ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ: 13 ತಿಂಗಳು ಕಳೆದರೂ ಅಧಿಕಾರ ಭಾಗ್ಯವಿಲ್ಲ

ಸಾಲ ಮಾಡಿದ ‍ಪುರಪಿತೃಗಳು, ಅಧಿಕಾರಿಗಳ ಕೈಯಲ್ಲಿ ಆಡಳಿತ ಯಂತ್ರ
Last Updated 3 ಫೆಬ್ರುವರಿ 2023, 19:30 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲೆಯ ಸುರಪುರ ತಾಲ್ಲೂಕಿನ ಕಕ್ಕೇರಾ, ಕೆಂಭಾವಿ ಪುರಸಭೆಗೆ ಸದಸ್ಯರು ಆಯ್ಕೆಯಾಗಿ 13 ತಿಂಗಳಾದರೂ ಮೀಸಲಾತಿ ನಿಗದಿಯಾಗದ ಕಾರಣ ಆಡಳಿತ ಯಂತ್ರ ಅಧಿಕಾರಿಗಳು ನಡೆಸುತ್ತಿದ್ದಾರೆ. ಸದಸ್ಯರು ಗೆದ್ದರೂ ಅಧಿಕಾರ ಭಾಗ್ಯವಿಲ್ಲದಂತಾಗಿದೆ.

‌ಸುರಪುರ ತಾಲ್ಲೂಕು ವ್ಯಾಪ್ತಿಯ ಕಕ್ಕೇರಾ, ಕೆಂಭಾವಿ ಪುರಸಭೆಗೆ 2021ರ ಡಿಸೆಂಬರ್‌ 27ರಂದು ಚುನಾವಣೆ ನಡೆದಿತ್ತು. ಡಿ.30ರಂದು ಫಲಿತಾಂಶ ಪ್ರಕಟವಾಗಿತ್ತು. ಇದಾಗಿ 13 ತಿಂಗಳು ಕಳೆದರೂ ಮೀಸಲಾತಿ ಗೊಂದಲ ಇನ್ನೂ ಬಗೆಹರಿದಿಲ್ಲ. ಇದರಿಂದ ಸದಸ್ಯರು ಕೈಕೈ ಹಿಸಿಕೊಳ್ಳುವಂತಾಗಿದೆ.

ಕಕ್ಕೇರಾ ಮತ್ತು ಕೆಂಭಾವಿ ಪುರಸಭೆಗೆ ತಲಾ 23 ಸ್ಥಾನಗಳಿದ್ದು, ಕಾಂಗ್ರೆಸ್‌, ಬಿಜೆಪಿ ಸದಸ್ಯರೆ ಹೆಚ್ಚು ಆಯ್ಕೆಯಾಗಿದ್ದಾರೆ. ಮೂವರು ಸದಸ್ಯರು ಪಕ್ಷೇತರಾಗಿ ಆಯ್ಕೆಯಾಗಿದ್ದರು.

ಸಾಲ ಮಾಡಿದ ಸದಸ್ಯರು: ಚುನಾವಣೆಗೆ ಸ್ಪರ್ಧಿಸಿದ್ದ ಅಭ್ಯರ್ಥಿಗಳು ಲಕ್ಷಾಂತರ ರೂಪಾಯಿ ವ್ಯಯ ಮಾಡಿ ಗೆದ್ದು ಬಂದಿದ್ದಾರೆ. ಆದರೆ, ಆಡಳಿತ ನಡೆಸಲು ಆಗದ ಕಾರಣ ಸಾಲ ಮಾಡಿದ್ದಾರೆ. ಕೆಲವರು ಜಮೀನು ಮಾರಾಟ ಮಾಡಿ ಸಾಲ ಭರಿಸಿದ್ದಾರೆ.

‘ಚುನಾವಣೆಗೆ ಮುಂಚೆ ₹10 ಲಕ್ಷ ಸಾಲವಿತ್ತು. ಚುನಾವಣೆಗೆ ಮತ್ತೆ ₹15 ಲಕ್ಷ ಖರ್ಚಾಯಿತು. ₹25 ಲಕ್ಷಕ್ಕೆ 2 ಎಕರೆ ಜಮೀನು ಮಾರಾಟ ಮಾಡಿದ್ದೇನೆ’ ಎಂದು ಸದಸ್ಯರೊಬ್ಬರು ಹೇಳುತ್ತಾರೆ.

ಸಣ್ಣಪುಟ್ಟ ದುರಸ್ತಿ: ಆಡಳಿತ ಮಂಡಳಿ ರಚನೆಯಾಗದ ಕಾರಣ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ನೇಮಕವಾಗಿಲ್ಲ. ಹಲವರು ಇದಕ್ಕಾಗಿ ಲಾಬಿ ನಡೆಸಿದ್ದರು. ಆದರೂ ಮೀಸಲಾತಿ ನಿಗದಿಯಾಗಿಲ್ಲ. ಹೀಗಾಗಿ ಸಣ್ಣಪುಟ್ಟ ದುರಸ್ತಿ ಕಾರ್ಯಗಳನ್ನು ಸದಸ್ಯರು ಮಾಡಿಸುತ್ತಿದ್ದಾರೆ. ಅನುದಾನವಿಲ್ಲದ ಕಾರಣ ದೊಡ್ಡ ಮೊತ್ತದ ಕಾಮಗಾರಿ ಮಾಡಲು ಆಗದಂತೆ ಆಗಿದೆ.

ಕೆಂಭಾವಿ ಪುರಸಭೆಯಲ್ಲಿ ಬಿಜೆಪಿ, ಕಕ್ಕೇರಾ ಪುರಸಭೆಯಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಹೆಚ್ಚು ಸ್ಥಾನ ಬಂದಿವೆ.

ಕಕ್ಕೇರಾದಲ್ಲಿ 16 ಸ್ಥಾನ ಕಾಂಗ್ರೆಸ್‌, 6 ಬಿಜೆಪಿ, 1 ಸ್ಥಾನ ಪಕ್ಷೇತರರ ಪಾಲಾಗಿತ್ತು. ಈಗ ಪಕ್ಷೇತರ ಸದಸ್ಯ ಕಾಂಗ್ರೆಸ್‌ ಸೇರ್ಪಡೆಯಾಗಿದ್ದರಿಂದ 17ಸ್ಥಾನಕ್ಕೆ ಏರಿಕೆಯಾಗಿದೆ. ಕೆಂಭಾವಿಯಲ್ಲಿ ಬಿಜೆಪಿ 13 ಸ್ಥಾನ ಪಡೆದಿದೆ. ಕಾಂಗ್ರೆಸ್ 8 ಸ್ಥಾನ, ಪಕ್ಷೇತರರು 2 ಸ್ಥಾನ ಪಡೆದಿದ್ದಾರೆ.

ಎರಡು ಪುರಸಭೆಗಳಲ್ಲಿ ಪಟ್ಟಣದ ಅಭಿವೃದ್ಧಿ ಕನಸು ಹೊತ್ತ ಸ್ಪರ್ಧಿಸಿ ಗೆದ್ದಿದ್ದಾರೆ. ಆದರೆ, ಅವರ ನಿರೀಕ್ಷೆಗೆ ತಕ್ಕಂತೆ ಅಧಿಕಾರ ಇಲ್ಲದಿದ್ದರಿಂದ ಯಾವುದೇ ಕಾರ್ಯಗಳನ್ನು ಮಾಡಲು ಆಗುತ್ತಿಲ್ಲ. ಕೆಂಭಾವಿ ಪುರಸಭೆ ವ್ಯಾಪ್ತಿಯಲ್ಲಿ ವಾರ್ಡ್‌ಗಳಿದ್ದರೆ, ಕಕ್ಕೇರಾ ವ್ಯಾಪ್ತಿಯಲ್ಲಿ ದೊಡ್ಡಿಗಳಿವೆ. ಯಾವಾಗ ಮೀಸಲಾತಿ ನಿಗದಿಯಾಗುತ್ತದೆ ಎಂದು ಸದಸ್ಯರು ಚಾತಕ ಪಕ್ಷಿಯಂತೆ ಕಾದು ಕುಳಿತಿದ್ದಾರೆ.

***

ಆಡಳಿತ ಮಂಡಳಿ ಇಲ್ಲದ ಕಾರಣ ಪ್ರತ್ಯೇಕ ಅನುದಾನವಿಲ್ಲ. 13 ತಿಂಗಳು ಕಳೆದರೂ ಅಧಿಕಾರ ಅನುಭವಿಸುವಂತೆ ಇಲ್ಲ. ಜನರಿಗೆ ಮನವರಿಕೆ ಮಾಡಿಕೊಡಲಾಗಿದೆ
-ರಾಜು ಹವಾಲ್ದಾರ್‌, ಕಕ್ಕೇರಾ ಪುರಸಭೆ ಸದಸ್ಯ

***

ಪುರಸಭೆ ವ್ಯಾಪ್ತಿಯಲ್ಲಿ ದೊಡ್ಡ ಮಟ್ಟದ ಕಾಮಗಾರಿಗಳು ಬಂದ್‌ ಆಗಿವೆ. ಗೆದ್ದುಬಂದರೂ ಆಡಳಿತ ನಡೆಸಲು ಆಗುತ್ತಿಲ್ಲ
-ನಿಂಗಪ್ಪ ನಾಯ್ಕ್‌, ಕಕ್ಕೇರಾ ಪುರಸಭೆ ಸದಸ್ಯ

***

ಪುರಸಭೆ ಸದಸ್ಯರು ಸ್ಥಳೀಯ ಸಣ್ಣಪುಟ್ಟ ಕೆಲಸ ಮಾಡಿಸಲು ಮಾತ್ರ ಸಾಧ್ಯವಾಗಿದೆ. ಶಾಸಕರ ಅನುದಾನದಲ್ಲಿ ವಿವಿಧ ಕೆಲಸಗಳನ್ನು ಮಾಡಲಾಗುತ್ತಿದೆ
-ಶ್ರೀಧರ ದೇಶಪಾಂಡೆ, ಕೆಂಭಾವಿ ಪುರಸಭೆ ಸದಸ್ಯ

***

ಅಧಿಕಾರಿಗಳ ದರ್ಬಾರ್‌ ಆದಂತೆ ಆಗಿದೆ. ಮುಖ್ಯಾಧಿಕಾರಿಯೇ ಎಲ್ಲ ಆಗಿದ್ದಾರೆ. ಸದಸ್ಯರಿಗೆ ಯಾವುದೇ ಪ್ರಮುಖ ನಿರ್ಧಾರ ತೆಗೆದುಕೊಳ್ಳಲು ಆಗುತ್ತಿಲ್ಲ
-ರವಿ ಸೊನ್ನದ, ಕೆಂಭಾವಿ ಪುರಸಭೆ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT