ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಣಸಗಿ: ಸ್ವಾಮಿನಾಥನ್ ವರದಿ ಜಾರಿಗೆ ಆಗ್ರಹ

ಜಿಲ್ಲೆಯ ವಿವಿಧೆಡೆ ಕೃಷಿ ಕೂಲಿಕಾರ್ಮಿಕರ ಪ್ರತಿಭಟನೆ
Last Updated 10 ಆಗಸ್ಟ್ 2021, 3:37 IST
ಅಕ್ಷರ ಗಾತ್ರ

ಹುಣಸಗಿ: ಪಟ್ಟಣದಲ್ಲಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯುನಿಯನ್ (ಸಿಐಟಿಯು) ಮತ್ತು ಕರ್ನಾಟಕ ಪ್ರಾಂತ ರೈತ ಸಂಘ ಹಾಗೂ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಕಾರ್ಯಕರ್ತರು ಕೃಷಿ ತಿದ್ದುಪಡಿ ಕಾಯ್ದೆಗಳ ವಾಪಸ್, ಸ್ವಾಮಿನಾಥನ್ ವರದಿ ಜಾರಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸೋಮವಾರ ಪ್ರತಿಭಟನೆ ನಡೆಸಿದರು.

ಮಹಾಂತಸ್ವಾಮಿ ವೃತ್ತ ಬಳಿ ಜಮಾಯಿಸಿದ ಕೂಲಿಕಾರ್ಮಿಕ ಮಹಿಳೆಯರು ಮತ್ತು ರೈತ ಸಂಘಟನೆ ಮುಖಂಡರು ಬಸವೇಶ್ವರ ವೃತ್ತದವರೆಗೂ ಮೆರವಣಿಗೆ ನಡೆಸಿ ಧರಣಿ ಕುಳಿತು ಸರ್ಕಾರದ ವಿರುದ್ಧ ಘೋಷಣೆ ಹಾಕಿದರು.

ಕೃಷಿ ಕೂಲಿಕಾರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ದಾವಲಸಾಬ ನದಾಫ್ ಮಾತನಾಡಿ, ಕೃಷಿ ಕಾಯ್ದೆ ತಿದ್ದುಪಡಿಗಳಿಂದ ರೈತರಿಗೆ ಹೊಡೆತ ಬಿದ್ದಿದೆ. ಇದರಿಂದ ರೈತರು ಮೋಸ ಹೋಗಲಿದ್ದಾರೆ. ಕಾಯ್ದೆಗಳನ್ನು ಕೈ ಬಿಡಬೇಕು ಎಂದು ಆಗ್ರಹಿಸಿದರು.

ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ಸಿಗುತ್ತಿಲ್ಲ. ಹೀಗಾಗಿ ರೈತರು ತೀರಾ ನಲುಗಿ ಹೋಗಿದ್ದಾರೆ. ಸದ್ಯ ಜಾರಿ ಮಾಡಿದ ಕಾಯ್ದೆಯಿಂದ ಸರಕಾರಿ ಸಹಬಾಗಿತ್ವದ ಎಪಿಎಂಸಿಗಳು ಬಾಗಿಲು ಮುಚ್ಚಿಕೊಳ್ಳಬೇಕಿದೆ. ಹೀಗಾಗಿ ರೈತರ ಬದುಕು ಸುಧಾರಿಸಲು ಕಾಯ್ದೆ ಕೈ ಬಿಡುವುದರೊಂದಿಗೆ ಸ್ವಾಮಿನಾಥನ್ ಆಯೋಗದ ವರದಿ ಜಾರಿ ಮಾಡಬೇಕು ಎಂದು ಒತ್ತಾಯಿಸಿದರು.

ಕೋವಿಡ್ ವೇಳೆ ಸಂಘಟಿತ ಹಾಗೂ ಅಸಂಘಟಿತ ಕಾರ್ಮಿಕರು ಕೆಲಸ ಇಲ್ಲದೆ ಜೀವನಕ್ಕಾಗಿ ಪರದಾಡಿದ್ದಾರೆ. ಉಚಿತ ಚಿಕಿತ್ಸೆ ನೀಡುವಲ್ಲಿ ಸರಕಾರ ವಿಫಲವಾಗಿದೆ. ಕೋವಿಡ್ ವೇಳೆ ಗೌರವಯುತ ಶವಸಂಸ್ಕಾರವೂ ಮಾಡಲಿಲ್ಲ. ಕಾರ್ಮಿಕರಿಗೆ ಜೀವನ ನಡೆಸಲು ಪ್ರತಿ ಕುಟುಂಬಕ್ಕೆ ತಿಂಗಳಿಗೆ₹10 ಸಾವಿರ ಪರಿಹಾರ ಹಾಗೂ 10 ಕೆ.ಜಿ ಅಕ್ಕಿ ವಿತರಿಸಬೇಕು ಎಂದು ಒತ್ತಾಯಿಸಿದರು.

ಕೃಷಿ ಕೂಲಿಕಾರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಬಸವರಾಜ ಕಟ್ಟಿಮನಿ ಕಾಮನಟಗಿ ಮಾತನಾಡಿದರು.

ತಹಶೀಲ್ದಾರ್ ಅಶೋಕಕುಮಾರ ಸುರಪುರಕರ್ ಅವರಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ನಸೀಮಾ ಮುದ್ನೂರ, ಗೌರವಾಧ್ಯಕ್ಷ ಸುನಂದ ವಾಲಿ, ಗುರುದೇವಿ ಹಿರೇಮಠ, ಅಯ್ಯಪ್ಪ ಅನಕಸೂಗುರ, ಭಾಗೀರಥಿ, ರಾಧಾಬಾಯಿ ಲಕ್ಷ್ಮೀಪುರ, ಅಹ್ಮದ ಪಠಾಣ, ಶಾಂಭವಿ, ಬಾಲಪ್ಪ ಶಳ್ಳಗಿ, ನಿಂಗಯ್ಯ ಹುಣಸಗಿ, ಬಂದೇನವಾಜ ಅಗ್ನಿ ಸೇರಿದಂತೆ ಸಂಘಟನೆ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT