ಮಂಗಳವಾರ, ನವೆಂಬರ್ 29, 2022
29 °C
ಕಾನೂನು ಸೇವೆಗಳ ಶಿಬಿರ; ಮುಖ್ಯ ನ್ಯಾಯಮೂರ್ತಿ ಅಲೋಕ್ ಅರಾಧೆ ಸಲಹೆ

ಸಕಾಲಕ್ಕೆ ಅರ್ಹ ಫಲಾನುಭವಿಗಳಿಗೆ ಸೌಲಭ್ಯ ಕಲ್ಪಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ‘ಬಡವರಿಗೆ ಇರುವ ಯೋಜನೆಗಳ ಲಾಭವನ್ನು ಸಕಾಲಕ್ಕೆ ಅವರಿಗೆ ದೊರಕಿಸಬೇಕು’ ಎಂದು ಕರ್ನಾಟಕ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಅಲೋಕ್ ಅರಾಧೆ ಅವರು ಅಧಿಕಾರಿಗಳಿಗೆ ಸಲಹೆ ನೀಡಿದರು.

ನಗರದ ಹೊಸಳ್ಳಿ ಕ್ರಾಸ್‌ ವಿದ್ಯುತ್ ಪ್ರಸರಣ ನಿಗಮದ ನೌಕರರ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರ, ರಾಜ್ಯ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಪೊಲೀಸ್ ಇಲಾಖೆ ಸಹಯೋಗದೊಂದಿಗೆ ಶನಿವಾರ ಕಾನೂನು ಸೇವೆಗಳ ಬೃಹತ್ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಜಿಲ್ಲಾಡಳಿತದಿಂದ ಈಗಾಗಲೇ ಹಲವು ಯೋಜನೆಗಳ ಅಡಿ ಸೌಲಭ್ಯ ಕಲ್ಪಿಸಲಾಗುತ್ತಿದ್ದು, ಜನ ಕಲ್ಯಾಣ ಕಾರ್ಯಕ್ರಮಗಳ ಲಾಭವನ್ನು ಸಕಾಲಕ್ಕೆ ಅರ್ಹ ಫಲಾನುಭವಿಗಳಿಗೆ ಕಲ್ಪಿಸುವಂತೆ ಸಲಹೆ ನೀಡಿದರು.

ದಿಕ್ಸೂಚಿ ಭಾಷಣ ಮಾಡಿದ ಹೈಕೋರ್ಟ್‌ ನ್ಯಾಯಧೀಶ ಬಿ.ವೀರಪ್ಪ ಅವರು ಬಾಲ್ಯ ವಿವಾಹ ಹಾಗೂ ದೇವದಾಸಿ ಪದ್ಧತಿಗಳ ನಿರ್ಮೂಲನೆಗೆ ಪ್ರತಿಯೊಬ್ಬರು ಕೈಜೋಡಿಸಬೇಕು. ಇದಕ್ಕಾಗಿ ರಾಜ್ಯ ಕಾನೂನು ಸೇವಾ ಪ್ರಾಧಿಕಾರದಿಂದ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದರು.

ವಿಶೇಷವಾಗಿ ವಕೀಲರು ವಾರದಲ್ಲಿ ಒಂದು ದಿನ ಜಿಲ್ಲೆಯ ವಿವಿಧ ಪ್ರದೇಶಗಳಲ್ಲಿ ತಂಡಗಳನ್ನು ರಚಿಸಿಕೊಂಡು ಬಾಲ್ಯ ವಿವಾಹ, ದೇವದಾಸಿ ಪದ್ಧತಿ ನಿರ್ಮೂಲನೆಗೆ ಅರಿವು ಮೂಡಿಸುವ ಜತೆ ನೆರವು ಒದಗಿಸುವಂತೆ ಸಲಹೆ ನೀಡಿದರು.

ಜಿಲ್ಲೆಯಲ್ಲಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದು, ರಾಜ್ಯ ಕಾನೂನು ಸೇವಾ ಪ್ರಾಧಿಕಾರವು ನಿಮ್ಮ ಜತೆ ಇದ್ದು, ಬದ್ಧರಾಗಿ ಕಾರ್ಯನಿರ್ವಹಿಸುವಂತೆ ಸಲಹೆ ನೀಡಿದ ಅವರು, ಯಾರೂ ನ್ಯಾಯದಿಂದ ವಂಚಿತರಾಗಬಾರದ್ದು, ಎಲ್ಲರಿಗೆ ಸಮಾನ ಅವಕಾಶ ದೊರಕಿಸಲು ಕಂಕಣಬದ್ಧರಾಗಿ ಎಂದು ಹೇಳಿದರು.

ಹೈಕೋರ್ಟ್‌ ನ್ಯಾಯಮೂರ್ತಿ ಹಾಗೂ ಯಾದಗಿರಿ ಆಡಳಿತಾತ್ಮಕ ನ್ಯಾಯಧೀಶ ಶಿವಶಂಕರ ಅಮರಣ್ಣವರ್‌ ಮಾತನಾಡಿ, ತಾಲ್ಲೂಕು, ಹೋಬಳಿ ಹಾಗೂ ಪ್ರತಿ ಗ್ರಾಮಗಳಲ್ಲಿ ಇಂತಹ ಕಾರ್ಯಕ್ರಮಗಳ ಮೂಲಕ ಜನರಿಗೆ ಸೌಲಭ್ಯ ಸಿಗಬೇಕು. ಜಟೀಲತೆ ಹೋಗಲಾಡಿಸಿ, ಮಧ್ಯವರ್ತಿಗಳ ಹಾವಳಿ ತಪ್ಪಿಸಿ ಅರ್ಹ ಫಲಾನುಭವಿಗಳಿಗೆ ನೇರವಾಗಿ ಸೌಲಭ್ಯ ದೊರಕಿಸಲು ಸಲಹೆ ನೀಡಿದರು.

ಜಿಲ್ಲಾಧಿಕಾರಿ ಸ್ನೇಹಲ್ ಆರ್ ಮಾತನಾಡಿದರು.

ಕಾರ್ಯಕ್ರಮದಲ್ಲಿ ಎಡ್ವೋಕಸಿ ಡೈರೆಕ್ಟರ್ ವಾಸುದೇವ ಶರ್ಮಾ ಅವರು ಬಾಲ್ಯ ವಿವಾಹ, ದೇವದಾಸಿ ಪದ್ಧತಿ ನಿರ್ಮೂಲನೆ ಹಾಗೂ ಬಾಲ ಕಾರ್ಮಿಕ ಪದ್ಧತಿ ವಿರೋಧಿ ಕ್ರಮಗಳ ಬಗ್ಗೆ ವಿವರಿಸಿದರು.

ಈ ವೇಳೆ ಬಾಲ ಕಾರ್ಮಿಕ ಪದ್ಧತಿ ವಿರೋಧಿ ಹಾಗೂ ದೇವದಾಸಿ ಪದ್ಧತಿ ವಿರುದ್ಧ ಅರಿವು ಮೂಡಿಸುವ ಪೋಸ್ಟರ್‌ಗಳನ್ನು ನ್ಯಾಯಾಧೀಶರು ಬಿಡುಗಡೆಗೊಳಿಸಿದರು. ಜಿಲ್ಲೆಯ 13 ಜನ ಹಿರಿಯ ವಕೀಲರಿಗೆ, ಕಾನೂನು ಅರಿವು ಮೂಡಿಸುತ್ತಿರುವ 6 ಜನ ಸಮಾಜ ಸೇವಕರಿಗೆ, ಮುಖ್ಯಮಂತ್ರಿಗಳ ಚಿನ್ನದ ಪದಕ ಪಡೆದ ಗುರುಮಠಕಲ್ ಪೊಲೀಸ್ ಇನ್ಸ್‌ಪೆಕ್ಟರ್ ದೌಲತ್ ಎನ್.ಕೆ. ಹಾಗೂ ಯಾದಗಿರಿ ನಗರ ಪೊಲೀಸ್ ಠಾಣೆಯ ಹೆಡ್‌ಕಾನ್ಸ್‌ಸ್ಟೆಬಲ್‌ ಗಣೇಶ ಅವರನ್ನು ಗೌರವಿಸಲಾಯಿತು.

ಇದೇ ವೇಳೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ 5 ವಿದ್ಯಾರ್ಥಿಗಳಿಗೆ ಸಾಂಕೇತಿಕವಾಗಿ ಲ್ಯಾಪ್ ಟಾಪ್ ವಿತರಿಸಲಾಯಿತು.

ಎಲ್ಲ ನ್ಯಾಯಾಧೀಶರನ್ನು ಗೌರವಿಸಿ ಸನ್ಮಾನಿಸಲಾಯಿತು.

ಸರ್ಕಾರದ ವಿವಿಧ ಯೋಜನೆಗಳ ಕುರಿತು ಮಾಹಿತಿ ನೀಡಲು ಹಾಗೂ ಸೌಲಭ್ಯ ಕಲ್ಪಿಸಲು ಸ್ಥಾಪಿಸಲಾಗಿದ್ದ, 15ಕ್ಕೂ ಹೆಚ್ಚು ಪ್ರದರ್ಶನ ಮಳಿಗೆಗಳನ್ನು ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಅಲೋಕ್ ಅರಾಧೆ ಉದ್ಘಾಟಿಸಿದರು.

ಹೈಕೋರ್ಟ್‌ ರಿಜಿಸ್ಟ್ರಾರ್ ಜನರಲ್ (ಐ/ಸಿ) ಮುರಳೀಧರ್ ಪೈ.ಬಿ, ಹಾಗೂ ಸದಸ್ಯ ಕಾರ್ಯದರ್ಶಿ ಜಯಶಂಕರ, ಉಪಕಾರ್ಯದರ್ಶಿ ರಾಘವೇಂದ್ರ ಶೆಟ್ಟಿಗಾರ್ , ಜಿಲ್ಲಾ ಪ್ರಧಾನ ಹಾಗೂ ಸೇಷನ್‌ ನ್ಯಾಯಾಧೀಶ ಬಿ.ನಂದಕುಮಾರ, ಹಿರಿಯ ಸಿವಿಲ್ ನ್ಯಾಯಾಧೀಶ ಸಾಹೀಲ್ ಅಹ್ಮದ್ ಕುನ್ನಿಭಾವಿ, ಕರ್ನಾಟಕ ಕಾನೂನು ಸೇವಾ ಪ್ರಾಧಿಕಾರದ ಪಿಆರ್‌ಒಗಳಾದ ವಿಘ್ನೇಶಕುಮಾರ, ಕೆಎಸ್‌ಎಲ್‌ಎಸ್‌ಎ ನಾನ್ ಆಫೀಸಿಯಲ್ ಸದಸ್ಯ ಮೋಹನ್ ರಾವ್ ನಲವಡೆ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಮರೇಶ ನಾಯ್ಕ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಸಿ.ಎಸ್.ಮಾಲಿಪಾಟೀಲ, ಹೆಚ್ಚುವರಿ ಜಿಲ್ಲಾಧಿಕಾರಿ ಶರಣಬಸಪ್ಪ ಕೋಟೆಪ್ಪಗೊಳ, ಉಪವಿಭಾಗಾಧಿಕಾರಿ ಶಾ ಆಲಂ ಹುಸೇನ್‌, ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.

***

ಗಮನ ಸೆಳೆದ 'ಪ್ರಜಾವಾಣಿ' ವರದಿಗಳು

ಕಾನೂನು ಸೇವೆಗಳ ಮಹಾ ಶಿಬಿರದ ಅಂಗವಾಗಿ ವಿವಿಧ ಇಲಾಖೆಗಳಿಂದ ವಿವಿಧ ವಸ್ತು ಪ್ರದರ್ಶನ ಮಳಿಗೆ ಸ್ಥಾಪಿಸಿದ್ದು, ಇದರಲ್ಲಿ 'ಪ್ರಜಾವಾಣಿ' ವಿಶೇಷ ವರದಿ, ಫೋನ್ ಇನ್ ಕಾರ್ಯಕ್ರಮದ ಬ್ಯಾನರ್‌ಗಳನ್ನು ಹಾಕಲಾಗಿದೆ.

ಜಿಲ್ಲಾ ಪಂಚಾಯಿತಿ ಮನರೇಗಾ ಯೋಜನೆಯ ಮಳಿಗೆಯಲ್ಲಿ ಸ್ವಚ್ಛತಾ ವಾಹನ ವಾಹಿನಿಗೆ ಮಹಿಳೆಯರ ಸಜ್ಜು ಕುರಿತು ವಿಶೇಷ ವರದಿ ರಾರಾಜಿಸುತ್ತಿದೆ. ಫೋನ್ ಇನ್ ಕಾರ್ಯಕ್ರಮ ವರದಿ ಕೂಡ ಹಾಕಲಾಗಿದೆ. ಇದರ ಜೊತೆಗೆ ಕೃಷಿ ಇಲಾಖೆ ಮಳಿಗೆಯಲ್ಲಿ ‘ಪ್ರಜಾವಾಣಿ‘ ಜೊತೆ ಹಮ್ಮಿಕೊಂಡ ನೇರಫೋನ್ ಇನ್ ಕಾರ್ಯಕ್ರಮದ ವರದಿಯನ್ನು ಅಳವಡಿಸಲಾಗಿದೆ. ಸಮಾಜಕಲ್ಯಾಣ ಇಲಾಖೆ ಮಳಿಗೆಯನ್ನು ‘ಪ್ರಜಾವಾಣಿ‘ ವರದಿ ಬ್ಯಾನರ್‌ನಲ್ಲಿ ಹಾಕಲಾಗಿದೆ.

***

ಬಾಲ್ಯ ವಿವಾಹಕ್ಕೆ ಒಳಗಾದ ಮುತ್ತವ್ವ ಬೆಳಗಾವಿ ಹಾಗೂ ದೇವದಾಸಿ ಅನಿಷ್ಠ ಪದ್ಧತಿಯಿಂದ ಬಳಲಿದ ಗೌರಮ್ಮ ಅವರ ಅಭಿಪ್ರಾಯ ಮನ ಮುಟ್ಟುವಂತಿದ್ದು, ಈ ಸಮಸ್ಯೆಗಳ ನಿವಾರಣೆಗೆ ಎಲ್ಲರೂ ಕೈಜೋಡಿಸಬೇಕು

- ಪಿ.ಎಸ್.ದಿನೇಶಕುಮಾರ, ಹೈಕೋರ್ಟ್‌ ನ್ಯಾಯಾಧೀಶ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು