ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೈದಾಪುರ: ಜೋಳಕ್ಕೆ ಸೈನಿಕ ಹುಳುವಿನ ಬಾಧೆ

Last Updated 23 ನವೆಂಬರ್ 2021, 19:30 IST
ಅಕ್ಷರ ಗಾತ್ರ

ಸೈದಾಪುರ: ಕೇವಲ ಮಳೆಯಾಶ್ರಿತ ಭೂಮಿಯನ್ನು ಹೊಂದಿರುವ ರೈತರಿಗೆ ಅಲ್ಪ-ಸ್ವಲ್ಪ ಬೆಳೆದ ಹಿಂಗಾರು ಬೆಳೆ ಜೋಳಕ್ಕೆ ಸೈನಿಕ ಹುಳುವಿನ ಬಾಧೆ ಕಾಡುತ್ತಿದೆ.

ಪಟ್ಟಣದ ಸುತ್ತಮುತ್ತಲಿನ ಗ್ರಾಮೀಣ ಭಾಗದಲ್ಲಿ 3– 4 ವರ್ಷಗಳಿಂದ ಮುಂಗಾರು ಮಳೆಯ ಕೊರತೆಯಿಂದ ಸಂಕಷ್ಟ ಅನುಭವಿಸಿದ್ದ ರೈತರು ಈ ಬಾರಿ ಉತ್ತಮ ಮಳೆ ಸುರಿದಿದ್ದರಿಂದ ಹರ್ಷಚಿತ್ತರಾಗಿ 1594.16 ಹೆಕ್ಟೆರ್‌ನಲ್ಲಿ ಜೋಳ, 463.18 ಹೆಕ್ಟೆರ್‌ನಲ್ಲಿ ಶೇಂಗಾವನ್ನು ರೈತರು ಬಿತ್ತನೆ ಮಾಡಿದ್ದಾರೆ. ಆದರೆ ಮಳೆಯ ಪ್ರಮಾಣ ಹೆಚ್ಚಾಗಿ ಅತಿಯಾದ ತೇವಾಂಶ ಹಾಗೂ ಮೋಡ ಕವಿದ ವಾತಾವರಣದಿಂದ ವಿವಿಧ ಬೆಳೆಗಳಿಗೆ ಹುಳುಗಳ ಕಾಟ ಹೆಚ್ಚಾಗಿದೆ. ಇದರಿಂದ ಇಳುವರಿಯು ಕುಂಠಿತವಾಗುವ ಭಯದಲ್ಲಿ ರೈತರು ಕಂಗಾಲಾಗಿದ್ದಾರೆ.

ಹುಳುಗಳ ಹುಟ್ಟು ಹೇಗೆ: ಮಳೆಯ ಪ್ರಮಾಣ ಹೆಚ್ಚಾಗಿ ಹಾಗೂ ಸುಮಾರು ಒಂದು ವಾರಗಳ ಕಾಲದವರೆಗೆ ಮೋಡ ಕವಿದ ವಾತಾವರಣದಲ್ಲಿ ಉಂಟಾಗಿರುವ ವ್ಯತ್ಯಾಸವೇ ಹುಳುಗಳ ಹುಟ್ಟಿಗೆ ಕಾರಣ ಎಂದು ಕೃಷಿ ಅಧಿಕಾರಿಗಳು ತಿಳಿಸಿದರು.

ಎಲೆಗಳ ಮೇಲೆ ಹಾಗೂ ಜೋಳದ ಸುಳಿಯಲ್ಲಿ ಹುಳುಗಳು ಮೊಟ್ಟೆ ಇಟ್ಟು, ಎಲೆಯ ಹಸಿರು ಭಾಗವನ್ನು ತಿನ್ನುತ್ತವೆ. ಕೀಟದ ಬಾಧೆಯು ಹೆಚ್ಚಾದಾಗ ಎಲೆ, ಕಾಂಡ, ಸುಳಿಯನ್ನು ತಿಂದು ಅಧಿಕ ಪ್ರಮಾಣದಲ್ಲಿ ಹಾನಿಯುಂಟು ಮಾಡುತ್ತವೆ. ಇದರಿಂದ ಇಳುವರಿ ಕುಂಠಿತವಾಗುತ್ತದೆ.

ಇಮಾಮೆಕ್ಟಿನ್ ಬೆಂಜೋಯೇಟ್ 0.2ಗ್ರಾಮ್ ಪ್ರತಿಲೀಟರಿಗೆ ನೀರಿಗೆ ಬೆರಸಿ ಬೆಳೆ ತೊಯ್ಯುವ ಹಾಗೆ ಸಿಂಪಡಿಸಬೇಕು. 8 ಲೀಟರ್ ನೀರಿನಲ್ಲಿ 250.ಮೀ.ಲೀಟರ್ ಮೊನೋಕ್ರೊಟೋಫಾಸ್ ಕೀಟನಾಶಕವನ್ನು 4 ಕಿಲೋ ಬೆಲ್ಲದೊಂದಿಗೆ ಬೆರೆಸಿ ಐವತ್ತೂ ಕಿಲೋ ಗ್ರಾಂ ಅಕ್ಕಿ ಅಥವಾ ಗೋಧಿ ತೌಡಿನಲ್ಲಿ ಮಿಶ್ರಣ ಮಾಡಿ ಎರಡು ದಿನಗಳವರಗೆ ಪ್ಲಾಸ್ಟಿಕ್ ಚೀಲದಲ್ಲಿ ಕೊಳೆಯಲು ಬೀಡಬೇಕು. ಸಂಜೆ ಸಮಯದಲ್ಲಿ ಎಕರೆಗೆ ಇಪ್ಪತ್ತು ಕಿಲೋ ಗ್ರಾಂ ಪ್ರಮಾಣದಲ್ಲಿ ವಿಷ ಪಾಷಣವನ್ನು ಸುಳಿ ಮತ್ತು ಎಲೆಗಳ ಮೇಲೆ ಬೀಳುವಂತೆ ಸುರಿಯಬೇಕು, ಕ್ರಮೇಣ ಸೈನಿಕ ಹುಳುಗಳು ವಿಷಪ್ರಾಶನಕ್ಕೆ ಆಕರ್ಷಿತಗೊಂಡು ನಿಯಂತ್ರಣವಾಗುತ್ತವೆ ಕವಡಿಮಟ್ಟಿ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಅಮರೇಶ ವೈ.ಎಸ್ ತಿಳಿಸಿದರು.

ಕೃಷಿ ಅಧಿಕಾರಿ ಭೇಟಿ: ಸೈನಿಕ ಮತ್ತು ರಬ್ಬರ್ ಕೀಟ ಬಾಧೆಗೆ ತುತ್ತಾದ ಬಾಡಿಯಾಳ ಮತ್ತು ಬಾಲಚೇಡ ಗ್ರಾಮದ ರೈತರ ಹೊಲಗಳಿಗೆ ಸೈದಾಪುರ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಮೇನಕ ಅವರು ಭೇಟಿ ನೀಡಿ ರೈತರಿಗೆ ಅವುಗಳ ನಿಯಂತ್ರಣ ಕುರಿತಾಗಿ ಸಲಹೆ ಸೂಚನೆಗಳನ್ನು ನೀಡಿದರು. ಹೆಚ್ಚಿನ ಮಾಹಿತಿಗಾಗಿ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಎಂದು ತಿಳಿಸಿದರು.

ಹೊಸದಾಗಿ ಬಂದಿರುವ ರೋಗ ಮತ್ತು ಕೀಟಗಳಿಂದ ಬೆಳೆ ರಕ್ಷಣೆ ಮಾಡುವುದು ಅಸಾಧ್ಯವಾಗುತ್ತಿದೆ.ಇದರಿಂದ ಸಾಲ ಶೂಲ ಮಾಡಿ ಬಿತ್ತನೆ ಮಾಡಿದ ರೈತರು ಭಾರಿ ನಷ್ಟ ಅನುಭವಿಸುವಂತಾಗಿದೆ.
– ಬನ್ನಯ್ಯಸ್ವಾಮಿ ಹಿರೇಮಠ, ರೈತ, ಬಾಡಿಯಾಳ

ಬೀಜ ಬಿತ್ತನೆ ಮಾಡುವುದಕ್ಕೆ ಪೂರ್ವದಲ್ಲಿ ಬೀಜಗಳಿಗೆ ಕೀಟನಾಶಕಗಳಿಂದ ಉಪಚರಿಸಿ ಬಿತ್ತನೆ ಮಾಡುವುದು ಸೂಕ್ತ. ಅಲ್ಲದೇ ಹೊಲದ ಸುತ್ತಲು ಸ್ವಚ್ಚತೆಯಿಂದ ಇಟ್ಟುಕೊಳ್ಳುವುದರ ಜೊತೆಗೆ ಪರ್ಯಾಯ ಬೆಳೆಗಳ ಬಿತ್ತನೆ ಮಾಡಬೇಕು. ಇದರಿಂದ ಮುಖ್ಯ ಬೆಳೆಯನ್ನು ಕೀಟದಿಂದ ಹತೋಟಿಯಲ್ಲಿಡಬಹುದು.
– ಮೇನಕ, ಕೃಷಿ ಅಧಿಕಾರಿ, ರೈತ ಸಂಪರ್ಕ ಕೇಂದ್ರ, ಸೈದಾಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT