ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಡಗೇರಾ: ಜಮೀನುಗಳಲ್ಲಿ ಹತ್ತಿ ಊರುತ್ತಿರುವ ರೈತರು

Published 15 ಜೂನ್ 2023, 16:55 IST
Last Updated 15 ಜೂನ್ 2023, 16:55 IST
ಅಕ್ಷರ ಗಾತ್ರ

ವಡಗೇರಾ: ತಾಲ್ಲೂಕಿನಾದ್ಯಂತ ಮುಂಗಾರು ಪೂರ್ವ ರೋಹಿಣಿ ಮಳೆ ಸಕಾಲದಲ್ಲಿ ಅಲ್ಪಸ್ವಲ್ಪ ಸುರಿದಿದ್ದು, ರೈತರು ಖುಷಿಯಿಂದಲೇ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾರೆ.

ಬಿತ್ತನೆಗೆ ರೈತರು ಈಗಾಗಲೇ ಭೂಮಿ ಹದ ಮಾಡಿಕೊಂಡಿದ್ದಾರೆ. ಕೆಲ ರೈತರು ಒಂದು ಹೆಜ್ಜೆ ಮುಂದೆ ಹೋಗಿ ಹತ್ತಿ ಬೀಜ ಊರುತಿದ್ದಾರೆ. ಕೆಲ ರೈತರು ಒಣ ಭೂಮಿಯಲ್ಲೂ ಹತ್ತಿ ಊರಲು ಆರಂಭಿಸಿದ್ದಾರೆ. ತೊಗರಿ, ಹೆಸರು ಬಿತ್ತನೆ ಮಾಡುವ ರೈತರು ಇನ್ನೂ ಬಿತ್ತನೆ ಆರಂಭಿಸಿಲ್ಲ.

ಕಳೆದ ನಾಲ್ಕೈದು ವರ್ಷಗಳಿಂದ ತಾಲ್ಲೂಕಿನ ರೈತರು ಬರದಿಂದ ಬೆಂಡಾಗಿ ಹೋಗಿದ್ದರೂ ಪ್ರತಿ ವರ್ಷದಂತೆ ಈ ವರ್ಷವೂ ಆಶಾಭಾವನೆಯಿಂದ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾರೆ.

ಕಳೆದ ವರ್ಷ ಮುಂಗಾರು ಹಂಗಾಮಿನಲ್ಲಿ ತಾಲ್ಲೂಕಿನ 20,874 ಹೆಕ್ಟೇರ್‌ ನೀರಾವರಿ, 22,124 ಹೆಕ್ಟೇರ್ ಖುಷ್ಕಿ ಸೇರಿ ಒಟ್ಟು 42,998 ಹೆಕ್ಟೇರ್ ಪ್ರದೇಶದಲ್ಲಿ ಮುಂಗಾರು ಬಿತ್ತನೆ ಗುರಿಯನ್ನು ಕೃಷಿ ಇಲಾಖೆಗೆ ಹೊಂದಿತ್ತು. ಅದರಲ್ಲಿ ಒಟ್ಟು 41,644 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಆಗಿ ಶೇ 96.85ರಷ್ಟು ಗುರಿ ಸಾಧನೆ ಮಾಡಿತ್ತು.

ವಡಗೇರಾ ತಾಲ್ಲೂಕಿನ ವ್ಯಾಪ್ತಿಯಲ್ಲಿ 66,145 ಹೆಕ್ಟೇರ್ ಭೌಗೋಳಿಕ ಕ್ಷೇತ್ರವಿದ್ದು, ಇದರಲ್ಲಿ ಈ ವರ್ಷ ಮುಂಗಾರು ಹಂಗಾಮಿನಲ್ಲಿ 41,300 ಹೆಕ್ಟೇರ್ ಹತ್ತಿ, 268.37 ಹೆಕ್ಟೇರ್ ತೊಗರಿ, 152.5 ಹೆಕ್ಟೇರ್ ಹೆಸರು, 9442.29 ಹೆಕ್ಟೇರ್ ಭತ್ತ ಸೇರಿದಂತೆ ಒಟ್ಟು 51,164.16 ಹೆಕ್ಟೇರ್‌ನಷ್ಟು ಬಿತ್ತನೆ ಮಾಡುವ ಗುರಿ ಹೊಂದಲಾಗಿದೆ ಎಂದು ಕೃಷಿ ಅಧಿಕಾರಿಗಳು ಮಾಹಿತಿ ನೀಡಿದರು.

ಮುಂಗಾರು ಬಿತ್ತನೆಗೆ 120 ಕ್ವಿಂಟಲ್ ಹೆಸರು, 300 ಕ್ವಿಂಟಲ್ ತೊಗರಿ, 1.50 ಲಕ್ಷ ಪ್ಯಾಕೆಟ್ ಹತ್ತಿ, 240 ಕ್ವಿಂಟಲ್ ಭತ್ತ, 3 ಕ್ವಿಂಟಲ್ ಬೀಜಗಳಿಗೆ ಬೇಡಿಕೆ ಸಲ್ಲಿಸಲಾಗಿದೆ. ಅದರಲ್ಲಿ ಈಗಾಗಲೇ ತಾಲ್ಲೂಕಿನ ರೈತ ಸಂಪರ್ಕ ಕೇಂದ್ರಗಳಿಗೆ 35 ಕ್ವಿಂಟಲ್ ತೊಗರಿ ಹಾಗೂ 20 ಕ್ವಿಂಟಲ್ ಹೆಸರು ಬೀಜಗಳು ಬಂದಿವೆ. ಬೇಡಿಕೆಯ ಅನ್ವಯ ಮತ್ತೆ ಬೀಜಗಳನ್ನು ತರಿಸಿ ರೈತರಿಗೆ ವಿತರಿಸಲಾಗುವುದು ಎಂದು ಕೃಷಿ ಅಧಿಕಾರಿ ಅಮರೇಶ ಜೋಗರ್ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT