ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ | ಗ್ರಾಮ ಪಂಚಾಯತ್‌ ಚುನಾವಣೆ: ಪ್ರವಾಸದಿಂದ ನೇರ ಮತಗಟ್ಟೆಗೆ

ಜಿಲ್ಲೆಯ 122 ಗ್ರಾ,ಪಂಗಳಲ್ಲಿ 118ಕ್ಕೆ ಆ.4ರಂದು ಚುನಾವಣೆ; ಆಕಾಂಕ್ಷಿಗಳಲ್ಲಿ ಢವಢವ
Published 3 ಆಗಸ್ಟ್ 2023, 5:52 IST
Last Updated 3 ಆಗಸ್ಟ್ 2023, 5:52 IST
ಅಕ್ಷರ ಗಾತ್ರ

ಬಿ.ಜಿ.ಪ್ರವೀಣಕುಮಾರ

ಯಾದಗಿರಿ: ಗ್ರಾಮ ಪಂಚಾಯಿತಿ ಎರಡನೇ ಅವಧಿಯ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಆಗಸ್ಟ್‌ 4ರಂದು ಚುನಾವಣೆ ನಿಗದಿಯಾಗಿದ್ದು, ಗ್ರಾಮ ಪಂಚಾಯಿತಿ ಸದಸ್ಯರನ್ನು ಪ್ರವಾಸದಿಂದ ಮತದಾನದ ದಿನವೇ ನೇರವಾಗಿ ಮತಗಟ್ಟೆಗೆ ಕರೆ ತರುವ ಪ್ರಯತ್ನ ನಡೆದಿದೆ.

ಜಿಲ್ಲೆಯಲ್ಲಿ 122 ಗ್ರಾಮ ಪಂಚಾಯಿತಿಗಳಿದ್ದು, 118 ಗ್ರಾಮ ಪಂಚಾಯಿತಿಗಳಿಗೆ ಮಾತ್ರ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು, ಈಗಾಗಲೇ 4 ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ಮುಗಿದಿದೆ.

ಎರಡು ಬಾರಿ ಪ್ರವಾಸ

ಮೀಸಲಾತಿ ನಿಗದಿ ಮತ್ತು ಚುನಾವಣೆಗಾಗಿ ಒಂದೂವರೆ ತಿಂಗಳ ಅಂತರವಿದ್ದರಿಂದ ಎರಡು ಬಾರಿ ಪ್ರವಾಸ ಭಾಗ್ಯ ಸದಸ್ಯರಿಗೆ ಸಿಕ್ಕಿದೆ.

ಜೂನ್‌ 20, 21, 22 ರಂದು ಜಿಲ್ಲೆಯ ಯಾದಗಿರಿ, ಶಹಾಪುರ, ಸುರಪುರ, ಗುರುಮಠಕಲ್, ವಡಗೇರಾ ಹಾಗೂ ಹುಣಸಗಿ ತಾಲ್ಲೂಕುಗಳ ಮೀಸಲಾತಿ ನಿಗದಿಪಡಿಸಲಾಗಿತ್ತು. ಆದಾದ ನಂತರ ಕೆಲ ಗ್ರಾಮ ಪಂಚಾಯಿತಿಗಳ ಸದಸ್ಯರು ಪ್ರವಾಸಕ್ಕೆ ತೆರಳಿದ್ದರು. ಮೀಸಲಾತಿ ಘೋಷಣೆ ನಂತರ ಚುನಾವಣೆ ದಿನಾಂಕ ಘೋಷಣೆಯಾಗದ ಕಾರಣ ಪ್ರವಾಸ ತೆರಳಿದ್ದ ಸದಸ್ಯರು ಮತ್ತೆ ಸ್ವಗ್ರಾಮಗಳಿಗೆ ವಾಪಸ್‌ ಬಂದಿದ್ದರು.

ಜುಲೈ 21ರಂದು ಗ್ರಾಮ ಪಂಚಾಯಿತಿಗಳಿಗೆ ಆಗಸ್ಟ್‌ 4ರಂದು ಚುನಾವಣೆ ಘೋಷಣೆಯಾಗಿದ್ದೆ ತಡ ಮತ್ತೆ ಕೆಲ ಗ್ರಾಮ ಪಂಚಾಯಿತಿ ಸದಸ್ಯರು ಪ್ರವಾಸಕ್ಕೆ ತೆರಳಿದ್ದರು. ಈಗ ನೇರವಾಗಿ ಚುನಾವಣೆ ದಿನವೇ ಗ್ರಾಮಕ್ಕೆ ಬಂದು ಮತಗಟ್ಟೆಗೆ ತೆರಳಲಿದ್ದಾರೆ.

30 ತಿಂಗಳು ಮುಕ್ತಾಯ

2020ರಲ್ಲಿ ಎರಡು ಹಂತದಲ್ಲಿ ಗ್ರಾಮ, ಪಂಚಾಯಿತಿ ಚುನಾವಣೆ ನಡೆದಿತ್ತು. 30 ತಿಂಗಳ ಮೊದಲ ಅವಧಿ ಮುಕ್ತಾಯವಾಗಿದೆ. ಇನ್ನೂ 30 ತಿಂಗಳು ಅಧಿಕಾರವಿದೆ. ಹೀಗಾಗಿ ಗ್ರಾಮ ರಾಜಕೀಯ ಬಿರುಸು ಪಡೆದುಕೊಂಡಿದೆ.

ಲಕ್ಷಾಂತರ ಖರ್ಚು

ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಆಕಾಂಕ್ಷಿಗಳು ಲಕ್ಷಾಂತರ ರೂಪಾಯಿ ಖರ್ಚು ಮಾಡಿಕೊಂಡಿದ್ದಾರೆ. ಮೊದಲು ಪ್ರವಾಸ ತೆರಳಿ ಮತ್ತೆ ಎರಡನೇ ಬಾರಿ ಕರೆದುಕೊಂಡು ಹೋಗಿದ್ದು, ಒಬ್ಬ ಸದಸ್ಯನಿಗೆ ಅಂದಾಜು ₹50 ಸಾವಿರದಿಂದ ₹1 ಲಕ್ಷದ ತನಕ ಖರ್ಚು ಮಾಡಲಾಗಿದೆ ಎಂದು ಸದಸ್ಯರು ಹೇಳುತ್ತಾರೆ.

ಕಳೆದ 20 ದಿನಗಳಲ್ಲಿ ಖರ್ಚು ವೆಚ್ಚ ಹೆಚ್ಚಾಗಿದ್ದು, ಕೆಲ ಗ್ರಾಮ ಪಂಚಾಯಿತಿಗಳಲ್ಲಿ ಜಿದ್ದಾಜಿದ್ದಿ ಏರ್ಪಟ್ಟಿದೆ. ಇದರಿಂದ ಪೈಪೋಟಿ ಮೇಲೆ ಖರ್ಚು ಮಾಡಲಾಗುತ್ತಿದೆ.

ಪತಿ, ಪತ್ನಿಗೆ ದುಂಬಾಲು

ಎರಡನೇ ಅವಧಿಗೆ ಪ್ರವಾಸಕ್ಕೆ ತೆರಳದ ಸದಸ್ಯೆ ಪತಿಗೆ, ಸದಸ್ಯ ಪತ್ನಿಗೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಆಕಾಂಕ್ಷಿಗಳು ಗ್ರಾಮದಲ್ಲಿ ದುಂಬಾಲು ಬಿದ್ದಿದ್ದು, ವಿವಿಧ ಆಮಿಷ ತೋರಿಸುತ್ತಿದ್ದಾರೆ.

ಮಹಿಳಾ ಸದಸ್ಯರಿಗೆ ಬಂಗಾರದ ಆಮಿಷ ತೋರಿಸಿ ತಮಗೆ ಮತ ಹಾಕುವಂತೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎನ್ನಲಾಗಿದೆ. ಆದರೂ ಚುನಾವಣೆ ದಿನ ಏನು ಬೇಕಾದರೂ ಆಗಬಹುದು ಎಂದು ಆಕಾಂಕ್ಷಿಗಳ ಎದೆಯಲ್ಲಿ ಢವಢವ ಶುರುವಾಗಿದೆ.

ನಾಳೆ ಸ್ಪಷ್ಟ ಚಿತ್ರಣ

ಆ.3ರಂದೇ ಯಾರು ಅಧ್ಯಕ್ಷರಾಗಲಿದ್ದಾರೆ ಎನ್ನುವುದು ಸ್ಪಷ್ಟವಾಗಿ ತಿಳಿದು ಬರಲಿದೆ. ಪ್ರವಾಸಕ್ಕೆ ತೆರಳಿದ ಸದಸ್ಯರು ಗುರುವಾರ ಸಂಜೆಗೆಲ್ಲ ಆಯಾ ತಾಲ್ಲೂಕು ಅಕ್ಕಪಕ್ಕದ ಲಾಡ್ಜ್‌, ಪ್ರವಾಸಿ ಮಂದಿರ ಸೇರಿ ರೈತ ಫಾರ್ಮಾ ಹೌಸ್‌ಗಳಲ್ಲಿ ಬಂದು ತಂಗಲಿದ್ದಾರೆ ಎಂದು ಸದಸ್ಯರೊಬ್ಬರು ಮಾಹಿತಿ ನೀಡಿದರು.

ಗ್ರಾಮ ಪಂಚಾಯಿತಿ ಎರಡನೇ ಅವಧಿಯ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ  ಬೆಳಿಗ್ಗೆ, ಮಧ್ಯಾಹ್ನ ಚುನಾವಣೆ ನಿಗದಿಯಾಗಿದ್ದು, ಈಗಾಗಲೇ ಚುನಾವಣೆ ಅಧಿಕಾರಿಗಳಿಗೆ ತರಬೇತಿ ನೀಡಲಾಗಿದೆ.

ಕೆಲ ತಾಲ್ಲೂಕುಗಳಲ್ಲಿ ಬೆಳಿಗ್ಗೆ 11 ಗಂಟೆ, ಇನ್ನೂ ಕೆಲ ತಾಲ್ಲೂಕುಗಳಲ್ಲಿ ಮಧ್ಯಾಹ್ನ 3 ಗಂಟೆಗೆ ಚುನಾವಣೆ ನಡೆಯಲಿದೆ.

ಬೆಳಿಗ್ಗೆ 11 ಗಂಟೆ ವೇಳೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಮುಗಿಯಬೇಕಿದೆ. ಬ್ಯಾಲೇಟ್‌ ಪೇಪರ್‌ನಲ್ಲಿ ಚುನಾವಣೆ ನಡೆಯಲಿದೆ. ಕೆಲವು ಕಡೆ ಕೈ ಎತ್ತುವ ಮೂಲಕವೂ ಆಯ್ಕೆ ಮಾಡುವ ಸಾಧ್ಯತೆ ಇದೆ.

ಆಗಸ್ಟ್‌ 5ರಂದು ಮೊದಲ ಅವಧಿಯ 30 ತಿಂಗಳು ಮುಗಿಯಲಿರುವುದರಿಂದ 4 ರಂದೇ ಚುನಾವಣೆ ನಡೆಸಿ ಅಧ್ಯಕ್ಷ, ಉಪಾಧ್ಯಕ್ಷರನ್ನು ಆಯ್ಕೆ ಮಾಡಲಾಗುತ್ತಿದೆ.

5 ಗ್ರಾಂ ಚಿನ್ನ ₹20 ಸಾವಿರ ಬಹುಮಾನ!

ಆಕಾಂಕ್ಷಿಗಳು ಸದಸ್ಯರಿಗೆ ವಿವಿಧ ಆಮಿಷ ತೋರಿಸಿ ಒಳಒಪ್ಪಂದ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಉಳಿದಿರುವ 30 ತಿಂಗಳ ಅವಧಿಗಾಗಿ ಕೆಲವು ಕಡೆ 15:15 ತಿಂಗಳ ಒಪ್ಪಂದ ಮಾಡಿಕೊಳ್ಳಲಾಗಿದೆ. ಪೈಪೋಟಿ ಇರುವ ಗ್ರಾಮ ಪಂಚಾಯಿತಿಗಳಲ್ಲಿ 15 ತಿಂಗಳ ಅವಧಿ ಹಂಚಿಕೆ ಒಬ್ಬರೇ ಆಕಾಂಕ್ಷಿ ಇದ್ದರೆ ಎರಡೂವರೆ ವರ್ಷ ಒಬ್ಬರಿಗೆ ಅಧಿಕಾರ ಬಿಟ್ಟುಕೊಡಲಾಗಿದೆ. ಒಂದೊಂದು ಕಡೆ ಒಂದೊಂದು ದರ ನಿಗದಿ ಪಡಿಸಲಾಗಿದೆ ಎನ್ನಲಾಗಿದೆ. ಕೆಲ ಗ್ರಾಮ ಪಂಚಾಯಿತಿಗಳಲ್ಲಿ ಒಬ್ಬ ಸದಸ್ಯರಿಗೆ ₹20ರಿಂದ 50 ಸಾವಿರ 5 ಗ್ರಾಂನಿಂದ 10 ಗ್ರಾಂ ಬಂಗಾರ ಬಹುಮಾನ ಸಿಗಲಿದೆ ಎನ್ನುವುದು ತಿಳಿದುಬಂದಿದೆ. ಉದಾಹರಣೆಗೆ ಒಂದು ಪಂಚಾಯಿತಿಯಲ್ಲಿ 12 ಜನ ಸದಸ್ಯರಿದ್ದರೆ 15 ತಿಂಗಳ ಒಪ್ಪಂದದಂತೆ 10 ಜನಕ್ಕೆ ‘ಬಹುಮಾನ’ ಕೊಡಬೇಕಾಗುತ್ತದೆ. ಉಳಿದ 15 ತಿಂಗಳ ಅವಧಿಗೂ ಮತ್ತೊಬ್ಬ ಆಕಾಂಕ್ಷಿ ‘ಬಹುಮಾನ’ ನೀಡುವುದು ಈಗಲೇ ಫಿಕ್ಸ್‌ ಆಗಿದೆ.

ಪೊಲೀಸ್‌ ಬಂದೋಬಸ್ತ್‌

ಕಳೆದ ಬಾರಿ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ ವೇಳೆ ಘರ್ಷಣೆಯಾಗಿ ಹಲವರಿಗೆ ಗಾಯವಾಗಿತ್ತು. ವಡಗೇರಾ ತಾಲ್ಲೂಕಿನ ಉಳ್ಳೆಸೂಗುರು ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಘರ್ಷಣೆಯಾಗಿದ್ದು ಬೈಕ್‌ಗಳಿಗೂ ಹಾನಿಯಾಗಿತ್ತು. ಕೆಲವರು ಗ್ರಾಮ ಬಿಟ್ಟು ತಲೆಮರೆಸಿಕೊಂಡಿದ್ದರು. ಹೀಗಾಗಿ ಈ ಬಾರಿ ಚುನಾವಣೆ ವೇಳೆ ಘರ್ಷಣೆಯಾಗದಂತೆ ಪೊಲೀಸ್‌ ಇಲಾಖೆ ಮುಂಜಾಗ್ರತೆ ವಹಿಸಿದೆ. ಉಳ್ಳೆಸೂಗುರು ನಗನೂರು ಕೋಡೆಕಲ್‌ ಪಂಚಾಯಿತಿ ವ್ಯಾಪ್ತಿಯಲ್ಲಿ ಹೆಚ್ಚಿನ ಪೊಲೀಸ್‌ ಬಂದೋಬಸ್ತ್‌ ಮಾಡಲಾಗುತ್ತಿದೆ. 118 ಗ್ರಾಮ ಪಂಚಾಯಿತಿಗಳಿಗೆ ಪೊಲೀಸ್‌ ಸಿಬ್ಬಂದಿಯನ್ನು ಬಂದೋಬಸ್ತ್‌ಗಾಗಿ ನಿಯೋಜಿಸಲಾಗಿದೆ. ಒಂದು ಗ್ರಾಮ ಪಂಚಾಯಿತಿಗೆ 3 ಕಾನ್‌ಸ್ಟೆಬಲ್‌ ಒಬ್ಬ ಎಎಸ್‌ಐ ಬಂದೋಬಸ್ತ್‌ನಲ್ಲಿದ್ದರೆ ಪಿಎಸ್‌ಐ ಸಿಪಿಐ ರೌಂಡ್‌ ಹಾಕಲಿದ್ದಾರೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ ಮಾಹಿತಿ ನೀಡಿದ್ದಾರೆ. ಅಲ್ಲದೇ ಆಯಾ ಪೊಲೀಸ್‌ ಠಾಣೆಯ ಸಮೀಪದ ಗ್ರಾಮ ಪಂಚಾಯಿತಿಗಳಿಗೆ ಕೆಎಸ್‌ಆರ್‌ಪಿ ಡಿಆರ್‌ ಪೊಲೀಸ್‌ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

ಚುನಾವಣೆ ನಡೆಯಲಿರುವ ಗ್ರಾ.ಪಂ ವಿವರ

ತಾಲ್ಲೂಕು; ಗ್ರಾ.ಪಂ ಸಂಖ್ಯೆ

ಯಾದಗಿರಿ;22

ಗುರುಮಠಕಲ್‌;17

ಶಹಾಪುರ;23

ವಡಗೇರಾ;17

ಸುರಪುರ;21

ಹುಣಸಗಿ;18 ಒಟ್ಟು;118

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT