ಗುರುವಾರ , ಜನವರಿ 28, 2021
25 °C
ಅತಿ ಹೆಚ್ಚು ವೈದ್ಯಕೀಯ ಕಾಲೇಜು ಹೊಂದಿದ ರಾಜ್ಯ: ಡಾ.ಸುಧಾಕರ್‌

2 ವರ್ಷದಲ್ಲಿ 9 ವೈದ್ಯಕೀಯ ಕಾಲೇಜು ಸ್ಥಾಪನೆ: ಡಾ.ಸುಧಾಕರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ‘ರಾಜ್ಯದ 18 ಜಿಲ್ಲೆಗಳಲ್ಲಿ ಈಗಾಗಲೇ ವೈದ್ಯಕೀಯ ಕಾಲೇಜು ಸ್ಥಾಪನೆಯಾಗಿವೆ. ಇದರಲ್ಲಿ ಇಂದು ಶಂಕುಸ್ಥಾಪನೆ ಮಾಡಿದ ಕಾಲೇಜು ಕೂಡ ಸೇರಿದೆ. ಇನ್ನೂ 9 ಜಿಲ್ಲೆಗಳಲ್ಲಿ ಎರಡು ವರ್ಷದಲ್ಲಿ ವೈದ್ಯಕೀಯ ಕಾಲೇಜುಗಳನ್ನು ಸ್ಥಾಪನೆ ಮಾಡಲಾಗುವುದು’ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಹೇಳಿದರು.

ನಗರದ ಹೊರವಲಯದ ಜಿಲ್ಲಾ ಸ್ಪತ್ರೆ ಆವರಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ವೈದ್ಯಕೀಯ ಕಾಲೇಜು ನಿರ್ಮಾಣ ಹಾಗೂ ಇತರ ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಈಗಾಗಲೇ ಚಾಲನೆ ನೀಡಿರುವ ವೈದ್ಯಕೀಯ ಕಾಲೇಜು 70 ಎಕರೆಯಲ್ಲಿ ನಿರ್ಮಾಣವಾಗಲಿದೆ. ₹325 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿದೆ. ಇದು ಆರೋಗ್ಯ ಕ್ಷೇತ್ರದಲ್ಲಿ ಸಂಜೀವಿನಿಯಾಗಲಿದೆ’ ಎಂದು ಅಭಿಪ್ರಾಯಪಟ್ಟರು.

‘ಜಿಲ್ಲೆಯ ಜನ ಈಗ ಆರೋಗ್ಯ ಸಮಸ್ಯೆಗಳಿಗಾಗಿ ಹೈದರಾಬಾದ್‌, ಕಲಬುರ್ಗಿಗೆ ಹೋಗಬೇಕಾಗಿಲ್ಲ. ಜಿಲ್ಲೆಯಲ್ಲಿ ಎಲ್ಲ ರೀತಿಯ ಆರೋಗ್ಯ ಸೌಲಭ್ಯ ಸಿಗುತ್ತದೆ’ ಎಂದರು.

‘ಪ್ರತಿ ಜಿಲ್ಲೆಗೆ ವೈದ್ಯಕೀಯ ಕಾಲೇಜು ಇರಬೇಕು ಎನ್ನುವುದು ಸರ್ಕಾರದ ಉದ್ದೇಶವಾಗಿದೆ. ಇದೇ ವರ್ಷ 4 ವೈದ್ಯಕೀಯ ಕಾಲೇಜು ಸ್ಥಾಪನೆ ಮಾಡಲಾಗಿದೆ. ದೇಶದಲ್ಲಿಯೇ ಕರ್ನಾಟಕ ಅತಿಹೆಚ್ಚು ವೈದ್ಯಕೀಯ ಕಾಲೇಜು ಹೊಂದಿದ ರಾಜ್ಯವಾಗಿದೆ’ ಎಂದು ತಿಳಿಸಿದರು.

‘ಮಾನವ ಸೂಚ್ಯಂಕದಲ್ಲಿ ಜಿಲ್ಲೆ ಹಿಂದುಳಿದಿದೆ. ವೈದ್ಯಕೀಯ ಕ್ಷೇತ್ರದ ಅಭಿವೃದ್ಧಿಗೆ ವೈದ್ಯಕೀಯ ಕಾಲೇಜು ಸ್ಥಾಪನೆ ಸಹಕಾರಿಯಾಗಲಿದೆ. ಇದಕ್ಕಾಗಿ ಕೇಂದ್ರದಿಂದ ಶೇ 60, ರಾಜ್ಯದಿಂದ‌ ಶೇ 40 ರಷ್ಟು ಅನುದಾನ ಒದಗಿಸಲಾಗುವುದು’ ಎಂದರು.

‘2014ರಿಂದ ಇಲ್ಲಿಯವರೆಗೆ ದೇಶದಲ್ಲಿ 157 ವೈದ್ಯಕೀಯ ಕಾಲೇಜು ಸ್ಥಾಪನೆಯಾಗಿವೆ. ಪ್ರತಿವರ್ಷ 10,000 ವಿದ್ಯಾರ್ಥಿಗಳು ಹಾಗೂ 5,000 ವಿದ್ಯಾರ್ಥಿಗಳು ಸ್ನಾತಕೋತ್ತರ ಪದವಿ ಪಡೆಯುತ್ತಿದ್ದಾರೆ’ ಎಂದು ಮಾಹಿತಿ ನೀಡಿದರು.

‘ರಾಜ್ಯದಲ್ಲಿ 29,000 ಕೋವಿಡ್ ಲಸಿಕೆ ವಿತರಣಾ ಕೇಂದ್ರಗಳ ಸ್ಥಾಪನೆ ಮಾಡಿದ್ದೇವೆ. 1 ಲಕ್ಷಕ್ಕೂ ಹೆಚ್ಚು ಆರೋಗ್ಯ ಸಿಬ್ಬಂದಿ ನೇಮಕವಾಗಿದ್ದು, ಕೇಂದ್ರ ಸರ್ಕಾರದ ಮಾರ್ಗಸೂಚಿ ಪ್ರಕಾರ ಲಸಿಕೆ ವಿತರಣೆಯಾಗಲಿದೆ’ ಎಂದರು.

‘2020 ಆರೋಗ್ಯದ ಸವಾಲು ಎದುರಿಸಿದ ವರ್ಷ. 2021 ಪರಿಹಾರ ಕಂಡುಕೊಳ್ಳುವ ವರ್ಷವಾಗಲಿದೆ. ಆರೋಗ್ಯ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡಬೇಕು. ಶುಚಿತ್ವ ಕಾಪಾಡಿಕೊಳ್ಳಬೇಕು’ ಎಂದರು.

‘ರಾಜ್ಯದಲ್ಲಿ 2,500 ವೈದ್ಯರನ್ನು ನೇರವಾಗಿ ನೇಮಕ ಮಾಡಿಕೊಳ್ಳಲಾಗಿದೆ. ವೈದ್ಯಕೀಯ ಕಾಲೇಜಿಗೆ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ನೇಮಕ ಮಾಡಿಕೊಂಡು ಕೇಂದ್ರ ಸರ್ಕಾರದ 7ನೇ ವೇತನ ಆಯೋಗದ ಅನ್ವಯ ವೇತನ ನೀಡಲಾಗುತ್ತಿದೆ’ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು