ ಎಚ್ಚರಿಸಿದ್ದರು. ಆದರೆ, ಸಚಿವರ ಮಾತಿಗೆ ಕಿಮ್ಮತ್ತು ಇಲ್ಲದಂತಾಗಿದೆ. ಕಾಮಗಾರಿ ಆರಂಭವಾದ ಲಕ್ಷಣಗಳೇ ಕಾಣುತ್ತಿಲ್ಲ.

ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳನ್ನು ಮಾರ್ಚ್ 26ರೊಳಗೆ ಮುಗಿಸಬೇಕು. ಕೂಡಲೇ ಯೋಜನಾ ವಿಸ್ತೀರ್ಣ ವರದಿ (ಡಿಪಿಆರ್) ಮಾಡಿ, ಟೆಂಡರ್ ಕರೆದು ಕಾಮಗಾರಿ ಮುಗಿಸಬೇಕು ಎಂದು ಎಚ್ಚರಿಸಿದ್ದರೂ ಕಾಮಗಾರಿ ಸದ್ಯಕ್ಕೆ ಪೂರ್ಣಗೊಳ್ಳುವ ಯಾವುದೇ ಸೂಚನೆ ಇಲ್ಲದಂತಾಗಿದೆ.

***

ಇಲ್ಲಿಯವರೆಗೆ ಎರಡೇ ಘಟಕ ಪೂರ್ಣ!

ಜಿಲ್ಲೆಯಲ್ಲಿ 14 ವರ್ಷಗಳಿಂದ ನಡೆಯುತ್ತಿರುವ ಜಲ ನಿರ್ಮಲ ರಾಜೀವ್‌ ಗಾಂಧಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ನನೆಗುದಿಗೆ ಬಿದ್ದಿದೆ.

ಸುರಪುರ ತಾಲ್ಲೂಕಿನ ಕಿರದಳ್ಳಿ ಮತ್ತು ಗುರುಮಠಕಲ್‌ ತಾಲ್ಲೂಕಿನ ಅರಕೇರಾ (ಕೆ) ಗ್ರಾಮದಲ್ಲಿ ಮಾತ್ರ ಯೋಜನೆ ಪೂರ್ಣಗೊಂಡು ನೀರು ಪೂರೈಕೆ ಮಾಡಲಾಗುತ್ತಿದೆ. 32 ಹಳ್ಳಿಗಳಿಗೆ ನೀರು ಪೂರೈಸಬೇಕು. ಆದರೆ, 28 ಹಳ್ಳಿಗಳಿಗೆ ಮಾತ್ರ ನೀರು ಸರಬರಾಜು ಆಗುತ್ತಿದೆ. ಇನ್ನೂ ನಾಲ್ಕು ಗ್ರಾಮಗಳಲ್ಲಿ ಕಾಮಗಾರಿ ಚಾಲ್ತಿಯಲ್ಲಿದೆ. ಇದರಿಂದ ಯೋಜನೆ ಪೂರ್ತಿ ಹಳ್ಳಹಿಡಿದಿದೆ. ಇನ್ನೂ ಕೆಲ ಕಡೆ ಕಾಮಗಾರಿ ಮುಗಿದಿದ್ದರೂ ನೀರು ಶುದ್ಧೀಕರಣ ಮಾಡದೇ ಹಾಗೇ ನೀರನ್ನು ಪೂರೈಸಲಾಗುತ್ತಿದೆ.

ಪೂರ್ತಿಯಾಗದೆ ಇರುವ ಘಟಕಗಳನ್ನು ಜಲಜೀವನ್‌ ಮಿಷನ್‌ (ಜೆಜೆಎಂ) ಯೋಜನೆಯಡಿ ಪುನಶ್ಚೇನಕ್ಕೆ ಕೈಗೆತ್ತಿಕೊಳ್ಳಲಾಗಿದೆ. ಇದು ಯಾವಾಗ ಪೂರ್ಣಗೊಳ್ಳತ್ತದೋ ಕಾದು ನೋಡಬೇಕು.

***

ಬಹುಗ್ರಾಮ ಕುಡಿಯುವ ನೀರಿನ ಹೆಸರಿನಲ್ಲಿ ನೀರು ಪೂರೈಸಿಲ್ಲ. ಇಲ್ಲಿ ಬಹುದೊಡ್ಡ ಹಗರಣ ನಡೆದಿದೆ. ಉನ್ನತಮಟ್ಟದ ತನಿಖೆಗೆ ಒಳಪಡಿಸಬೇಕು ಎಂದು ಎಂಟು ವರ್ಷದಿಂದ ಹೋರಾಟ ನಡೆಸುತ್ತಿದ್ದೇನೆ

ಯಲ್ಲಯ್ಯ ನಾಯಕ ವನದುರ್ಗ, ರೈತ ಮುಖಂಡ

***

ರಾಜೀವ್‌ ಗಾಂಧಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಮೂಲಕ ಸ್ಥಾಪಿಸಲಾದ ನೀರಿನ ಟ್ಯಾಂಕ್ ವಿವಿಧ ಗ್ರಾಮಗಳಿಗೆ ನೀರು ಪೂರೈಸದೆ ನಿರುಪಯುಕ್ತವಾಗಿ ಹಾಳು ಬಿದ್ದಿದೆ

ಬಸವರಾಜ, ಆನೂರ.ಬಿ ಗ್ರಾಮಸ್ಥ

***

ಅಲ್ಲಿಪುರ, ಯರಗೋಳ ಗ್ರಾಮಕ್ಕೆ ಶಾಶ್ವತ ಕುಡಿಯುವ ನೀರನ್ನು ಒದಗಿಸುವ ಸಲುವಾಗಿ ವೆಂಕಟೇಶ್ ನಗರದಲ್ಲಿ ನಿರ್ಮಿಸಲಾದ ಘಟಕದಿಂದ ಇಂದಿಗೂ ಒಂದು ಹನಿ ಕುಡಿಯುವ ನೀರು ಜನರಿಗೆ ತಲುಪಿಲ್ಲ
ಶಿವರಾಜ ಬಿ ಮಾನೆಗಾರ, ಯರಗೋಳ

***

ಜಲ ನಿರ್ಮಲ ಯೋಜನೆಯಡಿ ಕೈಗೊಂಡ ಕಾಮಗಾರಿ ಕೆಲ ಕಡೆ ಇನ್ನೂ ನಡೆಯುತ್ತಿದೆ. ಪೈಪ್‌ ಲೈನ್‌ ಹಾಕಿದ್ದ ಕಡೆ ಒಡೆದು ಹಾಕಿದ್ದಾರೆ. ಪುನಶ್ಚೇತನಕ್ಕಾಗಿ ಹಣ ಬಿಡುಗಡೆಯಾಗಿದ್ದು, ಕಾಮಗಾರಿ ಆರಂಭಿಸಲಾಗುವುದು
ಬಸವರಾಜ ಐರೆಡ್ಡಿ, ಆರ್‌ಡ್ಲ್ಯೂಒ, ಎಇ

ಪೂಕರ ಮಾಹಿತಿ: ಟಿ.ನಾಗೇಂದ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT