ಗುರುವಾರ , ಜನವರಿ 28, 2021
28 °C
ಸಾಧಕರಿಗೆ ಶ್ರೀಮಠದಿಂದ ಕನಕಶ್ರೀ, ಹಾಲುಮತ ಭಾಸ್ಕರ, ಸಿದ್ದಶ್ರೀ ಪ್ರಶಸ್ತಿ: ವಿಶ್ವನಾಥ ನೀಲಹಳ್ಳಿ

12 ರಿಂದ 14ರ ವರೆಗೆ ಹಾಲುಮತ ಉತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ‘ಜಿಲ್ಲೆಯ ತಿಂಥಿಣಿ ಕ್ರಾಸ್ ಬಳಿ ಇರುವ ಕನಕ ಗುರುಪೀಠ ಹಾಲುಮತ ಕೇಂದ್ರದಲ್ಲಿ ಜ.12ರಿಂದ 14ರವರೆಗೆ 3 ದಿನಗಳ ಕಾಲ ಹಾಲುಮತ ಸಂಸ್ಕೃತಿ ವೈಭವ ನಡೆಯಲಿದೆ’ ಎಂದು ಕರ್ನಾಟಕ ಪ್ರದೇಶ ಕುರುಬರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ವಿಶ್ವನಾಥ ನೀಲಹಳ್ಳಿ ಹೇಳಿದರು.

‘ಕನಕ ಗುರುಪೀಠದ ಸಿದ್ದರಾಮಾನಂದ ಪುರಿ ಸ್ವಾಮೀಜಿ ನೇತೃತ್ವದಲ್ಲಿ (ಜ.12) ಮಂಗಳವಾರ ಬೆಳಿಗ್ಗೆ 10.30ಕ್ಕೆ ಬೀರದೇವರ ಉತ್ಸವ, ನಂತರ ಪಂಚಾಯಿತಿ ಸದಸ್ಯರ ಸಮಾವೇಶ ಜರುಗಲಿದೆ’ ಎಂದು ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘13ರಂದು ಬೆಳಿಗ್ಗೆ 11ಕ್ಕೆ ಸುಡುಗಾಡು ಸಿದ್ದರು-ಟಗರು ಜೋಗಿಗಳು ಹೆಳವರ ಸಮಾವೇಶ ನಡೆಯಲಿದೆ. ಈ ಮೂಲಕ ಹಾಲುಮತ ಸಮಾಜದ ಜನರಲ್ಲಿ ಜಾಗೃತಿ, ಸಂಘಟನೆ ಮೂಡಿಸಲಾಗುತ್ತದೆ. 14ರಂದು ಬೆಳಿಗ್ಗೆ 11ಕ್ಕೆ ಬೊಮ್ಮಗೊಂಡೇಶ್ವರ ಸಿದ್ದರಾಮೇಶ್ವರ ಉತ್ಸವ ನಡೆಯಲಿದೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹನೀಯರಿಗೆ ಶ್ರೀಮಠದಿಂದ ಕನಕಶ್ರೀ, ಹಾಲುಮತ ಭಾಸ್ಕರ, ಸಿದ್ದಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ತಲಾ ₹50 ಸಾವಿರ ಮೊತ್ತದ ಪ್ರಶಸ್ತಿ ಒಳಗೊಂಡಿದೆ. ವಿವಿಧ ಕಲಾ ತಂಡಗಳು ತಮ್ಮ ಪ್ರತಿಭೆ ಪ್ರದರ್ಶನ ಮಾಡಲಿದ್ದಾರೆ’ ಎಂದರು.

‘ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ಕೆ.ಎಸ್‌. ಈಶ್ವರಪ್ಪ, ಬೈರತಿ ಬಸವರಾಜ ಸೇರಿದಂತೆ ಸಚಿವರು ಹಾಗೂ ಶಾಸಕರು ಭಾಗವಹಿಸುವರು. ಸಮಾರಂಭದಲ್ಲಿ ಯಾದಗಿರಿಯ ಡಾ. ಸುರಗಿಮಠ ರಕ್ತ ನಿಧಿ ಕೇಂದ್ರ ತಂಡದಿಂದ ಉಚಿತ ರಕ್ತ ಪರೀಕ್ಷೆ, ರಕ್ತದಾನ ಶಿಬಿರ, ಕಣ್ಣು ತಪಾಸಣೆ ಮತ್ತು ಚಿಕಿತ್ಸೆ ನೀಡಲಿದ್ದಾರೆ. ಗುರುವಾರ ಮಧ್ಯಾಹ್ನ 2.30ಕ್ಕೆ ಎತ್ತುಗಳು ಭಾರ ಎಳೆಯುವ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ’ ಎಂದರು.

ಸುದ್ದಿಗೋಷ್ಠಿಯಲ್ಲಿ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಚನ್ನಕೇಶವಗೌಡ ಬಾಣತಿಯಾಳ, ಮುಖಂಡರಾದ ಸಿದ್ದಣಗೌಡ ಕಾಡಂನೋರ, ತಾಲ್ಲೂಕು ಅಧ್ಯಕ್ಷ ಹೊನ್ನಪ್ಪ ಮುಸ್ಟೂರ, ಮಲ್ಲಿಕಾರ್ಜುನ ಕರಕಳ್ಳಿ, ವೆಂಕಟೇಶ ಮುಂಡರಗಿ, ಈಶ್ವರಪ್ಪ ಹೋರುಂಚ, ಮಲ್ಲಣ್ಣ ಐಕೂರ, ಶರಣಗೌಡ ಕ್ಯಾತನಾಳ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.