ಸುರಪುರ: ಸರ್ಕಾರಿ ಅಧಿಕಾರಿಗಳೇ ನಕಲಿ ಪಾಸ್ ದಂಧೆ ನಡೆಸಿರುವ ಶಂಕೆ

ಯಾದಗಿರಿ: ‘ಕೋವಿಡ್–19 ತುರ್ತು ವಾಹನ ಪಾಸ್’ಗಳನ್ನು ನಕಲು ಮಾಡಿ ಮುದ್ರಿಸುತ್ತಿರುವ ವಿಷಯ ಬೆಳಕಿಗೆ ಬಂದಿದ್ದು, ಇಬ್ಬರು ಅಧಿಕಾರಿಗಳು ಹಾಗೂ ಜೆರಾಕ್ಸ್ ಕೇಂದ್ರದವರ ವಿರುದ್ಧ ಪ್ರಕರಣ ದಾಖಲಾಗಿದೆ. ಇದರಿಂದ ಸರ್ಕಾರಿ ಅಧಿಕಾರಿಗಳೇ ನಕಲಿ ಪಾಸ್ ದಂಧೆ ನಡೆಸಿರುವ ಶಂಕೆ ವ್ಯಕ್ತವಾಗಿದೆ.
ಜಿಲ್ಲೆಯಲ್ಲಿ ಓಡಾಡಲು ವಿವಿಧ ವಾಹನಗಳಿಗೆ ಜಿಲ್ಲಾಡಳಿತದ ವತಿಯಿಂದ ಪಾಸ್ ವಿತರಿಸುತ್ತಿದ್ದು, ಇವುಗಳನ್ನೇ ಅಧಿಕಾರಿಗಳು ಕಲರ್ ಜೆರಾಕ್ಸ್ ಮಾಡಿಸಿ ವಾಹನಗಳ ಮಾಲೀಕರಿಗೆ ವಿತರಿಸುತ್ತಿದ್ದರು ಎನ್ನಲಾಗಿದೆ.
ಉಪ ವಿಭಾಗಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಾಸ್ ವಿತರಿಸುವ ಅಧಿಕಾರ ಹೊಂದಿದ್ದಾರೆ. ಆದರೆ, ನಗರಸಭೆ ಅಧಿಕಾರಿಗಳು ಅವುಗಳನ್ನು ದುರುಪಯೋಗ ಪಡಿಸಿಕೊಂಡಿರುವುದು ಬೆಳಕಿಗೆ ಬಂದಿದೆ.
ಕ್ಷಿಪ್ರ ಸಂಚಾರಿ ದಳ ಕೋವಿಡ್–19 ಅಧಿಕಾರಿ ಹಾಗೂ ಅಕ್ಷರ ದಾಸೋಹ ಸಹಾಯಕ ಉಪನಿರ್ದೇಶರೂ ಆಗಿರುವ ಮೌನೇಶ ವೀರಭದ್ರಪ್ಪ ಕಂಬಾರ ಅವರು ದೂರು ಸಲ್ಲಿಸಿದ್ದು, ಸುರಪುರ ನಗರಸಭೆ ಮುಖ್ಯಾಧಿಕಾರಿ ಜೀವನ ಕಟ್ಟಿಮನಿ, ಪರಿಸರ ಎಂಜಿನಿಯರ್ ಸುನಿಲ್ ನಾಯಕ ಹಾಗೂ ಶಶಿ ಜೆರಾಕ್ಸ್ ಕೇಂದ್ರದ ವಿರುದ್ಧ ಸುರಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುರಪುರದ ಕರ್ನಾಟಕ ಬ್ಯಾಂಕ್ ಹತ್ತಿರ ಜೆರಾಕ್ಸ್ ಕೇಂದ್ರ ಇದೆ. ಇದು ಡಿವೈಎಸ್‌ಪಿ ಕಚೇರಿಗೆ ಸನಿಹದಲ್ಲಿ ಇದೆ. ನಕಲಿ ಪಾಸು ಮುದ್ರಿಸುತ್ತಿರುವ ವಿಷಯ ತಿಳಿದ ಮೌನೇಶ ಕಂಬಾರ, ಶಿವಪ್ಪ ತಳವಾರ ಹಾಗೂ ತಹಶೀಲ್ದಾರ್ ನಿಂಗಣ್ಣ ಬಿರಾದಾರ ಅವರು ತೆರಳಿದಾಗ ಘಟನೆ ಬೆಳಕಿಗೆ ಬಂದಿದೆ. ನಂತರ ಅಲ್ಲೇ ಇದ್ದ ವ್ಯಕ್ತಿಯನ್ನು ವಿಚಾರಿಸಿದಾಗ ಸುರಪುರ ನಗರಸಭೆಯ ಜೀವನ ಮತ್ತು ಸುನಿಲ್ ಮುದ್ರಿಸಲು ತಿಳಿಸಿದ್ದಾರೆ ಎಂದು ಉತ್ತರಿಸಿದ್ದಾರೆ. ಅಧಿಕಾರಿಗಳು ಮೂರು ನಕಲಿ ಪಾಸ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ಉಪ ವಿಭಾಗಾಧಿಕಾರಿ ಸಹಿಯುಳ್ಳ ನಕಲಿ ಪಾಸುಗಳನ್ನು ಮುದ್ರಿಸಿ ವಂಚಿಸುವ ಉದ್ದೇಶದಿಂದ ಇಂಥ ಕೆಲಸ ಮಾಡಿದ್ದಾರೆ. ಹೀಗಾಗಿ ಅವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ದೂರು ಸಲ್ಲಿಸಿದ್ದಾರೆ.
‘ನಕಲಿ ಪಾಸ್ ಸಂಬಂಧ ತನಿಖೆ ನಡೆಯುತ್ತಿದೆ. ಈಗಾಗಲೇ ಮೂವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಸುರಪುರ ಸಿಪಿಐ ಸಾಹೇಬಗೌಡ ಪಾಟೀಲ ತಿಳಿಸಿದ್ದಾರೆ.
***
ಇಂಥ ಕೆಲಸವನ್ನು ಯಾರೂ ಮಾಡಬಾರದು. ಈಗಾಗಲೇ ತಪ್ಪಿತಸ್ಥರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ
-ಶಂಕರಗೌಡ ಸೋಮನಾಳ, ಉಪ ವಿಭಾಗಾಧಿಕಾರಿ
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.