ಶನಿವಾರ, ಡಿಸೆಂಬರ್ 3, 2022
26 °C

ಕಾಲಜ್ಞಾನಿಯ ಜಾತ್ರಾ ಮಹೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊಡೇಕಲ್ಲ (ಹುಣಸಗಿ): ಭಾವೈಕತ್ಯೆಯ ತಾಣವೆಂದೇ ಪ್ರಸಿದ್ಧಿ ಪಡೆದ ತಾಲ್ಲೂಕಿನ ಕೊಡೇಕಲ್ಲದ ಕಾಲಜ್ಞಾನಿ ಬಸವಣ್ಣನವರ ಜಾತ್ರೆ ಅಂಗವಾಗಿ ಜೋಡು ಪಲ್ಲಕ್ಕಿ ಉತ್ಸವ ಗುರುವಾರ ಸಡಗರ ಸಂಭ್ರಮದಿಂದ ನಡೆಯಿತು.

ಕೊಡೇಕಲ್ಲ ಬಸವ ಪರಂಪರೆಯ ಪೀಠಾಧಿಪತಿ ವೃಷಭೇಂದ್ರ ಅಪ್ಪನವರ ನೇತೃತ್ವದಲ್ಲಿ ಸಹಸ್ರಾರು ಭಕ್ತರ ಜಯಘೋಷದ ಮಧ್ಯೆ ಸಡಗರ ಸಂಭ್ರಮದಿಂದ ಜರುಗಿತು.

ಬುಧವಾರ ರಾತ್ರಿ ಅಲಂಕೃತ ಜೋಡು ಪಲ್ಲಕ್ಕಿಗಳಿಗೆ ಕಳಸಾರೋಹಣವು ಅಷ್ಟವಿಧಾರ್ಚನೆಯ ಪೂಜೆ ನಡೆಯಿತು. ಅಹೋರಾತ್ರಿ ಜಾತ್ರೆಗೆ ಆಗಮಿಸಿದ ಕಲಾವಿದರಿಂದ ಸಂಗೀತ ಹಾಗೂ ಭಜನೆ ಕಾರ್ಯಕ್ರಮ ನಡೆದವು.

ಬೆಳಿಗ್ಗೆ ಬಸವಣ್ಣನವರ ಐಕ್ಯ ಸ್ಥಳ (ಊರಾನ ಗುಡಿ)ಯ ರಾಜಗಟ್ಟೆಯ ಮೇಲೆ ಅಲಂಕರಿಸಲಾಗಿದ್ದ ಜೋಡು ಪಲ್ಲಕ್ಕಿಗಳಿಗೆ ವೃಷಬೇಂದ್ರ ಅಪ್ಪನವರು ಹಾಗೂ ರಾಜಾ ಜಿತೇಂದ್ರನಾಯಕ, ರಾಜಾ ವೆಂಕಟಪ್ಪನಾಯಕ ಜಹಾಗೀರದಾರ ಹಾಗೂ ಹುಣಸಗಿ ತಹಶೀಲ್ದಾರ್ ಜಗದೀಶ ಚೌರ್ ಹಾಗೂ ಬಾರಾ ಬಲೂತಿ ವತನದಾರರು ಪೂಜೆ ಸಲ್ಲಿಸುವುದರ ಮೂಲಕ ಉತ್ಸವಕ್ಕೆ ಚಾಲನೆ ನೀಡಿದರು.

ಜಯ ಘೋಷದೊಂದಿಗೆ ಭಕ್ತರು ಜೋಡು ಪಲ್ಲಕ್ಕಿ ಹೊತ್ತು ಭಕ್ತಿ ಸಮರ್ಪಿಸಿದರು. ಮಹಿಳೆಯರು ಮಕ್ಕಳು ಹೂ, ಉತ್ತತ್ತಿ, ಬಾಳೆಹಣ್ಣು, ಮಂಡಾಳು ಎಸೆದರು. ಈ ಜಾತ್ರೆಯಲ್ಲಿ ತಾಲ್ಲೂಕು ಹಾಗೂ ಯಾದಗಿರಿ ಜಿಲ್ಲೆಯ ಭಕ್ತರು ಸೇರಿದಂತೆ ನೆರೆಯ ವಿಜಯಪುರ, ಬಾಗಲಕೋಟೆ, ರಾಯಚೂರು ಸೇರಿದಂತೆ ಇತರ ಜಿಲ್ಲೆಗಳ ಭಕ್ತರು ಪಾಲ್ಗೊಂಡಿದ್ದರು.
ಕೊಡೇಕಲ್ಲ ಪೊಲೀಸ್ ಠಾಣೆಯ ಪಿಎಸ್ಐಗಳಾದ ಶ್ರೀಶೈಲ ಅಂಬಾಟೆ, ದಿವ್ಯ ಅವರ ನೇತೃತ್ವದಲ್ಲಿ ಸೂಕ್ತ ಬಂದೋಬಸ್ತ್ ಒದಗಿಸಲಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.