ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ ನಗರದ ಮೂಲ ಸೌಕರ್ಯಕ್ಕೆ ಒತ್ತು: ನೂತನ ಅಧ್ಯಕ್ಷ ವಿಲಾಸ ಪಾಟೀಲ

ನೂತನ ನಗರಸಭೆ ಅಧ್ಯಕ್ಷ ಹೇಳಿಕೆ
Last Updated 29 ಅಕ್ಟೋಬರ್ 2020, 16:25 IST
ಅಕ್ಷರ ಗಾತ್ರ

ಯಾದಗಿರಿ: 2 ವರ್ಷಗಳಿಂದ ಅಧಿಕಾರ ಇರಲಿಲ್ಲ. ಈಗ ಅಧಿಕಾರ ಸ್ವೀಕರಿಸಿದ್ದೇನೆ. ಮುಂದಿನ ದಿನಗಳಲ್ಲಿ ನಗರದ ಅಭಿವೃದ್ಧಿ ಜೊತೆಗೆ ಮೂಲ ಸೌಕರ್ಯಕ್ಕೆ ಆದ್ಯತೆ ನೀಡುತ್ತೇನೆ ಎಂದು ನೂತನ ನಗರಸಭೆಅಧ್ಯಕ್ಷವಿಲಾಸ ಪಾಟೀಲ ತಿಳಿಸಿದರು.

ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಧಿಕಾರಿಗಳ ಜೊತೆ ಸಭೆ ಮಾಡುತ್ತೇನೆ. ನಗರದಲ್ಲಿ ಯಾವಾವ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಬೇಕು ಎಂದು ಪರಿಶೀಲಿಸುತ್ತೇನೆ. ಪ್ರತಿ ವಾರ್ಡ್‌ಗೂ ಸದಸ್ಯರ ಜೊತೆ ಭೇಟಿ ನೀಡುತ್ತೇನೆ ಎಂದರು.

‌ಶಾಸಕ ವೆಂಕಟರೆಡ್ಡಿ ಮುದ್ನಾಳ ಮಾತನಾಡಿ, ಪಕ್ಷ ಅಧಿಕಾರಕ್ಕೆ ಬಂದಿದ್ದು, ಬಹಳ ಸಂತೋಷ ಆಗಿದೆ. ಸದಸ್ಯರು ಒಗ್ಗಟ್ಟು ಪ್ರದರ್ಶನ ಮಾಡಿದ್ದಾರೆ. 21 ಸದಸ್ಯರು ಅಧ್ಯಕ್ಷರು ಇದ್ದಂತೆ ಎಂದರು.

ರಾಯಚೂರುಸಂಸದ ರಾಜಾ ಅಮರೇಶ ನಾಯಕ ಮಾತನಾಡಿ, ಯಾದಗಿರಿ ನಗರಸಭೆ ಜಿಲ್ಲಾ ಕೇಂದ್ರವಾಗಿದ್ದು, ಮಹತ್ವವಾದ ಕೆಲಸ ಮುಂದಿದೆ. ಜಿಲ್ಲೆಯ ಅಭಿವೃದ್ಧಿ ಜೊತೆಗೆ ನಗರವೂ ಅಭಿವೃದ್ಧಿಯಾಗಬೇಕು. ಕೇಂದ್ರ, ರಾಜ್ಯದ ಯೋಜನೆಗಳು ಸಮಪರ್ಕವಾಗಿ ಅನುಷ್ಠಾನವಾಗಬೇಕು. ರಾಜ್ಯ ಮತ್ತು ಕೇಂದ್ರದಲ್ಲಿ ನಮ್ಮದೇ ಸರ್ಕಾರವಿದೆ. ಅನುದಾನ ಹೆಚ್ಚು ತಂದುಅಭಿವೃದ್ಧಿಗೆ ಗಮನಹರಿಸುತ್ತೇವೆ ಎಂದರು.

ಇತ್ತಿಚೆಗೆ ಬೆಂಗಳೂರಿನಲ್ಲಿ ಉಂಟಾದ ಪ್ರವಾಹ ಸಂತ್ರಸ್ತರಿಗೆ ₹25 ಸಾವಿರ ಪರಿಹಾರ ನೀಡಲಾಗಿದೆ. ಆದರೆ, ಉತ್ತರ ಕರ್ನಾಟಕದಲ್ಲಿ ಕೇವಲ ₹10 ಸಾವಿರ ನೀಡಲಾಗಿದೆ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ಪರಿಶೀಲಿಸಿ ಹೆಚ್ಚಿನ ಪರಿಹಾರ ನೀಡಬೇಕು ಎಂದು ಒತ್ತಾಯಿಸುತ್ತೇನೆ ಎಂದರು.

ಎರಡು ವರ್ಷಗಳ ನಂತರ ಅಧಿಕಾರ
2018ರಲ್ಲಿ ಚುನಾವಣೆ ನಡೆದರೂ ಇಲ್ಲಿಯವರೆಗೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ಮೀಸಲಾತಿ ಗೊಂದಲದಿಂದ ನಡೆದಿರಲಿಲ್ಲ. ಅಧಿಕಾರವಿಲ್ಲದೆ ಪರಿತಪಿಸಿದ್ದ ಸದಸ್ಯರಿಗೆ ಈಗ ಮುಕ್ತಿ ಸಿಕ್ಕಂತೆ ಆಗಿದೆ.

ವಿಲಾಸ ಪಾಟೀಲ ಮುಂದಿದೆ ಸವಾಲುಗಳು:
ಅಧಿಕಾರಿಗಳ ವರ್ಗದಿಂದ ಕೆಲಸಗಳಾಗದೆ ಬೇಸತ್ತಿರುವ ಜನ, ಸದಸ್ಯರಿಗೆ ನೂತನ ಅಧ್ಯಕ್ಷ ವಿಲಾಸ ಪಾಟೀಲ ಮೇಲೆ ಹಲವಾರು ಸವಾಲುಗಳು ಮುಂದಿವೆ. ರಸ್ತೆ, ಚರಂಡಿ, ಕುಡಿಯುವ ನೀರು ಸರಬರಾಜು ಸೇರಿದಂತೆ ಅಗತ್ಯ ಮೂಲ ಸೌಕರ್ಯಕ್ಕೆ ಒತ್ತು ನೀಡುತ್ತೇನೆ ಎಂದು ತಿಳಿಸಿದ್ದಾರೆ. ಆದರೆ, ಇವರಿಗೆ ಅಧಿಕಾರ ವರ್ಗ ಹೇಗೆ ಸ್ಪಂದಿಸುತ್ತದೊ ಎಂದು ಕಾದು ನೋಡಬೇಕಾಗಿದೆ.

15 ತಿಂಗಳಿಗೆ ಅಧಿಕಾರ ಸೀಮಿತಿ:

ಅಧ್ಯಕ್ಷರ ಅಧಿಕಾರದ ಅವಧಿ 15 ತಿಂಗಳಿಗೆ ಕಡಿತಗೊಳಿಸಲಾಗಿದೆ. ಮೊದಲ ಹಂತದಲ್ಲಿ ವಿಲಾಸ ಪಾಟೀಲ, 15 ತಿಂಗಳ ನಂತರ ಮತ್ತೊಬ್ಬರಿಗೆ ಅವಕಾಶ ನೀಡಲಾಗುತ್ತದೆಎಂದು ಬಿಜೆಪಿ ಸದಸ್ಯರೊಬ್ಬರು ಮಾಹಿತಿ ನೀಡಿದರು.

30 ತಿಂಗಳ ನಂತರ ಮೀಸಲಾತಿ ಬದಲಾವಣೆ ಆಗುತ್ತದೆ. ಪೂರ್ಣ ಬಹುಮತ ಇರುವ ಕಾರಣ ಎಲ್ಲ ಸದಸ್ಯರಿಗೆ ಅಧಿಕಾರ ನೀಡುವ ಯೋಜನೆ ಇದೆ ಎಂದು ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT